ದೋಸ್ತಿಗೆ ಪರಮೇಶ್ವರ ಅತೃಪ್ತಿ

3
ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದಕ್ಕೆ ಬೇಸರ

ದೋಸ್ತಿಗೆ ಪರಮೇಶ್ವರ ಅತೃಪ್ತಿ

Published:
Updated:
ದೋಸ್ತಿಗೆ ಪರಮೇಶ್ವರ ಅತೃಪ್ತಿ

ಬೆಂಗಳೂರು: ಜೆಡಿಎಸ್–ಕಾಂಗ್ರೆಸ್ ‘ದೋಸ್ತಿ’ ಬಗ್ಗೆ ಅತೃಪ್ತಿ ಹೊರಹಾಕಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮಖ್ಯಮಂತ್ರಿ ಜಿ.ಪರಮೇಶ್ವರ, ‘ನೀವೇ ಮುಖ್ಯಮಂತ್ರಿ ಪದವಿ ಇಟ್ಟುಕೊಳ್ಳಿ ಎಂದು 37 ಸ್ಥಾನ ಗೆದ್ದ ಪ್ರಾದೇಶಿಕ ಪಕ್ಷದ ಹಿಂದೆ ಓಡುವಂಥ ದಯನೀಯ ಸ್ಥಿತಿ ಕಾಂಗ್ರೆಸ್‌ಗೆ ಬರಬಾರದಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‌ಬೆಂಗಳೂರಿನಲ್ಲಿ ಶನಿವಾರ ನಡೆದ ಚುನಾವಣಾ ಸೋಲಿನ ಪರಾಮರ್ಶೆ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಸಹ ಮೈತ್ರಿ ಸರ್ಕಾರಕ್ಕೆ ಅಸಮ್ಮತಿ ಸೂಚಿಸಿದ್ದಾರೆ.

‘ಚುನಾವಣೆಗೂ ಮುನ್ನ ಜೆಡಿಎಸ್ ನಾಯಕರ ವಿರುದ್ಧ ತೀವ್ರ ಹೋರಾಟ ಮಾಡಿದ್ದೆವು. ಇಂದು ಅವರ ಮುಂದೆ ತಲೆ ಎತ್ತಿ ತಿರುಗಾಡದಂತಾಗಿದೆ. ರಾಜ್ಯ

ಮಟ್ಟದಲ್ಲಿ ಹೊಂದಾಣಿಕೆಯಾದ ಮಾತ್ರಕ್ಕೆ, ಸ್ಥಳೀಯ ಮಟ್ಟದಲ್ಲೂ ನೀವು ಅಂದುಕೊಂಡಂತೆಯೇ ಆಗುವುದೇ’ ಎಂದು ಪದಾಧಿಕಾರಿಗಳು ಪ್ರಶ್ನಿಸಿದರು.

‘ನಮ್ಮವರೇ ಮುಖ್ಯಮಂತ್ರಿ ಆಗಬಹುದಿತ್ತು. ಪದವಿ ಬಿಟ್ಟು ಕೊಟ್ಟು ದೊಡ್ಡ ತಪ್ಪು ಮಾಡಿದಿರಿ. ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಾದರೂ, ನಮ್ಮ ಪಕ್ಷಕ್ಕೆ ಅನುಕೂಲ ಆಗುವಂತೆ ನೋಡಿಕೊಳ್ಳಿ’ ಎಂದೂ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ನಾನೇನು ಮೈತ್ರಿಯನ್ನು ಬೆಂಬಲಿಸುತ್ತಿಲ್ಲ. ಬಿಜೆಪಿಯನ್ನು ದೂರ ಇಡಲು ಕೈಜೋಡಿಸಬೇಕಾಯಿತು. ನಾವೀಗ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದೇವೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ನಮ್ಮ ಅರ್ಧದಷ್ಟು ಸ್ಥಾನ ಗೆದ್ದಂತಹ ಪ್ರಾದೇಶಿಕ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಮಾಡಿಕೊಟ್ಟಿದೆ’ ಎಂದರು.

’ಮುಖ್ಯಮಂತ್ರಿ ಪದವಿ ಹಾಗೂ ಸಚಿವ ಸ್ಥಾನಗಳನ್ನು ಬೇರೆಯವರಿಗೆ ನೀಡುವಾಗ ಎಷ್ಟು ನೋವಾಗುತ್ತದೆ ಎಂಬುದನ್ನು ನೀವೆಲ್ಲ ನನಗೆ ಬಿಡಿಸಿ ಹೇಳಬೇಕಾಗಿಲ್ಲ’ ಎಂದು ಪರಮೇಶ್ವರ್‌ ಆಕ್ರೋಶದಿಂದಲೇ ಹೇಳಿದರು.

‘ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಭಾವಿಸಬೇಡಿ. ನಮ್ಮ ಬಳಿ ಈಗ ಹೆಚ್ಚು ಸಮಯ ಉಳಿದಿಲ್ಲ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಗೆದ್ದರೆ ಮಾತ್ರ, ಸರ್ಕಾರದಲ್ಲಿ ಕಾಂಗ್ರೆಸ್‌ನ ಧ್ವನಿ ಗಟ್ಟಿಯಾಗುತ್ತದೆ. ಪಕ್ಷದ ಪುನಶ್ಚೇತನ ಮಾಡುವ ಶಕ್ತಿಯೂ ಸಿಗುತ್ತದೆ. ಒಂದು ವೇಳೆ ಅಲ್ಲೂ ಫಲಿತಾಂಶ ಉಲ್ಟಾ ಆದರೆ, ನಾವು ಹೀಗೆಯೇ ಗೆದ್ದ ಎತ್ತಿನ ಬಾಲ ಹಿಡಿದುಕೊಂಡು ಹೋಗಬೇಕಾಗುತ್ತದೆ’ ಎಂದು ಪದಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

‘ನಾನೊಬ್ಬನೇ ಪ್ರಮಾಣ ವಚನ ಸ್ವೀಕರಿಸಿದೆ ಎಂದು ಪಕ್ಷದ ಕೆಲವರು ನನ್ನ ವಿರುದ್ಧ ತೆರೆಮರೆಯಲ್ಲಿ ಮಾತನಾಡಿಕೊಂಡರು. ಆದರೆ, ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿವಿಧ ರಾಜ್ಯಗಳ ರಾಷ್ಟ್ರೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಇಡೀ ದೇಶವೇ ಆ ಕಾರ್ಯಕ್ರಮ ನೋಡುತ್ತಿತ್ತು. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನ ಒಬ್ಬನೇ ಒಬ್ಬ ಮುಖಂಡ ವೇದಿಕೆಯಲ್ಲಿ ಕಾಣಿಸಲಿಲ್ಲ ಎಂದರೆ, ರಾಷ್ಟ್ರೀಯ ಪಕ್ಷದ ಘನತೆ ಏನಾಗುತ್ತಿತ್ತು ಯೋಚಿಸಿ. ಅದೊಂದೇ ಕಾರಣಕ್ಕೆ ಪ್ರಮಾಣ ವಚನ ಸ್ವೀಕರಿಸಿದೆ’ ಎಂದು ಸಮರ್ಥಿಸಿಕೊಂಡರು.

ಶಾಸಕರಿಗೆ ಮಣೆ ಹಾಕಬೇಡಿ: ‘ಪಕ್ಷಕ್ಕಾಗಿ ದುಡಿದವರನ್ನು ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಿ. ಅದನ್ನು ಬಿಟ್ಟು, ಸಚಿವ ಸ್ಥಾನ ಸಿಗದ ಶಾಸಕರಿಗೆ ಮಣೆ ಹಾಕಬೇಡಿ’ ಎಂದು ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದರು.

ಅದಕ್ಕೆ ಪರಮೇಶ್ವರ, ‘ಯಾರನ್ನು ಮಂಡಳಿ ಅಧ್ಯಕ್ಷರನ್ನಾಗಿ ಮಾಡಬೇಕು? ಯಾರನ್ನು ಉಪಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದನ್ನು ನೀವೇ ತೀರ್ಮಾನಿಸಿ. ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪಟ್ಟಿ ಕೊಡಿ. ನಿಮ್ಮ ಸಲಹೆ ಪರಿಗಣಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘2019ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗು

ವುದಾಗಿ ಈಗಾಗಲೇ ಹೇಳಿದ್ದೇವೆ. ಎರಡೂ ಪಕ್ಷಗಳ ಮುಖಂಡರು ಚರ್ಚೆ ನಡೆಸಿ ಚುನಾವಣೆ ಸಿದ್ಧತೆ ಬಗ್ಗೆ ರೂಪುರೇಷೆ ತಯಾರಿಸಲಿದ್ದೇವೆ. ಯಾವ ಪಕ್ಷದವರು, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಹೇಳಿದರು.

‘ಎಚ್‌.ಡಿ.ಕುಮಾರಸ್ವಾಮಿ ಅವರೇ ಐದೂ ವರ್ಷ ಮುಖ್ಯಮಂತ್ರಿ ಆಗಿರಲು ತಮ್ಮ ಒಪ್ಪಿಗೆ ಇದೆಯೇ ಎಂಬ ಪ್ರಶ್ನೆಗೆ, ‘ನನ್ನ ಒಪ್ಪಿಗೆ ಪ್ರಶ್ನೆ ಬರಲ್ಲ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ, ಅದೇ ನಡೆದುಕೊಂಡು ಹೋಗುತ್ತದೆ’ ಎಂದರು.

ಸಿದ್ದರಾಮಯ್ಯ, ಶಿವಕುಮಾರ್‌ ಗೈರು

‌ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ  ಸಿದ್ದರಾಮಯ್ಯ ಹಾಗೂ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಜರಿರಲಿಲ್ಲ.

ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲೇ ಇದ್ದರೂ ಪಕ್ಷದ ಕಚೇರಿಗೆ ಬರಲಿಲ್ಲ. ಇಂಧನ ಖಾತೆ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಶಿವ ಕುಮಾರ್, ಸಭೆಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ‘ಸಾಹೇಬ್ರು ದೇವಸ್ಥಾನಕ್ಕೆ ಹೋಗಿದ್ದಾರೆ’ ಎಂದು ಅವರ ಆಪ್ತರು ತಿಳಿಸಿದರು.

20 ದಿನ ಗಡುವು

‘ಈ ಬಾರಿ ಶೇ 38.4ರಷ್ಟು ಮತದಾರರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕಳೆದ ಚುನಾವಣೆಗಿಂತ ಶೇ 2ರಷ್ಟು ಜಾಸ್ತಿಯೇ ಫಲಿತಾಂಶ ಸಿಕ್ಕಿದೆ. ಆದರೂ, ಅನೇಕ ತಾಂತ್ರಿಕ ಕಾರಣಗಳಿಂದ ಸಂಖ್ಯಾಬಲ ಹೆಚ್ಚಾಗಲಿಲ್ಲ. ಹಿನ್ನಡೆಗೆ ಕಾರಣ ಹುಡುಕಿ, ಆ ಲೋಪಗಳನ್ನು ತಿದ್ದಿಕೊಳ್ಳಬೇಕಿದೆ’ ಎಂದು ಪರಮೇಶ್ವರ ಹೇಳಿದರು.

‘ಎಲ್ಲ ಕ್ಷೇತ್ರಗಳ ಆಗು–ಹೋಗುಗಳ ಬಗ್ಗೆ ಪರಾಮರ್ಶೆ ನಡೆಸಿ, 20 ದಿನಗಳೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸೆಪ್ಟೆಂಬರ್‌ನಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುವಂತೆಯೂ ಹೇಳಿದ್ದೇನೆ’ ಎಂದರು.

* ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಹಳ ಜನ ಆಕಾಂಕ್ಷಿಗಳು ಇದ್ದಾರೆ. ಹೈಕಮಾಂಡ್ ಹೆಸರು ಅಂತಿಮಗೊಳಿಸಿದ ತಕ್ಷಣ ಸ್ಥಾನ ಬಿಟ್ಟುಕೊಡುತ್ತೇನೆ

–ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry