ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದ ಬಹುಮುಖ ಪ್ರತಿಭೆ ದಿಶಾ

Last Updated 28 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

‘ಕಿರುತೆರೆ, ಹಿರಿತೆರೆ, ಮಾಡೆಲಿಂಗ್, ಬಾಡಿ ಬಿಲ್ಡಿಂಗ್ ಯಾವುದೇ ಆಗಿರಲಿ; ಎಲ್ಲಿ ಕಲಿಕೆಗೆ, ನನ್ನ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗುತ್ತದೋ ಅಲ್ಲಿ ನಾನು ನಟಿಸೋಕೆ ಸಿದ್ಧ’ ಎಂಬ ನೇರ ಮಾತುಗಳಿಂದ ಎಲ್ಲರ ಮನ ಗೆಲ್ಲುವವರು ನಟಿ ದಿಶಾ ಕೃಷ್ಣಯ್ಯ.

ಮೂಲತಃ ಬೆಂಗಳೂರಿನವರಾಗಿದ್ದು, ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ದಿಶಾ ಆಸಕ್ತಿ ತೋರಿದ್ದು ಮಾತ್ರ ಮಾಡೆಲಿಂಗ್, ನಿರೂಪಣೆ, ಬಾಡಿ ಬಿಲ್ಡಿಂಗ್ ಮತ್ತು ನಟನೆಯತ್ತ. ‘ಮೆಟ್ರೊ’ ಜೊತೆ ತಮ್ಮ ಚಂದನವನದ ಪಯಣದ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಇಪ್ಪತ್ತೈದನೇ ವಯಸ್ಸಿಗೆ ಇವರು ತಮ್ಮ ಸಾಧನೆ, ಪ್ರತಿಭೆ ಮತ್ತು ಸ್ನೇಹ ಮನೋಭಾವನೆಯಿಂದ ಕನ್ನಡದ ಜನತೆಗೆ ಹತ್ತಿರವಾಗಿದ್ದಾರೆ. ಸಕತ್ ಬೋಲ್ಡ್ ಮತ್ತು ಹಾಟ್ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ದಿಶಾ ಅವರ ವೃತ್ತಿಪರತೆಯನ್ನು ಮೆಚ್ಚಲೇಬೇಕು. ತಮ್ಮ ವೃತ್ತಿ ಜೀವನದ ಬಗ್ಗೆ ತುಂಬಾ ಕಾಳಜಿ ಹೊಂದಿರುವ ದಿಶಾ ಏನೇ ಮಾಡಿದರೂ ಪರಿಪೂರ್ಣವಾಗಿ ಮಾಡಬೇಕು ಎನ್ನುವ ಅಭಿಲಾಷೆ ಹೊಂದಿದವರು.

ಸದ್ಯ ಚಂದನವನದ ಜೊತೆಗೆ ಮತ್ತು ಫಿಟ್‌ನೆಸ್ ಫೀಲ್ಡ್‌ನಲ್ಲಿ ಅಬ್ಬರಿಸುತ್ತಿರುವ ನಟಿ ದಿಶಾ, ಕನ್ನಡದ ಮುಕುಂದ ಮುರಾರಿ, ಚೌಕ ಮತ್ತು ಈ ಪಟ್ಟಣಕ್ಕೆ ಏನಾಗಿದೆ ಸಿನಿಮಾಗಳಲ್ಲಿ ಮತ್ತು ಇಡಿ ಎನ್ನುವ ಮಲಯಾಳಂ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ನಟ ಸಂಚಾರಿ ವಿಜಯ್ ಅವರ ಜೊತೆ ‘ಆಡುವ ಗೊಂಬೆ’ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ.

ಒಬ್ಬ ಉತ್ತಮ ನಟಿ, ಒಂದು ಒಳ್ಳೆಯ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರೆ ತಪ್ಪಾಗದು. ಇದಕ್ಕೆ ಸೂಕ್ತ ಉದಾಹರಣೆ ದಿಶಾ ಎಂದರೆ ತಪ್ಪಾಗದು. ವೃತ್ತಿ ಮತ್ತು ಖಾಸಗಿ ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಂಡಿರುವ ಈ ಬಹುಮುಖ ಪ್ರತಿಭೆ ಚಿತ್ರರಂಗಕ್ಕೆ ಕಾಲಿಟ್ಟ ಒಂದೇ ವರ್ಷದಲ್ಲಿ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡವರು.

ಎಂಜಿನಿಯರಿಂಗ್ ಪದವಿ ಪೂರೈಸುತ್ತಿರುವಾಗಲೇ ನಿರೂಪಣೆಯ ಗೀಳನ್ನು ಹೊಂದಿದ್ದ ದಿಶಾ ನಿರೂಪಣೆಯಿಂದ ತಮ್ಮ ಪಯಣವನ್ನು ಪ್ರಾರಂಭಿಸಿ ಮುಂದೆ ರಾಜ್ಯದಿಂದ ಅಂತರರಾಷ್ಟ್ರೀಯ ವೇದಿಕೆಯ ಮೇಲೆ ನಿರೂಪಕಿಯಾಗಿ ಕಾಣಿಸಿಕೊಂಡವರು. ಇವರಿಗೆ ಕನ್ನಡದ ಜೊತೆಗೆ ಇನ್ನೂ ಏಳು ಭಾಷೆ ಗೊತ್ತು ಎಂದರೆ ಹುಬ್ಬೇರುವುದು ನಿಜ.

ನಿರೂಪಣೆಯಿಂದ ಜಾಹೀರಾತು ಮತ್ತು ಮಾಡೆಲಿಂಗ್‌ನತ್ತ ಮುಖ ಮಾಡಿದ ದಿಶಾಗೆ ಕೆಲವೇದಿನಗಳಲ್ಲಿ ಸಿನಿಮಾಗಳಿಗಾಗಿ ಅವಕಾಶಗಳು ಹೇರಳವಾದವು. ಇದೆಲ್ಲದರ ಜೊತೆ ಬಾಡಿ ಬಿಲ್ಡಿಂಗ್‌ನಲ್ಲಿ ಮಿಂಚುವ ಆಸೆಯಿಂದ ಮೊದಮೊದಲ ಸಿನಿಮಾಗಳಿಗಾಗಿ ಬಂದಿರುವ ಎಲ್ಲ ಅವಕಾಶಗಳನ್ನು ಒಪ್ಪಿಕೊಳ್ಳದೇ ತುಂಬಾ ಚ್ಯೂಸಿಯಾಗಿ ನಟನಾ ಕೇಂದ್ರಿತ ಪಾತ್ರಗಳಲ್ಲಿ ನಟಿಸಿದರು. ತೆರೆಯ ಮೇಲೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡರೂ ತೆರೆಯ ಹಿಂದೆ ತುಂಬಾ ಸಿಂಪಲ್ ಮತ್ತು ಸಾಂಪ್ರದಾಯಿಕವಾಗಿ ಇರುವ ದಿಶಾ ಮನೆಯವರ ಪ್ರೀತಿಯ ಮಗಳಾಗಿ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಂತೂ ನಿಜ.

ಸದಾ ಫಿಟ್ನೆಸ್ ಮಂತ್ರ ಜಪಿಸುವ ದಿಶಾ ತಮ್ಮ ಪದವಿ ದಿನಗಳಲ್ಲಿ ಮಿಸ್ ಬೆಂಗಳೂರು ಮತ್ತು ಮಿಸ್ ಕರ್ನಾಟಕ-2011 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಜೊತೆಗೆ ಸರ್ಟಿಫೈಡ್ ಜುಂಬಾ, ಮೆಡಿಟೇಷನ್ ಮತ್ತು ಫಿಟ್ನೆಸ್ ಟ್ರೈನರ್ ಕೂಡ ಹೌದು ಎಂದರೆ ಅಚ್ಚರಿಯಾಗುತ್ತದೆ. ಇತ್ತೀಚೆಗೆ ಕರ್ನಾಟಕ ಅಮೇಚ್ಯೂರ್ ಬಾಡಿಬಿಲ್ಡಿಂಗ್ ಅಸೋಸಿಯೇಶನ್‌ನಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಿಸ್ಟರ್ ಬೆಂಗಳೂರು-2018 ಸ್ಪರ್ಧೆಯಲ್ಲಿ ಮಿಸ್ ಬೆಂಗಳೂರು ವುವೆನ್ ಫಿಸಿಕ್-2018 ಎನ್ನುವ ಟೈಟಲ್ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸಮಯ ಸಿಕ್ಕಾಗಲೆಲ್ಲಾ ಹಾಡು ಕೇಳುವುದು, ಪುಸ್ತಕ ಓದುವುದು, ನಿದ್ದೆ ಮಾಡುವುದು ಮತ್ತು ಮಕ್ಕಳೊಂದಿಗೆ ಕಾಲ ಕಳೆಯುವುದು ದಿಶಾಗೆ ತುಂಬಾ ಇಷ್ಟವಂತೆ. ತಮ್ಮ ದಿನದ ಜಾಸ್ತಿ ಹೊತ್ತನ್ನು ಫಿಟ್ನೆಸ್‌ಗಾಗಿ ಮೀಸಲಿಡುವ ಡಯಟ್ ಪ್ರಿಯೆ. ಬಾಡಿ ಬಿಲ್ಡಿಂಗ್ ಸ್ಪರ್ಧೆ ಸಮೀಪಿಸುತ್ತಿದ್ದಂತೆ ಎಚ್ಚೆತ್ತುಕೊಂಡು ತಮ್ಮ ದೇಹಸಿರಿಯ ಮೇಲೆ ತುಂಬಾ ನಿಗಾವಹಿಸುತ್ತಾರೆ.

ದಿಶಾಗೆ ಫರ್‌ಫಾರ್ಮನ್ಸ್ ಓರಿಯೆಂಟೆಡ್ ಚಿತ್ರಗಳಲ್ಲಿ ಪಾತ್ರಗಳ ಭೇದ-ಭಾವವಿಲ್ಲದೇ ಅಂದರೆ ಪಾತ್ರ ಚಿಕ್ಕದೋ, ದೊಡ್ಡದೋ ಎನ್ನುವ ಗೋಜಿಗೆ ಹೋಗದೆ ತಮ್ಮ ಕಲೆಯನ್ನು ಬಿಂಬಿಸುವ, ಜನರ ಮನ ಮುಟ್ಟುವಂತೆ ಅಭಿನಯಿಸುವ ಮತ್ತು ನಟನೆಯನ್ನು ಆರಾಧಿಸುವ ನಟಿಯಾಗುವ ಆಸೆಯಂತೆ. ಕನ್ನಡ ಚಿತ್ರಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ದಿಶಾಗೆ ಕನ್ನಡದಲ್ಲಿ ನಟಿಸುವುದು ಎಂದರೆ ತಮ್ಮ ಭಾವನೆಗಳನ್ನು ನೈಜವಾಗಿ ಹೊರಹಾಕಿದಂತೆ. ಇನ್ನೂ ಅವಕಾಶ ಸಿಕ್ಕರೆ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಲು ಸಿದ್ಧ ಎನ್ನುತ್ತಾರೆ.

ದಿಶಾರ ಫ್ಯಾಷನ್ ಸ್ಟೇಟ್‌ಮೆಂಟ್ ಬಿಯಿಂಗ್ ಕಂಫರ್ಟೆಬಲ್ ಎನ್ನುವುದು. ಟ್ರೆಂಡ್ ಫಾಲೋ ಮಾಡುವುದರ ಜೊತೆಗೆ ತಮ್ಮ ಕಂಫರ್ಟ್ ಜೋನ್ ಬಗ್ಗೆ ಗಮನ ಹರಿಸಬೇಕಾದದ್ದು ಪ್ರತಿಯೊಬ್ಬರಿಗೆ ತುಂಬಾ ಅವಶ್ಯ ಎನ್ನುವುದು ಅವರ ಅಭಿಪ್ರಾಯ.

ಸದ್ಯ ಚಂದನವನಕ್ಕೆ ಹೊಸದಾಗಿ ಎಂಟ್ರಿ ಕೊಡುವ ಯುವ ಕಲಾವಿದರಿಗೆ ದಿಶಾರ ಕಿವಿಮಾತು, ಬಿ ಫರ್‌ಫೆಕ್ಟ್ ಇನ್ ವಾಟ್ ಯು ಆರ್ ಕಂಫರ್ಟೇಬಲ್ ಎನ್ನುವುದು. ಎಲ್ಲವೂ ಗೊತ್ತು ಅಂತ ಎಲ್ಲದರಲ್ಲಿ ಅಪೂರ್ಣರಾಗಿರುವುದಕ್ಕಿಂತ ಎಷ್ಟು ಗೊತ್ತಿದೆಯೋ ಅದರಲ್ಲಿ ನಿಪುಣರಾಗಿ, ಜನರ ಮಧ್ಯೆ ಗುರುತಿಸಿಕೊಂಡರೆ ಚಂದನವನದಲ್ಲಿ ನೆಲೆ ನಿಲ್ಲುವುದು ಸುಲಭ ಎನ್ನುತ್ತಾ ತಮ್ಮ ಮಾತಿಗೆ ವಿರಾಮ ನೀಡುತ್ತಾರೆ ದಿಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT