‘ಕುಕ್ಕರ್‌–ನಿಕ್ಕರ್‌ ಹಂಚಿದರೂ ಸುಮ್ಮನಿರುವ ಅಧಿಕಾರಿಗಳು’

2

‘ಕುಕ್ಕರ್‌–ನಿಕ್ಕರ್‌ ಹಂಚಿದರೂ ಸುಮ್ಮನಿರುವ ಅಧಿಕಾರಿಗಳು’

Published:
Updated:
‘ಕುಕ್ಕರ್‌–ನಿಕ್ಕರ್‌ ಹಂಚಿದರೂ ಸುಮ್ಮನಿರುವ ಅಧಿಕಾರಿಗಳು’

ಬೆಂಗಳೂರು: ‘ಚುನಾವಣಾ ಅಧಿಕಾರಿಗಳ ಕಣ್ಣೆದುರೇ ಕುಕ್ಕರ್‌, ನಿಕ್ಕರ್‌ ಹಂಚಿಕೆ ಮಾಡಲಾಗುತ್ತಿದೆ’ ಎಂದು ಜಯನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಆರೋಪಿಸಿದರು.

‘ಹಣ, ಮದ್ಯ, ಸೀರೆ, ಕುಕ್ಕರ್, ನಿಕ್ಕರ್‌ ಹಂಚುವುದನ್ನು ತಡೆಯಲು ಅಸಮರ್ಥರಾಗಿರುವ ಚುನಾವಣಾ ಅಧಿಕಾರಿಗಳು, ಅದನ್ನು ಸಕ್ರಮ ಎಂದಾದರೂ ಘೋಷಣೆ ಮಾಡಬೇಕು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

‘ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳು ಕನಿಷ್ಠ ₹ 5 ಕೋಟಿಯಿಂದ ಗರಿಷ್ಠ ₹ 50 ಕೋಟಿವರೆಗೆ ಖರ್ಚು ಮಾಡಿದ್ದಾರೆ. ಆದರೆ, ಇವ್ಯಾವುದಕ್ಕೂ ಸಾಕ್ಷ್ಯಗಳು ಸಿಗುವುದಿಲ್ಲ. ಅಧಿಕಾರಿಗಳು ಮತ್ತು ಮತದಾರರು ಅಕ್ರಮ ತಡೆದರೆ ಮಾತ್ರ ಚುನಾವಣೆ ನ್ಯಾಯಸಮ್ಮತವಾಗಿ ನಡೆಯುತ್ತದೆ’ ಎಂದರು.

ಚುನಾವಣೆಗಾಗಿ ಖರ್ಚು ಮಾಡಲು ನಿಗದಿ ಮಾಡಿರುವ ಹಣದಲ್ಲಿ ನಾವೂ ಜನರಿಗೆ ಹಣ, ಕುಕ್ಕರ್‌ ಮತ್ತು ನಿಕ್ಕರ್‌ ಹಂಚುತ್ತೇವೆ, ಇದಕ್ಕೆ ಆಯೋಗ ಅನುಮತಿ ನೀಡಬೇಕೆಂದು ಕೋರಿ ಮೇ 29ರಂದು ಪತ್ರ ಬರೆದಿದ್ದೆವು. ನಮ್ಮ ಮನವಿಯನ್ನು ಆಯೋಗ ತಿರಸ್ಕರಿಸಿದೆ ಎಂದು ತಿಳಿಸಿದರು.

‘ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಗುಂಡಾಗಿರಿ ಮಾಡುತ್ತಿದೆ. ರಾಮಲಿಂಗಾ ರೆಡ್ಡಿ ಅವರ ಆಪ್ತರಾದ ಶ್ರೀನಿವಾಸ ರೆಡ್ಡಿಯವರನ್ನು ಇಲ್ಲಿಗೆ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಚುನಾವಣೆ ಅಕ್ರಮಕ್ಕೆ ಅಧಿಕಾರಿಗಳೂ ಸಾಥ್‌ ನೀಡಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಹೇಳಿದರು.

‘ಆಸೆಕಂಗಳಿಂದ ಬಂದಿದ್ದ ಮಹಿಳೆಯರು’: ರವಿಕೃಷ್ಣಾ ರೆಡ್ಡಿಯವರು ಒಂದು ಮತಕ್ಕೆ ₹ 2,888, ಕುಕ್ಕರ್‌, ನಿಕ್ಕರ್‌, ಸೀರೆ ಹಂಚುವುದಾಗಿ ಹೇಳಿದ್ದರಿಂದ ಕೆಲವು ಮಹಿಳೆಯರು ಆಸೆ ಕಂಗಳಿಂದ ಕಾರ್ಯಕ್ರಮಕ್ಕೆ ಬಂದಿದ್ದರು. ‌‘ಚುನಾವಣಾ ಆಯೋಗದ ಅಧಿಕಾರಿಗಳಿಗೆ ಚಾಟಿ ಬೀಸುವುದಕ್ಕಾಗಿ ಹೀಗೆ ಹೇಳಿದ್ದು, ಕ್ಷಮಿಸಿ’ ಎಂದು ಅವರು ಹೇಳುತ್ತಿದ್ದಂತೆ ಮಹಿಳೆಯರು ನಿರಾಸೆಯಿಂದ ತೆರಳಿದರು.

ಕಾರ್ಯಕ್ರಮಕ್ಕೆ ಬಂದಿದ್ದ ಮುಸ್ಲಿಂ ಮಹಿಳೆಯರಿಬ್ಬರು, ‘ಮಗನ ಓದಿಗೆ ನೆರವು ನೀಡಿ, ನಾವು ನಿಮಗೆ ಮತ ಹಾಕುತ್ತೇವೆ’ ಎಂದು ಅಂಗಲಾಚಿದರು. ಇದಕ್ಕೆ ರವಿಕೃಷ್ಣ ರೆಡ್ಡಿ, ‘ಚುನಾವಣೆ ವೇಳೆ ಚಹಾ ಸಹ ಕೊಡಿಸುವುದಿಲ್ಲ. ನಿಮಗೆ ನಿಜವಾಗಿಯೂ ಅಗತ್ಯವಿದ್ದರೆ ನಂತರ ಸಹಾಯ ಮಾಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry