ಆತಂಕದಲ್ಲಿ ಬದುಕಬೇಕಾಗಿದೆ:ದ್ವಾರಕಾನಾಥ್

3

ಆತಂಕದಲ್ಲಿ ಬದುಕಬೇಕಾಗಿದೆ:ದ್ವಾರಕಾನಾಥ್

Published:
Updated:
ಆತಂಕದಲ್ಲಿ ಬದುಕಬೇಕಾಗಿದೆ:ದ್ವಾರಕಾನಾಥ್

ಬೆಂಗಳೂರು: ‘ಪ್ರಗತಿಪರ ಮುಖವಾಡ ಧರಿಸಿ ಕೇಡು ಬಯಸುವವರನ್ನು ಕಂಡಾಗ ಭಯವೆನಿಸುತ್ತದೆ’ ಎಂದು ಸಂಸ್ಕೃತಿ ಚಿಂತಕ ಡಾ.ಸಿ.ಎಸ್‌.ದ್ವಾರಕಾನಾಥ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನೀಡಲಾಗುವ ‘ಫಾದರ್‌ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ ಸ್ವೀಕರಿಸಿ ಶನಿವಾರ ಅವರು ಮಾತನಾಡಿದರು.

‘ಪ್ರಶಸ್ತಿ ಸ್ವೀಕರಿಸುವಾಗ ಚಸರಾ ಅವರನ್ನು ನೆನೆದು ಅವರು ಗದ್ಗದಿತರಾದರು. ಗೌರಿ ಸಾವಿನ ಬಳಿಕ ನನಗೆ ಪೊಲೀಸ್‌ ರಕ್ಷಣೆ ಕೊಡಲಾಯಿತು. ನನ್ನನ್ನೂ ಒಳಗೊಂಡು ಸುಮಾರು 7 ಜನರನ್ನು ಕೆಲವು ಹಿತಾಸಕ್ತಿಗಳು ಗುರಿಯಾಗಿರಿಸಿಕೊಂಡಿದ್ದಾರೆ. ಆತಂಕದ ನಡುವೆ ದಿನ ಕಳೆಯಬೇಕಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು. 

ಇನ್ನೊಬ್ಬ ಪ್ರಶಸ್ತಿ ಪುರಸ್ಕೃತ, ಪತ್ರಕರ್ತ ಎಫ್‌.ಎಂ.ನಂದಗಾಂವ್‌ ಮಾತನಾಡಿ, ‘ಕರ್ನಾಟಕದಲ್ಲಿ ಕ್ರೈಸ್ತರ ಬಗ್ಗೆ ಬೇರೆ ಬೇರೆ ಪರಿಕಲ್ಪನೆಗಳಿವೆ.

ಇಲ್ಲಿನವರು ಕೊಂಕಣಿ, ಇಂಗ್ಲಿಷ್‌ ಅಥವಾ ತಮಿಳು ಮಾತನಾಡಬೇಕು. ಸೂಟು, ಸ್ಕರ್ಟ್‌ ಧರಿಸಬೇಕು. ಇದೆಲ್ಲಾ ಏಕೋ ಗೊತ್ತಿಲ್ಲ. ಆದರೆ, 60ರ ದಶಕದಲ್ಲಿ ಪೋಪ್‌ ಅವರು ಆಯಾ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲೇ ಪ್ರಾರ್ಥನೆ ನಡೆಸಬೇಕು ಎಂಬ ಆದೇಶ ನೀಡಿದ್ದರು. ಅದಕ್ಕೂ ಮುನ್ನ ಲ್ಯಾಟಿನ್‌ ಭಾಷೆಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು’ ಎಂದರು.

ಅತಿಥಿ ಡಾ.ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ‘ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಧ್ವನಿಯೆತ್ತಿದ ಚಸರಾ ಅವರನ್ನು ಮಾನಸಿಕವಾಗಿ ಹಿಂಸಿಸಿ ಸಾಯಿಸಲಾಯಿತು. ಪ್ರಾರ್ಥನೆಗೆ ಭಾಷೆ ಮುಖ್ಯವಲ್ಲ ಎಂಬ ನಿಲುವನ್ನು ಪ್ರತಿಪಾದಿಸಿದವರು ಚಸರಾ ಎಂದರು.

‘ಕನ್ನಡದ ಹೋರಾಟದ ಕೆಚ್ಚು ಬಿಡಬಾರದು. ಆದರೆ, ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಅನುಸಂಧಾನಕ್ಕೆ ಅವಕಾಶ ಇಟ್ಟುಕೊಂಡೇ ಹೋರಾಡಬೇಕು’ ಎಂದು ಜಯಪ್ರಕಾಶ್‌ ಅಭಿಪ್ರಾಯಪಟ್ಟರು.

ಪರಿಷತ್‌ ಅಧ್ಯಕ್ಷ ಡಾ.ಮನು ಬಳಿಗಾರ್‌ ಮಾತನಾಡಿ, ‘ಪರಿಷತ್‌ ಶ್ರೇಷ್ಠರನ್ನು ಗುರುತಿಸುತ್ತದೆ. ಇಲ್ಲಿ ಯಾವುದೇ ಒತ್ತಡದ ಪ್ರಶ್ನೆ ಇಲ್ಲ. ಚಸರಾ ಅವರು ಚರ್ಚ್‌ನ ಪ್ರಾರ್ಥನೆಗಳಲ್ಲಿ ಕನ್ನಡ ಬರಬೇಕು ಎಂಬ ಆಶಯ ಹೊಂದಿದ್ದರು. ಅವರ ಜೀವನದ ಆಶಯ ಅಳವಡಿಸಿಕೊಂಡವರಿಗೆ ಪರಿಷತ್‌ ಅವರ ಹೆಸರಿನ ದತ್ತಿ ಪ್ರಶಸ್ತಿ ಕೊಡುತ್ತಿದೆ’ ಎಂದು ಹೇಳಿದರು.

ನಂದಗಾಂವ್‌ ಪ್ರಶಸ್ತಿಯ ನಗದು ₹ 20 ಸಾವಿರವನ್ನು ಟ್ರಸ್ಟ್‌ ಬಳಕೆಗಾಗಿ ಹಿಂದಿರುಗಿಸಿದರು.

ಸಂಚಲನ ಸಂಘಟನೆ ಅಧ್ಯಕ್ಷೆ ಡಾ.ರೀಟಾರಿನಿ ಇದ್ದರು. ಪರಿಷತ್‌ನ ಗೌರವ ಕಾರ್ಯದರ್ಶಿ ಡಾ. ರಾಜಶೇಖರ ಹತಗುಂದಿ ಸ್ವಾಗತಿಸಿದರು. ವ.ಚ.ಚನ್ನೇಗೌಡ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry