ಸೋಮವಾರ, ಡಿಸೆಂಬರ್ 9, 2019
22 °C

ಆಸ್ತಿತೆರಿಗೆ ಸಂಗ್ರಹ ₹36 ಕೋಟಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ತಿತೆರಿಗೆ ಸಂಗ್ರಹ ₹36 ಕೋಟಿ ಹೆಚ್ಚಳ

ಬೆಂಗಳೂರು: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಪ್ರಸಕ್ತ ಆರ್ಥಿಕ ವರ್ಷದ ಮೊದಲೆರಡು ತಿಂಗಳಲ್ಲಿ ₹ 36.50 ಕೋಟಿ ಹೆಚ್ಚಳವಾಗಿದೆ. ಕಳೆದ ವರ್ಷ ಏಪ್ರಿಲ್‌ 1ರಿಂದ ಮೇ 31ರ ಅವಧಿಯಲ್ಲಿ ₹ 1,230 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ₹ 1,266.50 ಕೋಟಿ ಆಗಿದೆ. 

ಆಸ್ತಿತೆರಿಗೆಯಲ್ಲಿ ರಿಯಾಯಿತಿ ನೀಡುವ ಘೋಷಣೆ ಈ ಸಲ ಕೇವಲ ಒಂದು ತಿಂಗಳಿಗೆ ಸೀಮಿತವಾಗಿತ್ತು. ಹೀಗಿದ್ದರೂ  ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

‘ಜಯನಗರ ಮತ್ತು ರಾಜರಾಜೇಶ್ವರಿ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಈ ರಿಯಾಯಿತಿಯನ್ನು ರದ್ದುಗೊಳಿಸಬೇಕಾಯಿತು. ನೀತಿ ಸಂಹಿತೆ ಜಾರಿಯಲ್ಲಿ ಇದ್ದುದ್ದರಿಂದ ಈ ಕ್ರಮ ಅನಿವಾರ್ಯವಾಯಿತು’ ಎಂದು ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಹದೇವ್‌ ತಿಳಿಸಿದರು.

‘ರಿಯಾಯಿತಿ ಹಿಂಪಡೆದಿದ್ದರೂ ಕಳೆದ ಆರ್ಥಿಕ ವರ್ಷದಲ್ಲಿ ₹ 110 ಕೋಟಿಯಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ.  ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಮಹದೇವ್‌ ಹೇಳಿದರು.

ಶಾಖಾಂಬರಿ ನಗರದ ನಿವಾಸಿ ಮುಕುಂದ್‌ ಪ್ರತಿಕ್ರಿಯಿಸಿ, ‘ನಿಗದಿತ ವೇಳೆಯಲ್ಲಿ ತೆರಿಗೆ ಕಟ್ಟಿದವರಿಗೆ ಶೇ 5ರಷ್ಟು ರಿಯಾಯಿತಿ ಘೋಷಿಸುವುದು ಒಳ್ಳೆಯದು. ಆದರೆ, ಈ ಕ್ರಮಗಳೆಲ್ಲಾ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರಿಗೆ ಮಾತ್ರ ಅನ್ವಯಿಸುತ್ತದೆ. ತೆರಿಗೆ ವಂಚಿಸುವವರು ಅದೇ ರೀತಿ ಮುಂದುವರಿಯುತ್ತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಆನ್‌ಲೈನ್‌ ಪಾವತಿ ಬಗ್ಗೆ ಜನರಿಂದ ಮೆಚ್ಚುಗೆ ಬಂದಿದೆ. ಆದರೆ, ಸಾಫ್ಟ್‌ವೇರ್‌ ಸಮಸ್ಯೆ ಇದೆ. ವೆಬ್‌ ಪರದೆ ತೆರೆಯದಿರುವುದು, ಅಪ್ಪಿತಪ್ಪಿ ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ ಬದಲಿಗೆ ಚಲನ್‌ ಆಯ್ಕೆ ಒತ್ತಿದರೆ ಅದರಿಂದ ವಾಪಸ್‌ ಬರಲು ಇಲ್ಲವೆ ಆಯ್ಕೆ ಬದಲಿಸಲು ಅವಕಾಶ ಇಲ್ಲ. ಒಮ್ಮೊಮ್ಮೆ ರಸೀದಿ ಸೃಷ್ಟಿಯಾಗುದಿಲ್ಲ. ಹಣ ಪಾವತಿ ಆಗಿದೆಯೇ ಇಲ್ಲವೇ ಎಂಬುದೂ ಖಾತ್ರಿಯಾಗುವುದಿಲ್ಲ. ಇಂಥ ಸಮಸ್ಯೆಗಳನ್ನು ಬಗೆಹರಿಸಬೇಕಿದೆ’ ಎಂದು ಸ್ಥಳೀಯರಾದ ರಾಜಶೇಖರ್‌ ಹೇಳಿದರು.

‘ಈ ಸಮಸ್ಯೆಗಳು ಇರುವುದು ನಿಜ. ಎಲ್ಲವನ್ನೂ ಹಂತಹಂತವಾಗಿ ಬಗೆಹರಿಸಲಾಗುತ್ತದೆ. ಸದ್ಯ ವೆಬ್‌ಸೈಟನ್ನು ಪರಿಪೂರ್ಣವಾಗಿ ರೂಪಿಸುತ್ತೇವೆ’ ಎಂದು ಮಹದೇವ್‌ ಹೇಳಿದರು.

ಪ್ರತಿಕ್ರಿಯಿಸಿ (+)