ಸೋಮವಾರ, ಡಿಸೆಂಬರ್ 9, 2019
22 °C
ಹೆಬ್ಬಾಳ ಪೊಲೀಸರಿಂದ ನಾಲ್ವರ ಬಂಧನ

ಸಾಫ್ಟ್‌ವೇರ್ ಕಂಪನಿ ಮಾಲೀಕನ ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಫ್ಟ್‌ವೇರ್ ಕಂಪನಿ ಮಾಲೀಕನ ಅಪಹರಣ

ಬೆಂಗಳೂರು: ಸಾಫ್ಟ್‌ವೇರ್‌ ಕಂಪನಿ‌ಯೊಂದರ ಮಾಲೀಕ ಜೀತಾ ಮಿತ್ರಾ ಅವರನ್ನು ಅಪಹರಿಸಿದ್ದ ಆರೋಪದಡಿ, ಅವರ ಸ್ನೇಹಿತ ಮಹಮದ್ ವಸೀಂ (28) ಸೇರಿ ನಾಲ್ವರನ್ನು ಬಂಧಿಸಲಾಗಿದೆ.

ನಾಗವಾರದ ನಿವಾಸಿ ಮಹಮ್ಮದ್ ವಸೀಂ, ಈತನ ಸ್ನೇಹಿತರಾದ ಹಾಸನ ಜಿಲ್ಲೆಯ ಬೇಲೂರಿನ ಸಲ್ಮಾನ್ ಅಲಿಯಾಸ್ ವಾಯಿಜ್ (24), ಸುಂಕದಕಟ್ಟೆ ಪ್ರದೀಪ್ ಅಲಿಯಾಸ್ ಸಾಗರ್, ಚನ್ನರಾಯಪಟ್ಟಣದ ಬಾಗೂರಿನ ಸುನೀಲ್ ಅಲಿಯಾಸ್ ಯುವರಾಜ್‌ ಬಂಧಿತ ಆರೋಪಿಗಳು ಎಂದು ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.

ಆನಂದ ನಗರದ ನಿವಾಸಿ ಮಿತ್ರಾ, ಆರ್‌.ಟಿ.ನಗರದಲ್ಲಿ ಸಾಫ್ಟ್‌ವೇರ್‌ ಕಂಪನಿ ನಡೆಸುತ್ತಿದ್ದಾರೆ. ಕಂಪನಿಯ ಪ್ರಚಾರದ ವೇಳೆ ಅವರಿಗೆ ವಸೀಂ ಪರಿಚಯವಾಗಿತ್ತು. ಆನಂತರ, ಅವರಿಬ್ಬರು ಸಂಜಯನಗರ 80ನೇ ಅಡಿ ರಸ್ತೆಯಲ್ಲಿರುವ ಕಾಫಿ ಡೇಯಲ್ಲಿ ಭೇಟಿಯಾಗುತ್ತಿದ್ದರು.

ಮಿತ್ರಾ ಬಳಿ ಹೆಚ್ಚು ಹಣ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ ವಸೀಂ, ಅವರನ್ನು ಅಪಹರಿಸಿ, ಹಣಕ್ಕೆ ಬೇಡಿಕೆ ಇಡಲು ಸಂಚು ರೂಪಿಸಿದ್ದ. ಈ ಯೋಜನೆಯನ್ನು ಸಲ್ಮಾನ್‌ಗೆ ತಿಳಿಸಿ ಸಹಕಾರ ಕೇಳಿದ್ದ. ಆತ, ಇಬ್ಬರು ಸ್ನೇಹಿತರ ಜತೆಗೂಡಿ ಕೃತ್ಯ ಎಸಗಲು ಒಪ್ಪಿಕೊಂಡಿದ್ದ.

ಅಪಘಾತದ ನಾಟಕ: ಕಾಫಿ ಡೇ ಮಳಿಗೆಯಿಂದಲೇ ಮಿತ್ರಾರನ್ನು ಅಪಹರಣ ಮಾಡಲು ಆರೋಪಿಗಳು ಯೋಚಿಸಿದ್ದರು. ಮಿತ್ರಾಗೆ ಕರೆ ಮಾಡಿದ್ದ ವಸೀಂ, ಕಾಫಿ ಡೇಗೆ ಬರುವಂತೆ ಹೇಳಿದ್ದ. ಕೆಲಸವಿರುವುದರಿಂದ ಬರಲು ಆಗುವುದಿಲ್ಲವೆಂದು ಅವರು ತಿಳಿಸಿದ್ದರು. ಬಳಿಕ  ಮನೆ ಬಳಿಯಿಂದಲೇ ಅಪಹರಿಸಲು ಆರೋಪಿಗಳು ನಿರ್ಧರಿಸಿದ್ದರು. ಆದರೆ, ವಸೀಂ ಆರೋಪಿಗಳ ಜತೆ ಹೋಗಿರಲಿಲ್ಲ.

ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಆನಂದ ನಗರದ 5ನೇ ಮುಖ್ಯರಸ್ತೆಗೆ ಆರೋಪಿಗಳು ಹೋಗಿದ್ದರು. ಅದೇ ರಸ್ತೆ ಮೂಲಕ ಹೊರಟಿದ್ದ ಮಿತ್ರಾರ ಕಾರಿಗೆ ತಮ್ಮ ಕಾರು ಗುದ್ದಿಸಿದ್ದರು. ಕಾರು ದುರಸ್ತಿಗೆ ₹1,000 ಕೊಡುವಂತೆ ಜಗಳ ತೆಗೆದ ಆರೋಪಿಗಳು, ಮಿತ್ರಾ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಅಲ್ಲಿಂದ ಹೊರಟಿದ್ದರು. ಬಳ್ಳಾರಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಚಾಕುವಿನಿಂದ ಕೈಗೆ ಚುಚ್ಚಿ, ₹50 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು.

‘ನನ್ನ ಕಂಪನಿಯ ಪಾಲುದಾರರಿದ್ದಾರೆ. ಅವರಿಗೆ ಕರೆ ಮಾಡಿ ಹಣ ತರಿಸುತ್ತೇನೆ’ ಎಂದು ಮಿತ್ರಾ ಹೇಳಿದ್ದರು. ಅದಕ್ಕೆ ಒಪ್ಪದ ಆರೋಪಿಗಳು, ‘ಅವರನ್ನು ಬಿಟ್ಟು ಬೇರೆ ಯಾರಿಗಾದರೂ ಕರೆ ಮಾಡು’ ಎಂದಿದ್ದರು. ಆಗ ಮಿತ್ರಾ, ವಸೀಂ ಹೆಸರು ಹೇಳಿದ್ದರು. ಅದಕ್ಕೆ ಆರೋಪಿಗಳು ಒಪ್ಪಿದ್ದರು. ‘ನಾನು ತುಂಬಾ ಸಂಕಷ್ಟದಲ್ಲಿದ್ದೇನೆ. ಕೂಡಲೇ ಹಣ ತೆಗೆದುಕೊಂಡು ಯಲಹಂಕ ಬಳಿ ಬಾ’ ಎಂದು ವಸೀಂಗೆ ಹೇಳಿದ್ದರು.

ಸ್ಥಳಕ್ಕೆ ಬಂದಿದ್ದ ವಸೀಂ, ‘ಆರೋಪಿಗಳಿಗೆ ₹17.50 ಲಕ್ಷವನ್ನು ಕೊಟ್ಟಿದ್ದೇನೆ. ನಿನ್ನನ್ನು ಇಂದೇ ಬಿಟ್ಟು ಕಳುಹಿಸುತ್ತಾರೆ’ ಎಂದು ಹೇಳಿ ವಾಪಸ್‌ ಹೋಗಿದ್ದ. ರಾತ್ರಿಯಿಡೀ ಮಿತ್ರಾರನ್ನು ನಗರದಲ್ಲಿ ಸುತ್ತಾಡಿಸಿದ್ದ ಆರೋಪಿಗಳು, ಆನಂದ ನಗರದ ಬಳಿ ಬೆಳಿಗ್ಗೆ ಬಿಟ್ಟು ಹೋಗಿದ್ದರು. ಅದೇ ವೇಳೆ, 30 ಕಾಗದ ಪತ್ರಗಳಿಗೆ ಸಹಿ ಸಹ ಮಾಡಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

ಕರೆ ವಿವರಗಳಿಂದ ಸಿಕ್ಕಿಬಿದ್ದ

ಎರಡು ದಿನ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದುಕೊಂಡಿದ್ದ ಮಿತ್ರಾ, ಆನಂತರ ಠಾಣೆಗೆ ದೂರು ನೀಡಿದ್ದರು.

‘ನನ್ನ ಎದುರು ವಸೀಂ ಆರೋಪಿಗಳಿಗೆ ಹಣ ಕೊಟ್ಟಿಲ್ಲ. ಆತನ ಮೇಲೆಯೇ ತಮಗೆ ಅನುಮಾನವಿದೆ’ ಎಂದು ಮಿತ್ರಾ ಹೇಳಿದ್ದರು.

ಅದೇ ಆಧಾರದಲ್ಲಿ ವಸೀಂ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿದೆವು. ಆರೋಪಿಗಳ ಜತೆಯಲ್ಲಿ ಆತ ಸಂಪರ್ಕದಲ್ಲಿರುವುದು ಗೊತ್ತಾಯಿತು. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ. ಆತನ ಮೂಲಕ ಉಳಿದವರನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದರು.

ಪ್ರತಿಕ್ರಿಯಿಸಿ (+)