ಸೋಮವಾರ, ಡಿಸೆಂಬರ್ 9, 2019
24 °C
ಕಾಂಪೌಂಡ್ ಕುಸಿದು ಕೂಲಿ ಕಾರ್ಮಿಕ ಸಾವು

ಮತ್ತೆ ಮುಂದುವರಿದ ವರುಣ ಸಿಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಮುಂದುವರಿದ ವರುಣ ಸಿಂಚನ

ಬೆಂಗಳೂರು: ನಗರದಲ್ಲಿ ಸುರಿದ ಮಳೆಗೆ ಶುಕ್ರವಾರ ರಾತ್ರಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಬಾಲಾಜಿ ಬಡಾವಣೆಯಲ್ಲಿ ಕಾಂಪೌಂಡ್‌ ಕುಸಿದು ಮಾಲತೇಶ್‌ (30) ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮಾಲತೇಶ್‌ ಅವರ ಪತ್ನಿ ಪಾರ್ವತಿ, ಅಣ್ಣ ಶರಣಪ್ಪ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಬುರ್ಗಿ ಜಿಲ್ಲೆಯ ಗಂಟಲಗೂಡು ಗ್ರಾಮದಿಂದ ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ ಅವರು ತಾತ್ಕಾಲಿಕ ಶೆಡ್‌ನಲ್ಲಿ ನೆಲೆಸಿದ್ದರು.

ಪರಿಹಾರ: ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಮಾಲತೇಶ್‌ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ಬಿಬಿಎಂಪಿ ಭರಿಸಲು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮುಂದುವರಿದ ಮಳೆ: ನಗರದಲ್ಲಿ ಶನಿವಾರವೂ ಮಳೆ, ಗುಡುಗು, ಸಿಡಿಲಿನ ಆರ್ಭಟ ಮುಂದುವರಿಯಿತು. ಕಂಟೋನ್ಮೆಂಟ್‌ ರೈಲು ನಿಲ್ದಾಣ, ಶಿವಾನಂದ ಸರ್ಕಲ್‌, ಆನೆಪಾಳ್ಯ, ಡಬಲ್‌ ರೋಡ್‌, ಬ್ರಿಗೇಡ್‌ ವೃತ್ತ, ರೇಸ್‌ ಕೋರ್ಸ್‌ ರಸ್ತೆ, ಗಾಲ್ಫ್‌ ಕೋರ್ಸ್‌ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿತು.

ಮರಗಳು ಧರೆಗೆ: ಬಾಣಸವಾಡಿಯ ಕಮ್ಮನಹಳ್ಳಿ, ರಾಮಯ್ಯ ಬಡಾವಣೆ, ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ, ಕದಿರೇನಹಳ್ಳಿ, ರಾಜರಾಜೇಶ್ವರಿ ನಗರದ ಬೆಸ್ಟ್‌ಕ್ಲಬ್‌, ಕಾಚರಕನಹಳ್ಳಿ, ಹೆಬ್ಬಾಳ, ಡಾಲರ್ಸ್‌ ಕಾಲೊನಿ, ಮಾರುತಿಸೇವಾ ನಗರ ಹಲಸೂರು, ಹನುಮಂತ ನಗರ, ವಿದ್ಯಾಪೀಠ, ಜಯನಗರ, ಕಾಮಾಕ್ಯ ಚಿತ್ರಮಂದಿರ, ಜೆ.ಪಿ.ನಗರ, ಇಲಿಯಾಸ್‌ ನಗರ ಮತ್ತು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಮತ್ತು 2ನೇ ಬ್ಲಾಕ್‌ನ 3ನೇ ಅಡ್ಡರಸ್ತೆಯಲ್ಲಿ ಮರ ಮತ್ತು ಮರದ ಟೊಂಗೆಗಳು ಧರೆಗುರುಳಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ವಿದ್ಯುತ್‌ ಕಂಬಗಳಿಗೆ ಹಾನಿ: ಹೆಸರಘಟ್ಟ ಹೋಬಳಿ ತರಬನಹಳ್ಳಿ ಗ್ರಾಮದ ಬಳಿ ಬೃಹತ್‌ ಆಲದ ಮರ ಧರೆಗುರುಳಿದ್ದು, ನಾಲ್ಕು ಮನೆಗಳ ಚಾವಣಿಗೆ ಹಾನಿಯಾಗಿದೆ. 10 ವಿದ್ಯುತ್ ಕಂಬಗಳು ಮುರಿದಿವೆ. ಅಂದಾಜು

₹ 10 ಲಕ್ಷ ಮೌಲ್ಯದ ವಿದ್ಯುತ್‌ ತಂತಿಗಳು ಹಾನಿಯಾಗಿವೆ ಎಂದು ಬೆಸ್ಕಾಂ ಎಂಜಿನಿಯರ್‌ ತಿಳಿಸಿದ್ದಾರೆ.

ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯಲ್ಲಿ (ದಾಬಸ್ ಪೇಟೆ) ಉತ್ತಮ ಮಳೆಯಾಗಿದ್ದು, ಕೆರೆ, ಕೃಷಿ ಹೊಂಡಗಳಲ್ಲಿ ನೀರು ತುಂಬಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಪ್ರತಿಕ್ರಿಯಿಸಿ (+)