ನಾಲ್ಕನೇ ಬಾರಿ ಉಪ ಚುನಾವಣೆ ಬಹಿಷ್ಕಾರ

7

ನಾಲ್ಕನೇ ಬಾರಿ ಉಪ ಚುನಾವಣೆ ಬಹಿಷ್ಕಾರ

Published:
Updated:

ಎಂ.ಕೆ.ಹುಬ್ಬಳ್ಳಿ: ಪ್ರತ್ಯೇಕ ಗ್ರಾಮ ಪಂಚಾಯ್ತಿಗಾಗಿ ಪಟ್ಟು ಹಿಡಿದು 3 ಬಾರಿ ಗ್ರಾಮ ಪಂಚಾಯ್ತಿ ಸದಸ್ಯರ ಉಪಚುನಾವಣೆಯನ್ನು ಬಹಿಷ್ಕರಿಸಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಅಮರಾಪುರ ಮತ್ತು ವೀರಾಪೂರ ಗ್ರಾಮಸ್ಥರು, 4ನೇ ಬಾರಿಗೂ ಒಮ್ಮತದಿಂದ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಶನಿವಾರ, ದಾಸ್ತಿಕೊಪ್ಪ ಗ್ರಾಮ ಪಂಚಾಯ್ತಿಗೆ ತೆರಳಿ ಚುನಾವಣೆ ಬಹಿಷ್ಕರಿಸುವ ನಿರ್ಧಾರದ ಮನವಿಯನ್ನು ಚುನಾವಣಾಧಿಕಾರಿಗಳಿಗೆ ನೀಡಿದ್ದಾರೆ. ಆ ಮೂಲಕ ಸರ್ಕಾರಕ್ಕೆ ತಮ್ಮ ದಿಟ್ಟ ಉತ್ತರ ನೀಡಿ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

‘ಮೊದಲು ಎಂ.ಕೆ.ಹುಬ್ಬಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದೆವು. ಅದನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ನಂತರ ಸುಮಾರು 12 ಕಿ.ಮೀ ದೂರದ ದಾಸ್ತಿಕೊಪ್ಪ ಗ್ರಾಮ ಪಂಚಾಯ್ತಿಗೆ ಸೇರಿಸಿ ಚುನಾವಣೆ ನಡೆಸುತ್ತಿದ್ದಾರೆ. ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ನಮ್ಮ ಎರಡು ಗ್ರಾಮಗಳನ್ನೊಳಗೊಂಡ ಪ್ರತ್ಯೇಕ ಗ್ರಾಮ ಪಂಚಾಯ್ತಿ ರಚಿಸುವಂತೆ ಹಲವು ವರ್ಷಗಳಿಂದ ಸಚಿವರಿಗೆ, ಜನಪ್ರತಿನಿಧಿಗಳಿಗೆ, ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ’ ಎಂದು ಉಭಯ ಗ್ರಾಮಸ್ಥರು ಅಳಲು ತೊಡಿಕೊಂಡರು.

‘ಬೇಡಿಕೆ ಈಡೇರುವವರೆಗೆ ಸರ್ಕಾರ ಎಷ್ಟೇ ಬಾರಿ ಉಪ ಚುನಾವಣೆ ಘೋಷಿಸಿದರೂ ಅದಕ್ಕೆ ನಾವು ಅವಕಾಶ ನೀಡೆವು’ ಎಂದು ತಮ್ಮ ನಿಲುವು ಪ್ರಕಟಿಸಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಹೋರಾಟಕ್ಕೆ ಕೈ ಜೊಡಿಸಬೇಕು ಎಂದು ವಿನಂತಿಸಿದ್ದಾರೆ.

ಕರ್ನಾಟಕ ಯುವ ಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ಬಸವರಾಜು ಪಾಟೀಲ, ಗೋಪಿ ತಳವಾರ, ರಾಜು ತಳವಾರ, ಉತ್ತಮ ಅಂಬಡಗಟ್ಟಿ, ಕರೇಪ್ಪ ತಳವಾರ, ಶಾಂತಲಾ ದೊಡಮನಿ, ಬಸವ್ವ ಪೂಜಾರ, ಸಿದ್ಧಮ್ಮ ತಳವಾರ, ಸಾವಕ್ಕ ಸೇರಿದಂತೆ ಉಭಯ ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry