ಸಣ್ಣ ಕೈಗಾರಿಕೆಗಳಿಗೆ ₹10 ಕೋಟಿ ಹಾನಿ

7
ಸಣ್ಣ ಕೈಗಾರಿಕೆ ಸಂಘದಿಂದ ಪರಿಹಾರಕ್ಕಾಗಿ ಸಿಎಂಗೆ ಮನವಿ

ಸಣ್ಣ ಕೈಗಾರಿಕೆಗಳಿಗೆ ₹10 ಕೋಟಿ ಹಾನಿ

Published:
Updated:

ಮಂಗಳೂರು: ಮಂಗಳವಾರ ಸುರಿದ ಧಾರಾಕಾರ ಮಳೆಯಿಂದ ನಗರದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು ₹10 ಕೋಟಿಗೂ ಅಧಿಕ ಹಾನಿಯಾಗಿದ್ದು, ಕೂಡಲೇ ಪರಿಹಾರ ಧನ ಮಂಜೂರು ಮಾಡುವಂತೆ ಕೆನರಾ ಸಣ್ಣ ಕೈಗಾರಿಕಾ ಸಂಘ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮಂಗಳವಾರ ಸುರಿದ ಮಳೆಯಿಂದಾಗಿ 50–60 ಘಟಕಗಳಲ್ಲಿ ಸುಮಾರು 2 ರಿಂದ 4 ಅಡಿಗಳಷ್ಟು ನೀರು ನಿಂತಿದ್ದು, ಸಾಮಗ್ರಿಗಳು, ಯಂತ್ರೋಪಕರಣಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ.

ಕೆಐಎಡಿಬಿ, ಕೆಎಸ್‌ಎಸ್‌ಐಡಿ, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು ₹10 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ 2ರಿಂದ 20 ದಿನಗಳವರೆಗೆ ಕೈಗಾರಿಕೆಗಳು ಕಾರ್ಯನಿರ್ವಹಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ನೋಟು ರದ್ದತಿ, ಜಿಎಸ್‌ಟಿಯಿಂದಾಗಿ ಈಗಾಗಲೇ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ಇದೀಗ ಮಳೆಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅನೇಕ ಉದ್ಯಮಿಗಳು ಘಟಕಗಳನ್ನು ಮುಚ್ಚುವ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದೆ.

ಮಳೆ ನೀರು ಹರಿದು ಹೋಗಲು ನಿರ್ಮಿಸಿರುವ ರಾಜಕಾಲುವೆಗಳಲ್ಲಿ ಇರುವ ಲೋಪದೋಷನಗಳನ್ನು ಸರಿಪಡಿಸಬೇಕು. ಸಣ್ಣ ಕೈಗಾರಿಕೆಗಳ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಹಾನಿಯ ಕುರಿತು ವರದಿ ಸಿದ್ಧಪಡಿಸಲು ಸಮಿತಿ ರಚಿಸಬೇಕು. ಅಗತ್ಯ ನೆರವು ಒದಗಿಸುವ ಮೂಲಕ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಗೌರವ ಹೆಗ್ಡೆ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry