ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಎತ್ತಿನಹೊಳೆ ಯೋಜನೆ ವಿರೋಧಿಸುತ್ತೇನೆ’

ಮಳೆ ಹಾನಿ ಪ್ರದೇಶಗಳಿಗೆಲ್ಲಾ ಭೇಟಿ ನೀಡಿದ್ದೇನೆ– ಎಲ್ಲರಿಗೂ ಪರಿಹಾರ ಒದಗಿಸಲು ಯತ್ನಿಸುವೆ
Last Updated 3 ಜೂನ್ 2018, 9:31 IST
ಅಕ್ಷರ ಗಾತ್ರ

ಬೆಳೆಯುತ್ತಿರುವ ಮಂಗಳೂರು ನಗರದ ಬಹುಪಾಲು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 38 ವಾರ್ಡ್‌ಗಳನ್ನು ಒಳಗೊಂಡ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಂದಿರುವ ಸಮಸ್ಯೆಗಳು, ಶಾಸಕರಾದ ವೇದವ್ಯಾಸ ಕಾಮತ್‌ ಅವರ ಮುಂದಿರುವ ಸವಾಲುಗಳ ಕುರಿತು ಚಿಕ್ಕ ಮಾತುಕತೆ:

ಒಂದು ದಿನದ ಸುರಿದ ಮಳೆಗೆ ಮಂಗಳೂರು ದಣಿದಿದೆ. ಈ ಘಟನೆ ನಿಮ್ಮ ಜವಾಬ್ದಾರಿಯನ್ನು ಮತ್ತೊಮ್ಮೆ ನೆನಪಿಸಿದೆಯೇ ?

ಮಂಗಳವಾರ ಸುರಿದ ಮಳೆಯಿಂದ ನಗರದ ವಿವಿಧೆಡೆಗಳಲ್ಲಿ ಆಗಿರುವ ಹಾನಿಯನ್ನು ಸ್ವತಃ ತೆರಳಿ ವೀಕ್ಷಿಸಿದ್ದೇನೆ. ನಗರದಲ್ಲಿ ಮಳೆಚರಂಡಿ, ಒಳಚರಂಡಿ ವ್ಯವಸ್ಥೆಯು ಹದಗೆಟ್ಟಿರುವುದನ್ನು ತೀರಾ ಹತ್ತಿರದಿಂದ ಗಮನಿಸಿದ್ದೇನೆ. ಇವುಗಳನ್ನು ಸರಿಪಡಿಸಲು ಸಮರೋಪಾದಿಯಲ್ಲಿ ಕೆಲಸ ಆಗಬೇಕಾಗಿದೆ. ಈ ಹಿಂದೆ ನಡೆದಿರುವ ಕಾಮಗಾರಿಗಳಲ್ಲಿ ದೋಷವಿದೆ ಎಂಬುದು ಇದೀಗ ಇಂಚಿಂಚೂ ಅರ್ಥವಾಗಿದೆ. ನಗರದಲ್ಲಿರುವ ಅನೇಕ ಬಡವರ ಮನೆಗಳಿಗೆ ಹಾನಿ ಆಗಿದೆ. ನಾವು ಮಳೆಹಾನಿ, ನಷ್ಟದ ಬಗ್ಗೆ ಲೆಕ್ಕ ಹಾಕುವಾಗ ಎಷ್ಟೋ ಮಂದಿ ಬಡವರ ಮನೆಯೊಳಗೆ ಆದ ನಷ್ಟಗಳನ್ನು ಗಮನಿಸುವುದೇ ಇಲ್ಲ. ಎಲ್ಲವನ್ನೂ ಲೆಕ್ಕಹಾಕುವುದು ಸಾಧ್ಯವಿಲ್ಲ. ಆದರೆ ಅಂತಹ ಹಾನಿ ಆಗದಂತೆ ತಡೆಯುವ ಜವಾಬ್ದಾರಿ ಆಡಳಿತ ವ್ಯವಸ್ಥೆಯ ಮೇಲಿದೆ. ಜನರು ಆಡಳಿತ ನಡೆಸುವವರನ್ನು ನಂಬಿ ರಸ್ತೆ ಸುಂಕ, ನೀರಿನ ಸುಂಕ ಅಂತ ಹಲವು ಸುಂಕಗಳನ್ನು ಕಟ್ಟುತ್ತಾರೆ. ಅವರ ನೆಮ್ಮದಿಯನ್ನು ಹಾಳುಗೆಡವದಂತೆ ನಗರದ ಕಾಮಗಾರಿ ನಡೆಯಬೇಕಾಗಿದೆ.

ಇವನ್ನೆಲ್ಲ ಸರಿ ಮಾಡಲು ಕ್ರಿಯಾ ಯೋಜನೆ ರೂಪಿಸಿದ್ದೀರಾ?

ಮಂಗಳೂರು ನಗರದಲ್ಲಿ ಮುಖ್ಯವಾಗಿ ಮೂರು ಸಮಸ್ಯೆಗಳಿವೆ. ಫುಟ್‌ಪಾತ್‌, ಒಳಚರಂಡಿ ಮತ್ತು ಸಂಚಾರ ವ್ಯವಸ್ಥೆ. ಅದೇ ರೀತಿ ಕುಡಿಯುವ ನೀರಿನ ಸರಿಯಾದ ನಿರ್ವಹಣೆಯೂ ಆಗಬೇಕಾಗಿದೆ. ಇವುಗಳ ಕುರಿತು ಯೋಜನೆಯೊಂದನ್ನು ಸಿದ್ಧಪಡಿಸಿ ಕೆಲಸ ಶುರು ಮಾಡುತ್ತೇನೆ. ಕಳೆದೆರಡು ದಿನಗಳಿಂದ ಮಳೆಹಾನಿ ಪ್ರದೇಶಗಳನ್ನು ಗಮನಿಸಿದ್ದೇನೆ. ಕಾಂಕ್ರೀಟ್‌ ರಸ್ತೆಗಳನ್ನು ಮಾಡುವಾಗ ನೀರು, ಚರಂಡಿಯ ಪೈಪುಗಳ ಮೇಲೆ ಕಾಂಕ್ರೀಟ್‌ ಹಾಕುತ್ತಲೇ ಹೋಗಿರುವುದು ಅರಿವಿಗೆ ಬಂದಿದೆ. ನೀರು ಹರಿದು ಹೋಗಲು ಅವಕಾಶ ಕೊಡಬೇಕಾಗಿದೆ. ರಿಪೇರಿ ಕೆಲಸಗಳೇ ಹಲವಾರು ಕಡೆ ಇವೆ. ಕೇವಲ ರಸ್ತೆ ನಿರ್ಮಿಸುವ ಹುಮ್ಮಸ್ಸಿನಲ್ಲಿ ಕಾಮಗಾರಿ ನಡೆದಿದೆ. ಆದ್ದರಿಂದ ಫುಟ್‌ಪಾತ್‌ ಮತ್ತು ಒಳಚರಂಡಿ ಕಾಮಗಾರಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುವುದು.

ಎರಡನೇ ಹಂತದ ಎಡಿಬಿ ಯೋಜನೆಯ ವಿರುದ್ಧ ಬಿಜೆಪಿ ಧ್ವನಿ ಎತ್ತಿತ್ತು. ಈಗ ನಿಮ್ಮ ಸರದಿ?

ಕುಡ್ಸೆಂಪ್‌ ಕಾಮಗಾರಿಯಲ್ಲಿನ ದೋಷ, ಎಡಿಬಿ ಸಾಲದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಕಾಮಗಾರಿ ನಿರ್ವಹಿಸದೇ ಇರುವುದರಿಂದ ನಗರದಲ್ಲಿ ಸಮಸ್ಯೆಗಳು ಸೃಷ್ಟಿ ಆಗಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಸ್ಮಾರ್ಟ್‌ ಸಿಟಿ ಮತ್ತು ಅಮೃತ್‌ ಯೋಜನೆಯ ಅನುದಾನವನ್ನು ಬಳಸಿಕೊಂಡು ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದೆ. ಸದ್ಯಕ್ಕೆ ನನ್ನ ಮುಂದಿರುವ ಗುರಿ ಎಂದರೆ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ವೇಗ ನೀಡುವುದು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಶಾಸಕರ ನಿಧಿಯಿಂದ ನಗರಕ್ಕೆ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಕಲ್ಪಿಸಲು ಯತ್ನಿಸುತ್ತೇನೆ. ಮಳೆಹಾನಿಗೆ ಸಂಬಂಧಿಸಿದ ಹೆಚ್ಚುವರಿ ಪರಿಹಾರ ಒದಗಿಸುವಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ.

ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಅಂದರೇನು ? ಎತ್ತಿನಹೊಳೆ ಯೋಜನೆಯ ಬಗ್ಗೆ ನಿಮ್ಮ ನಿಲುವು ಏನು ?

ನೇತ್ರಾವದಿ ನದಿಯಲ್ಲಿ ಲಭ್ಯವಿರುವ ನೀರನ್ನು ಸಮರ್ಪಕ ಹಂಚಿಕೆ ಮತ್ತು ಅಂತರ್ಜಲ ಕುಸಿಯದಂತೆ ಕ್ರಮ ತೆಗೆದುಕೊಳ್ಳುವುದು ಮುಖ್ಯ. ನೀರಿನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ. ಎತ್ತಿನಹೊಳೆ ಯೋಜನೆಯಿಂದ ಮಂಗಳೂರು ಜನತೆಗೆ ತೊಂದರೆಯಾಗುತ್ತಿದೆ ಎಂಬ ಅರಿವು ನನಗಿದೆ. ಜನರಿಗೆ ಬೇಡದ ಯೋಜನೆಯನ್ನು ನಾನು ಬೆಂಬಲಿಸುವುದಿಲ್ಲ. ಖಂಡಿತವಾಗಿಯೂ ಯೋಜನೆಯನ್ನು ವಿರೋಧಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT