4

ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಚಿಣ್ಣರ ಚಿತ್ರ

Published:
Updated:
ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಚಿಣ್ಣರ ಚಿತ್ರ

ಮೈಸೂರು: ಸೂರ್ಯ ಮೆಲ್ಲನೆ ತಾಪ ಹೆಚ್ಚಿಸುತ್ತ ರಂಗೇರುತ್ತಿದ್ದರೆ ಕುಕ್ಕರಹಳ್ಳಿ ಕೆರೆಯ ಉದ್ಯಾನದಲ್ಲಿ ಶಾಲಾ ಮಕ್ಕಳ ಪರಿಸರ ಕಾಳಜಿ ಜಾಗೃತವಾಗಿತ್ತು. ಪ್ಲಾಸ್ಟಿಕ್‌ ಉಂಟು ಮಾಡುತ್ತಿರುವ ಅನಾಹುತಗಳು ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಪರಿಸರಪ್ರಜ್ಞೆ ವಿವಿಧ ಚಿತ್ರಗಳಲ್ಲಿ ವ್ಯಕ್ತವಾಗುತ್ತಿತ್ತು. ಹಸಿರು ಮತ್ತು ನೆರಳು ಚಾಚಿದ ವಾತಾವರಣದಲ್ಲಿ ಮಕ್ಕಳು ರೇಖೆಗಳಿಗೆ ಬಣ್ಣ ತುಂಬುತ್ತಿದ್ದರು.

ತಾಪ ಹೆಚ್ಚಳದಿಂದ ಹಸಿರು ಕಳೆದು ಕೊಂಡು ಕೆಂಪಾಗುತ್ತಿರುವ ಭೂಗೋಳ, ಮರಗಳೆಲ್ಲ ಬೋಳಾಗಿ ನಾಶವಾ ಗುತ್ತಿರುವ ಕಾಡು, ನದಿಗಳ ಮೂಲಕ ಸಮುದ್ರ ಸೇರಿದ ಪ್ಲಾಸ್ಟಿಕ್‌ನಿಂದಾಗಿ ಜಲಚರಗಳ ಸಾವು, ರಸ್ತೆ ಬದಿ, ಹಾದಿ ಬೀದಿಯಲ್ಲಿ ಪ್ಲಾಸ್ಟಿಕ್ ಮೇಯುತ್ತಿರುವ ಪಶು ಪಕ್ಷಿಗಳು, ಗಿರಿತೊರೆಗಳ ನಡುವೆ ಹಬ್ಬುತ್ತಿರುವ ಕೈಗಾರಿಕರಣ, ರಸ್ತೆ ಬದಿ ಅಡ್ಡಾದಿಟ್ಟಿ ಚೆಲ್ಲಿದ ಕಸ, ಪ್ಲಾಸ್ಟಿಕ್‌ನ ರಾಕ್ಷಸಾಕೃತಿಗಳು... ಹೀಗೆ ತಮ್ಮ ಸ್ಮೃತಿಪಟಲದಲ್ಲಿ ನೆಲೆಸಿದ್ದ ಪ್ಲಾಸ್ಟಿಕ್ ಅನಾಹುತಗಳನ್ನು ಮಕ್ಕಳು ಕುಂಚದಲ್ಲಿ ಮೂಡಿಸಿದರು.

ವಿಶ್ವ ಪರಿಸರ ದಿನದ ಪ್ರಯುಕ್ತ ಜಿಲ್ಲಾಡಳಿತ, ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಲಾ ಮಕ್ಕಳಿಗೆ ಶನಿವಾರ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯ ಚಿತ್ರಣವಿದು. ಇದರ ಜತೆಗೆ ಪ್ರಬಂಧ ಸ್ಪರ್ಧೆಯೂ ನಡೆಯಿತು. ಈ ಬಾರಿಯ ವಿಶ್ವಪರಿಸರ ದಿನದ ವಿಷಯವಾದ ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’ ಕುರಿತು ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ‘ಜೂನ್‌ 5ರಂದು ನಗರದಲ್ಲಿ ಸೈಕಲ್‌ ಜಾಥಾ ಇರಲಿದೆ. ಜೂನ್‌ 7ರಂದು ನಂಜನಗೂಡಿನ ಕಬಿನಿ ನದಿಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ’ ಎಂದರು.

ಜನಜಾಗೃತಿ ಸಂಸ್ಥೆ ಸಂಯೋಜಕ ಶ್ರೀನಿವಾಸ್, ‘ನಗರದ 30ಕ್ಕೂ ಹೆಚ್ಚು ಶಾಲೆಯ 450ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, 8ರಿಂದ 10ನೇ ತರಗತಿವರೆಗೆ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜೂನ್‌ 5ರಂದು ಜಿಲ್ಲಾಡಳಿತ ನಡೆಸುವ ಪರಿಸರ ದಿನಾಚರಣೆಯಲ್ಲಿ ಬಹುಮಾನ ವಿತರಿಸಲಾಗುವುದು’ ಎಂದರು.

ಡಿಡಿಪಿಐ ಮಮತಾ, ಮಂಡಳಿಯ ಪರಿಸರ ಅಧಿಕಾರಗಳಾದ ಎ.ಉದಯಕುಮಾರ್‌, ಪ್ರಕಾಶ್, ಯತೀಶ್‌, ಜನಜಾಗೃತಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಿ.ಎನ್.ಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry