ಅಂಚೆ ಅಣ್ಣನ ಮುಷ್ಕರ: ಫಲಾನುಭವಿಗಳೂ ತತ್ತರ

7
ಗ್ರಾಮೀಣ ಭಾಗದಲ್ಲಿ ಅಂಚೆ ಸೇವೆಯಲ್ಲಿ ಅಸ್ತವ್ಯಸ್ತ: ಕಚೇರಿಗಳಲ್ಲಿ ಬಿದ್ದಿವೆ ರಾಶಿ ಕಾಗದ

ಅಂಚೆ ಅಣ್ಣನ ಮುಷ್ಕರ: ಫಲಾನುಭವಿಗಳೂ ತತ್ತರ

Published:
Updated:
ಅಂಚೆ ಅಣ್ಣನ ಮುಷ್ಕರ: ಫಲಾನುಭವಿಗಳೂ ತತ್ತರ

ಉಡುಪಿ: ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಟಾವಧಿ ಧರಣಿಯಿಂದಾಗಿ ಗ್ರಾಮೀಣ ಭಾಗದ ಅಂಚೆ ಸೇವೆ ಅಸ್ತವ್ಯಸ್ತಗೊಂಡಿದೆ. ಸಕಾಲಕ್ಕೆ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿಲ್ಲ. ಇತ್ತ ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಜಿಲ್ಲೆಯಲ್ಲಿ 225ಕ್ಕೂ ಹೆಚ್ಚು ಗ್ರಾಮೀಣ ಅಂಚೆ ಕಚೇರಿಗಳಿವೆ. ಸುಮಾರು 670 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ 22ರಿಂದಲೂ ನೌಕರರು ಧರಣಿ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಅಂಚೆ ಸೇವೆ ಬಹುತೇಕ ಸ್ಥಗಿತಗೊಂಡಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಹೆಚ್ಚಿನ ಫಲಾನುಭವಿಗಳು ಹಳ್ಳಿಗಳಲ್ಲಿದ್ದಾರೆ. ಈ ಭಾಗಕ್ಕೆ ತಲುಪಬೇಕಾದ ವೃದ್ಧಾಪ್ಯ, ಅಂಗವಿಕಲರ ವೇತನ, ಪಿಂಚಣಿ ಸೌಲಭ್ಯ ಸಕಾಲಕ್ಕೆ ತಲುಪುತ್ತಿಲ್ಲ. ಜತೆಗೆ, ಕಾಗದಗಳು, ಸ್ಪೀಡ್‌ ಪೋಸ್ಟ್‌, ಮನಿ ಆರ್ಡರ್, ಪಾರ್ಸೆಲ್‌ ಕೂಡ ವಿಲೇವಾರಿ ಆಗದೇ ಕಚೇರಿಯಲ್ಲಿಯೇ ಉಳಿದು ಬಿಟ್ಟಿವೆ.

ಸಂದರ್ಶನಕ್ಕೆ ಹಾಜರಾಗಲು ಕಳುಹಿಸಿರುವ  ಪತ್ರಗಳು, ಕೋರ್ಟ್‌ ನೋಟಿಸ್‌, ವ್ಯಾಜ್ಯಗಳಿಗೆ ಸಂಬಂಧಪಟ್ಟ ಕಾಗದ ಕೂಡ ಸಂಬಂಧಪಟ್ಟವರಿಗೆ ತಲುಪದೆ ಹಾಗೆಯೇ ಉಳಿದುಕೊಂಡಿವೆ ಎನ್ನುತ್ತಾರೆ ಗ್ರಾಮೀಣ ಅಂಚೆ ನೌಕರರು.

ಅಂಚೆ ಕಚೇರಿಗಳಲ್ಲಿ ಎಲ್ಲಿ ನೋಡಿದರೂ ಕಾಗದಗಳ ರಾಶಿಯೇ ಕಂಡು ಬರುತ್ತಿದೆ. ಬಟವಾಡೆಯಾಗಬೇಕಿದ್ದ ಪತ್ರಗಳು, ಪಾರ್ಸ್‌ಲ್‌ಗಳು ಕಚೇರಿ ಬಹುಪಾಲ ಜಾಗ ಆಕ್ರಮಿಸಿವೆ. ಪ್ರತಿದಿನವೂ ಕಾಗದಗಳ ರಾಶಿ ಹೆಚ್ಚಾಗುತ್ತಲೇ ಇದೆ. ಯಾರೂ ವಿಲೇವಾರಿಗೆ ಕೊಂಡೊಯ್ಯುತ್ತಿಲ್ಲ. ಜನರಿಗೆ ಉತ್ತರ ಕೊಡಲೂ ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.

ಈ ಮಧ್ಯೆ ನಗರದ ಅಂಚೆ ಕಚೇರಿ ಬಳಿ ಶನಿವಾರ ನಡೆದ ಪ್ರತಿಭಟನೆಯ ವೇಳೆ ಪೋಸ್ಟ್‌ ಮ್ಯಾನ್‌ ಎಂಟಿಎಸ್‌ ಯೂನಿಯನ್‌ ರಾಜ್ಯ ಘಟಕದ ಅಧ್ಯಕ್ಷ ವಿಜಯ ನಾಯರಿ ‘ಪ್ರಜಾವಾಣಿ‘ ಜತೆ ಮಾತನಾಡಿ, ‘ಗ್ರಾಮೀಣ ಅಂಚೆ ನೌಕರರು ಅಂಚೆ ಇಲಾಖೆಯ ನೌಕರರಿಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ, ವೇತನ, ಸೌಲಭ್ಯಗಳ ನೀಡಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳಿ ಹಳ್ಳಿಗಳನ್ನು ಸುತ್ತಿ ಹೆಣ್ಣು ಮಗು ಹುಟ್ಟಿದ ಕುಟುಂಬವನ್ನು ಗುರುತಿಸಿ ಸುಕನ್ಯ ಸಮೃದ್ಧಿ ಖಾತೆ ತೆರೆಸಬೇಕು. ಜೀವ ವಿಮೆ ಮಾಡಿಸಬೇಕು. ಆಧಾರ್ ಕಾರ್ಡ್‌ ತಲುಪಿಸಬೇಕು. ಪಡಿತರ ಚೀಟಿ, ವೃದ್ಧಾಪ್ಯ ವೇತನ, ಪಿಂಚಣಿ ಸೇರಿದಂತೆ ಸರ್ಕಾರದ ಬಹುತೇಕ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ಗ್ರಾಮೀಣ ಅಂಚೆ ನೌಕರರು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ. ಆದರೂ ಅವರಿಗೆ ಕನಿಷ್ಠ ವೇತನ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಕಚೇರಿ ತೆರೆಯಲು ಅನುದಾನ ನೀಡುವುದಿಲ್ಲ. ನಿರ್ವಹಣೆಗೆ ಬಿಡಿಗಾಸು ಕೊಡಲಾಗುತ್ತಿದೆ. ಆರಂಭಿಕ ವೇತನ ₹ 4,220 ರಿಂದ ನಿವೃತ್ತಿ ಸಮಯಕ್ಕೆ ಗರಿಷ್ಠ ₹ 12,500 ವೇತನ ಮಾತ್ರ ಸಿಗುತ್ತಿದೆ. ಇಷ್ಟರಲ್ಲಿ ಜೀವನ ನಿರ್ವಹಣೆ ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವ ಬಿಲ್ಲವ.

‘2–3 ತಿಂಗಳಿನಿಂದ ಫಲಾನುಭವಿಗಳಿಗೆ ಪಿಂಚಣಿ ತಲುಪಿಲ್ಲ. ಪಿಂಚಣಿಯನ್ನೇ ನಂಬಿಕೊಂಡ ವೃದ್ಧರು, ವಿಧವೆಯರು, ಅಂಗವಿಕಲರ ಗೋಳು ಹೇಳತೀರದು. ಇಷ್ಟಾದರೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಮಲೇಶ್‌ ಚಂದ್ರ ನೇತೃತ್ವದ ಏಕಸದಸ್ಯ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿ ಹಲವು ತಿಂಗಳುಗಳು ಕಳೆದರೂ ಜಾರಿಯಾಗಿಲ್ಲ. ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಬಸವ ಬಿಲ್ಲವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸುನೀಲ್ ದೇವಾಡಿಗ, ಸಂತೋಷ್ ಮಧ್ಯಸ್ಥ ಇತರರು ಇದ್ದರು.

‘ಕಮಲೇಶ್ಚಂದ್ರ ವರದಿ ಅನುಷ್ಠಾನಗೊಳಿಸಿ’

ಕಮಲೇಶ್ಚಂದ್ರ ವರದಿಯ ಶಿಫಾರಸುಗಳು ಅನುಷ್ಠಾನಕ್ಕೆ ಬಂದರೆ ಗ್ರಾಮೀಣ ಅಂಚೆ ನೌಕರರಿಗೆ ಹೆಚ್ಚು ಅನುಕೂಲವಾಗುತ್ತದೆ. ಹೆರಿಗೆ ಅವಧಿ 6 ತಿಂಗಳು ಸಿಗಲಿದೆ. ಸದ್ಯ 20 ದಿನಗಳು ಇರುವ ವೇತನ ಸಹಿತ ರಜೆ ದಿನಗಳು 60ಕ್ಕೆ ಏರಿಕೆಯಾಗಲಿದೆ. ನಿವೃತ್ತಿಯಾದಾಗ ಸಿಗುವ ₹ 1.20 ಲಕ್ಷಕ್ಕೆ ಬದಲಾಗಿ ₹ 10 ಲಕ್ಷ ಸಿಗಲಿದೆ. ಗ್ರಾಮೀಣ ಅಂಚೆ ನೌಕರರ ಜೀವನ ಮಟ್ಟ ಸುಧಾರಿಸಲಿದೆ ಎನ್ನುತ್ತಾರೆ ಪೋಸ್ಟ್‌ ಮನ್‌ ಎಂಟಿಎಸ್‌ ಯೂನಿಯನ್‌ ರಾಜ್ಯಾಧ್ಯಕ್ಷ ವಿಜಯ ನಾಯರಿ.

**

ಸುಖನ್ಯ ಸಮೃದ್ಧಿ, ಆರ್‌ಪಿಐ, ಆರ್‌ಡಿ ಹೀಗೆ ಕೇಂದ್ರ ಸರ್ಕಾರದ ಆರ್ಥಿಕ ಯೋಜನೆಗಳಿಗೆ ಜನರನ್ನು ನೋಂದಣಿ ಮಾಡಿಸಿ ಕೇಂದ್ರ ಸರ್ಕಾರದ ಖಜಾನೆ ತುಂಬಿಸಲಾಗುತ್ತಿದೆ. ಪ್ರತಿಯಾಗಿ ಸರ್ಕಾರ ಪ್ರತಿಫಲ ಕೊಡುತ್ತಿಲ್ಲ

–ಬಸವ ಬಿಲ್ಲವ, ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry