ತಾಂಬಾ: ಗ್ರಾಮೀಣರ ಆಶಾಕಿರಣ ಜಗದಂಬಾ ಶಿಕ್ಷಣ ಸಂಸ್ಥೆ

7

ತಾಂಬಾ: ಗ್ರಾಮೀಣರ ಆಶಾಕಿರಣ ಜಗದಂಬಾ ಶಿಕ್ಷಣ ಸಂಸ್ಥೆ

Published:
Updated:
ತಾಂಬಾ: ಗ್ರಾಮೀಣರ ಆಶಾಕಿರಣ ಜಗದಂಬಾ ಶಿಕ್ಷಣ ಸಂಸ್ಥೆ

ವಿಜಯಪುರ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಇಂಡಿ ತಾಲ್ಲೂಕಿನ ತಾಂಬಾದ ಜಗದಂಬಾ ವಿದ್ಯಾವರ್ಧಕ ಸಂಸ್ಥೆಯೂ ಒಂದಾಗಿದೆ. ನಾಲ್ಕೂವರೆ ದಶಕಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ.

ಬಂಜಾರ ಸಮಾಜದ ಧುರೀಣ, ಬಂಥನಾಳದ ಸಂಗನಬಸವ ಶಿವಯೋಗಿಗಳ ಶಿಷ್ಯರಾಗಿದ್ದ ದಿ.ಫೂಲಸಿಂಗ್‌ ಚವ್ಹಾಣ ಶಿಕ್ಷಣ ಪ್ರೇಮಿ. ಶಿಕ್ಷಣದಿಂದಲೇ ಪ್ರಗತಿ ಸಾಧ್ಯ ಎಂಬುದನ್ನು ಅರಿತು 1971ರಲ್ಲಿ ಈ ಶೈಕ್ಷಣಿಕ ಸಂಸ್ಥೆ ಸ್ಥಾಪಿಸಿದರು. ಗುರುಗಳ ಹಾದಿಯಲ್ಲೇ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದರು.

ಫೂಲಸಿಂಗರ ಮೂಸೆಯಲ್ಲಿ ನಾಲ್ಕೂವರೆ ದಶಕಗಳ ಹಿಂದೆ ಆರಂಭಗೊಂಡ ಜಗದಂಬಾ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿದೆ. ಈ ಸಂಸ್ಥೆಯಡಿ ಪ್ರಾಥಮಿಕ–ಮಾಧ್ಯಮಿಕ ಶಾಲೆಗಳು, ಪದವಿ- ಪೂರ್ವ ಕಾಲೇಜು, ಕಲಾ ಮತ್ತು ವಿಜ್ಞಾನ ಪದವಿ ಕಾಲೇಜು, ದಿ.ಫೂಲಸಿಂಗ ನಾರಾಯಣ ಚವ್ಹಾಣ ಸ್ಮಾರಕ ಶಿಕ್ಷಣ ಮಹಾ ವಿದ್ಯಾಲಯ(ಬಿ.ಇಡಿ ಕಾಲೇಜು), ಕೆ.ಟಿ.ರಾಠೋಡ ಸ್ಮಾರಕ ಬಿ.ಎಸ್‌ಸಿ ಹೋಂಸೈನ್ಸ್‌, ಬಿ.ಎಸ್.ಡಬ್ಲ್ಯು, ಎಂ.ಎಸ್.ಡಬ್ಲ್ಯು, ನರ್ಸರಿ (ಎನ್.ಟಿ.ಸಿ.) ಕೋರ್ಸ್‌ ನಡೆಯುತ್ತಿವೆ.

ಪರಿಚಯ...: ಬಂಜಾರ ಸಮಾಜದ ಬಡ ಕುಟುಂಬದಲ್ಲಿ 1938ರ ಏ. 18ರಂದು ಜನಿಸಿದ ಫೂಲಸಿಂಗ್‌ ಚವ್ಹಾಣರಿಗೆ ಬಾಲ್ಯದಿಂದಲೂ ಸಾಮಾಜಿಕ ಕಳಕಳಿಯಿತ್ತು. ಗ್ರಾಮೀಣ ಮಕ್ಕಳ ಶಿಕ್ಷಣ, ದಲಿತರು, ಬಂಜಾರ ಸಮಾಜದ ಅಭಿವೃದ್ಧಿ ಕನಸು ಹೊತ್ತಿದ್ದರು.

ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ ಫೂಲಸಿಂಗ್‌ ಚವ್ಹಾಣ ಶಿಕ್ಷಕ ಸಮುದಾಯಕ್ಕೆ ಚೇತನದ ಚಿಲುಮೆಯಾಗಿ, ಜನಾಂಗದ ಅಭ್ಯುದಯಕ್ಕೆ ಚೇತನವಾಗಿ, ನಾಗರಿಕರ ನೆಚ್ಚಿನ ನಾಯಕರಾಗಿ, ಸ್ನೇಹಿತರಿಗೆ ಅತ್ಯಂತ ಆತ್ಮೀಯರಾಗಿ ಶರಣ ಸಂಪ್ರದಾಯ ನಿಷ್ಠರಾಗಿ ಬದುಕು ಸಾಗಿಸಿದರು. ಇವರ ಪತ್ನಿ ಸುಮಿತ್ರಾಬಾಯಿ ಸಹ ಆದರ್ಶದ ಖಣಿಯಾಗಿ ಪತಿಯ ಕಾರ್ಯಕ್ಕೆ ಕೈಜೋಡಿಸಿ ಶೈಕ್ಷಣಿಕ ಪ್ರಗತಿಗೆ ಕಾರಣೀಭೂತರಾದವರು.

ಫೂಲಸಿಂಗ್‌ ಚವ್ಹಾಣ ನಾಲ್ಕೂವರೆ ದಶಕದ ಹಿಂದೆ ಹಚ್ಚಿದ ಶಿಕ್ಷಣ ಜ್ಯೋತಿ ಇಂದಿಗೂ ಪ್ರಕಾಶಮಾನವಾಗಿ ಬೆಳಗುತ್ತಿದೆ. ಇವರ ಪುತ್ರ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಇದೀಗ ಜಗದಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ. ಮತ್ತೊಬ್ಬ ಮಗ ರವಿ ಚವ್ಹಾಣ ಕಾರ್ಯದರ್ಶಿಯಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ. ಜೂನ್‌ 3ರ ಭಾನುವಾರ ಫೂಲಸಿಂಗ್‌ ಚವ್ಹಾಣರ 20ನೇ ಪುಣ್ಯಸ್ಮರಣೆ ನಡೆಯಲಿದೆ.

ಸಿದ್ದು ತ.ಹತ್ತಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry