ಬಿಜ್ಜೂರ: ನೀರು ಪೂರೈಕೆ ಪೈಪುಗಳ ಸುತ್ತ ಕೊಳಕು

7
ಸ್ವಚ್ಛತೆಗೆ ಬಿಜ್ಜೂರ ಗ್ರಾಮಸ್ಥರ ಆಗ್ರಹ

ಬಿಜ್ಜೂರ: ನೀರು ಪೂರೈಕೆ ಪೈಪುಗಳ ಸುತ್ತ ಕೊಳಕು

Published:
Updated:

ನಾಲತವಾಡ: ‘ಶುದ್ಧ ನೀರಿನ ಘಟಕಕ್ಕೆ ಸರಬರಾಜು ಮಾಡುವ ನೀರಿನ ಪೈಪುಗಳು ಬಿರುಕುಗೊಂಡಿದ್ದು, ಅವುಗಳ ಸುತ್ತಲೂ ಕೊಳಕು ತುಂಬಿದೆ. ಇದನ್ನು ಶೀಘ್ರವೇ ಶುಚಿಗೊಳಿಸಬೇಕು’ ಎಂದು ಬಿಜ್ಜೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಒಂದು ವರ್ಷದಿಂದ ಗ್ರಾಮದ ನೀರಿನ ಟ್ಯಾಂಕ್ ಹಾಗೂ ಪಕ್ಕದ ಶುದ್ಧ ನೀರಿನ ಘಟಕಕ್ಕೆ ಇದೇ ಪೈಪಿನ ಮೂಲಕ ನೀರು ಪೂರೈಸಲಾಗುತ್ತಿದೆ. ಸದ್ಯ ಪೈಪಿನ ಕೆಳಭಾಗ ಬಿರುಕುಗೊಂಡಿದೆ. ಕೊಳಚೆ ನೀರು ಹಾಗೂ ಮಲ ಮೂತ್ರ, ದನ ಕರುಗಳ ಮೂತ್ರವೂ ಸಹ ಪೈಪಿನ ಸುತ್ತಲೂ ಸಂಗ್ರಹಗೊಂಡಿದೆ. ಪೈಪ್‌ನ ಮಾರ್ಗದಲ್ಲಿ ಅಲ್ಲಲ್ಲಿ ತಿಪ್ಪೆಗುಂಡಿಗಳಿವೆ. ಇದೆಲ್ಲವೂ ನೀರಿಗೆ ಸೇರಿಕೊಳ್ಳುತ್ತಿವೆ. ಆದ್ದರಿಂದ ಬಿರುಕುಗೊಂಡ ಕಬ್ಬಿಣದ ಪೈಪನ್ನು ಮೇಲೆತ್ತರಕ್ಕೆ ಅಳವಡಿಸಬೇಕು’ ಎಂದು ಗ್ರಾಮ ಪಂಚಾಯಿತಿಯವರನ್ನು ಒತ್ತಾಯಿಸಿದರು.

‘ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಪೈಪಿನ ಪಕ್ಕದಲ್ಲೇ ಸುಮಾರು ಜನರು ಬಹಿರ್ದೆಸೆ ಮಾಡುತ್ತಿದ್ದಾರೆ. ಕೆಲವರು ನಿತ್ಯ ಚೆಲ್ಲುವ ಸಗಣಿ, ಇತರೆ ತ್ಯಾಜ್ಯ ವಸ್ತುಗಳು ನೇರವಾಗಿ ಪೈಪಿನ ಸುತ್ತಲೂ ಸಂಗ್ರಹಗೊಳ್ಳುತ್ತಿವೆ. ಬಯಲು ಬಹಿರ್ದೆಸೆ ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು’ ಎಂದು ಡಿಎಸ್ಎಸ್ ಮುಖಂಡರಾದ ಮಲ್ಲು ತಳವಾರ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry