ಆಲಮಟ್ಟಿಯಲ್ಲಿ ದಂಡಿಯಾತ್ರೆ ಕಲಾಕೃತಿ

7
ಕೃಷ್ಣಾ ಭಾಗ್ಯ ಜಲ ನಿಗಮ ವತಿಯಿಂದ ನಿರ್ಮಾಣ; ಜಲಾಶಯಕ್ಕೊಂದು ಮುಕುಟಮಣಿ

ಆಲಮಟ್ಟಿಯಲ್ಲಿ ದಂಡಿಯಾತ್ರೆ ಕಲಾಕೃತಿ

Published:
Updated:
ಆಲಮಟ್ಟಿಯಲ್ಲಿ ದಂಡಿಯಾತ್ರೆ ಕಲಾಕೃತಿ

1930ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ದಂಡಿಯಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. ದಂಡಿಯಾತ್ರೆಯ ಜ್ಞಾಪಕಾರ್ಥವಾಗಿ ಗಾಂಧೀಜಿ ಮತ್ತು ಅವರ ಜೊತೆ 11 ಮಂದಿ ಸತ್ಯಾಗ್ರಹಿಗಳ ಮೂರ್ತಿಗಳನ್ನು ಆಲಮಟ್ಟಿ ಅಣೆಕಟ್ಟು ವೃತ್ತದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿರ್ಮಿಸಿದೆ. ಮಾರ್ಚ್‌ನಲ್ಲಿ ಉದ್ಘಾಟನೆಯೂ ನೆರವೇರಿದೆ. ದಂಡಿಯಾತ್ರೆ ನೆನಪಿಸುವ ಇಂಥ ಅಪರೂಪದ ಶಿಲ್ಪ ಕಲಾಕೃತಿ ಆಲಮಟ್ಟಿಯ ದೃಶ್ಯ ವೈಭವವನ್ನು ಹೆಚ್ಚಿಸಿದೆ.

ಅರಿಸೀಕೆರೆಯ ಕಸ್ತೂರಿ ಬಾ ಆಶ್ರಮದಲ್ಲಿ ಬಿಟ್ಟರೆ ರಾಜ್ಯದ ಬೇರೆಲ್ಲೂ ಇಂಥ ಕಲಾಕೃತಿ ಇಲ್ಲ. ದೇಶದಲ್ಲಿ ಮೊಟ್ಟ ಮೊದಲು ದಂಡಿಯಾತ್ರೆಯ ಪ್ರತಿರೂಪವನ್ನು ನವದೆಹಲಿಯಲ್ಲಿ ನಿರ್ಮಿಸಲಾಯಿತು. ಇದೇ ಮಾದರಿಯ ಪ್ರತಿರೂಪವನ್ನು ಜಲಾಶಯದ ಬಳಿ ನಿರ್ಮಿಸಬೇಕೆಂಬ ಬೇನಾಳದ ರಾಷ್ಟ್ರಪಿತ ಮಹಾತ್ಮ ಗಾಂಧಿ ಫಿಲಾಸಫಿಕಲ್ ಯೂತ್‌ ಫೋರಂನ ಕನಸಾಗಿತ್ತು. ಅವರ ಮನವಿಗೆ ಸ್ಪಂದಿಸಿದ ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಕೆಬಿಜೆಎನ್ಎಲ್ ಆಗಿನ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರ ಸಹಕಾರದಿಂದ ಕಲಾಕೃತಿ ಮೈದಳೆದಿದೆ.

83 ದಿನದಲ್ಲಿ ನಿರ್ಮಾಣ: ಬೆಂಗಳೂರಿನ ಎಂಟಿಸಿಂಗ್ ಸಂಸ್ಥೆಯ ಮುಖ್ಯಸ್ಥ ಭೀಮರಾವ ಕುಲಕರ್ಣಿ ಅವರ ಪರಿಕಲ್ಪನೆಯಂತೆ ಬೆಂಗಳೂರಿನ ಫೈನ್ ಆರ್ಟ್ಸ್‌ ಟೆಂಪ್ಟೇಷನ್ ಸಂಸ್ಥೆಯ ಮುಖ್ಯಸ್ಥ ಕಲಾವಿದ ಮಹಾದೇವ ಬಡಿಗೇರ ನೇತೃತ್ವದಲ್ಲಿ ವಿವಿಧ ರಾಜ್ಯಗಳ 12 ಜನ ಕಲಾವಿದರ ಪರಿಶ್ರಮದಿಂದ ಅದ್ಭುತವಾದ ಉಪ್ಪಿನ ಸತ್ಯಾಗ್ರಹದ ಶಿಲ್ಪಕಲಾಕೃತಿ ನಿರ್ಮಾಣಗೊಂಡು ಪ್ರವಾಸಿಗರ ಹೃನ್ಮನ ತಣಿಸುತ್ತದೆ. ಅಂದಾಜು ₹25 ಲಕ್ಷ ವೆಚ್ಚದಲ್ಲಿ ಕೇವಲ 83 ದಿನಗಳಲ್ಲಿ ಶಿಲ್ಪಕಲಾಕೃತಿಗಳನ್ನು ಕಬ್ಬಿಣ, ಸಿಮೆಂಟ್, ಕಾಂಕ್ರೀಟ್‌ ಬಳಸಿ ನಿರ್ಮಿಸಲಾಗಿದೆ. ಅಂತಿಮವಾಗಿ ಎಲ್ಲ ಮೂರ್ತಿಗಳಿಗೆ ಕಂಚಿನ ವರ್ಣ ಬಳಿಯಲಾಗಿದ್ದು, ಕಂಚಿನ ಪುತ್ಥಳಿ ಎನ್ನುವಂತೆ ಭಾಸವಾಗುತ್ತಿದೆ.

ನೆಲಮಟ್ಟದಿಂದ ಅರವತ್ತು ಅಡಿ ಅಗಲ, ಏಳು ಅಡಿ ಎತ್ತರದ ಕಲ್ಲುಬಂಡೆಯ ಮೇಲೆ ಒಂಬತ್ತು ಅಡಿ ಎತ್ತರದ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ನೋಡುಗರ ಹೃದಯದಲ್ಲಿ ದೇಶಭಕ್ತಿಯ ಸಿಂಚನ ಮೂಡಿಸುತ್ತದೆ. ಒಂದೊಂದು ಮೂರ್ತಿಯೂ ಒಂದೊಂದು ಕಥೆ ಹೇಳುತ್ತವೆ.

ಗಾಂಧೀಜಿಯವರ ಚಿತ್ರ ಮೊದಲಿಗಿದ್ದರೆ ಯಾತ್ರೆಯ ಕೊನೆಯಲ್ಲಿ ಅಶಕ್ತಿಯಿಂದ ಕುಳಿತ ಸತ್ಯಾಗ್ರಹಿಯನ್ನು ಕಾಣಬಹುದು. ಈ ಸತ್ಯಾಗ್ರಹಿಯನ್ನು ಬಲಭಾಗದಲ್ಲಿಯ ತರುಣ ಕೈ ಹಿಡಿದು ಎಬ್ಬಿಸಿ ಗಾಂಧೀಜಿಯವರ ಧೀರ ನಡಿಗೆಯನ್ನು ತೋರಿಸುತ್ತಿರುವಂತೆ ಚಿತ್ರಿಸಲಾಗಿದೆ. ಇನ್ನೊಂದೆಡೆ ಸಾಮಾನ್ಯ ಮಹಿಳೆಯರೂ ಸತ್ಯಾಗ್ರಹದಲ್ಲಿ ಭಾಗವಹಿಸಿರುವುದನ್ನು ಬಿಂಬಿಸಲಾಗಿದೆ.

‘ಬೆಂಗಳೂರು, ಮಂಗಳೂರು, ತಿರುವನಂತಪುರ, ಧಾರವಾಡದ ಆಯ್ದ 12 ಜನ ಶಿಲ್ಪಕಲಾಕೃತಿಕಾರರು ಹಗಲಿರುಳು ಶ್ರಮಿಸಿ 83 ದಿನಗಳಲ್ಲಿ ಈ ರೂಪಕವನ್ನು ಪೂರ್ಣಗೊಳಿಸಿದ್ದಾರೆ. ಇಂತಹ ರೂಪಕ ನಿರ್ಮಿಸಿದ್ದು ನಮ್ಮ ಹೆಮ್ಮೆ ಹಾಗೂ ಸಾಧನೆ’ ಎಂದು ಮುಖ್ಯ ಕಲಾವಿದ ಬೆಂಗಳೂರಿನ ಮಹಾದೇವ ಬಡಿಗೇರ ಹೇಳಿದರು

ಚಂದ್ರಶೇಖರ ಕೋಳೇಕರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry