ರೈತರಿಗೆ ಮಾದರಿ ಈ ಪ್ರಗತಿಪರ ಕೃಷಿಕ

7
ಗುಲಾಬಿ ಹೂ ಬೆಳೆದು ಹೂನಗೆ ಬೀರಿದ ರೈತ ಉಮೇಶ್

ರೈತರಿಗೆ ಮಾದರಿ ಈ ಪ್ರಗತಿಪರ ಕೃಷಿಕ

Published:
Updated:
ರೈತರಿಗೆ ಮಾದರಿ ಈ ಪ್ರಗತಿಪರ ಕೃಷಿಕ

ಮಾಗಡಿ: ವ್ಯವಸಾಯ ಅಂದರೆ ಮನೆ ಮಕ್ಕಳೆಲ್ಲಾ ಸಾಯ ಎಂಬ ಸೋಮಾರಿಗಳ ಮಾತು ಮರೆಯಾಗಿ ಶ್ರಮಜೀವಿ ರೈತರೊಬ್ಬರು  ತೋಟದಲ್ಲಿ ಗುಲಾಬಿ ಹೂ ಬೆಳೆದು ಬದುಕಿನಲ್ಲಿ ಹೂ ನಗೆ ಬೀರಿದ್ದಾರೆ.

ಕಲ್ಯಾ ಗ್ರಾಮದ ರೈತ ಉಮೇಶ್‌ ‘ಬಂಗಾರದ ಮನುಷ್ಯ’ ಸಿನಿಮಾದಿಂದ ಪ್ರೇರಿತರಾಗಿ ಭೂಮಿಯನ್ನೇ ನಂಬಿ ಬದುಕು ಬಂಗಾರವನ್ನಾಗಿ ಮಾಡಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ. ಎರಡೂವರೆ ಎಕರೆ ಭೂಮಿಯಲ್ಲಿ ಬಹು ವಿಧದ ಕೃಷಿ ಬೆಳೆ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಗುಲಾಬಿ ಹೂ ಬೆಳೆದಿದ್ದಾರೆ.

‘ತೋಟದ ಬದುವಿನಲ್ಲಿ ಸಿಹಿ ಬೇವು, ಸಿಲ್ವರ್ ವುಡ್, ತೇಗದ ಮರಗಳನ್ನು ನೆಟ್ಟಿದ್ದಾರೆ. ಅಡಿಕೆ ಮರಗಳ ನಡುವೆ ಮೆಣಸಿನ ಗಿಡ ಬೆಳೆಸಿದ್ದಾರೆ. ತೋಟದಲ್ಲಿ ಬಹುವಿಧ ಸಸ್ಯಗಳಾದ ನಿಂಬೆ, ಕಿತ್ತಳೆ, ಗೋಡಂಬಿ, ದ್ರಾಕ್ಷಿ, ಗೋಡಂಬಿ, ಸೀಬೆಕಾಯಿ, ನಿಂಬೆ ಗಿಡ ಬೆಳೆದಿದ್ದಾರೆ. ಅಲ್ಲದೆ ಶುಂಠಿ, ಕರಿಬೇವಿನ ಸಸಿಗಳನ್ನು ಬೆಳೆದು ಅಲ್ಪ ಆದಾಯ ಗಳಿಸುತ್ತಿರುವೆ’ ಎಂದು ಉಮೇಶ್ ತಿಳಿಸಿದ್ದಾರೆ.

ಕುರಿ, ಕೋಳಿ, ಮೇಕೆ, ಪಾರಿವಾಳ ಶೆಡ್‌ಗಳನ್ನು ನಿರ್ಮಿಸಿ ಸಾಕಾಣಿಕೆ ಮಾಡಲಾಗುತ್ತಿದೆ. ನಾಟಿ ಕೋಳಿ ಸಾಕಾಣಿಕೆ ಕೈ ಹಿಡಿದಿದೆ. ವಿದ್ಯಾವಂತ ಯುವಕರು ನಗರದತ್ತ ಮುಖ ಮಾಡದೆ ಕೃಷಿ ನಂಬಿದರೆ ಮೋಸ ಇಲ್ಲ ಎಂದು ಅವರು ಸ್ವಾನುಭವ ಹಂಚಿಕೊಂಡರು.

ಕುರಿ, ಮೇಕೆಯ ಗೊಬ್ಬರವನ್ನು ಸಾವಯವವಾಗಿ ಪರಿವರ್ತಿಸಿ ಕೃಷಿಗೆ ಬಳಸುತ್ತಿದ್ದಾರೆ. ಅಲ್ಲದೆ, ಅಜೋಲಾ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಸುತ್ತಲಿನ ರೈತರು ಅವರ ತೋಟಕ್ಕೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿ ಅಗತ್ಯ ಸಲಹೆ ಪಡೆಯುತ್ತಾರೆ. ಅಲ್ಲಿಂದ ನಾಟಿ ತಳಿ ಅವರೆ, ತೊಗರಿ, ಹಲಸಂದಿ, ಹುರುಳಿ, ಸಿಹಿ ಕುಂಬಳ ಬೀಜ ತಂದು ತಮ್ಮ ಭೂಮಿಯಲ್ಲೂ ಬಿತ್ತನೆ ಮಾಡಿ ಸಮೃದ್ಧ ಫಸಲು ಪಡೆಯುತ್ತಿದ್ದಾರೆ.

ನವದೆಹಲಿ ಕೃಷಿ ಇಲಾಖೆ ಹಾಗೂ ಹತ್ತಾರು ಸಂಘ ಸಂಸ್ಥೆಗಳು ಪ್ರಗತಿಪರ ರೈತ ಉಮೇಶ್ ಅವರ ಕೃಷಿ ಕಾಯಕ ಮೆಚ್ಚಿ ಪುರಸ್ಕರಿಸಿವೆ.‌

– ದೊಡ್ಡಬಾಣಗೆರೆ ಮಾರಣ್ಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry