ಸರ್ಕಾರಿ ನೌಕರನ ಹಸಿರು ಕಾಯಕ

6
ಸರ್ಕಾರಿ ನೌಕರನ ಹಸಿರು ಕಾಯಕ

ಸರ್ಕಾರಿ ನೌಕರನ ಹಸಿರು ಕಾಯಕ

Published:
Updated:
ಸರ್ಕಾರಿ ನೌಕರನ ಹಸಿರು ಕಾಯಕ

ಶ್ರೀರಂಗಪಟ್ಟಣ: ಸರ್ಕಾರಿ ನೌಕರಿಯಲ್ಲಿರುವ ಯುವಕನೊಬ್ಬ ತನ್ನ ಕಾರ್ಯಭಾರದ ನಡುವೆಯೂ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಳಜಿ ತೋರುತ್ತಿದ್ದಾರೆ.

ಗಂಜಾಂನ ಶುಕ್ರವಾರಪೇಟೆ ಬಡಾವಣೆಯ ಚಿಕ್ಕನಿಂಗಯ್ಯ ಎಂಬುವವರ ಮಗ, ತಾಲ್ಲೂಕಿನ ಬಲ್ಲೇನಹಳ್ಳಿ ಪಶು ವೈದ್ಯಕೀಯ ಆಸ್ಪತ್ರೆಯ ‘ಡಿ’ ಗ್ರೂಪ್‌ ನೌಕರ 27 ವರ್ಷದ ರಾಜೇಶ್‌ 5 ವರ್ಷಗಳಿಂದ ಬಗೆ–ಬಗೆಯ ಸಸಿಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಗಂಜಾಂ, ಪಟ್ಟಣದಲ್ಲಿ ಮಾತ್ರವಲ್ಲದೆ 20 ಕಿ.ಮೀ. ದೂರದ ಕೊಡಿಯಾಲ ಗ್ರಾಮದವರೆಗೂ ಇವರ ಮರ ಬೆಳೆಸುವ ಕಾಯಕ ವಿಸ್ತರಿಸಿದೆ.

ಗಂಜಾಂನ ಸಾರ್ವಜನಿಕ ಸ್ಮಶಾನ ಒಂದರಲ್ಲೇ 50ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಆಲದ ಸಸಿ 30, ಹೊಂಗೆ 20, ಬುಗುರಿ 4, ಹೊನ್ನೆ 3, ರೈಟ್ರಿ 4 ಗಿಡಗಳ ಜತೆಗೆ ಗೋಣಿ, ಕಾಡು ಬಾದಾಮಿ, ಹಿಪ್ಪೆ, ಆಕಾಶ ಮಲ್ಲಿಗೆ ಮರಗಳನ್ನು ಇವರು ಹಾಕಿದ್ದಾರೆ.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ರಾಜೇಶ್‌ ಅವರು ಮಾವು, ಹೊನ್ನೆ, ಸಂಪಿಗೆ, ಬೇವು ಸೇರಿದಂತೆ ವಿವಿಧ ಜಾತಿಯ 50ಕ್ಕೂ ಹೆಚ್ಚು ಮರಗಳನ್ನು ಬೆಳೆಸುತ್ತಿದ್ದಾರೆ. ಸರ್ಕಾರಿ ಪಿಯು ಕಾಲೇಜು ಬಳಿ 20, ಶಿಕ್ಷಕರ ಭವನದ ಬಳಿ 25, ಗಂಜಾಂನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 40, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಮೇನ್‌) ಬಳಿ 30, ಆರ್‌.ಸಿ. ಏಡೆಡ್‌ (ಸೇಂಟ್‌ ಮೇರಿಸ್‌) ಶಾಲೆ ಬಳಿ 25 ಹಾಗೂ ಪಟ್ಟಣದ ವಿದ್ಯಾಭಾರತಿ ಶಾಲೆ ಆವರಣದಲ್ಲಿ 25ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ತಾಲ್ಲೂಕಿನ ಕೊಡಿಯಾಲ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ 101 ಸಸಿ ನೆಟ್ಟ ಹೆಮ್ಮೆ ಕೂಡ ಅವರದ್ದು.

ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿರಂಗೂರು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಕೂಡ ಇವರು ವಿವಿಧ ಜಾತಿಯ ಗಿಡಗಳನ್ನು ನೆಟ್ಟಿದ್ದಾರೆ. ಸಸಿಗಳು ಚಿಗುರೊಡೆದು ಸೊಂಪಾಗಿ ಬೆಳೆಯುತ್ತಿವೆ. ದನ, ಎಮ್ಮೆ, ಮೇಕೆಗಳಿಂದ ರಕ್ಷಿಸಲು ಈಚಲು ಮುಳ್ಳುಗಳಿಂದ ಕಿರುಬೇಲಿ ನಿರ್ಮಿಸಿದ್ದಾರೆ.

‘ಮಳೆ ಬಾರದೇ ರೈತರು ಕಷ್ಟು ಅನುಭವಿಸುತ್ತಿರುವ ವಿಷಯ ಕೇಳಿದಾಗಲೆಲ್ಲ ಕರುಳು ಚುರುಕ್‌ ಅನ್ನುತ್ತಿತ್ತು. ಮರಗಳ ಹನನದಿಂದ ಮಳೆ ಬರುತ್ತಿಲ್ಲ ಎಂಬ ಮಾತು ನನ್ನನ್ನು ಕಾಡಲಾರಂಭಿಸಿತು. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಮರಗಳನ್ನು ಬೆಳೆಸಬೇಕು ಎಂದು 5 ವರ್ಷಗಳ ಹಿಂದೆ ಪಣ ತೊಟ್ಟು ಸಸಿ ನೆಟ್ಟು ಪೋಷಿಸುವ ಕೆಲಸ ಶುರು ಮಾಡಿದೆ. ದಿನದಲ್ಲಿ ಮೂರು ತಾಸು ಸಮಯವನ್ನು ಅದಕ್ಕಾಗಿ ಮೀಸಲಿಟ್ಟಿದ್ದೇನೆ. ವಿವಿಧೆಡೆ ನಾನು ನೆಟ್ಟಿರುವ 350ಕ್ಕೂ ಹೆಚ್ಚು ಸಸಿಗಳು ಈಗ ಚಿಗುರೊಡೆದು ನಗುತ್ತಿವೆ. ಇನ್ನು ಕೆಲವು ವರ್ಷ ಕಳೆದರೆ ಅವು ನೆರಳು, ಹೂ, ಹಣ್ಣು ಕೊಡುತ್ತವೆ. ಸಸಿ ನೆಟ್ಟು ಅವುಗಳನ್ನ ಮರಗಳನ್ನಾಗಿ ಬೆಳೆಸುವ ನನ್ನ ಕೆಲಸ ನಿರಂತರ ನಡೆಯಲಿದೆ’ ಎಂದು ರಾಜೇಶ್‌ ತಮ್ಮ ಕಾಳಜಿ ವ್ಯಕ್ತಪಡಿಸಿದರು.

ಸಾಹಿತ್ಯ ನಂಟು: ರಾಜೇಶ್‌ ಅವರಿಗೆ ಸಾಹಿತ್ಯ ಕೃಷಿಯಲ್ಲಿ ಕೂಡ ಆಸಕ್ತಿ ಇದೆ. ‘ದಾಸಪ್ಪನ ಧಾರ್ಮಿಕತೆ’ ಹೆಸರಿನ ನಾಟಕ ಮುದ್ರಣದ ಹಂತದಲ್ಲಿದೆ. ‘ಹಸಿರು ಸಮೃದ್ಧಿ ಚೇತನ’ ಹೆಸರಿನ ಕವನ ಸಂಕಲನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಹತ್ತಾರ ಕಥೆಗಳನ್ನೂ ಇವರು ಬರೆದಿದ್ದಾರೆ. ಪಶುಪಾಲನಾ ಇಲಾಖೆಯ ನೌಕರಿಯನ್ನು ನಿಭಾಯಿಸುತ್ತಲೇ ಸಾಹಿತ್ಯ ಕೃಷಿಯನ್ನು ಮಾಡುತ್ತ ಮರಗಳನ್ನು ಬೆಳೆಸುವಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿರುವ ರಾಜೇಶ್‌ ಇತರರಿಗೆ ಮಾದರಿಯಲ್ಲವೆ? ಸಂಪರ್ಕಕ್ಕೆ ಮೊ: 9902761559.

ಗಣಂಗೂರು ನಂಜೇಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry