‘ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ’

7
ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಸೂಚನೆ

‘ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ’

Published:
Updated:

ಬಾಗಲಕೋಟೆ: ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಕುರಿತು ಜರುಗಿದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಕೊರತೆಯಾಗದಂತೆ ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇಡುವಂತೆ ತಿಳಿಸಿದರು.

ವಿತರಕರು ಕಳಪೆ ಗುಣಮಟ್ಟದ ಬೀಜಗಳನ್ನು ವಿತರಿಸಬಾರದು. ಇಂಥ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ರೈತರಿಂದ ಯಾವುದೇ ದೂರು ಬರದಂತೆ ವಿತರಕರು ಹಾಗೂ ಅಧಿಕಾರಿಗಳು ಕಾಳಜಿ ವಹಿಸಬೇಕು. ಬೀಜ ಖರೀದಿಸಿ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ರಸೀದಿಯಲ್ಲಿ ಲಾಟ್ ನಂಬರ್, ಪ್ರಮಾಣ ಹಾಗೂ ದರ ನಮೂದಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಬೀಜ ಹಾಗೂ ರಸಗೊಬ್ಬರ ವಿತರಣಾ ಕೇಂದ್ರ ಅಗತ್ಯವಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ರಸಗೊಬ್ಬರಗಳನ್ನು ಎಂ.ಆರ್.ಪಿ ಬೆಲೆಗೆ ಮಾರಾಟ ಮಾಡಬೇಕು ಎಂದು ಹೇಳಿದರು.

ಜೂನ್ ತಿಂಗಳಿಗೆ ಬೇಕಾದ ಬೀಜ ಹಾಗೂ ರಸಗೊಬ್ಬರಗಳನ್ನು ಆಯಾ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇಡುವಂತೆ ಹಾಗೂ ರಿಯಾಯಿತಿ ದರದ ಬೀಜಗಳನ್ನು ಮರು ಮಾರಾಟವಾಗದಂತೆ ಕೃಷಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಈವರೆಗೆ 95.0 ಮಿ.ಮೀ ಮಳೆಯಾಗಿದ್ದು, ಒಟ್ಟು 2.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಜೋಳ 1100 ಹೆಕ್ಟೆರ್, ಗೋವಿನಜೋಳ 26300 ಹೆಕ್ಟೇರ್, ಸಜ್ಜೆ 1000 ಹೆಕ್ಟೆರ್, ತೊಗರಿ 2800 ಹೆಕ್ಟೇರ್, ಹೆಸರು 19650 ಹೆಕ್ಟೇರ್, ಸೂರ್ಯಕಾಂತಿ 1370 ಹೆಕ್ಟೇರ್, ಕಬ್ಬು 7000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ತಿಳಿಸಿದರು.

ಯೂರಿಯಾ, ಡಿ.ಎ.ಪಿ, ಕಾಂಪ್ಲೆಕ್ಸ್, ಎಂ.ಒ.ಪಿ, ಎಸ್ಎಸ್‌ಪಿ ಸೇರಿ ಒಟ್ಟು 34,135 ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹವಿದೆ. ಅಲ್ಲದೇ ಅಗತ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ಇನ್ನು ಹೆಚ್ಚಿಗೆ ದಾಸ್ತಾನು ಮಾಡಲಾಗುವುದು ಎಂದರು.

ಜಿಲ್ಲೆಯ ಎಲ್ಲ 18 ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ 8 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳಲ್ಲಿ ಈಗಾಗಲೇ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ. ಒಟ್ಟು 637 ರಸಗೊಬ್ಬರ ಮಾರಾಟಗಾರರು ಹಾಗೂ 375 ಬೀಜ ಮಾರಾಟಗಾರರಿದ್ದಾರೆ. ಯೂರಿಯಾ 45 ಕೆಜಿಯ ಒಂದು ಬ್ಯಾಗ್ ಎಂ.ಆರ್.ಪಿ ಬೆಲೆ ₹ 266 ಇದ್ದು, ಬೇವು ಲೇಪಿತ ಯೂರಿಯಾ ಬೆಲೆಯು ₹ 295 ಇದೆ. ಗೊಬ್ಬರವನ್ನು ವಿತರಕರು ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಎಚ್.ಜಯಾ, ಎಂ.ಮೂರ್ತಿ, ಕೃಷಿ ಇಲಾಖೆಯ ಉಪನಿರ್ದೇಶಕ ಕೊಂಗವಾಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರವೀಂದ್ರ ಹಕಾಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry