ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಾರಿ ವಿದ್ಯೆ ಸಾಧಕಿ ಸಂಜನಾ

Last Updated 3 ಜೂನ್ 2018, 12:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಈ ಬಾಲಕಿಯು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಪರ್ಶ, ವಾಸನೆ, ಶಬ್ದದಿಂದಲೇ ವ್ಯಕ್ತಿ ಹಾಗೂ ವಸ್ತುವನ್ನು ಗುರುತಿಸುವ ‘ಗಾಂಧಾರಿ’ ಕಲೆಯನ್ನು ಕರಗತಮಾಡಿಕೊಂಡಿದ್ದಾಳೆ. ಈಕೆ  ನಗರದ ತರಳುಬಾಳು ಆಂಗ್ಲ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಂಜನಾ.

ಬಟ್ಟೆ ಕಟ್ಟಿಕೊಂಡೇ ಮುಂದೆ ನಿಂತಿರುವವರನ್ನು ಗುರುತಿಸುವುದು, ಶಾಲೆಯಲ್ಲಿ ಕಪ್ಪು ಹಲಗೆಯಲ್ಲಿ ಬರೆದಿರುವುದನ್ನು  ಓದುತ್ತಾಳೆ. ಸೈಕಲ್ ತುಳಿಯುವುದು, ಸ್ಕೂಟಿ ಡ್ರೈವಿಂಗ್ ಹೀಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ಎಲ್ಲ ಕೆಲಸಗಳನ್ನು ಸರಾಗವಾಗಿ ಮಾಡುತ್ತಾಳೆ. ಬಟ್ಟೆ ಕಟ್ಟಿಕೊಂಡಿದ್ದರೂ ಸಹಜವಾಗಿ ಕಣ್ಣಿಗೆ ಕಾಣುವಂತೆ ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ವ್ಯವಹರಿಸುವುದು  ಅಚ್ಚರಿ ಉಂಟು ಮಾಡಿದೆ.

ಈ ಬಗ್ಗೆ ಮಾತನಾಡಿದ ಸಂಜನಾ, ‘ಗಾಂಧಾರಿ ವಿದ್ಯೆ ಕಲಿತಿರುವುದು ಖುಷಿ ತಂದಿದೆ. ಕಣ್ಣು ಬಿಟ್ಟುಕೊಂಡು ಹೇಗೆಲ್ಲ  ಇರಬಹುದೋ ನಾನು  ಕಣ್ಣು ಮುಚ್ಚಿಕೊಂಡೇ ಮಾಡುತ್ತೇನೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಟಿವಿ ನೋಡುತ್ತೇನೆ. ಮೊಬೈಲ್ ಬಳಸುತ್ತೇನೆ’ ಎನ್ನುತ್ತಾರೆ ಅವರು.

‘ಗಾಂಧಾರಿ ವಿದ್ಯೆ, ಮ್ಯಾಜಿಕ್‌ಗಳನ್ನು ಟಿ.ವಿಯಲ್ಲಿ ನೋಡಿದ್ದೆ. ಈಗ ನಮ್ಮ ಶಾಲೆಯ ವಿದ್ಯಾರ್ಥಿನಿ ಇಷ್ಟೆಲ್ಲಾ ಪ್ರದರ್ಶನ ಕೊಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಪ್ರಾರಂಭದಲ್ಲಿ ಈ ಪ್ರದರ್ಶನ ಹಲವು ಅನುಮಾನ ಮೂಡಿಸಿತ್ತು. ದೃಷ್ಟಿ ಇಲ್ಲದೇ ಗುರುತಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿತ್ತು. ಸ್ವತಃ ನಾನೇ ಇದನ್ನು ಪರೀಕ್ಷಿಸಿ ಖಚಿತಪಡಿಸಿಕೊಂಡೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ.

‘ದಾವಣಗೆರೆಯಲ್ಲಿ  ಅಜ್ಜಿ ಇದ್ದು, ಅಲ್ಲಿಗೆ ಹೋದ ಸಮಯದಲ್ಲಿ ಗಾಂಧಾರಿ ವಿದ್ಯೆಯ ತರಬೇತಿ ಪಡೆದಿದ್ದಾಳೆ. 10 ದಿನದ ತರಬೇತಿ ಇದಾಗಿದ್ದು, ನನ್ನ ಮಗಳು ಕೇವಲ ನಾಲ್ಕು ದಿನಗಳಲ್ಲಿ ಈ ವಿದ್ಯೆ ಕಲಿತಿದ್ದಾಳೆ’ ಎಂದು ಹೆಮ್ಮೆ ಪಡು ತ್ತಾರೆ ಸಂಜನಾ ತಂದೆ ಧನಂಜಯ ರೆಡ್ಡಿ.

**
ಗಾಂಧಾರಿ ವಿದ್ಯೆ ಕಲಿಯುವುದರಿಂದ ಕಲಿಕೆಯಲ್ಲಿ ಆಸಕ್ತಿ ಉಂಟಾಗುತ್ತದೆ. ಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ
–ಶಶಿಧರ್ ಗುರೂಜಿ, ಗಾಂಧಾರಿ ವಿದ್ಯೆ ತರಬೇತಿ ಕೇಂದ್ರದ ಸಂಸ್ಥಾಪಕ, ಕೂಡ್ಲಿಗಿ, ಬಳ್ಳಾರಿ.

ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT