ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 ‘ಜೆ’ ಸೇರ್ಪಡೆ ಹೋರಾಟ ತೀವ್ರಕ್ಕೆ ನಿರ್ಧಾರ

ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ತಾಲ್ಲೂಕಿನ ಸ್ಥಿತಿ ಅಧೋಗತಿ lಈಡೇರದ ಜನಪ್ರತಿನಿಧಿಗಳ ಭರವಸೆ
Last Updated 3 ಜೂನ್ 2018, 12:09 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೀವ್ರ ಹಿಂದುಳಿದಿರುವ ಮೊಳಕಾಲ್ಮುರು ತಾಲ್ಲೂಕಿಗೆ 371 ‘ಜೆ‘ ಸೌಲಭ್ಯ ಕೊಡಿಸಲು ನಡೆಯುತ್ತಿರುವ ಹೋರಾಟವನ್ನು ತೀವ್ರಗೊಳಿಸಲು ಹೋರಾಟ ಸಮಿತಿ ನಿರ್ಧರಿಸಿದೆ.

‘ಲೋಕಸಭಾ ಕ್ಷೇತ್ರ ಮರು ವಿಂಗಡಣೆಗೂ ಮುನ್ನ ತಾಲ್ಲೂಕು ಬಳ್ಳಾರಿ ಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು. ದೇವಸಮುದ್ರ ಹೋಬಳಿ ಬಹುತೇಕ ಎಲ್ಲಾ ಗ್ರಾಮಗಳ ಜನ ವ್ಯಾಪಾರ ವಹಿವಾಟು, ಆರೋಗ್ಯ, ಕೂಲಿ, ಶಿಕ್ಷಣ ಎಲ್ಲದಕ್ಕೂ ಈಗಲೂ ಬಳ್ಳಾರಿಯನ್ನೇ ಅವಲಂಬಿಸಿದ್ದಾರೆ. ಬಳ್ಳಾರಿ ಜತೆ ಎಲ್ಲ ರಂಗಗಳಲ್ಲಿ ಸಂಬಂಧಗಳು ಮುಂದುವರಿದಿರುವುದರಿಂದ ಜಿಲ್ಲೆಯಲ್ಲಿರುವ ಪರೋಕ್ಷ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಹೋರಾಟ ಸಮಿತಿಯ ಜಿ.ಸಿ. ನಾಗರಾಜ್‌.

‘ತಾಲ್ಲೂಕಿನಲ್ಲಿ ಕನಿಷ್ಠ ಪ್ರಾಥಮಿಕ ಹಂತದಲ್ಲೂ ಗುಣಮಟ್ಟ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಕರ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಕಾಲೇಜು ಶಿಕ್ಷಣ ದೊರೆಯಲು ವ್ಯವಸ್ಥೆ ಇಲ್ಲ. ಎಲ್ಲದಕ್ಕೂ ಗುಳೆ ಹೋಗಬೇಕಾಗಿದೆ. ಇದು ಆರ್ಥಿಕ ಶಕ್ತಿವಂತರಿಗೆ ಮಾತ್ರ ಸಾಧ್ಯವಾಗುತ್ತಿದೆ. ಬಡವರ ಮಕ್ಕಳು ಶಿಕ್ಷಣ ಮೊಟಕುಗೊಳಿಸುವುದು ಅನಿವಾರ್ಯವಾಗಿದೆ’ ಎಂಬುದು ಅವರ ಅಭಿಪ್ರಾಯ.

ತಾಲ್ಲೂಕಿನಲ್ಲಿ ಕುಡಿಯಲು ಹಾಗೂ ಕೃಷಿಗೆ ನೀರಿನ ಸೌಲಭ್ಯ ಕಲ್ಪಿಸುವ ಯಾವುದೇ ಶಾಶ್ವತ ವ್ಯವಸ್ಥೆ ಇಲ್ಲ. ಎಲ್ಲ ಕೋನದಲ್ಲೂ ನೆರೆಯ ಹೈದರಾಬಾದ್‌– ಕರ್ನಾಟಕ ಜಿಲ್ಲೆಗಳಿಗಿಂತ ಹೀನಾಯ ಬದುಕು ಇಲ್ಲಿ ನಡೆಯುತ್ತಿದೆ. ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆಗಳು ಸರ್ಕಾರದ ಮಟ್ಟಕ್ಕೆ ಮುಟ್ಟಿಲ್ಲ. ಆದ್ದರಿಂದ ಸಮಗ್ರ ಅಭಿವೃದ್ಧಿಗಾಗಿ 371 ‘ಜೆ’ ಸೌಲಭ್ಯ ಸೇರ್ಪಡೆಯಷ್ಟೆ ಪರಿಹಾರವಾಗಿದೆ’ ಎಂದು ಸಮಿತಿಯ ವಿರೂಪಾಕ್ಷಪ್ಪ, ವೆಡ್ಸ್‌ ಗಂಗಾಧರ್, ರಾಮಕೃಷ್ಣ‌ ಹೇಳುತ್ತಾರೆ.

ಈ ಸಂಬಂಧ ಹೋರಾಟ ನಡೆಯುತ್ತಿರುವ ಬಗ್ಗೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪರಿಶೀಲಿಸುವ ಭರವಸೆ ನೀಡಿದ್ದರು. ಶಾಸಕ ಬಿ. ಶ್ರೀರಾಮುಲು ಅವರಿಗೂ ಮನವಿ ಮಾಡಲಾಗಿತ್ತು ಅವರೂ ಸ್ಪಂದಿಸುವುದಾಗಿ ಹೇಳಿದ್ದರು. ಮುಂದೆ ನಡೆಯುವ ಹೋರಾಟದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ರಾಮುಲು ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

**
ಸೌಲಭ್ಯ ದೊರೆಯುವ ವರೆಗೂ ಹೋರಾಟ ಮಾಡುವುದಾಗಿ ಸಮಿತಿ ನಿರ್ಧರಿಸಿದೆ. ಇದಕ್ಕೆ ಜನಪ್ರತಿನಿಧಿಗಳ ಸಿಕ್ಕರೂ, ಇಲ್ಲವಾದರೂ ಹೋರಾಟ ಮುಂದುವರಿಯಲಿದೆ
ನಾಗರಾಜ್‌, ಹೋರಾಟ ಸಮಿತಿ ಸದಸ್ಯ
**
371 ‘ಜೆ‘ ಕಾನೂನು ವ್ಯಾಪ್ತಿ ಸೌಲಭ್ಯವಾಗಿರುವ ಕಾರಣ ಸೇರ್ಪಡೆ ಮಾಡಿಸುವ ಬಗ್ಗೆ ಯಾವುದೇ ಖಚಿತ ಹೇಳಿಕೆ ನೀಡುವುದಿಲ್ಲ. ಚುನಾವಣೆಯಲ್ಲಿ ವೇಳೆಯೂ ಭರವಸೆ ನೀಡಿಲ್ಲ
ಬಿ. ಶ್ರೀರಾಮುಲು, ಶಾಸಕ

ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT