ದೂರವಾದ ಚೇಲಾವರ ಜಲಪಾತ

7
ತಳಭಾಗಕ್ಕೆ ತೆರಳದಂತೆ ನಿರ್ಬಂಧ: ಸುರಕ್ಷತೆಗೆ ಆದ್ಯತೆ

ದೂರವಾದ ಚೇಲಾವರ ಜಲಪಾತ

Published:
Updated:
ದೂರವಾದ ಚೇಲಾವರ ಜಲಪಾತ

ನಾಪೋಕ್ಲು: ಮಳೆಗಾಲ ಸಮೀಪಿಸುತ್ತಿದ್ದಂತೆ ಚೇಲಾವರ ಜಲಪಾತ ತಳೆಯುವ ಚೆಲುವನ್ನು ನೋಡುವುದೇ ಸೊಗಸು. ಪ್ರವಾಸಿಗರಿಗಂತೂ ಇದು ಹೇಳಿಮಾಡಿಸಿದ ಕಾಲ. ಚೇಲಾವರದ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ದೂರದೆಲ್ಲೆಡೆಯಿಂದ ಬರುತ್ತಾರೆ. ಆದರೆ ಈಗ ಅದಕ್ಕೆ ಕಡಿವಾಣ ಬಿದ್ದಿದೆ.

ಜಿಲ್ಲಾಡಳಿತದಿಂದ ಪ್ರವಾಸಿಗರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕಲಾಗಿದ್ದು, ಪ್ರವಾಸಿಗರು ದೂರದಿಂದಲೇ ಜಲಪಾತದ ಸೌಂದರ್ಯವನ್ನು ಸವಿಯಬೇಕಾಗಿದೆ. ಜಲಪಾತದ ತಳಭಾಗಕ್ಕೆ ತೆರಳದಂತೆ ಬೇಲಿ ಹಾಕಿ ಬಂದ್ ಮಾಡಲಾಗಿದೆ. ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು ಜಲಪಾತದ ಉಸ್ತುವಾರಿಗೆ ಕಾವಲುಗಾರರನ್ನು ನೇಮಕಮಾಡಲಾಗಿದೆ.

ಮಳೆಗಾಲದಲ್ಲಿ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನಪಡೆದಿದೆ. ಮಳೆಗಾಲದಲ್ಲಿ ಈ ಜಲಪಾತವನ್ನು ವೀಕ್ಷಿಸಲು ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ರಜಾದಿನಗಳಲ್ಲಿ ಬಂದು ಜಲಪಾತದ ನಯನಮನೋಹರ ದೃಶ್ಯದ ಸೊಬಗನ್ನು ಸವಿದು ಸಂತಸಪಡುತ್ತಾರೆ. ಬೇಸಿಗೆಯಲ್ಲೂ ಚೇಲಾವರ ಜಲಪಾತದ ನೀರಿನ ಹರಿವು ಕ್ಷೀಣಿಸಿದ್ದರೂ ವೀಕ್ಷಣೆಗೆ ಬರುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಇದಿಷ್ಟೇ ಅಲ್ಲ, ಕೊಡಗು ಜಿಲ್ಲೆಯ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿರುವ ಎರಡು ರಮಣೀಯ ಜಲಪಾತಗಳು ತಮ್ಮ ಚೆಲುವಿನಿಂದ ಪ್ರವಾಸಿಗರ ಮನಸೆಳೆದಿವೆ. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಶಿಖರ, ಬ್ರಹ್ಮಗಿರಿ ಬೆಟ್ಟಸಾಲುಗಳು ಮುಗಿಲನ್ನು ಚುಂಬಿಸುತ್ತಾ ನಿಂತಿವೆ. ಈ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು ಉಗಮಿಸಿ ಹರಿದು ಬರುತ್ತವೆ. ಬ್ರಹ್ಮಗಿರಿ ಬೆಟ್ಟದ ಬುಡದಿಂದ ಕಾವೇರಿ ನದಿ ಉಗಮಿಸಿದರೆ, ತಡಿಯಂಡಮೋಳ್ ಶಿಖರದ ಸರಹದ್ದಿನಲ್ಲಿರುವ ಇಗ್ಗುತಪ್ಪ ಬೆಟ್ಟದಿಂದ ಬಲಿಯಟ್ರ ನದಿ ಮತ್ತು ಚೋಮಕುಂದು ಬೆಟ್ಟದಿಂದ ಸೋಮನ ನದಿಗಳು ಹರಿದುಬರುತ್ತವೆ.

ಈ ಎರಡು ನದಿಗಳು ವಿರಾಜಪೇಟೆ ತಾಲ್ಲೂಕಿನ ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದಲ್ಲಿ ಜಲಪಾತಗಳಾಗಿ ಧುಮುಕುತ್ತವೆ. ಹಾಗೆಯೇ ಹರಿದು ಅನತಿ ದೂರದಲ್ಲಿ ಸಂಗಮವಾಗಿ ಬಲಮುರಿ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತವೆ.

ಆದರೆ ಇಂಥ ರಮಣೀಯ ಜಲಪಾತಗಳು, ವೀಕ್ಷಣೆಗೆ ಬರುವ ಪ್ರವಾಸಿಗರ, ಯುವಕರ ಸಾಹಸದಾಟಗಳಿಂದಾಗಿ ಜಲಪಾತ ಕುಖ್ಯಾತಿ ಗಳಿಸಿವೆ. ಸೆಲ್ಫೀ ತೆಗೆಯುವ ಹುಚ್ಚಿನಲ್ಲಿ, ಈಜಾಟದ ಭರದಲ್ಲಿ ಜಲಪಾತದ ಸೆಳೆತಕ್ಕೆ ಸಿಲುಕಿ ಬಲಿಯಾದವರು ಹಲವರು. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ, ಮೋಜಿನಾಟಗಳಿಗೆ ಕಡಿವಾಣ ಹಾಕಲು ಗ್ರಾಮಪಂಚಾಯಿತಿ ಕ್ರಮ ಕೈಗೊಂಡಿದೆ.

ಸಂಜೆ ಆರು ಗಂಟೆಯ ಬಳಿಕ ಜಲಪಾತ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ. ಚೆಯ್ಯಂಡಾಣೆಯಿಂದ ಚೇಲಾವರ ಗ್ರಾಮದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಜಲಪಾತಕ್ಕೆ ತೆರಳಲು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ‘ಪ್ರವಾಸೋದ್ಯಮದ ದೃಷ್ಟಿಯಲ್ಲಿ ಚೇಲಾವರ ಜಲಪಾತಕ್ಕೆ ವಿಶೇಷ ಮಾನ್ಯತೆಯಿದ್ದರೂ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಿಗರಿಗೆ ನಿರ್ಬಂಧವೂ ಅಷ್ಟೇ ಅನಿವಾರ್ಯವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು. ಅಂತೆಯೇ ಜಲಪಾತದ ತಳಭಾಗಕ್ಕೆ ತೆರಳಲು ಸಾಧ್ಯವಾಗದಂತೆ ಬೇಲಿ ನಿರ್ಮಿಸಿದ್ದು ದೂರದಿಂದಲೇ ಜಲಪಾತದ ಸೌಂದರ್ಯವನ್ನು ಸವಿಯಬೇಕಾಗಿದೆ.

ಕೆಲವೇ ದಿನಗಳಲ್ಲಿ ಭೋರ್ಗರೆದು ಧುಮುಕುವ ಚೇಲಾವರದ ಸೌಂದರ್ಯ ವನ್ನು ಸುರಕ್ಷತೆಯ ದೃಷ್ಟಿಯಿಂದ ದೂರದಿಂದಲೇ ಆಸ್ವಾದಿಸುವುದು ಅನಿವಾರ್ಯವಾಗಿದೆ.

–ಸಿ.ಎಸ್‌.ಸುರೇಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry