4
ಕೆರೆಗಳಿಗೆ ನೀರು ಹರಿಸುವ ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಪೂರ್ಣ: ಜೂನ್‌ 7ಕ್ಕೆ ಲೋಕಾರ್ಪಣೆಗೆ ಸಿದ್ಧತೆ

ಜಿಲ್ಲೆಗೆ ಬಂದ ಗಂಗೆ: ರೈತರ ಸಂಭ್ರಮ

Published:
Updated:
ಜಿಲ್ಲೆಗೆ ಬಂದ ಗಂಗೆ: ರೈತರ ಸಂಭ್ರಮ

ಕೋಲಾರ: ಕೆ.ಸಿ ವ್ಯಾಲಿ ನೀರಾವರಿ ಯೋಜನೆಯ ನೀರನ್ನು ಪ್ರಾಯೋಗಿಕವಾಗಿ ತಾಲ್ಲೂಕಿನ ನರಸಾಪುರ ಬಳಿಯ ಲಕ್ಷ್ಮೀಸಾಗರ ಕೆರೆಗೆ ಶನಿವಾರ ಹರಿಸಲಾಯಿತು.

ಬೆಂಗಳೂರಿನಿಂದ ಕಾಲುವೆ ಮೂಲಕ ಲಕ್ಷ್ಮೀಸಾಗರ ಕೆರೆಗೆ ನೀರು ಹರಿದು ಬರುವುದನ್ನು ಕಂಡು ವಿಧಾನಸಭಾ ಸ್ಪೀಕರ್ ಕೆ.ಆರ್‌.ರಮೇಶ್‌ಕುಮಾರ್ ಹಾಗೂ ವಿವಿಧ ರಾಜಕೀಯ ಮುಖಂಡರು, ರೈತ ಮುಖಂಡರು ಸಂತಸ ವ್ಯಕ್ತಪಡಿಸಿದರು.

ಕೆರೆಗೆ ನೀರು ಬರುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ಕೆರೆಯ ಬಳಿ ಜಮಾಯಿಸಿದರು. ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ನೀರಿಗಿಳಿದು ಸಂಭ್ರಮಿಸಿದರು. ಯೋಜನೆ ಅನುಷ್ಠಾನದಲ್ಲಿ ಹೆಚ್ಚು ಶ್ರಮ ವಹಿಸಿದ ರಮೇಶ್‌ಕುಮಾರ್‌ಗೆ ಧನ್ಯವಾದ ತಿಳಿಸಿದರು.

ಕಾಲುವೆಯಲ್ಲಿ ಸದ್ಯ 100 ಎಂಎಲ್‌ಡಿ ನೀರು ಹರಿಯುತ್ತಿದ್ದು, ಒಂದು ವಾರದೊಳಗೆ 400 ಎಂಎಲ್‌ಡಿಯಷ್ಟು ನೀರು ಕೆರೆಗೆ ಬರಲಿದೆ. ಲಕ್ಷ್ಮೀಸಾಗರ ಕೆರೆ ತುಂಬಿದ ಬಳಿಕ ನೀರು ಜೋಡಿ ಕೃಷ್ಣಾಪುರ, ಹುಳದೇನಹಳ್ಳಿ, ನರಸಾಪುರ ಕೆರೆಗೆ ಹರಿಯಲಿದೆ. ನರಸಾಪುರ ಕೆರೆ ತುಂಬಿದ ಬಳಿಕ ಅಲ್ಲಿಂದ ಪಂಪ್ ಮೂಲಕ ಮೂರು ಮಾರ್ಗದಲ್ಲಿ ಬೇರೆ ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

7ಕ್ಕೆ ಲೋಕಾರ್ಪಣೆ: ಬೆಂಗಳೂರು ನಗರದ ಬೆಳಂದೂರು ಕೆರೆಯ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೆರಗಳಿಗೆ ಹರಿಸಲಾಗುತ್ತದೆ. ಜಿಲ್ಲೆಯ 126 ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ವೃದ್ಧಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೂನ್‌ 7ರಂದು ಯೋಜನೆಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡುತ್ತಾರೆ.

ಯೋಜನೆಗೆ ಯಾವುದೇ ಅಡೆತಡೆ ಎದುರಾಗದಿದ್ದರೆ ವಿಧಾನಸಭಾ ಚುನಾವಣೆಗೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಧರಿಸಿತ್ತು. ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ಪೈಪ್‌ಲೈನ್‌ ಕಾಮಗಾರಿಗೆ ಅನುಮತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಳಂಬ ಮಾಡಿದ್ದರಿಂದ ಕಾಮಗಾರಿ ತಡವಾಯಿತು.

ವಿಧಾನಸಭಾ ಚುನಾವಣೆಯ ಮತದಾನಕ್ಕೆ ನಾಲ್ಕೈದು ದಿನ ಬಾಕಿ ಇರುವಾಗ ಲಕ್ಷ್ಮೀಸಾಗರ ಕೆರೆಗೆ ನೀರು ಹರಿಸುವ ಸಿದ್ಧತೆ ನಡೆದಿತ್ತು. ಆದರೆ, ಕಾಲುವೆಗಳಲ್ಲಿ ಕೆಲವೆಡೆ ನೀರು ಹರಿಯದೆ ಸಮಸ್ಯೆಯಾಯಿತು. ಹೀಗಾಗಿ ಯೋಜನೆಯ ಲೋಕಾರ್ಪಣೆ ದಿನಾಂಕವನ್ನು ಮುಂದೂಡಲಾಗಿತ್ತು.

**

ಸ್ವಾತಂತ್ರ್ಯ ನಂತರ ಜಿಲ್ಲೆಯಲ್ಲಿ ಜಾರಿಯಾದ ಮೊದಲ ನೀರಾವರಿ ಯೋಜನೆಯಾಗಿದೆ. ನೀರು ಬಂದಿರುವುದು ನೀರಾವರಿ ಹೋರಾಟಕ್ಕೆ ಸಂದ ಜಯ

ಕೆ.ಆರ್‌.ರಮೇಶ್‌ಕುಮಾರ್‌, ವಿಧಾನಸಭಾ ಸ್ಪೀಕರ್‌ 

**

ಕೆ.ಸಿ ವ್ಯಾಲಿ ಯೋಜನೆ ಪೂರ್ಣಗೊಳಿಸಿ ನೀರು ಹರಿಸಿರುವುದಕ್ಕೆ ಸಂತಸವಾಗಿದೆ. ಆದರೆ, ಮೂರು ಹಂತದಲ್ಲಿ ನೀರು ಶುದ್ಧೀಕರಿಸಬೇಕು

ವಿ.ಕೆ.ರಾಜೇಶ್‌, ನೀರಾವರಿ ಹೋರಾಟ ಸಮಿತಿ ಸಂಚಾಲಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry