ಗಬ್ಬುನಾರುತ್ತಿರುವ ಸರ್ವೀಸ್ ರಸ್ತೆ

7
ನಾಯಿ, ಹಂದಿ ಕಾಟಕ್ಕೆ ತತ್ತರಿಸಿದ ಜನ

ಗಬ್ಬುನಾರುತ್ತಿರುವ ಸರ್ವೀಸ್ ರಸ್ತೆ

Published:
Updated:
ಗಬ್ಬುನಾರುತ್ತಿರುವ ಸರ್ವೀಸ್ ರಸ್ತೆ

ಮುಳಬಾಗಿಲು: ತಾಲ್ಲೂಕಿನ ನಂಗಲಿಯ ಜುಮ್ಮಾ ಮಸೀದಿ ಮತ್ತು ಹಳೆಯ ಸಂತೆಯ ಮೈದಾನ ಸಮೀಪದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಪಕ್ಕದಲ್ಲಿ ಸುತ್ತಲಿನ ಅಂಗಡಿಗಳು ಎಸೆಯುವ ಕಸದ ರಾಶಿ, ತ್ಯಾಜ್ಯಗಳಿಂದ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಜನ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನಲ್ಲಿ ಮುಳಬಾಗಿಲು ನಂತರ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ವಾಣಿಜ್ಯ ವಹಿವಾಟು ನಡೆಸುವ ನಂಗಲಿಯ ಹಳೆ ಸಂತೆ ಮೈದಾನ, ಚರ್ಚ್ ಹಿಂಭಾಗ ಮತ್ತು ಜುಮ್ಮಾ ಮಸೀದಿಯ ಮುಂದಿರುವ ಸರ್ವೀಸ್‌ ರಸ್ತೆ ಪಕ್ಕದಲ್ಲಿ ಕಸ ಚೆಲ್ಲಲಾಗುತ್ತಿದೆ. ಅದು ರಸ್ತೆಗೆ ಬೀಳುತ್ತಿದೆ. ತಿರುಪತಿ, ಬೆಂಗಳೂರಿನತ್ತ ಓಡಾಡುವ ಜನರಿಗೆ ತೀವ್ರ ತೊಂದರೆಯಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಆರು ವರ್ಷಗಳ ಹಿಂದಷ್ಟೇ ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣ ಮಾಡಲಾಗಿದೆ. ಗ್ರಾಮದಲ್ಲಿ ಸಾಕಷ್ಟು ಜಾಗ ಇದೆ. ಅಲ್ಲಿ ಹತ್ತಾರು ಅಂಗಡಿಗಳು ತಲೆ ಎತ್ತಿವೆ. ಉಳಿದಂತೆ ಲಾರಿ, ಟೆಂಪೊ, ಆಟೋ ನಿಲ್ಲಿಸುವ ತಾಣಗಳಾಗಿವೆ. ಬೆಳಿಗ್ಗೆ ಇಲ್ಲಿಯೇ ಮೀನನ್ನೂ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಗಜಿಬಿಜಿ ಇದ್ದೇ ಇರುತ್ತದೆ. ಅಲ್ಲದೆ ಸರ್ವೀಸ್‌ ರಸ್ತೆಯನ್ನು ಕೆಲವರು ತಮ್ಮ ಸ್ವಂತ ಸ್ವತ್ತು ಎಂಬಂತೆ ವರ್ತಿಸುತ್ತಿದ್ದಾರೆ. ಬಹುತೇಕ ಅಂಗಡಿಗಳ ತ್ಯಾಜ್ಯವನ್ನು ಸಹ ಇಲ್ಲಿಯೇ ಸುರಿಯುವುದರಿಂದ ತಿಪ್ಪೆ ರಾಶಿಯಂತೆ ಕಾಣುತ್ತದೆ. ಕಸದ ಮೇಲೆ ನೀರು ಬಿದ್ದು ಕೊಳೆತಿದೆ.

ಮದ್ಯದ ಬಾಟಲಿ, ಖಾಲಿ ಔಷಧಿ  ಬಾಟಲಿ, ಸಿರಂಜ್‌, ಮಾಂಸ ಕತ್ತರಿಸಿ ಉಳಿದ ತ್ಯಾಜ್ಯ, ಹೋಟೆಲ್‌ನ ತ್ಯಾಜ್ಯ ಎಲ್ಲವೂ ಇಲ್ಲಿ ಬಂದು ಬೀಳುತ್ತಿವೆ. ಅದರ ಮೇಲೆ ಮಳೆ ನೀರು ಬಿದ್ದು ಕೊಳೆಯುತ್ತಿದೆ. ಮಾಂಸದ ಚೂರು ತಿನ್ನಲು ನಾಯಿಗಳು, ಇತರೆ ತ್ಯಾಜ್ಯಕ್ಕಾಗಿ ಹಂದಿಗಳು ಬಿಡಾರ ಹೂಡಿರುತ್ತವೆ. ಇವುಗಳಿಂದಾಗಿ ರೋಗಕಾರಕ ವಾತಾವರಣ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನಗಳಿಗೆ ನಾಯಿಗಳು ಬೆನ್ನು ಹತ್ತುವುದರಿಂದ ಅಪಘಾತಗಳೂ ಸಂಭವಿಸಿವೆ. ತ್ಯಾಜ್ಯ ಸುರಿಯುವುದನ್ನು ತಡೆಯಲು ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಇದುವರೆಗೆ ಪಂಚಾಯಿತಿಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಿವಾಸಿ ನಾರಾಯಣಸ್ವಾಮಿ ಆರೋಪಿಸಿದರು.

ಸರ್ವೀಸ್‌ ರಸ್ತೆ ಮಗ್ಗುಲಲ್ಲಿ ಸಂಜೆ ಹೊತ್ತಲ್ಲಿ ಕಬಾಬ್‌ ಅಂಗಡಿಗಳು ತೆರೆದುಕೊಳ್ಳುತ್ತವೆ. ಗ್ರಾಹಕರು ಎಸೆದ ಮಾಂಸದ ತುಂಡಕ್ಕು ತಿನ್ನಲು ನಾಯಿಗಳ ಹಿಂದು ತುಂಬಿಕೊಂಡಿರುತ್ತವೆ. ಇವುಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ನಾಯಿಗಳಿಂದಾಗುವ ತೊಂದರೆ ತಡೆಯಲೂ ಪಂಚಾಯಿತಿ ಆಸಕ್ತಿ ತೋರುತ್ತಿಲ್ಲ. ದಿನವೂ ಜನರು ಕಷ್ಟ ಪಡುವುದು ತಪ್ಪುತ್ತಿಲ್ಲ ಎಂದು ಗ್ರಾಮದ ರಾಮಪ್ಪ ಅಸಮಾಧಾನ ವ್ಯಕ್ತಪಡಿಸುವರು.

ಗ್ರಾಮವು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಜನಸಂಖ್ಯೆ ಹೆಚ್ಚುತ್ತಿದೆ. ತ್ಯಾಜ್ಯ ವಿಲೇವಾರಿ ಕಷ್ಟವಾಗುತ್ತಿದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಇಲ್ಲಿಗೆ ಸಮೀಪದ ಕುರುಬರಹಳ್ಳಿ ಬಳಿ ಸ್ಥಳ ನಿಗದಿ ಮಾಡಲಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗುತ್ತಿದೆ. ಆದಷ್ಟು ಶೀಘ್ರ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲಿಯವರೆಗೆ ಜನರ ಸಹಕಾರ ಅಗತ್ಯ ಎಂದು ಪಂಚಾಯಿತಿ ಅಧಿಕಾರಿಗಳು ಸ್ಪಷ್ಟನೆ ನೀಡುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry