ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನು ಮತ್ತು ಅವಳ ನಡುವಿನ ಬೆಸುಗೆ...

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಹೆಣ್ಣು ಮತ್ತು ಗಂಡು ಎಂಬುದು ಎರಡೇ ಲಿಂಗ ಎಂದು ಪರಿಭಾವಿಸುವ ಕಾಲವೊಂದಿತ್ತು. ಆದರೆ, ಪರಿಪೂರ್ಣ ಗಂಡು, ಪರಿಪೂರ್ಣ ಹೆಣ್ಣು ಎಂಬುದಿಲ್ಲ ಎಂಬುದೀಗ ಸಾಬೀತಾಗಿದೆ. ಅವನೊಳಗೆ ಅವಳು, ಅವಳೊಳಗೆ ಅವನು ಅಂಶಗಳು ಇದ್ದೇ ಇರುತ್ತವೆ. ಅಂತೆಯೇ ತೃತೀಯ ಲಿಂಗ ಸಂವೇದನೆಗೀಗ ತುಸು ಮೌಲ್ಯ ದಕ್ಕುತ್ತಿದೆ. ತೃತೀಯ ಲಿಂಗ ಎನ್ನುವ ಮಾನ್ಯತೆ ನೀಡಿದ ದೇಶಗಳಲ್ಲಿ ಭಾರತವೂ ಈಗ ಮುಂಚೂಣಿಯಲ್ಲಿದೆ.

ಲಿಂಗ ಅನ್ನುವಂಥದ್ದು ಕೇವಲ ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಕ್ರಿಯೆಗೆ ಮಾತ್ರ ಸೀಮಿತವಾಗಿರುವಂಥದ್ದಲ್ಲ. ಆರೋಗ್ಯವಂತ ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಸಮಪರ್ಕವಾಗಿ ನಿಭಾಯಿಸುವ ಜವಾಬ್ದಾರಿಯೂ ಅದಕ್ಕಿದೆ. ಸಾಮಾಜಿಕ ಸಮಾನತೆ, ಸಮಾನ ವೇತನದ ಸಮಾಜದ ಹಾದಿಯ ದಾರಿ ಇನ್ನೂ ದೂರವಿದೆ.

ಸಾಮಾನ್ಯವಾಗಿ ಲಿಂಗ ಮತ್ತು ಸಮಸಮಾಜದ ಮಾತುಗಳು ಬಂದಾಗಲೆಲ್ಲಾ ಸ್ತ್ರೀವಾದಿ ಚಳವಳಿಗೆ ಥಟ್ಟನೆ ತಳಕು ಹಾಕಲಾಗುತ್ತದೆ. ಆದರೆ, ಲಿಂಗ ಸಂವೇದಿ ವಿಷಯಗಳು ಇತ್ತೀಚೆಗೆ ಹೋರಾಟ, ಚಳವಳಿಯ ದಾರಿಯನ್ನು ಮೀರಿ ಬೆಳೆದಿವೆ. ಅಂಥ ಹಾದಿಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿರುವಂಥದ್ದು ‘ಜೆಂಡರ್‌–ಬೆಂಡರ್’ ಎನ್ನುವ ಕಲಾಹಬ್ಬ. ಗೋಥೆ ಇನ್‌ಸ್ಟಿಟ್ಯೂಟ್, ಮ್ಯಾಕ್ಸ್ ಮುಲ್ಲರ್ ಭವನ ಮತ್ತು ಸ್ಯಾಂಡ್ ಬಾಕ್ಸ್ ಕಲೆಕ್ಟಿವ್‌ನ ಜಂಟಿ ಯೋಜನೆಯಾಗಿರುವ ‘ಜೆಂಡರ್‌–ಬೆಂಡರ್’ ಲಿಂಗ ಸಂವೇದಿ ಕಲಾಹಬ್ಬವನ್ನು ಮೂರು ವರ್ಷಗಳಿಂದ ಆಯೋಜಿಸುತ್ತಿದೆ.

‘ಜೆಂಡರ್‌–ಬೆಂಡರ್’ ಲಿಂಗಾಧಾರಿತ ಕಲಾಕೃತಿಗಳನ್ನು ಕಲ್ಪನೆ, ಚರ್ಚೆಯಾಗಿ ಪ್ರದರ್ಶಿಸುವ ಅಪರೂಪದ ವೇದಿಕೆ. ಲಿಂಗಾಧಾರಿತ ವಿಷಯ ಹೇಳಲು ಮತ್ತು ಕೃತಿ ಪ್ರದರ್ಶಿಸಲು ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸುವ ಈ ವೇದಿಕೆ, ಕಲಾವಿದರು ಮತ್ತು ಪ್ರೇಕ್ಷಕರಿಬ್ಬರಿಂದಲೂ ಗುರುತಿಸಿಕೊಂಡಿರುವ ಅಗ್ಗಳಿಕೆಗೆ ಪಾತ್ರವಾಗಿದೆ.

2015ರಲ್ಲಿ ಮೊದಲ ಬಾರಿಗೆ ಈ ಹಬ್ಬವನ್ನು ಜಾಗತಿಕವಾಗಿ ಆರಂಭಿಸಿದಾಗ ಬೆರಳೆಣಿಕೆಯಷ್ಟು ಪ್ರವೇಶಗಳು ಮಾತ್ರ ಬಂದಿದ್ದವು. ಆದರೆ, ಎರಡನೇ ವರ್ಷಕ್ಕೆ ಈ ಸಂಖ್ಯೆ ಹೆಚ್ಚಾಯಿತು. ಸಮಾಜದಲ್ಲಿ ಲಿಂಗ ಸಂವೇದನೆಯ ತಥಾಕಥಿತ ರೂಪಕಗಳನ್ನು ಮುರಿದು ಹೊಸ ರೂಪಕಗಳನ್ನು ಕಲೆಯ ಮೂಲಕ ಸೃಜನಶೀಲವಾಗಿ ಕಟ್ಟಿಕೊಡಬೇಕೆನ್ನುವುದೇ ‘ಜೆಂಡರ್‌–ಬೆಂಡರ್‌’ನ ಉದ್ದೇಶ. ಹೊರ ಜಗತ್ತಿನಲ್ಲಿ ಲಿಂಗಕ್ಕೆ ಸಂಬಂಧಿತ ಯಾವ ವಿಷಯಗಳಿಗೆ ಮೌನದ ಬೀಗಮುದ್ರೆ ಹಾಕಲಾಗುತ್ತದೋ ಅಂಥ ವಿಷಯಗಳ ಮುಕ್ತ ಚರ್ಚೆಗೆ ‘ಜೆಂಡರ್‌–ಬೆಂಡರ್’ ವೇದಿಕೆಯಾಗಿದೆ ಎನ್ನುತ್ತಾರೆ ‘ಸ್ಯಾಂಡ್‌ಬಾಕ್ಸ್ ಕಲೆಕ್ಟಿವ್‌’ನ ಸಹ ಸಂಸ್ಥಾಪಕರಾದ ಶಿವ ಪಾಠಕ್ ಮತ್ತು ನಿಮಿ ರವೀಂದ್ರನ್.

2017ರಲ್ಲಿ ನಡೆದ ‘ಜೆಂಡರ್‌–ಬೆಂಡರ್‌’ ಹಬ್ಬದಲ್ಲಿ ಕಲಾವಿದೆ ಅರುಣಿಮಾ, ಯೋನಿ ಕುರಿತು ಹತ್ತು ಇನ್‌ಸ್ಟಾಲೇಷನ್‌ಗಳನ್ನು ಮಾಡಿದ್ದರು. ಅದು ಕಲಾಸಕ್ತರು ಮಾತ್ರವಲ್ಲ ಸಾರ್ವಜನಿಕರನ್ನೂ ಬಹುವಾಗಿ ಸೆಳೆಯಿತು. ಯಾವುದನ್ನು ಸಮಾಜ ಮುಚ್ಚಿಟ್ಟು, ಕಾರಣಗಳನ್ನು ಆರೋಪಿಸುತ್ತದೋ ಅದನ್ನು ಏನೆಂದು ಅರಿಯುವ ಪರಿಸರವನ್ನು ನಾವು ರೂಪಿಸಬೇಕಿದೆ. ಅದಕ್ಕೆ ‘ಜೆಂಡರ್–ಬೆಂಡರ್’ ವೇದಿಕೆಯಾಗಿದೆ. ಇಲ್ಲಿ ಆಯ್ಕೆಯಾದ ಹತ್ತು ಕಲಾತ್ಮಕ ಯೋಜನೆಗಳಿಗೆ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ. ಈ ಧನದೊಂದಿಗೆ ತಾವೂ ಕೈಜೋಡಿಸಿ ಕಲಾವಿದರು ತಮ್ಮ ಕಲಾತ್ಮಕ ಚಿಂತನೆಗಳನ್ನು ಸಾಕಾರಗೊಳಿಸುತ್ತಾರೆ. ಹಾಗೆ ಸಾಕಾರಗೊಂಡ ಚಿತ್ರಕಲೆ, ನಾಟಕ, ಕಾವ್ಯ, ನೃತ್ಯ, ಫೋಟೊಗ್ರಫಿ ಇತ್ಯಾದಿ ಕಲಾ ಪ್ರಕಾರಗಳನ್ನು ಆಗಸ್ಟ್‌ 22ರಿಂದ 26ರ ತನಕ ಪ್ರದರ್ಶಿಸಲಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ಮುಂಬೈನ ಹಿರಿಯ ರಂಗಕರ್ಮಿ ವಿಕ್ರಮ್ ಫುಕಾನ್, ಪ್ರಕಾಶಕಿ ಊರ್ವಶಿ ಬುಟಾಲಿಯಾ, ರಾಹಬ್ ಅಲ್ಲಾನಾ, ಆಸ್ತಾ ಚೌಹಾನ್ ಈ ಬಾರಿ ‘ಜೆಂಡರ್–ಬೆಂಡರ್‌’ನ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. 

ಆಸಕ್ತರನ್ನು ಅರ್ಜಿಯನ್ನು https://goo.gl/forms/UqKLR4cV68tk7KFk1 ಇಲ್ಲಿ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 5. ಹೆಚ್ಚಿನ ಮಾಹಿತಿಗೆ sandboxcollective.projects@gmail.comಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT