ಐಪಿಎಸ್‌ ಅಧಿಕಾರಿ ಸೋದರ ನಾಪತ್ತೆ ಪ್ರಕರಣ: ಉಗ್ರ ಸಂಘಟನೆಗೆ ಸೇರಿರುವ ಶಂಕೆ

7

ಐಪಿಎಸ್‌ ಅಧಿಕಾರಿ ಸೋದರ ನಾಪತ್ತೆ ಪ್ರಕರಣ: ಉಗ್ರ ಸಂಘಟನೆಗೆ ಸೇರಿರುವ ಶಂಕೆ

Published:
Updated:

ಶ್ರೀನಗರ: ದಕ್ಷಿಣ ಕಾಶ್ಮೀರದ ಸೋಫಿಯಾನ್‌ ಜಿಲ್ಲೆಯಲ್ಲಿ ಮೇ 26ರಂದು ನಾಪತ್ತೆಯಾಗಿದ್ದ ಯುವಕನೊಬ್ಬ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈತ ಜಮ್ಮಕಾಶ್ಮೀರ ಕೇಡರ್‌ನ ಐಪಿಎಸ್‌ ಅಧಿಕಾರಿಯೊಬ್ಬರ ಸಹೋದರನಾಗಿರುವ ಕಾರಣ ದೇಶದ ರಕ್ಷಣಾ ವಲಯದಲ್ಲಿ ಚರ್ಚೆ ಹುಟ್ಟಹಾಕಿದೆ.

ಜಿಲ್ಲೆಯ ದ್ರಗ್ಗಾದ್‌ ಗ್ರಾಮದ ನಿವಾಸಿ ಮೊಹಮದ್‌ ರಫೀಕ್‌ ಮೆನ್‌ಗ್ನೂನ್‌ ಅವರ ಪುತ್ರ ಶಮಿ ಹಕ್‌ ಮೆನ್‌ಗ್ನೂನ್‌ ಎಂಬಾತನೇ ಅಧಿಕಾರಿಯ ಸಹೋದರ ಮತ್ತು ನಾಪತ್ತೆಯಾಗಿರುವ ಯುವಕ.

ಶ್ರೀನಗರದ ಸರ್ಕಾರಿ ಕಾಲೇಜೊಂದರಲ್ಲಿ ಯುನಾನಿ ವೈದ್ಯಕೀಯ ಶಿಕ್ಷಣ ವಿಭಾಗದ ಪದವಿ ಪಡೆಯುತ್ತಿದ್ದ ಈತನ ನಾಪತ್ತೆ ಕುರಿತು ಕುಟುಂಬದವರಿಂದ ಈವರೆಗೆ ಯಾವುದೇ ದೂರು ಬಂದಿಲ್ಲ. ಹೀಗಾಗಿ ಆತ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾನೆ ಎನ್ನಲಾಗುತ್ತಿದೆ.

‘ನಾಪತ್ತೆಯಾಗಿರುವ ಯುವಕ ಎಲ್ಲಿದ್ದಾನೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಆತ ಉಗ್ರ ಸಂಘಟನೆ ಜೊತೆ ಸೇರಿರುವ ಸಾಧ್ಯತೆಗಳಿವೆ’ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಈ ವರ್ಷದ ಆರಂಭದಿಂದ ಮೇ 31ರ ವರೆಗೆ ಒಬ್ಬ ಸಹ ಪ್ರಾಧ್ಯಾಪಕ, ಒಬ್ಬ ಸಂಶೋಧನಾ ವಿದ್ಯಾರ್ಥಿ ಸೇರಿದಂತೆ ಕನಿಷ್ಟ 60 ವಿದ್ಯಾರ್ಥಿಗಳು ಉಗ್ರ ಸಂಘಟನೆಗಳಿಗೆ ಸೇರಿಕೊಂಡಿದ್ದಾರೆ.

ಇಲ್ಲಿನ ತೆಹ್ರಿಕ್‌ ಇ ಹುರಿಯತ್‌ ಪಕ್ಷದ ಅಧ್ಯಕ್ಷ ಮೊಹಮದ್‌ ಅಶ್ರಫ್‌ ಸೆಹ್ರಾಯ್‌ ಅವರ ಮಗ ಮತ್ತು ಕಾಶ್ಮೀರ ವಿಶ್ವವಿದ್ಯಾಲಯದ ಎಂಬಿಎ ಪದವೀಧರ ಜುನೈದ್‌ ಅಶ್ರಫ್‌ ಸೆಹ್ರಾಯ್‌(26) ಎಂಬಾತ ಇತ್ತೀಚೆಗೆ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ.

ಸೆಹ್ರಾಯ್‌ ಸೇರಿದಂತೆ ಅಲಿಘಡ ಮುಸ್ಲಿಂ ವಿವಿಯ ಸಂಶೋಧನಾ ವಿದ್ಯಾರ್ಥಿ ಮನ್ನಾನ್‌ ಬಷೀರ್‌ ವಾನಿ, ಕಾಶ್ಮೀರ ವಿವಿಯ ಸಮಾಜ ಶಾಸ್ತ್ರ ಪ್ರಾಧ್ಯಾಪಕ ಪ್ರೋ. ಮೊಹಮದ್‌ ರಫಿ ಭಟ್‌ ಹಾಗೂ ಇನ್ನೂ ಕೆಲ ಪ್ರಮುಖರು ಪಟ್ಟಿಯಲ್ಲಿದ್ದಾರೆ.

ಮೇ ತಿಂಗಳಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಗೆ ಸೇರಿದ್ದ ರಫಿ ಭಟ್‌ನನ್ನು ರಕ್ಷಣಾ ಪಡೆಗಳು ಕೆಲವೇ ಗಂಟೆಗಳಲ್ಲಿ ಹತ್ಯೆಗೈದಿದ್ದವು.

ಸೋಫಿಯಾನ್‌ ಹಾಗೂ ಕುಲ್ಗಾಮ್‌ ನಗರಗಳು ಉಗ್ರ ಚಟುವಟಿಕೆಗಳ ಪ್ರಮುಖ ತಾಣಗಳಾಗಿ ಮಾರ್ಪಡುತ್ತಿದ್ದು, ಇಲ್ಲಿನ ಹೆಚ್ಚಿನ ಯುವಕರು ಉಗ್ರ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಈ ಬೆಳವಣಿಗೆ ಕಣಿವೆ ರಾಜ್ಯದ ರಕ್ಷಣಾ ವ್ಯವಸ್ಥೆಗೆ ಹೊಸ ಸವಾಲಾಗಿ ಪರಿಣಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry