7

ಡಯಾನಾ ಡಯೆಟ್‌

Published:
Updated:
ಡಯಾನಾ ಡಯೆಟ್‌

‘ಸೌಂದರ್ಯ ಎನ್ನುವುದು ಸಂಪೂರ್ಣ ಆಂತರಿಕವಾದದ್ದೆ ಹೊರತು ಬಾಹ್ಯವಾದುದಲ್ಲ’ ಎನ್ನುವ ನಟಿ ಡಯಾನಾ ಪೆಂಟಿ 4 ವರ್ಷಗಳ ಬ್ರೇಕ್‌ನ ನಂತರ ಇದೀಗ ‘ಪರಮಾಣು ದಿ ಸ್ಟೋರಿ ಆಫ್‌ ಪೋಖ್ರಾನ್‌’ ಚಿತ್ರದಲ್ಲಿ ಜಾನ್‌ ಅಬ್ರಹಾಂ ಜೊತೆ ಮಿಂಚಿದ್ದಾರೆ.

ಎಂಟು ವರ್ಷಗಳ ಹಿಂದೆ ‘ಕಾಕ್‌ಟೇಲ್‌’ ಚಿತ್ರದ ತುಮ್ಹಿ ಹೋ ಬಂಧು ತುಮ್ಹಿ ಸಖಾ ಹೋ... ಹಾಡಿಗೆ ಹೆಜ್ಜೆಹಾಕಿ ಗಮನಸೆಳೆದಿದ್ದ ಡಯಾನಾ 2014ರಲ್ಲಿ ‘ಹ್ಯಾಪ್ಪಿ ಭಾಗ್‌ ಜಾಯೆಗಿ’ ಚಿತ್ರಕ್ಕೆ ಬಣ್ಣಹಚ್ಚಿದ್ದರು.

ನಾಲ್ಕು ವರ್ಷಗಳು ಚಿತ್ರರಂಗದಿಂದ ದೂರವುಳಿದಿದ್ದರೂ ದೇಹ ಸೌಂದರ್ಯವನ್ನು ಕಾಪಾಡಿಕೊಂಡಿರುವ ಈ ನೀಳಕಾಯದ ಬೆಡಗಿಗೆ ಆತ್ಮವಿಶ್ವಾಸ, ಸಂತೋಷ, ಶಾಂತಿಯೇ ಸೌಂದರ್ಯದ ಗುಟ್ಟಂತೆ.

‘ಜನರು, ಪರಿಸರದೊಂದಿಗೆ ಹೆಚ್ಚು ಸಮಯ ಕಳೆಯುವುದು ಉತ್ತಮ ಸಂಗೀತವನ್ನು ಕೇಳುವುದೇ ನನ್ನ ದೇಹಸಿರಿಯನ್ನು ಕಾಪಾಡಿಕೊಳ್ಳಲು ಕಾರಣ’ ಎನ್ನುತ್ತಾರೆ ಡಯಾನಾ.

ಸದಾ ಲಿಪ್‌ಬಾಮ್‌ನ್ನು ಜೊತೆಗಿಟ್ಟುಕೊಳ್ಳುವ ಇವರು ತುಟಿ ರಂಗಿಗೆ ಆದ್ಯತೆ ನೀಡುತ್ತಾರೆ. ಅವರ ಮೇಕಪ್‌ ಕಿಟ್‌ನಲ್ಲಿ ಕಾಜಲ್‌ ಹಾಗೂ ಸನ್‌ಸ್ಕ್ರೀನ್ ಲೋಶನ್‌  ಐಲೈನರ್‌ ಇರಲೇಬೇಕು. ಸನ್‌ಸ್ಕ್ರೀನ್‌ ಲೇಪಿಸದೆ ಮನೆಯಿಂದ ಹೆಜ್ಜೆ ಕೀಳದ ಚೆಲುವೆ ಚರ್ಮದ ಆರೈಕೆಗೆ ಮಹತ್ವ ನೀಡುತ್ತಾರೆ. ಚಿತ್ರೀಕರಣದ ನಂತರ ಹಾಗೂ ಪ್ರತಿರಾತ್ರಿ ಜಾನ್ಸನ್‌ ಬೇಬಿ ಸ್ಕಿನ್‌ಕೇರ್‌ ವೈಪ್ಸ್‌ ಬಳಸುತ್ತಾರೆ. ನೈಸರ್ಗಿಕ ಸೌಂದರ್ಯ ನೀಡುವಂತಹ ಮೇಕಪ್‌, ಕೆನ್ನೆ ಹಾಗೂ ಗಲ್ಲಕ್ಕೆ ತುಸು ಬಣ್ಣ, ಮಾದಕ ಕಣ್ಣು ಅವರಿಗಿಷ್ಟವಂತೆ. ವಾರದಲ್ಲಿ ಮೂರುದಿನ ಜಿಮ್‌ನಲ್ಲಿ ಬೆವರಿಳಿಸುವ ಪೆಂಟಿ ಲೈಟ್‌ವೇಯಿಟ್‌ ಟ್ರೆನಿಂಗನ್ನೂ ಪಡೆಯುತ್ತಾರೆ.

‘ಕಾಕ್‌ಟೇಲ್‌ ಚಿತ್ರಕ್ಕಾಗಿಯೇ ಮೊದಲ ಬಾರಿ ನೃತ್ಯ ತರಬೇತಿಗೆ ಸೇರಿದೆ. ನಂತರ ನಿರಂತರವಾಗಿ ನೃತ್ಯ ತರಗತಿಗಳಲ್ಲಿ ಭಾಗವಹಿಸುತ್ತಿದ್ದೇನೆ. ಈಗ ಭರತನಾಟ್ಯ, ಜನಪದ, ವೆರ್ಸ್ಟನ್‌ ಫ್ರೀ ಸ್ಟೈಲ್‌, ಕಥಕ್‌ಗಳನ್ನು ಕಲಿಯುತ್ತಿದ್ದೇನೆ. ನೃತ್ಯದಿಂದ ದೇಹಕ್ಕೆ ಫ್ಲೆಕ್ಸಿಬಿಲಿಟಿ ಸಿಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ಬೆಳಗಿನ ತಿಂಡಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವ ಈಕೆ ರಾತ್ರಿ ಊಟದಲ್ಲಿ ಮಿತಹಾರಕ್ಕೆ ಆದ್ಯತೆ ನೀಡುತ್ತಾರೆ. ಉಪಹಾರದೊಂದಿಗೆ ವಿವಿಧ ಹಣ್ಣು ಹಾಗೂ ಗ್ರೀನ್‌ ಟಿ ಸೇವಿಸುತ್ತಾರೆ. ಮೊಟ್ಟೆ ಹಾಗೂ ಬ್ರೌನ್‌ ಬ್ರೆಡ್‌ ಕಡ್ಡಾಯ. ಡಯಾನಾ ಅವರ ಪಥ್ಯದಲ್ಲಿ ಇವರಿಗಿಂತ ಅವರ ತಾಯಿಗೆ ಹೆಚ್ಚು ಕಾಳಜಿಯಂತೆ. ಹಾಗಾಗಿಯೇ ಮನೆಯಲ್ಲಿ ಪಥ್ಯಾಹಾರ ಅನಿವಾರ್ಯ. ಜಂಕ್‌ ಫುಡ್‌ಗಳಿಗೆ ಮನೆಯಲ್ಲಿ ಅವಕಾಶವೇ ಇಲ್ಲ. ಚಾಕೊಲೇಟ್‌ ಹಾಗೂ ಚಿಪ್ಸ್‌ನ್ನು ಇಷ್ಟಪಡುವ ಡಯಾನಾ ಅಮ್ಮನ ಕಣ್ತಪ್ಪಿಸಿ ಇದನ್ನು ತಿನ್ನುತ್ತಾರೆ. ಸ್ನೇಹಿತರರೊಂದಿಗೆ ಹೊರಗಡೆ ಹೋದಾಗ ಡಯೆಟ್‌ನ್ನು ಮರೆಯುತ್ತಾರೆ. ಪ್ರಯಾಣದಲ್ಲಿಯೂ ಮೇಕಪ್‌ ಕಿಟ್‌ ಜೊತೆಗಿಟ್ಟುಕೊಳ್ಳುವ ಈ ಸುಂದರಿ ಪ್ರಯಾಣದ ಪ್ರಯಾಸ ದೂರವಾಗುವಷ್ಟು ನೀರು ಕುಡಿಯುತ್ತಾರೆ.

‘ನಾನು ಸ್ಪಾ ಅಥವಾ ಪಾರ್ಲರ್‌ಗಳಿಗೆ ಅಡಿಕ್ಟ್‌ ಆಗಿಲ್ಲ’ ಎನ್ನುವ ಈ ಚೆಲುವೆ ಆಗಾಗ್ಗೆ ಬಾಡಿ ಮಸಾಜ್‌ ಮೊರಹೋಗುತ್ತಾರೆ. ಯಾವಾಗಲೂ ಸುಗಂಧ ದ್ರವ್ಯ ಸಿಂಪಡಿಸಿಕೊಳ್ಳುವುದು ಇವರ ಸಿಗ್ನೇಚರ್‌ ಅಂತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry