ವಾಟ್ಸನ್‌ ಎಂಬ ‘ಯುವಮುದುಕ’!

7

ವಾಟ್ಸನ್‌ ಎಂಬ ‘ಯುವಮುದುಕ’!

Published:
Updated:
ವಾಟ್ಸನ್‌ ಎಂಬ ‘ಯುವಮುದುಕ’!

ಐದು ವರ್ಷಗಳು ಕಳೆದುಹೋದವು. ಇಂಗ್ಲೆಂಡ್‌ನ ನೆಲದಲ್ಲಿ ಶೇನ್ ವಾಟ್ಸನ್ ಆ್ಯಷಸ್ ಸರಣಿಯ ಕೊನೆಯ ಟೆಸ್ಟ್‌ ಪಂದ್ಯದ ಇನಿಂಗ್ಸ್‌ನಲ್ಲಿ 176 ರನ್ ಗಳಿಸಿದ ಸಂದರ್ಭ ಅದು. ಮೊನ್ನೆ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಒಡ್ಡಿದ್ದು ಸವಾಲೇ ಅಲ್ಲ ಅನ್ನುವ ರೀತಿ ಅವರು ಆಡಿದರಲ್ಲ; ಆಗ ನೆನಪಾದದ್ದು ಆ್ಯಷಸ್ ಸರಣಿಯ ಹಳೆಯ ಇನಿಂಗ್ಸ್‌.

ಜೂನ್ 17 ಬಂದರೆ ವಾಟ್ಸನ್‌ಗೆ 37 ತುಂಬುತ್ತದೆ. ಜುಲೈ 7ಕ್ಕೆ ಮಹೇಂದ್ರ ಸಿಂಗ್ ಧೋನಿ ವಯಸ್ಸೂ ಅಷ್ಟೇ ಆಗುತ್ತದೆ. ‘ಮುದುಕರ ತಂಡ’ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಗೆಲ್ಲುವಲ್ಲಿ ಅನುಭವದ ಕಾಣ್ಕೆ ದೊಡ್ಡದೆನ್ನುವುದನ್ನು ಎಂಥವರೂ ಒಪ್ಪಲೇಬೇಕು ಎಂಬಂತೆ ಅವರಿಬ್ಬರೂ ವರ್ತಿಸಿದರು.

ಯುವತ್ವದ ಹಿತ್ತಲಿನಲ್ಲಿ ನಿಂತು ಕೌಟುಂಬಿಕ ನೆಮ್ಮದಿಯನ್ನು ವಾಟ್ಸನ್‌ ಹುಡುಕತೊಡಗಿ ಆರು ವರ್ಷಗಳಾಗಿವೆ. ಹೀಗಾಗಿ ಐಪಿಎಲ್‌ ಫೈನಲ್‌ನಲ್ಲಿ ಅವರು ಗಳಿಸಿದ ಶತಕದಲ್ಲಿ ಅಡಗಿರಬಹುದಾದ ಮನೋಬಲ ದೊಡ್ಡದು.

2013ರಲ್ಲಿ ವಾಟ್ಸನ್‌ ಪದೇ ಪದೇ ಬಿಕ್ಕಳಿಸುತ್ತಿದ್ದರು. ನೆಟ್ಸ್‌ನಲ್ಲೇ ಕೂತು ಅತ್ತ ದಿನಗಳೂ ಇವೆ.

ನಡುರಾತ್ರಿ ಎದ್ದು ಕೂತು ತಲೆ ಮೇಲೆ ಕೈಹೊತ್ತಾಗ ಹೆಂಡತಿ ಲೀ ಒಂದು ಸಣ್ಣ ಡ್ರಿಂಕ್ ಮಾಡಿಕೊಟ್ಟು, ‘ಚಿಂತೆಬಿಡಿ’ ಎಂದು ಸಾಂತ್ವನ ಹೇಳಿದ್ದು ವಾಟ್ಸನ್‌ ನೆನಪಿನಲ್ಲಿ ಹಾಗೇ ಉಳಿದಿದೆ. ಆ ಆ್ಯಷಸ್‌ ಸರಣಿಯಲ್ಲಿ ಅವರು ಹೆಂಡತಿ ಹಾಗೂ ಮಗ ವಿಲ್‌ನನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು.

ಪಂದ್ಯ ಆಡಿ ದಣಿದ ಮೇಲೂ ರಾತ್ರಿ ಮಗನನ್ನು ಪಕ್ಕ ಮಲಗಿಸಿಕೊಳ್ಳುತ್ತಿದ್ದರು. ಅವನು ಹೊರಳಿದಾಗ ಇವರೂ ಕನಲುತ್ತಿದ್ದರು. ಅವನು ಅತ್ತಾಗ ಇವರ ಕಣ್ಣೂ ತುಂಬಿ ಬರುತ್ತಿತ್ತು. ಮಗನನ್ನು ಮಲಗಿಸಲು ಬೇಕಿದ್ದ ತಾಳ್ಮೆಯನ್ನೇ ಅವರು ಬ್ಯಾಟಿಂಗ್‌ಗೂ ಅಳವಡಿಸಿಕೊಂಡದ್ದು ಗಮನಾರ್ಹ.

‘ರಿಕಿ ಪಾಂಟಿಂಗ್ ತಪ್ಪನ್ನು ಹೆಚ್ಚಾಗಿ ಕ್ಷಮಿಸುತ್ತಿರಲಿಲ್ಲ. ಎಲ್ಲರೂ ಸದಾ ಕುದಿ ಬಿಂದುವಿನಲ್ಲಿ ಇರುತ್ತಿದ್ದರು.

ಆಸ್ಟ್ರೇಲಿಯಾ ಕ್ರಿಕೆಟ್ ಇದ್ದಕ್ಕಿದ್ದಂತೆ ಸ್ಥಿರತೆ ಕಳೆದುಕೊಂಡಿತು. ನಾನು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಲಾರಂಭಿಸಿದೆ. ಡರೆನ್ ಲೆಹ್ಮನ್ ಪಾಠ ಹೇಳಿಕೊಡಲು ಬಂದರು.

ಅವರಾಡಿದ ಮೊದಲ ಮಾತು–‘ಇನ್ನು ನಿಮ್ಮ ಜೀವನದ ಮಹತ್ವದ ದಿನಗಳು ಎದುರಲ್ಲಿವೆ ಎಂದೇ ಭಾವಿಸಿ’. ಅದು ನನ್ನಲ್ಲಿ ನಾಟಿತು. ನಾನು ಪದೇ ಪದೇ  ಎಲ್‌ಬಿಡಬ್ಲ್ಯು ಔಟಾಗುತ್ತಿದ್ದೆ.

ದೇಹತೂಕ ಕೂಡ ಹೆಚ್ಚಾಗಿತ್ತು. ಪ್ಯಾಡ್‌ನ ಮುಂದೆ ಬ್ಯಾಟ್‌ ತರುವ ಹೊತ್ತಿಗೆ ಚೆಂಡು ಅದಕ್ಕೆ ಬಡಿಯುತ್ತಿದ್ದ ವೈಖರಿ ಅರ್ಥ ಮಾಡಿಕೊಳ್ಳಲು ಹೆಣಗಾಡಿದ್ದೆ. ಎಷ್ಟು ಸಲ ವಿಡಿಯೊಗಳನ್ನು ನೋಡಿದರೂ ತಪ್ಪು ತಿದ್ದಿಕೊಳ್ಳಲು ಆಗಿರಲಿಲ್ಲ. ಅದು ಮನೋಬಲದ ಪ್ರಶ್ನೆ.

ಡರೆನ್‌ ನನಗೆ ಸಹಾಯ ಮಾಡಿದರು. ನನ್ನ ಹೆಂಡತಿ ಆ ಕಷ್ಟದ ದಿನಗಳಲ್ಲಿ ನೀಡಿದ ನೆರವನ್ನೂ ಮರೆಯಲಾರೆ. ಸ್ನೇಹಿತರ ಸಲಹೆಯ ಇ–ಮೇಲ್‌ಗಳನ್ನು ಅವಳು ಜೋರಾಗಿ ಓದುತ್ತಿದ್ದಳು. ನನ್ನ ತಪ್ಪನ್ನು ಸೂಚಿಸುವ ವಿಡಿಯೊಗಳನ್ನು ತೋರಿಸುತ್ತಿದ್ದಳು.

ನಿಧ ನಿಧಾನವಾಗಿ ನಾನು ತಿದ್ದಿಕೊಳ್ಳಲಾರಂಭಿಸಿದೆ. ಆ್ಯಷಸ್ ಸೋತರೂ ನಾನು ಗೆದ್ದಿದ್ದೆ. ಆ ಶತಕದಿಂದ ನಾನು ಕಳೆದುಕೊಂಡಿದ್ದ ತಂತ್ರಗಳನ್ನೆಲ್ಲ ಮರಳಿ ಪಡೆದೆ’– ವಾಟ್ಸನ್ ಈ ಮಾತು ತುಂಬಾ ಮುಖ್ಯ.

ಬ್ಯಾಟಿಂಗ್ ಮೋಡಿಗಾರ ಮೈಕಲ್ ಕ್ಲಾರ್ಕ್ ಹಾಗೂ ವಾಟ್ಸನ್ ನಡುವೆ ಕುಹಕ ನಗೆ ವಿನಿಮಯವಾಗುತ್ತಿದ್ದುದನ್ನು ಅನೇಕರು ಹಿಂದೆ ಟೀಕಿಸಿದ್ದರು.

ಇಬ್ಬರು ಅನುಭವಿಗಳ ನಡುವಿನ ಅನುಸಂಧಾನ ಅದು ಇರಬಹುದು ಎಂದು ವಾದಿಸಿದ್ದವರೂ ಇದ್ದರು.

ಈಗ ಅನುಭವದ ಗೆಲುವು ಎಂಥದು ಎನ್ನುವುದು ರುಜುವಾತಾಗಿದೆ. ವಾಟ್ಸನ್ ಎಂಬ ‘ಮುದುಕ’ನ ಶತಕದ ಸವಿಯನ್ನು ಧೋನಿ ಎಂಬ ಮತ್ತೊಬ್ಬ ‘ಮುದುಕ’ ಆಸ್ವಾದಿಸಿದ ಚಿತ್ರ ಕಣ್ಣಮುಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry