ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಮ್ಮದಿಯ ನಾಳೆಗೆ ಸುಂದರ ಪರಿಸರ ಕಟ್ಟೋಣ...

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಬಸಪ್ಪನಿಗೆ 70 ರ ಆಸುಪಾಸು, ಇದ್ದೊಬ್ಬ ಮಗಳಿಗೆ ಮದುವೆ ಮಾಡಿ ಕೊಟ್ಟು 20 ವರ್ಷ ಕಳೆದಿವೆ. ಹೆಂಡತಿ ಕಾಲವಾದ ನಂತರ ಸಹಜವಾಗಿಯೇ ಬಸಪ್ಪ ಹುಬ್ಬಳ್ಳಿಯಲ್ಲಿದ್ದ ಮಗಳಮನೆಯ ಕಡೆ ಮುಖ ಮಾಡಿದ್ದಾನೆ. ಒಂದು ಮುಂಜಾನೆ ಹಳೇಬಸ್‌ಸ್ಟ್ಯಾಂಡಿನಲ್ಲಿ ಇಳಿದವನಿಗೆ, ಕತ್ತೆತ್ತಿದಷ್ಟೂ ಎತ್ತರಕ್ಕೆ ಕಾಣುವ ರಾಕ್ಷಸ ಕಟ್ಟಡಗಳು, ಹಕ್ಕಿಗಳ ಚಿಲಿಪಿಲಿಗೆ ಪರ್ಯಾಯವಾಗಿರುವ ಗಾಡಿಗಳ ಸದ್ದು, ಮಾರ್ಗದುದ್ದಕ್ಕೂ ಅಸ್ತವ್ಯಸ್ತವಾಗಿ ಬಿದ್ದಿರುವ ಜಲ್ಲಿ ಕಲ್ಲಿನ ರಾಶಿ, ಮರಳು, ಕಬ್ಬಿಣದ ಸರಳುಗಳು, ಗಾಳಿಯಲ್ಲೇನೋ ನಿಶ್ವಾಸತೆ. ಹಚ್ಚ ಹಸುರಿನ ಹಳ್ಳಿಯಲ್ಲಿ ಬೆಳೆದ ಬಸಪ್ಪನಿಗೆ ಉಸಿರುಗಟ್ಟುವಂತಾಗುತ್ತಿದೆ...

ಇದು ಕೇವಲ ಬಸಪ್ಪನ ಕತೆಯಲ್ಲ, ಇಂದಿಗೂ ನಮ್ಮ ಪರಿಚಯಸ್ಥ ವಯೋವೃದ್ಧರು 'ಈ ಜಾಗದಲ್ಲಿ ಕೆರೆಯಿತ್ತು, ಇಲ್ಲಿ ಮಾವಿನ ತೋಪಿತ್ತು, ಇದು ಸಂಪೂರ್ಣ ಕಾಡಾಗಿತ್ತು' ಎನ್ನುವಾಗ ಅವರ ಧಾಟಿಯಲ್ಲಿನ ನಿಸ್ಸಹಾಯಕತೆ ನಮ್ಮನ್ನು ಮುಜುಗರಕ್ಕೀಡು ಮಾಡುವಂಥದ್ದು. ಅಭಿವೃದ್ಧಿಯ ಗೀಳಿಗೆ ಬಿದ್ದಿರುವ ನಮ್ಮ ಪೀಳಿಗೆ ಅನಾಹುತಗಳಿಗೆ ನಾಂದಿಯಾಗುತ್ತಿದೆ. ನಮ್ಮನ್ನು ಸಲಹುತ್ತಿರುವ ಪರಿಸರವನ್ನು ನಾವು ನರಕ ಕೂಪವನ್ನಾಗಿ ಮಾರ್ಪಾಡು ಮಾಡುತ್ತಿದ್ದೇವೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಗಣಿಗಾರಿಕೆಗಳು, ಅದೆಷ್ಟೋ ನಿಷ್ಪ್ರಯೋಜಕ ಡ್ಯಾಂಗಳು ಪ್ರಕೃತಿಯನ್ನು ಬತ್ತುವ ಸೆಲೆಗಳನ್ನಾಗಿ ಪರಿವರ್ತಿಸುತ್ತಿವೆ. ಅವಳಿ ನಗರಗಳಲ್ಲಿ ದಶಕದ ಹಿಂದೆ ಇಲ್ಲಿ ಯಥೇಚ್ಛವಾಗಿದ್ದ ಹೊಲಗದ್ದೆಗಳು ಇಂದು ಕಾಂಕ್ರೀಟೀಕರಣಗೊಂಡಿವೆ. ಪ್ರಗತಿಯ ನಾಗಾಲೋಟದಲ್ಲಿ 'ಪರಿಸರ ಉಳಿಸಿ' ಎನ್ನುವ ಘೋಷಣೆಗಳನ್ನು ಅರಚುತ್ತ ತಿರುಗುತ್ತಿದ್ದೇವೆಯೇ ಹೊರತು ಇದನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವಲ್ಲಿ ಸೋಲುತ್ತಿದ್ದೇವೆ.

ಇನ್ನೇನು ಪರಿಸರ ದಿನ ನಾಳೆಯೇ ಇದೆ... ಗಿಡಗಳನ್ನು ನೆಡುವ ಭಂಗಿಯಲ್ಲೋ, ಹಸಿರು ವಸ್ತ್ರ ಧರಿಸಿಯೋ ಕೆಲವರು ಫೋಟೊ ಕ್ಲಿಕ್ಕಿಸಿ ಅದನ್ನು ಯಾವುದೋ ಯುದ್ಧ ಗೆದ್ದಂಥಾ ಸಂಭ್ರಮದಲ್ಲಿ ಪ್ರಚುರಪಡಿಸುವುದು ಎಷ್ಟು ವಿಡಂಬನಾತ್ಮಕವಲ್ಲವೇ? ಇವರು ಜೂನ್ 5 ಕ್ಕೆ ನೆಟ್ಟ ಗಿಡಗಳು ಜೂನ್ 7 ಕ್ಕೆ ಸೊರಗಿರುತ್ತವೆ ಹಾಗೆಂದು, ಗಿಡ ನೆಡುವುದು ಒಳ್ಳೆಯ ಚಿಂತನೆಯೇ ಆದರೆ ಇವುಗಳ ಲಾಲನೆ, ಪಾಲನೆ, ರಕ್ಷಣೆಯ ಜವಾಬ್ದಾರಿ ನಮ್ಮ ತಲೆಯ ಮೇಲೆಯೇ ಇದೆ ಎನ್ನುವುದನ್ನು ನಾವು ಮರೆತಂತಿದೆ. ಬಹುಷಃ ನಾನು ಅಂದು ನೆಟ್ಟ ಗಿಡ ಇಂದು ಮರವಾಗಿದೆ ಎಂದು ಯಾರೂ ಹ್ಯಾಷ್ ಟ್ಯಾಗ್ ಬಳಸಿ ಪ್ರಚಾರ ಮಾಡಿದಂತಿಲ್ಲ.

ನಮ್ಮ ದೇಶದಲ್ಲಿ ಜನಸಂಖ್ಯೆಯಷ್ಟೇ ವೇಗದಲ್ಲಿ ವಾಹನ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಅನಿವಾರ್ಯತೆಗೆ ವಾಹನಗಳನ್ನು ಖರೀದಿಸುವವರಿಗಿಂತಲೂ ಐಷಾರಾಮಿ ಬದುಕಿಗಾಗಿ ಖರೀದಿಸುವವರೇ ಹೆಚ್ಚು. ಹಾಗಿದ್ದರೆ ಇವರು ಪ್ರಜ್ಞಾವಂತರಲ್ಲವೇ? ವಾಸ್ತವವಾಗಿ ಇವರಿಗೆ ಪರಿಸರದ ಬಗ್ಗೆ ದುಪ್ಪಟ್ಟು ಕಾಳಜಿ ಇರಬೇಕು.

ಈ ನಿಟ್ಟಿನಲ್ಲಿ ಮಾಲಿನ್ಯದಿಂದ ಮುಕ್ತಿ ಪಡೆಯಲು ಇತ್ತೀಚೆಗೆ 'ಹಿಮ್ಮುಖ ವಲಸೆ' ಎಂಬ ಹೊಸ ತತ್ವವೊಂದು ಹುಟ್ಟಿಕೊಂಡಿದೆ. ವರ್ಷಗಳ ಹಿಂದೆ ಜೀವನವನ್ನರಸಿ ಪಟ್ಟಣಗಳಿಗೆ ಹಾರಿದವರು ಪುನಃ ಹೊಲ ಗದ್ದೆಗಳಲ್ಲಿ ಜೀವನಾಂಶ ಕಾಣಲು ಗೂಡಿಗೆ ಮರಳುತ್ತಿದ್ದಾರೆ. ಇದು ನೆಮ್ಮದಿಯ ನಾಳೆಗೊಂದು ಆಶಾದಾಯಕ ಭರವಸೆ.

ಇದರ ಜೊತೆಜೊತೆಗೆ ಪ್ರತಿಯೊಬ್ಬರಲ್ಲೂ ಪರಿಸರದ ಮೇಲಿನ ಪ್ರೀತಿ-ಕಾಳಜಿ ಹೆಚ್ಚಬೇಕಿದೆ. ಇದು ಸ್ವಯಂಪ್ರೇರಣೆಯಿಂದ ಮಾತ್ರ ಸಾಧ್ಯವೇ ಹೊರತು ಯಾವ ಒತ್ತಾಯ, ಮನವರಿಕೆಗಳು ಸಹಾಯ ಮಾಡಲಾರವು. ನಾವು ಈಗಲಾದರೂ ಅಭಿವೃದ್ಧಿ-ಪ್ರಕೃತಿ ಇವೆರಡನ್ನೂ ತೂಗಿಸಿ ನಡೆಯುವ ಹೆಜ್ಜೆಗಳನ್ನಿಡುತ್ತ ಸಾಗಬೇಕು. ಇದಕ್ಕಾಗಿ ಸಾಲು ಮರದ ತಿಮ್ಮಕ್ಕನಾಗಬೇಕೆಂದೇನಿಲ್ಲ. ನಿರ್ಮಲ ಮನಸ್ಸಿನಿಂದ ಪ್ರತೀ ಹೆಜ್ಜೆಯಲ್ಲೂ ಪರಿಸರದ ಕುರಿತು ಒಮ್ಮೆ ಯೋಚಿಸಿದರೆ ಸಾಕು. ನಮ್ಮ ಪೂರ್ವಜರಿಗೆ ಅವರಿದ್ದ ವಾತಾವರಣವನ್ನು ಸೃಷ್ಟಿಸಿ ಕೊಡಲಾಗದಿದ್ದರೂ ಮುಂಬರುವ ಪೀಳಿಗೆಗಾದರೂ ಸುಂದರ-ಸ್ವಚ್ಛಂದ ಪರಿಸರ ಕಟ್ಟುತ್ತಾ ವಿಶ್ವಾಸಯುತ ಭವಿಷ್ಯದ ಕನಸು ಕಾಣಬಹುದು.

– ವಿಭಾ ಡೋಂಗ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT