ಇದು ಐವತ್ತರ ಕೂಸು...

7

ಇದು ಐವತ್ತರ ಕೂಸು...

Published:
Updated:
ಇದು ಐವತ್ತರ ಕೂಸು...

2001 ಮಾರ್ಚ್‌ 31ಕ್ಕೆ ನಾನು ವಿ.ಆರ್.ಎಸ್. ಪಡೆದು ಬ್ಯಾಂಕ್ ಮ್ಯಾನೇಜರ್ ವೃತ್ತಿಗೆ ವಿದಾಯ ಹೇಳಿದೆ. ಆಗ ಇನ್ನೂ ಹನ್ನೊಂದು ವರ್ಷಗಳ ಸರ್ವೀಸ್ ಉಳಿದಿತ್ತು. ಹಸು ಎಮ್ಮೆಗಳಿಗೆ ಸಾಲ ಕೊಟ್ಟೂ ಕೊಟ್ಟೂ ಸಾಕಾಗಿತ್ತು; ಉಳಿದ ಸಮಯವನ್ನು ಸಾರ್ಥಕವಾಗಿ ಕಳೆಯಬೇಕೆಂಬ ಹಂಬಲವಿತ್ತು.

ಸಮೂಹ ಸಂವಹನ ಮಾಧ್ಯಮದ ಬಗ್ಗೆ ಸ್ವಲ್ಪ ಆಳವಾಗಿ ಅಭ್ಯಾಸ ಮಾಡಲು ನೆರವಾಗಿದ್ದು ಭಾರತೀಯ ವಿದ್ಯಾಭವನದ ಸ್ನಾತಕೋತ್ತರ ಕನ್ನಡ ಪತ್ರಿಕೋದ್ಯಮ. ಜುಲೈ 2001ರಲ್ಲಿ ನಾನು ವಿದ್ಯಾರ್ಥಿಯಾಗಿ ಬೆಂಗಳೂರಿನ ಭಾರತೀಯ ವಿದ್ಯಾಭವನದ ಕಾಲೇಜಿಗೆ ದಾಖಲಾದೆ. ಮೊದಲ ದಿನ ತರಗತಿಗೆ ಬಂದಾಗ ಉಳಿದ ವಿದ್ಯಾರ್ಥಿಗಳು ನಾನು ಪಾಠ ಮಾಡಲು ಬಂದಿರಬಹುದು ಎಂದು ತಪ್ಪು ತಿಳಿದಿದ್ದರು. ಆದರೆ ನಾನು ವಿದ್ಯಾರ್ಥಿಯಾಗಿ ಬಂದೆ ಎಂದಾಗ ಹಲವರಿಗೆ ಆಶ್ಚರ್ಯ. ಭಾರತೀಯ ವಿದ್ಯಾಭವನದ ಬಗ್ಗೆ ನಾನು ಕೇಳಿದ್ದೆ. ‘ಪ್ರಜಾವಾಣಿ’ಯ ಜಿ. ಎನ್. ರಂಗನಾಥ ರಾಯರ ನೇತೃತ್ವದಲ್ಲಿ ಕನ್ನಡ ಪತ್ರಿಕೋದ್ಯಮ ತರಗತಿಗಳು ನಡೆಯುತ್ತಿದ್ದವು. ಪತ್ರಿಕೋದ್ಯಮ ಇತಿಹಾಸ, ಸಂವಹನ ಮತ್ತು ಪತ್ರಿಕೋದ್ಯಮ, ಬರವಣಿಗೆ ಕ್ರಮ, ಸಂಪಾದಕೀಯ, ನುಡಿಚಿತ್ರ, ತನಿಖಾ ವರದಿ – ಇತ್ಯಾದಿಗಳನ್ನು ಹಂತ ಹಂತವಾಗಿ ವಿವಿಧ ಪ್ರಾಧ್ಯಾಪಕರು ನಮಗೆ ಬೋಧಿಸಿದರು. ನನ್ನ ತರಗತಿಯಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿಗಳಿದ್ದರು.

ವಾರಕ್ಕೆ ಐದು ದಿನ ಬೆಳಿಗ್ಗೆ 7-45 ರಿಂದ 9-15ರವರೆಗೆ ನಡೆಯುತ್ತಿದ್ದ ತರಗತಿಗಳು ಎಲ್ಲರಿಗೂ ಅನುಕೂಲಕರವಾಗಿತ್ತು. ತರಗತಿ ಮುಗಿಸಿಕೊಂಡು ಬೇರೆ ಕಾಲೇಜುಗಳಿಗೆ ಹೋಗುವವರು, ಕೆಲಸಕ್ಕೆ ಹೋಗುವವರೂ ನಮ್ಮ ಬ್ಯಾಚ್‌ನಲ್ಲಿ ಇದ್ದರು. ಇಷ್ಟು ವರ್ಷ ಪತ್ರಿಕೋದ್ಯಮದ ಬಗ್ಗೆ ವಿವರವಾಗಿ ಓದಲಾಗಲಿಲ್ಲವಲ್ಲ ಅನಿಸುವಷ್ಟು ವಿಷಯಗಳನ್ನು ಅಲ್ಲಿ ಕಲಿತುಕೊಳ್ಳುತ್ತಿದ್ದೆವು. ಜಿ. ಎನ್. ರಂಗನಾಥ ರಾಯರು, ಉದಯವಾಣಿಯ ಎ. ಎಂ. ಸುರೇಶ್, ಅಶೋಕ್‍ ಕುಮಾರ್, ಪ್ರಜಾವಾಣಿಯ ಅರ್ಜುನದೇವ ಮೊದಲಾದವರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.

ಇದರ ಮಧ್ಯೆ ನುರಿತವರಿಂದ ದತ್ತಿ ಉಪನ್ಯಾಸಗಳೂ ನಡೆಯುತ್ತಿದ್ದವು. ಭಾರತೀಯ ವಿದ್ಯಾಭವನದಲ್ಲಿ ಕೇವಲ ಪತ್ರಿಕೋದ್ಯಮ ಮಾತ್ರವಲ್ಲ, ಇತರೆ ಅನೇಕ ತರಗತಿಗಳು ನಡೆಯುತ್ತಿದ್ದವು. ಕಾಲೇಜಿನಲ್ಲಿ ಬಿಡುವಿದ್ದಾಗ ಲೈಬ್ರರಿಯಲ್ಲಿ ದೊರೆಯುವ ಮಾಹಿತಿಗಳನ್ನು ಗಮನಿಸುತ್ತಿದ್ದೆ. ಇಷ್ಟು ಪ್ರಸಿದ್ಧಿಯಾದ ಕಾಲೇಜಿನಲ್ಲಿ ನಾನು ಓದುತ್ತಿದ್ದೇನೆ ಎಂದು ನನಗೆ ಹೆಮ್ಮೆ ಎನಿಸಿತು.

2001-02ರಲ್ಲಿ ತರಗತಿ ತೆಗೆದುಕೊಳ್ಳುತ್ತಿದ್ದ ಪ್ರಾಧ್ಯಾಪಕರು ಸ್ವಂತ ಅನುಭವದ ಆಧಾರದ ಮೇಲೆಯೇ ಹಲವು ವಿಚಾರಗಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದರು. ಅವರು ಹೇಳುತ್ತಿದ್ದ ಅನೇಕ ಉಪಯುಕ್ತ ವಿಚಾರಗಳು ಪಠ್ಯಪುಸ್ತಕಗಳಲ್ಲಿ ಸಿಗುತ್ತಿರಲಿಲ್ಲ.

ಅರ್ಜುನದೇವ ಅವರು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದವರು. ಅದರಲ್ಲೂ ಕ್ರೀಡಾಸುದ್ದಿಗೆ ಸಂಬಂಧಪಟ್ಟಂತೆ ಅವರ ಅನುಭವ ಅಪಾರ. ಕ್ರೀಡಾಸುದ್ದಿ ಆಕರ್ಷಕವಾಗಿ ಬರೆಯುವುದು ಹೇಗೆಂದು ಅವರು ವಿವರಿಸುತ್ತಿದ್ದರು. ಮ್ಯಾಚ್ ಮುಗಿದ ಮರುದಿನ ದಿನಪತ್ರಿಕೆ ಬರುತ್ತದೆ. ಓದುಗ ಇಡೀ ದಿನ ಕುಳಿತು ನೋಡಿರುತ್ತಾನೆ. ಮರುದಿನ ಅದೇ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸುವಾಗ ಯಾವ ರೀತಿ ಜಾಗ್ರತೆ ವಹಿಸಬೇಕು, ಯಾವ ರೀತಿಯ ಪದಗಳನ್ನು ಬಳಸಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸುತ್ತಿದ್ದರು.

ಈಗ ಜಗತ್ತಿನಾದ್ಯಂತ ಪತ್ರಿಕೋದ್ಯಮ ಕ್ಷೇತ್ರ ತ್ವರಿತಗತಿಯಲ್ಲಿ ಬದಲಾವಣೆಯನ್ನು ಕಾಣುತ್ತಿದೆ. ಹಿಂದೆ ನಾವು ಓದಿದ ಪತ್ರಿಕೋದ್ಯಮದ ವಿಚಾರಗಳು ಇಂದು ಪ್ರಸ್ತುತ ಆಗುತ್ತಿಲ್ಲ ಎಂಬ ಮಟ್ಟಿಗೆ ಅದು ಬದಲಾವಣೆಗೊಂಡಿದೆ. ಹಾಗಾಗಿ ಪತ್ರಿಕೋದ್ಯಮವನ್ನು ಕಲಿಸುವ ತರಗತಿಗಳೂ ಅದಕ್ಕೆ ಪೂರಕವಾಗಿ ಬದಲಾಗಬೇಕಿದೆ. ಇದೇ ಉದ್ದೇಶದಿಂದ ಪತ್ರಿಕೋದ್ಯಮದಲ್ಲಿ ಇಂದು ಪ್ರಸ್ತುತವಾಗಿರುವ ಹಲವು ಹೊಸ ವಿಚಾರಗಳನ್ನು ಭಾರತೀಯ ವಿದ್ಯಾಭವನ ಪತ್ರಿಕೋದ್ಯಮ ಪಠ್ಯದಲ್ಲಿ ಸೇರಿಸಿದೆ.

ಕಾಲೇಜಿನ ಇತಿಹಾಸ

1938ರಲ್ಲಿ ಡಾ. ಕೆ. ಎಂ. ಮುನ್ಷಿಯವರ ಕನಸಿನಂತೆ ರೂಪುಗೊಂಡ ವಿದ್ಯಾಭವನದ ಬೆಂಗಳೂರು ಕೇಂದ್ರ 1965ರಲ್ಲಿ ಆರಂಭವಾಯಿತು. ಅಂದಿನ ಭಾರತದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಗಳು ಇದನ್ನು ಉದ್ಘಾಟಿಸಿದ್ದರು. ಸಾಂಸ್ಕೃತಿಕ ಪ್ರಸರಣ, ಮುದ್ರಣ, ದಾಖಲಾತಿ, ಅಧ್ಯಾಪನ – ಹೀಗೆ ಹಲವು ರಂಗಗಳಲ್ಲಿ ಸಕ್ರಿಯವಾಗಿರುವ ವಿದ್ಯಾಭವನದ ಬೆಂಗಳೂರು ಕೇಂದ್ರದ ಬೆಳವಣಿಗೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್, ಎಸ್. ನಿಜಲಿಂಗಪ್ಪ, ಆರ್.ಆರ್. ದಿವಾಕರ್, ಎಂ.ಪಿ.ಎಲ್. ಶಾಸ್ತ್ರಿ, ಮತ್ತೂರು ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರ ಕೊಡುಗೆ ಇದೆ.

ಭಾರತೀಯ ವಿದ್ಯಾಭವನದ ಅಂಗಸಂಸ್ಥೆಯಾಗಿ ರೂಪುಗೊಂಡಿದ್ದು ಹರಿಲಾಲ್ ಭಗವತಿ ಕಾಲೇಜ್. ವೃತ್ತಿಪರ ಕೋರ್ಸ್‌ಗಳಿಗೆ ಇಲ್ಲಿ ಮಹತ್ವ ನೀಡಲಾಗುತ್ತದೆ. ಕರ್ನಾಟಕಕ್ಕೂ ಇದು ಬೇಕು ಎಂಬ ಕನಸನ್ನು ಕಂಡವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕೀಯ ಮುತ್ಸದ್ಧಿ ಆರ್.ಆರ್. ದಿವಾಕರ್. ಅವರ ಪ್ರಯತ್ನದ ಫಲವಾಗಿ 1968-69ರ ಸಾಲಿನಿಂದ ಪತ್ರಿಕೋದ್ಯಮ ತರಗತಿಗಳು ಆರಂಭವಾದವು. ಅಂದು ಉಪರಾಷ್ಟ್ರಪತಿಗಳಾಗಿದ್ದ  ವಿ. ವಿ. ಗಿರಿ ಈ ಕೋರ್ಸ್‌ ಅನ್ನು ಉದ್ಘಾಟಿಸಿದ್ದರು. ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದೇ ಗುರು

ತಿಸಲ್ಪಟ್ಟಿರುವ ನಾಡಿಗ ಕೃಷ್ಣಮೂರ್ತಿ ಇದರ ಮೊದಲ ಸಾರಥಿ.

ಭಾರತದಲ್ಲಿಯೇ ಮೊಟ್ಟಮೊದಲ ಸಲ ಎಲ್ಲಾ ಪತ್ರಿಕಾ ವಿಷಯಗಳನ್ನು ಒಳಗೊಂಡ ಪದವಿ ಶಿಕ್ಷಣ ನೀಡಿದ ಕೀರ್ತಿ ಮೈಸೂರು ವಿಶ್ವವಿದ್ಯಾಲಯದ್ದು. 1953ರಲ್ಲಿ ಅಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಕೂಡ ಆರಂಭವಾಯಿತು. ನಾಡಿಗ ಕೃಷ್ಣಮೂರ್ತಿಯವರು ಅದರ ಮುಖ್ಯಸ್ಥರಾಗಿ ಮಹತ್ತರ ಹೊಣೆಗಾರಿಕೆಯನ್ನು ನಿರ್ವಹಿಸಿದರು. ಭಾರತೀಯ ವಿದ್ಯಾಭವನ ಪತ್ರಿಕೋದ್ಯಮದ ತರಗತಿಗಳನ್ನು ಆರಂಭಿಸಿದಾಗಲೂ ಅವರದೇ ಮಾರ್ಗದರ್ಶನ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಪತ್ರಿಕೋದ್ಯಮ ತರಗತಿಗಳನ್ನು ಶುರು ಮಾಡಿದ ಹೆಗ್ಗಳಿಕೆ ಭಾರತೀಯ ವಿದ್ಯಾಭವನಕ್ಕೆ ಸಲ್ಲುತ್ತದೆ. 1968-69ರಲ್ಲಿ ಶುರುವಾದ ಈ ಕಾಲೇಜು 50 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈಗ ಪ್ರಸಾರ ಭಾರತಿಯ ಅಧ್ಯಕ್ಷರಾಗಿರುವ ಅರಕಲಗೂಡು ಸೂರ್ಯನಾರಾಯಣ ರಾಯರು ಪತ್ರಿಕೋದ್ಯಮ ತರಗತಿಯ ಮೊದಲ ಬ್ಯಾಚ್ ವಿದ್ಯಾರ್ಥಿಯಾಗಿದ್ದವರು. ಭಾರತೀಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟವಾದ ಸ್ಥಾನವನ್ನು ಪಡೆದಿರುವ ಡೆಕ್ಕನ್ ಹೆರಾಲ್ಡ್‌ನ ‘ಓವರ್ ದಿ ಕಪ್ ಆಫ್ ಟೀ’ಯಿಂದ ಹೆಸರಾಗಿದ್ದ ಪೋತನ್ ಜೋಸೆಫ್, ಆರಂಭಿಕ ವರ್ಷಗಳಲ್ಲಿ ಈ ಪತ್ರಿಕೋದ್ಯಮ ಕಾಲೇಜು ಸುಸಜ್ಜಿತವಾಗಿ ರೂಪುಗೊಳ್ಳಲು ಕಾರಣಕರ್ತರಾದರು. ಅವರ ಮಾರ್ಗದರ್ಶನಲ್ಲಿ ಅನೇಕ ಪ್ರಸಿದ್ಧ ಪತ್ರಕರ್ತರು ಈ ಕಾಲೇಜಿನಿಂದ ರೂಪುಗೊಂಡು ದೇಶಾದ್ಯಂತ ವಿವಿಧ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದರು.

1948ರಿಂದ 1984ರವರೆಗೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದ ಕೆ. ಶೇಷಾದ್ರಿ ಅವರು 1985ರಲ್ಲಿ ಈ ಕಾಲೇಜಿನ ಮುಖ್ಯಸ್ಥರಾದರು. ಅವರ ಆಡಳಿತದ ಕಾಲವನ್ನು ‘ಚಿನ್ನದ ಕಾಲ’ವೆಂದು ಪರಿಗಣಿಸಲಾಗಿದೆ. ಪಠ್ಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿ ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಕೌಶಲಗಳನ್ನು ನೀಡಲು ಅವರು ಅನೇಕ ಯೋಜನೆಗಳನ್ನು ರೂಪಿಸಿದರು.

ಇಲ್ಲಿಯವರೆಗೆ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪತ್ರಿಕೋಧ್ಯಮದ ತರಗತಿಗಳು ನಡೆಯುತ್ತಿದ್ದವು. ರಾಷ್ಟ್ರೀಯ ಪತ್ರಿಕೋದ್ಯಮದಲ್ಲಿ ಕೂಡ ಹೆಸರು ಮಾಡಿದ್ದ ನಾರಾಯಣ್ ಅವರು ಭಾರತೀಯ ವಿದ್ಯಾಭವನದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕನ್ನಡ ಭಾಷೆಯಲ್ಲಿ ಕೂಡ ತರಗತಿಗಳನ್ನು ಆರಂಭಿಸುವ ಪ್ರಸ್ತಾಪ ಇಟ್ಟರು. ಹಿರಿಯ ಪತ್ರಕರ್ತ ಜಿ. ಎನ್. ರಂಗನಾಥ ರಾವ್ ಕನ್ನಡ ಪತ್ರಿಕೋದ್ಯಮದ ಮುಖ್ಯಸ್ಥರಾದರು. ಅವರ ಅವಧಿಯಲ್ಲಿಯೇ ನಮ್ಮಂಥವರೂ ಪತ್ರಿಕೋದ್ಯಮದ ಅರಿವನ್ನು ಪಡೆಯುವುದು ಸಾಧ್ಯವಾಗಿದ್ದು.

ಬದಲಾದ ತರಗತಿಗಳು

2014ರಲ್ಲಿ ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಎನ್. ಎಸ್. ಶ್ರೀಧರಮೂರ್ತಿ ಈ ವಿಭಾಗದ ನಿರ್ದೇಶಕರಾದರು. ಅವರು ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ಕೋರ್ಸಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಮುದ್ರಣ ಮಾಧ್ಯಮದಂತೆ, ವಿದ್ಯುನ್ಮಾನ ಮಾಧ್ಯಮ ಮತ್ತು ಕಾರ್ಪೋರೇಟ್ ಮಾಧ್ಯಮದ ಕುರಿತು ಈಗ ಈ ವಿಭಾಗದಲ್ಲಿ ಬೋಧಿಸಲಾಗುತ್ತದೆ. ವೆಬ್ ಜರ್ನಲಿಸಂ, ಇವೆಂಟ್ ಮ್ಯಾನೇಜ್‍ಮೆಂಟ್, ಸೋಷಿಯಲ್ ಮೀಡಿಯಾ ಮ್ಯಾನೇಜ್‍ಮೆಂಟ್, ಸೈಬರ್ ಲಾ – ಹೀಗೆ ಹಲವು ವಿನೂತನ ವಿಷಯಗಳನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳನ್ನು ಹೊಸ ಯುಗ ಸವಾಲುಗಳಿಗೆ ಸಜ್ಜುಗೊಳಿಸಲಾಗುತ್ತಿದೆ.

ಎಸ್. ಆರ್. ವಿಜಯಶಂಕರ್, ಕೆ. ಸತ್ಯನಾರಾಯಣ, ಎನ್.ವಿದ್ಯಾಶಂಕರ್, ಹಂಸಲೇಖ, ಟಿ. ಎಸ್. ನಾಗಾಭರಣ, ಪಿ. ಶೇಷಾದ್ರಿ, ಶ್ರೀಪತಿ ಮಂಜನಬೈಲು – ಹೀಗೆ ಹಲವು ಪರಿಣತರು ವಿಶೇಷ ತರಗತಿಗಳನ್ನು ನಡೆಸಿಕೊಡುತ್ತಿದ್ದಾರೆ. ಇದರ ಜೊತೆಗೆ ಆ್ಯಂಕರಿಂಗ್‌, ಎಡಿಟಿಂಗ್, ಪೋಟೊಗ್ರಫಿ, ನಿರ್ದೇಶನ, ಚಿತ್ರಕಥೆ-ಸಂಭಾಷಣೆ-ಚಿತ್ರಗೀತೆಗಳ ರಚನೆಗಳ ಕುರಿತು ಎರಡು ತಿಂಗಳ ಅಲ್ಪಾವಧಿ ಕೋರ್ಸ್‍ಗಳೂ ನಡೆಯುತ್ತಿವೆ.

ಭಾರತೀಯ ವಿದ್ಯಾಭವನ ನಿರ್ದೇಶಕರಾಗಿದ್ದ ಮತ್ತೂರು ಕೃಷ್ಣಮೂರ್ತಿಗಳು ಈ ಕಾಲೇಜಿನ ಬೆಳವಣಿಗೆಯಲ್ಲಿ ಸಾಕಷ್ಟು ಆಸಕ್ತಿಯನ್ನು ವಹಿಸಿದ್ದರು. ಈಗ ನಿರ್ದೇಶಕರಾಗಿರುವ ಎಚ್. ಎನ್. ಸುರೇಶ್‍ರವರು ಅದನ್ನು ಇನ್ನಷ್ಟು ಬಹುಮುಖಿಯಾಗಿಸಿದ್ದಾರೆ. ಪತ್ರಿಕೋದ್ಯಮದಿಂದ ಹಿಡಿದು ಭಗವದ್ಗೀತೆ, ಮ್ಯಾನೇಜ್‍ಮೆಂಟ್, ಮನಃಶಾಸ್ತ್ರ, ಕಥಕ್, ಕರ್ನಾಟಕಿ ಮತ್ತು ಹಿಂದೂಸ್ತಾನಿ ಸಂಗೀತ, ಸುಗುಮ ಸಂಗೀತದಿಂದ ಹಿಡಿದು ಜ್ಯೋತಿಷ್ಯಶಾಸ್ತ್ರದವರೆಗೆ ಆಸಕ್ತರಿಗೆ ಬೇಕಾದ 22 ವಿವಿಧ ಕೋರ್ಸ್‌ಗಳನ್ನು ಭಾರತೀಯ ವಿದ್ಯಾಭವನ ನಡೆಸುತ್ತಿದೆ.

ಇಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನನ್ನ ಬ್ಯಾಚ್‍ನಲ್ಲಿದ್ದ 30 ವಿದ್ಯಾರ್ಥಿಗಳ ಪೈಕಿ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪತ್ರಿಕೆಗಳು, ಚಾನೆಲ್‍ಗಳು, ಸಿನಿಮಾ ರಂಗ ಮುಂತಾದ ಕಡೆ ತಮ್ಮನ್ನು ತಾವು ತೊಡಗಿಸಿಕೊಂಡು ದೊಡ್ಡ ಹೆಸರನ್ನು ಮಾಡಿದ್ದಾರೆ.

ಒಂದು ಕಾಲೇಜು ಐವತ್ತು ವರ್ಷಗಳನ್ನು ಪೂರೈಸುವುದು ಸಣ್ಣ ಮಾತಲ್ಲ, ಅದರಲ್ಲೂ ಕೇವಲ ವೃತ್ತಿ ತರಬೇತಿಯನ್ನು ನೀಡುವ ಕಾಲೇಜು, ಪತ್ರಿಕೋದ್ಯಮದ ಕಾಲೇಜು ಐವತ್ತು ವರ್ಷಗಳನ್ನು ಪೂರೈಸಿರುವುದು ಬಹು ದೊಡ್ಡ ಸಾಧನೆಯೇ ಸರಿ. ನಾನು ಅದರ ಹಳೆಯ ವಿದ್ಯಾರ್ಥಿ, ಈ ಪರಂಪರೆಯ ಭಾಗವಾಗಿದ್ದೇನೆ ಎನ್ನುವುದು ನಿಸ್ಸಂಶಯವಾಗಿ ಹೆಮ್ಮೆ ಮತ್ತು ಧನ್ಯತೆಯ ಭಾವವನ್ನು ಮೂಡಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: 953818 1140/ 9980055864

–ಎಂ.ಎಸ್. ನರಸಿಂಹಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry