ಬೆಂಗಳೂರಿನ ತಂಡಗಳಲ್ಲಿ ಕನ್ನಡಿಗರೇ ಕಡಿಮೆ...

7

ಬೆಂಗಳೂರಿನ ತಂಡಗಳಲ್ಲಿ ಕನ್ನಡಿಗರೇ ಕಡಿಮೆ...

Published:
Updated:
ಬೆಂಗಳೂರಿನ ತಂಡಗಳಲ್ಲಿ ಕನ್ನಡಿಗರೇ ಕಡಿಮೆ...

ಈ ಬಾರಿಯ ಐಪಿಎಲ್‌ ಟೂರ್ನಿಯ 21ನೇ ಲೀಗ್‌ ಪಂದ್ಯವದು. ರಾಜಸ್ಥಾನದ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್‌ ಎದುರಿನ ಹೋರಾಟದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಸುಳಿಯಲ್ಲಿ ಸಿಲುಕಿತ್ತು.

ಗೆಲುವಿಗೆ 18 ಎಸೆತಗಳಲ್ಲಿ 43ರನ್‌ಗಳು ಬೇಕಿದ್ದರಿಂದ ಅಜಿಂಕ್ಯ ರಹಾನೆ ಬಳಗದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು. ಆದರೆ 17ನೇ ಓವರ್‌ನಲ್ಲಿ ಅಂಗಳಕ್ಕಿಳಿದಿದ್ದ ಕೃಷ್ಣಪ್ಪ ಗೌತಮ್‌ ಪಂದ್ಯದ ಚಿತ್ರಣವನ್ನೇ ಬದಲಿಸಿದ್ದರು. 11 ಎಸೆತಗಳಲ್ಲಿ 33ರನ್‌ ಗಳಿಸಿದ್ದ ಅವರು ರಾಯಲ್ಸ್‌ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದ್ದರು.

ಆ ಪಂದ್ಯ ನೋಡಿದವರೆಲ್ಲಾ, ಅರೆ! ಇವನು ನಮ್ಮ ಕರ್ನಾಟಕದ ಹುಡುಗನಲ್ಲವೇ?. ಎಂತಹ ಅದ್ಭುತ ಆಟ ಆಡಿದನಪ್ಪಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸರ್ಫರಾಜ್‌ ಖಾನ್‌, ಬ್ರೆಂಡನ್‌ ಮೆಕ್ಲಮ್‌ ಅವರ ಬದಲು ಈತನನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದವರು ಖರೀದಿಸಬಹುದಿತ್ತಲ್ಲವೇ ಎಂದೂ ಮಾತನಾಡಿಕೊಂಡಿದ್ದರು.

ಕೆ.ಎಲ್‌.ರಾಹುಲ್‌, ಕರುಣ್‌ ನಾಯರ್‌, ರಾಬಿನ್‌ ಉತ್ತಪ್ಪ, ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್‌ ಗೋಪಾಲ್‌ ಅವರ ಆಟ ನೋಡಿದವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕರ್ನಾಟಕದ ಹುಡುಗರು ತವರಿನ ತಂಡದಲ್ಲಿ ಮಿಂಚಬೇಕು ಎಂಬ ಆಸೆ ಖಂಡಿತವಾಗಿಯೂ ಸ್ಥಳೀಯ ಅಭಿಮಾನಿಗಳಲ್ಲಿರುತ್ತದೆ. ಆಟಗಾರರಲ್ಲೂ ತವರಿನಂಗಳದ ಪ್ರೇಮ ಇದ್ದೇ ಇರುತ್ತದೆ.  ಆಡಿ ಬೆಳೆದ ಅಂಗಳದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಬೇಕು. ಪ್ರತಿ ಪಂದ್ಯದಲ್ಲೂ ಕೆಚ್ಚೆದೆಯಿಂದ ಹೋರಾಡಿ ತವರಿನ ತಂಡಕ್ಕೆ ಜಯದ ಸಿಹಿ ಉಣಬಡಿಸಬೇಕೆಂಬ ಕನಸು ಅವರಲ್ಲಿ ಚಿಗುರೊಡೆದಿರುತ್ತದೆ. ಆ ಕನಸಿಗೆ ನೀರೆರೆಯುವ ಕೆಲಸವನ್ನು ಫ್ರಾಂಚೈಸ್‌ಗಳು ಮಾಡಬೇಕಾಗುತ್ತದೆ.

ಐಪಿಎಲ್‌ ಆರಂಭವಾದ ಹೊಸತರಲ್ಲಿ ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ, ಆರ್‌.ವಿನಯ್‌ ಕುಮಾರ್‌. ಎಸ್‌.ಅರವಿಂದ್‌, ರಾಬಿನ್ ಉತ್ತಪ್ಪ, ಮನೀಷ್‌ ಪಾಂಡೆ ಹೀಗೆ ಅನೇಕರು ಆರ್‌ಸಿಬಿ ತಂಡದಲ್ಲಿ ಆಡಿ ಅಭಿಮಾನಿಗಳನ್ನು ರಂಜಿಸಿದ್ದರು. ಇಂತಿಷ್ಟು ಮಂದಿ ಸ್ಥಳೀಯ ಆಟಗಾರರು ತಂಡದಲ್ಲಿ ಇರಲೇಬೇಕು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟು ನಿಟ್ಟಿನ ನಿಯಮ ರೂಪಿಸಿದ್ದು ಇದಕ್ಕೆ ಕಾರಣವಾಗಿತ್ತೇನೊ. ಈ ನಿಯಮ ರದ್ದಾದ ಮೇಲೆ ಕ್ರಮೇಣ ಆರ್‌ಸಿಬಿಯಲ್ಲಿದ್ದ ಕರ್ನಾಟಕದ ಆಟಗಾರರ ಸಂಖ್ಯೆ ಕ್ಷೀಣಿಸಿತು. ಈ ಬಾರಿ ಪವನ್‌ ದೇಶ‍‍ಪಾಂಡೆ ಮತ್ತು ಅನಿರುದ್ಧ್‌ ಜೋಷಿ ಅವರನ್ನು ತಂಡ ಖರೀದಿಸಿತ್ತು. ಆದರೆ ‘ಅನುಭವದ ಸಂಪತ್ತು’ ಗಳಿಸಲು ಇವರಿಗೆ ಅವಕಾಶ ಸಿಗಲಿಲ್ಲ.

‘ಈ ಸಲ ಕಪ್‌ ನಮ್ದೆ’ ಎಂದು ಹೇಳಿಕೊಂಡಿದ್ದ ವಿರಾಟ್‌ ಕೊಹ್ಲಿ ಪಡೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ರಾಜಸ್ಥಾನ್‌ ರಾಯಲ್ಸ್‌ ಎದುರಿನ ಮಹತ್ವದ ಹಣಾಹಣಿಯಲ್ಲಿ ಆರ್‌ಸಿಬಿ ಜಯದ ಕನಸನ್ನು ಭಗ್ನಗೊಳಿಸಿದ್ದು ಕನ್ನಡದ ಹುಡುಗರು!‌‌

ಆ ಪಂದ್ಯದಲ್ಲಿ ಶ್ರೇಯಸ್‌ ಗೋಪಾಲ್‌ ಮತ್ತು ಕೆ.ಗೌತಮ್‌ ಬೌಲಿಂಗ್‌ನಲ್ಲಿ ಮೋಡಿ ಮಾಡಿದ್ದರು. ಗೌತಮ್‌, ವಿರಾಟ್‌ ಕೊಹ್ಲಿ ಅವರನ್ನು ಬೌಲ್ಡ್‌ ಮಾಡಿ ಗಮನ ಸೆಳೆದಿದ್ದರು. ಶ್ರೇಯಸ್‌ ಅವರು ಡಿವಿಲಿಯರ್ಸ್‌, ಮೋಯಿನ್‌ ಅಲಿ, ಪಾರ್ಥೀವ್‌ ಪಟೇಲ್‌ ಮತ್ತು ಮನದೀಪ್‌ ಸಿಂಗ್‌ ಅವರಿಗೆ ಪೆವಿಲಿಯನ್‌ ದಾರಿ ತೋರಿಸಿ ರಾಯಲ್ಸ್‌ ಗೆಲುವಿನ ರೂವಾರಿಯಾಗಿದ್ದರು.

ಸ್ಟುವರ್ಟ್‌ ಬಿನ್ನಿ ಕೂಡಾ ರಾಯಲ್ಸ್‌ ಪಾಳಯದಲ್ಲಿದ್ದರು. ಪ್ರಸಿದ್ಧ ಮತ್ತು ಉತ್ತಪ್ಪ ಅವರು ಕೋಲ್ಕತ್ತ ನೈಟ್‌ರೈಡರ್ಸ್‌ ಪರ ಮಿಂಚಿದ್ದರು. ಇವರೆಲ್ಲಾ ಆರ್‌ಸಿಬಿಯಲ್ಲಿ ಇದ್ದಿದ್ದರೆ ಕಪ್‌ ನಮ್ಮದಾಗುತ್ತಿತ್ತೇನೊ ಎಂದೂ ಕೆಲ ಅಭಿಮಾನಿಗಳು ಆಶಾಭಾವ ವ್ಯಕ್ತಪಡಿಸಿದ್ದರು.

(ಪ್ರಶಾಂತ್‌ ಕುಮಾರ್‌ ರೈ)

ಬುಲ್ಸ್‌ನಲ್ಲೂ ಕನ್ನಡಿಗರು ಕಡಿಮೆ

ಪ್ರೊ ಕಬಡ್ಡಿ ಲೀಗ್‌ನಲ್ಲಿ (ಪಿಕೆಎಲ್‌) ಆಡುವ ಬೆಂಗಳೂರು ಬುಲ್ಸ್‌ ತಂಡದತ್ತ ಕಣ್ಣು ಹಾಯಿಸಿದರೆ ಅಲ್ಲಿ ಕಾಣುವ ಕನ್ನಡಿಗರ ಸಂಖ್ಯೆಯೂ ಕಡಿಮೆಯೇ.

ಹಿಂದಿನ ಆವೃತ್ತಿಗಳಲ್ಲಿ ತಂಡದಲ್ಲಿದ್ದ ಹರೀಶ್‌ ನಾಯ್ಕ್‌ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ದಂತಾಗಿದ್ದರು.

ಹೋದ ವಾರ ನಡೆದಿದ್ದ ಆಟಗಾರರ ಹರಾಜಿನಲ್ಲಿ ಬುಲ್ಸ್‌ ಫ್ರಾಂಚೈಸ್‌, ಜವಾಹರ್‌ ವಿವೇಕ್‌, ಹರೀಶ್‌, ವಿ.ಆನಂದ್‌ ಮತ್ತು ಬಿ.ಆರ್‌.ನಿತೇಶ್‌ ಅವರನ್ನು ಖರೀದಿಸಿದೆ.

ಅನುಭವಿಗಳಾದ ಜೀವ ಕುಮಾರ್‌, ಶಬೀರ್‌ ಬಾಪು, ಪ್ರಶಾಂತ್‌ ಕುಮಾರ್‌ ರೈ, ಸುಖೇಶ್‌ ಹೆಗ್ಡೆ ಮತ್ತು ಯುವ ಆಟಗಾರ ಜೆ.ದರ್ಶನ್‌ ಅವರನ್ನು ಬುಲ್ಸ್‌ ತಂಡದ ಪೋಷಾಕಿನಲ್ಲಿ ನೋಡುವ ಅವಕಾಶ ಈ ಬಾರಿಯೂ ಬೆಂಗಳೂರಿನ ಕಬಡ್ಡಿ ಪ್ರಿಯರಿಗೆ ಸಿಕ್ಕಿಲ್ಲ.

‘ಕಬಡ್ಡಿ, ಐಎಸ್‌ಎಲ್‌, ಐಪಿಎಲ್‌ ಮತ್ತು ಬ್ಯಾಡ್ಮಿಂಟನ್‌ ಲೀಗ್‌ ಹೀಗೆ ಎಲ್ಲಾ ತಂಡಗಳಲ್ಲೂ ರಾಜ್ಯದ ಆಟಗಾರರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂಬ ಮಾತನ್ನು ನಾನೂ  ಒಪ್ಪುತ್ತೇನೆ. ಈ ಬಾರಿ ಬೆಂಗಳೂರು ಬುಲ್ಸ್‌ ತಂಡದಲ್ಲಿ ನಾಲ್ಕು ಮಂದಿ ಸ್ಥಳೀಯ ಆಟಗಾರರಿಗೆ ಅವಕಾಶ ನೀಡಿದ್ದೇವೆ. ಮುಂದೆ ಈ ಸಂಖ್ಯೆ ಹೆಚ್ಚಲಿದೆ’ ಎಂದು ಬೆಂಗಳೂರು ಬುಲ್ಸ್‌ ತಂಡದ ಮುಖ್ಯ ಕೋಚ್‌ ಬಿ.ಸಿ.ರಮೇಶ್‌ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಶಾಂತ್‌ ಕುಮಾರ್‌, ಜೀವಕುಮಾರ್‌ ಮತ್ತು ದರ್ಶನ್‌ ಅವರನ್ನು ಸೆಳೆದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆವು. ಪ್ರಶಾಂತ್‌ ಮೇಲೆ ₹56 ಲಕ್ಷದವರೆಗೂ ಬಿಡ್‌ ಮಾಡಿದ್ದೆವು. ಆದರೆ ಇತರೆ ಫ್ರಾಂಚೈಸ್‌ಗಳು ಬಿಡ್‌ ಹೆಚ್ಚಿಸಿದ್ದರಿಂದ ಅನಿವಾರ್ಯವಾಗಿ ನಾವು ಸುಮ್ಮನಾಗಬೇಕಾಯಿತು’ ಎಂದು ಹೇಳಿದರು.

ಬಿಎಫ್‌ಸಿ ಮತ್ತು ಬ್ಲಾಸ್ಟರ್ಸ್‌ ನಿರಾಸಕ್ತಿ

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಮತ್ತು ಪ‍್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ (ಪಿಬಿಎಲ್‌) ಪಾಲ್ಗೊಳ್ಳುವ ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳಲ್ಲೂ ಸ್ಥಳೀಯ ಪ್ರತಿಭೆಗಳಿಗೆ ಮನ್ನಣೆ ಸಿಗದಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಕೋಲಾರದ ಶಂಕರ್‌ ಸಂಪಂಗಿರಾಜ್‌, 2015ರ ಐಎಸ್‌ಎಲ್‌ನಲ್ಲಿ ಕೇರಳ ಬ್ಲಾಸ್ಟರ್ಸ್‌ ಪರ ಆಡಿದ್ದರು. ಹಿಂದಿನ ಆವೃತ್ತಿಗಳಲ್ಲಿ ಬೆಂಗಳೂರು ಬ್ಲಾಸ್ಟರ್‌ ಪರ ಕಣಕ್ಕಿಳಿದಿದ್ದ ಅಶ್ವಿನಿ ಪೊನ್ನಪ್ಪ ಈ ಬಾರಿ ಡೆಲ್ಲಿ ಏಸರ್ಸ್‌ನಲ್ಲಿ ಆಡಿದ್ದರು.

**

ಬೆಂಗಳೂರು ಬುಲ್ಸ್‌ ತಂಡದ ಪರ ಆಡುವ ಕನಸಿತ್ತು. ಆದರೆ ಅದು ಸಾಕಾರಗೊಳ್ಳಲಿಲ್ಲ. ಹೀಗಾಗಿ ನಿರಾಸೆಯಾಗಿದೆ. ತಮಿಳ್‌ ತಲೈವಾಸ್‌ ಪರ ಆಡಲು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ.

-ಜೆ.ದರ್ಶನ್‌ಕರ್ನಾಟಕದ ಆಟಗಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry