ಕ್ರಿಕೆಟ್‌ ಬೆಟ್ಟಿಂಗ್‌ ಕಾನೂನುಬದ್ಧವಾಗಬೇಕಾ?

7

ಕ್ರಿಕೆಟ್‌ ಬೆಟ್ಟಿಂಗ್‌ ಕಾನೂನುಬದ್ಧವಾಗಬೇಕಾ?

Published:
Updated:
ಕ್ರಿಕೆಟ್‌ ಬೆಟ್ಟಿಂಗ್‌ ಕಾನೂನುಬದ್ಧವಾಗಬೇಕಾ?

ಕಳೆದ ವಾರ ಮುಗಿದ ಐಪಿಎಲ್‌ ಕ್ರಿಕೆಟ್‌ ಟೂರ್ನಿ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳಿಗೆ ಅದ್ಧೂರಿ ಮನರಂಜನೆ ನೀಡಿತು. ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡ ಸಂಭ್ರಮವೂ ಅವರದ್ದಾಯಿತು. ಸಂತಸ, ಖುಷಿ, ರೋಚಕ ಪಂದ್ಯಗಳು, ಸುಂದರ ಕ್ಯಾಚ್‌ಗಳು, ಆಕರ್ಷಕ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ, ಸೋಲು, ಗೆಲುವಿನ ಲೆಕ್ಕಾಚಾರಗಳ ಬಗ್ಗೆ ಸಾಕಷ್ಟು ಚರ್ಚೆಗಳಾದವು. ಆದರೆ, ಎಲ್ಲರಿಗಿಂತ ಹೆಚ್ಚು ಸಂಭ್ರಮಪಟ್ಟಿದ್ದು ಬೆಟ್ಟಿಂಗ್‌ ನಡೆಸಿದವರು!

ಕ್ರಿಕೆಟ್‌ ಟೂರ್ನಿಗಳ ಮಾದರಿ ಬದಲಾದಂತೆ ಬೆಟ್ಟಿಂಗ್‌ ಕಟ್ಟುವ ಸ್ವರೂಪ ಕೂಡ ಬದಲಾಗಿದೆ. ಮೊದಲಾದರೆ ಯಾವ ತಂಡ ಗೆಲ್ಲುತ್ತದೆ ಎನ್ನುವುದರ ಮೇಲೆ ಹೆಚ್ಚು ಹಣ ಹರಿದಾಡುತ್ತಿತ್ತು. ಆದರೆ, ಈಗ ಆರಂಭಿಕ ಬ್ಯಾಟ್ಸ್‌ಮನ್‌ಗಳು ಎಷ್ಟು ರನ್‌ ಹೊಡೆಯುತ್ತಾರೆ, ಮೊದಲ ಓವರ್‌ನಲ್ಲಿ ಎಷ್ಟು ರನ್‌ ಬರುತ್ತವೆ. 100 ರನ್‌ ಒಳಗೆ ಆಲೌಟ್‌ ಆಗುವ ತಂಡ ಯಾವುದು, ಯಾವ ಓವರ್‌ನ ಯಾವ ಎಸೆತದಲ್ಲಿ ವಿಕೆಟ್‌ ಬೀಳುತ್ತದೆ, ತಂಡ ಎಷ್ಟನೇ ಓವರ್‌ನಲ್ಲಿ ಪಂದ್ಯ ಗೆಲ್ಲುತ್ತದೆ ಹೀಗೆ ಪ್ರತಿ ವಿಷಯದ ಬಗ್ಗೆಯೂ ಬೆಟ್ಟಿಂಗ್‌ ಚಾಲ್ತಿಯಲ್ಲಿದೆ.

ಆದ್ದರಿಂದ ಐಪಿಎಲ್‌ ಟೂರ್ನಿ ನಡೆದ ಒಂದೂವರೆ ತಿಂಗಳು ಪೂರ್ತಿ ದೇಶದಲ್ಲಿ ಒಂದಲ್ಲ ಒಂದು ಕಡೆ ‘ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಬಂಧನ’ ಎನ್ನುವ ಸುದ್ದಿ ಅವ್ಯಾಹತವಾಗಿ ಬರುತ್ತಲೇ ಇದ್ದವು. ಬಾಲಿವುಡ್‌ ನಟ ಅರ್ಬಾಜ್‌ ಖಾನ್‌ ಕೂಡ ಇದರಲ್ಲಿ ಸಿಕ್ಕಿಬಿದ್ದಿದ್ದರು. ಸ್ಮಾರ್ಟ್‌ ಫೋನ್‌ಗಳ ಮೂಲಕ ಅಂಗೈಯಲ್ಲಿಯೇ ಜಗತ್ತು ನೋಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿಯೂ ಈಗ ಬೆಟ್ಟಿಂಗ್ ಸಾಮಾನ್ಯವಾಗಿಬಿಟ್ಟಿದೆ.

2013ರಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಒಕ್ಕೂಟ ನೀಡಿದ ವರದಿ ಪ್ರಕಾರ ಭಾರತದಲ್ಲಿ ಕ್ರಿಕೆಟ್‌ನಲ್ಲಿ ಒಂದು ವರ್ಷಕ್ಕೆ ₹ 3 ಲಕ್ಷ ಕೋಟಿ ಬೆಟ್ಟಿಂಗ್ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ₹ 10 ಸಾವಿರ ಕೋಟಿ ಆದಾಯ, ತೆರಿಗೆ ರೂಪದಲ್ಲಿ ಲಭಿಸುತ್ತಿತ್ತು ಎಂದು ಅಂದಾಜಿಸಿದೆ.

ಆದ್ದರಿಂದ ಭಾರತದಲ್ಲಿಯೂ ಕ್ರಿಕೆಟ್‌ ಬೆಟ್ಟಿಂಗ್‌ ಕಾನೂನುಬದ್ಧಗೊಳಿಸಬೇಕು ಎಂದು ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. 2013ರ ಐಪಿಎಲ್‌ ಟೂರ್ನಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣ ಬಯಲಾದಾಗ ಇದರ ಬಗ್ಗೆ ದೊಡ್ಡ ಚರ್ಚೆಯಾಯಿತು. ರಾಜಸ್ಥಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್‌ ಕುಂದ್ರಾ, ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅಧಿಕಾರಿಯಾಗಿದ್ದ ಗುರುನಾಥ ಮೇಯಪ್ಪನ್‌ ಅವರೇ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದು ಆಘಾತಕಾರಿ ಸುದ್ದಿಯಾಗಿತ್ತು.

ಆದ್ದರಿಂದ ಸುಪ್ರೀಂ ಕೋರ್ಟ್‌, ಭಾರತದಲ್ಲಿ ಕ್ರಿಕೆಟ್‌ ಆಡಳಿತ ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂಥ ವರದಿ ನೀಡುವಂತೆ ನಿವೃತ್ತ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಕ್ರಿಕೆಟ್‌ ಸುಧಾರಣೆಗೆ ಕೆಲ ಮಧ್ಯಂತರ ವರದಿಗಳನ್ನು ನೀಡಿದ್ದ ಸಮಿತಿ 2016ರ ಜುಲೈನಲ್ಲಿ ‘ಭಾರತದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಕಾನೂನುಬದ್ಧ ಮಾಡಬೇಕು. ಇದರಿಂದ ಮೋಸದಾಟದಂಥ ಪ್ರಕರಣ ತಡೆಯಲು ಸಾಧ್ಯವಾಗುತ್ತದೆ’ ಎನ್ನುವ ಮಹತ್ವದ ಶಿಫಾರಸು ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಈ ಕುರಿತು ವಿವರವಾದ ಅಧ್ಯಯನ ಮಾಡಿ ವರದಿ ನೀಡುವಂತೆ ಭಾರತದ ಕಾನೂನು ಆಯೋಗಕ್ಕೆ ಸೂಚಿಸಿದೆ. ಇದರ ಬಗ್ಗೆ ಆಯೋಗ ಇನ್ನು ಅಧ್ಯಯನ ನಡೆಸುತ್ತಿದೆ.

‘ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ನಡೆಸುವ ಬೆಟ್ಟಿಂಗ್‌ ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಶಿಕ್ಷಿಸಬಹುದು. ಆದರೆ, ಆನ್‌ಲೈನ್‌ ಮೂಲಕ ನಡೆಯುವ ಬೆಟ್ಟಿಂಗ್‌ ನಿಯಂತ್ರಣ ಅಸಾಧ್ಯ. ಆದ್ದರಿಂದ ಭಾರತದಲ್ಲಿ ಬೆಟ್ಟಿಂಗ್‌ ಕಾನೂನುಬದ್ಧಗೊಳಿಸುವುದು ಉತ್ತಮ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದರ ಸಾಧಕ, ಬಾಧಕಗಳ ಬಗ್ಗೆ ಆಯೋಗ ಕೂಲಂಕಷ ಅಧ್ಯಯನ ನಡೆಸುತ್ತಿದೆ’ ಎಂದು ಆಯೋಗದ ಅಧ್ಯಕ್ಷ ಬಿ.ಎಸ್‌. ಚವ್ಹಾಣ್‌ ಇತ್ತೀಚಿಗೆ ಅಭಿಪ್ರಾಯಪಟ್ಟಿದ್ದರು.

ಕ್ರಿಕೆಟ್‌ ಸೇರಿದಂತೆ ಇನ್ನಿತರ ಪ್ರಮುಖ ಕ್ರೀಡೆಗಳನ್ನು ಭಾರತದಲ್ಲಿ ಕಾನೂನುಬದ್ಧ ಮಾಡುವುದೇ ಸೂಕ್ತ ಎನ್ನುವ ಅಭಿಪ್ರಾಯವನ್ನು ಆಯೋಗ ಹೊಂದಿದೆ ಎಂದು ಆಯೋಗದ ಮೂಲಗಳು ಇತ್ತೀಚಿಗೆ ತಿಳಿಸಿವೆ.

ಬೇರೆ ರಾಷ್ಟ್ರಗಳಲ್ಲಿ ಅಧಿಕೃತ

ಕ್ರಿಕೆಟ್ ಆಡುವ ಪ್ರಮುಖ ರಾಷ್ಟ್ರಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಬೆಟ್ಟಿಂಗ್‌ ಕಾನೂನುಬದ್ಧವಾಗಿಯೇ ಇದೆ. ಆಯಾ ದೇಶಗಳು ತಮ್ಮ ನೆಲದ ಕಾನೂನಿನ ಚೌಕಟ್ಟಿನಲ್ಲಿ ನಿಯಮಗಳನ್ನು ಮಾಡಿಕೊಂಡು ಬೆಟ್ಟಿಂಗ್‌ಗೆ ಅವಕಾಶ ಕೊಟ್ಟಿವೆ. ಇದರಿಂದ ಅಲ್ಲಿನ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಆದ್ದರಿಂದ ಭಾರತದಲ್ಲಿಯೂ ಬೆಟ್ಟಿಂಗ್‌ ಕಾನೂನುಬದ್ಧ ಆಗಬೇಕು ಎನ್ನುವ ಚರ್ಚೆ ಈಗ ಜೋರಾಗಿದೆ. ನಮ್ಮಲ್ಲಿ ಈಗ ಕುದುರೆ ಜೂಜಾಟ ಮಾತ್ರ ಕಾನೂನುಬದ್ಧವಾಗಿದೆ.

ಅನುಕೂಲ–ಅನಾನೂಕೂಲದ ಲೆಕ್ಕಾಚಾರ

ಕ್ರಿಕೆಟ್‌ ಬೆಟ್ಟಿಂಗ್‌ ಕಾನೂನು ವ್ಯಾಪ್ತಿಯಲ್ಲಿ ತಂದರೆ ಆಗಬಹುದಾದ ಅನುಕೂಲ ಮತ್ತು ಅನಾನೂಕೂಲಗಳ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಕಾನೂನುಬದ್ಧವಾದರೆ ಸರ್ಕಾರಕ್ಕೆ ಆದಾಯ ಬರುತ್ತದೆ. ಸಾಕಷ್ಟು ಜನರಿಗೆ ಉದ್ಯೋಗದ ಅವಕಾಶಗಳು ಸಿಗುತ್ತವೆ. ಸ್ಟಾಟ್‌ ಫಿಕ್ಸಿಂಗ್‌, ಮ್ಯಾಚ್‌ ಫಿಕ್ಸಿಂಗ್‌, ಕಳ್ಳಾಟ ನಿಯಂತ್ರಿಸಿ ಕಪ್ಪು ಹಣದ ಹರಿವು ಕಡಿಮೆಯಾಗುತ್ತದೆ. ಭೂಗತ ಜಗತ್ತಿಗೆ ರವಾನೆಯಾಗುತ್ತದೆ ಎಂದು ಹೇಳಲಾಗುವ ಹಣ ಕೂಡ ಉಳಿಯುತ್ತದೆ.

ಅನುಕೂಲ ಇದ್ದಷ್ಟೇ ಅನಾನುಕೂಲಗಳು ಕೂಡ ಇವೆ. ಮುಂದುವರಿದ ತಂತ್ರಜ್ಞಾನದಲ್ಲಿ ಆನ್‌ಲೈನ್‌ ಮೂಲಕ ನಡೆಯುವ ಬೆಟ್ಟಿಂಗ್‌ನಲ್ಲಿ ಮೋಸವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕ್ರಿಕೆಟ್‌ ಆಡುವ ಎಲ್ಲ ರಾಷ್ಟ್ರಗಳಿಗಿಂತ ಭಾರತದಲ್ಲಿ ‘ಸಭ್ಯರ ಕ್ರೀಡೆ’ಯನ್ನು ಒಂದು ಧರ್ಮದಂತೆ ಪ್ರೀತಿಸುವವರ ದೊಡ್ಡ ಪಡೆಯೇ ಇದೆ. ಬೆಟ್ಟಿಂಗ್‌ ಕಾನೂನಿನ ಚೌಕಟ್ಟಿನಲ್ಲಿ ತಂದರೆ ಅವರ ಭಾವನೆಗಳಿಗೆ ಧಕ್ಕೆಯಾಗಬಹುದು, ಯುವಕರ ಮೇಲೆ ಕೆಟ್ಟ ಪರಿಣಾಮ ಬೀರುವುದು, ಸಮಾಜಕ್ಕೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ, ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತದೆ ಎನ್ನುವ ಆತಂಕವೂ ಇದೆ. ಆದ್ದರಿಂದ ಈ ವಿಷಯದ ಬಗ್ಗೆ ಸುಪ್ರೀಂಕೋರ್ಟ್‌ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

**

ಐಪಿಎಲ್‌ ವೇಳೆ ಹೆಚ್ಚು ಬೆಟ್ಟಿಂಗ್‌

ಮೂರೇ ತಾಸಿನಲ್ಲಿ ಮುಗಿದು ಹೋಗುವ ‘ಮಿಲಿಯನ್‌ ಡಾಲರ್‌ ಬೇಬಿ’ ಐಪಿಎಲ್‌ ಟೂರ್ನಿಯ ಪಂದ್ಯಗಳ ವೇಳೆಯೇ ಹೆಚ್ಚು ಬೆಟ್ಟಿಂಗ್ ನಡೆಯುತ್ತದೆ.

ಬೇಗನೆ ಬೆಟ್ಟಿಂಗ್‌ ಕಟ್ಟಬೇಕು, ಅಷ್ಟೇ ಬೇಗನೆ ಫಲಿತಾಂಶ ನಿರ್ಧಾರವಾಗಿ ಹಣವೂ ಬಂದು ಬಿಡಬೇಕು ಎನ್ನುವವರೇ ಹೆಚ್ಚು. ಆದ್ದರಿಂದ ಐಪಿಎಲ್‌ ಎಲ್ಲರಿಗೂ ಅಚ್ಚುಮೆಚ್ಚು. ಟೂರ್ನಿ ಆರಂಭವಾದ ಒಂದೇ ವರ್ಷದಲ್ಲಿ ಜಗತ್ತಿನ ಕೋಟ್ಯಂತರ ಜನರನ್ನು ಸೆಳೆದಿದೆ. 2009ರಲ್ಲಿ ಅಂದಾಜು ₹ 20 ಸಾವಿರ ಕೋಟಿ ಬೆಟ್ಟಿಂಗ್‌ ನಡೆದಿದೆ ಎಂದು ವರದಿಯಾಗಿತ್ತು. ಆದ್ದರಿಂದ ದೆಹಲಿ ಜಿಲ್ಲಾ ನ್ಯಾಯಾಲಯ ‘ಭಾರತದಲ್ಲಿ ಬೆಟ್ಟಿಂಗ್‌ ಕಾನೂನುಬದ್ಧ ಮಾಡಲು ಇದು ಸರಿಯಾದ ಸಮಯ’ ಎಂದು ಎಂಟು ವರ್ಷಗಳ ಹಿಂದೆಯೇ ಹೇಳಿತ್ತು.

‘ಕ್ರಿಕೆಟ್‌ ಟೂರ್ನಿಗಳ ವೇಳೆ ನಡೆಯುವ ಬೆಟ್ಟಿಂಗ್‌ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರು ವಿಫಲರಾಗುತ್ತಿದ್ದಾರೆ. ಆದ್ದರಿಂದ ಇದನ್ನು ಕಾನೂನುಬದ್ಧ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಹಣವಾದರೂ ಬರುತ್ತದೆ. ಇದನ್ನು ಸಾರ್ವಜನಿಕರ ಅಭಿವೃದ್ಧಿಗೋಸ್ಕರ ಬಳಸಬಹುದು’ ಎಂದು ನ್ಯಾಯಧೀಶ ಧರ್ಮೇಶ ಶರ್ಮಾ ಅಭಿಪ್ರಾಯಪಟ್ಟಿದ್ದರು.

**

‘ಕಪ್ಪು ಹಣ ಬಳಕೆ ಹೆಚ್ಚು’

ಕ್ರಿಕೆಟ್‌ ಬೆಟ್ಟಿಂಗ್‌ಗೆ ಭಾರತದಲ್ಲಿ ಕೋಟ್ಯಂತರ ರೂಪಾಯಿ ಕಪ್ಪು ಹಣ ಬಳಕೆಯಾಗುತ್ತಿದೆ. ಇದರಿಂದ ದೇಶದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಆದ್ದರಿಂದ ಬೆಟ್ಟಿಂಗ್‌ ಕಾನೂನುಬದ್ಧ ಮಾಡಬೇಕು ಎಂದು ನಾನು ನೀಡಿದ ವರದಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದ್ದೇನೆ. ಇದರಿಂದ ಬೆಟ್ಟಿಂಗ್ ಪ್ರಮಾಣ ಕಡಿಮೆಯಾಗುತ್ತದೆ. ಮುಖ್ಯವಾಗಿ ಕಪ್ಪು ಹಣದ ಚಲಾವಣೆಗೆ ನಿಯಂತ್ರಣ ಹಾಕಿದಂತಾಗುತ್ತದೆ. ಬೇರೆ ದೇಶಗಳಲ್ಲಿ ಹಲವು ಕ್ರೀಡೆಗಳಲ್ಲಿ ಬೆಟ್ಟಿಂಗ್‌ ಕಾನೂನುಬದ್ಧ ಮಾಡಲಾಗಿದೆ. ಅದೇ ರೀತಿ ನಮ್ಮಲ್ಲಿಯೂ ಮಾಡಬಹುದು.

–ಮುಕುಲ್‌ ಮುದ್ಗಲ್‌, ನಿವೃತ್ತ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry