ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಮಾತೆಗೆ ಕೆರೆಯ ಮಾಲೆ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಗುಡ್ಡದಿಂದ ಹರಿದು ಬರುವ ನೀರನ್ನು ಹಂತಹಂತವಾಗಿ ತಡೆದು ನಿಲ್ಲಿಸಿ, ನಿಂತ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು ಒಂದು ಉದ್ದೇಶವಾದರೆ, ಬಹಳಷ್ಟು ಕೆರೆಗಳು ಹೂಳಿನ ಸಮಸ್ಯೆಯಿಂದಲೇ ಪುನಃಶ್ಚೇತನ ಕಾಣದೆ ನಶಿಸುತ್ತಿರುವುದರಿಂದ, ಮಾದರಿಯಾಗುವಂತೆ ಹೂಳಿಲ್ಲದ ಕೆರೆ ನಿರ್ಮಿಸುವ ಗುರಿ ಹೊತ್ತು ಧಾರವಾಡದ ಹಳ್ಳಿಗೇರಿಯಲ್ಲಿ ಇಕೊವಿಲೇಜ್ ನಿರ್ಮಾಣವಾಗುತ್ತಿದೆ.

ಈ ನಿಟ್ಟಿನಲ್ಲಿ ಪರಿಸರ ಪ್ರೇಮಿ ಹಾಗೂ ತಂತ್ರಜ್ಞ ಪಿ.ವಿ.ಹಿರೇಮಠ ಯಶಸ್ವಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಡ್ಡ ಮಳೆಯಿಂದಾಗಿ ನಿರ್ಮಿಸಿರುವ ಕೊಳಗಳಲ್ಲಿ ನೀರು ತುಂಬಲಾರಂಭಿಸಿದೆ.

ಏಳು ಕೆರೆಗಳನ್ನೊಳಗೊಂಡ ‘ಕೆರೆಯ ಹಾರ’ ಕುರಿತು ಪಿ.ವಿ.ಹಿರೇಮಠ ಅವರು ತಮ್ಮದೇ ಆದ ವಿವರಣೆಯನ್ನು ನೀಡುತ್ತಾರೆ.

‘ಕೆರೆಯ ಹೂಳೆತ್ತುವುದೇ ಈಗ ದೊಡ್ಡ ಸವಾಲಿನ ಕೆಲಸವಾಗಿದೆ. ಹತ್ತಾರು ಜೆಸಿಬಿ, ನೂರಾರು ಟ್ರ್ಯಾಕ್ಟರ್ ಮೂಲಕ ಕಳೆದ ಕೆಲ ವರ್ಷಗಳಿಂದ ಜಿಲ್ಲೆಯ ಹಲವು ಕೆರೆಗಳ ಹೂಳು ಎತ್ತಿಸಲಾಯಿತು. ಲಕ್ಷಾಂತರ ರೂಪಾಯಿ ಹಣ ವ್ಯಯಿಸಲಾಯಿತು. ಆದರೆ ಕೆರೆಗೆ ಬರುವ ನೀರು ಶುದ್ಧವಾಗಿ ಬರುವುದಾದರೆ, ಕೆರೆಗೆ ಹೂಳಿನ ಸಮಸ್ಯೆ ಇರದು. ಇದಕ್ಕಾಗಿಯೇ ಇಂಥದ್ದೊಂದು ಪ್ರಾಯೋಗಿಕ ಹಾಗೂ ಪ್ರಾತ್ಯಕ್ಷಿಕೆಯನ್ನು ಇಕೊವಿಲೇಜ್‌ನಲ್ಲಿ ಸಿದ್ಧಪಡಿಸಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ’ ಎಂದು ತಮ್ಮ ಪ್ರಯೋಗವನ್ನು ತೋರಿಸಲು ಮುಂದಾದರು.

ಗುಡ್ಡಗಾಡು ಪ್ರದೇಶ ಇಕೊವಿಲೇಜ್‌. ಗುಡ್ಡದ ನೆತ್ತಿಯ ಮೇಲೆ ದಟ್ಟ ಕಾಡು. ನವಿಲು, ಕೋಗಿಲೆ ಇತ್ಯಾದಿ ಪಕ್ಷಗಳ ಕಲರವ ಕಿವಿಗೆ ಇಂಪೆನಿಸುತ್ತದೆ. ನಗರ ಪ್ರದೇಶದ ಜಂಜಡವಿಲ್ಲದ, ನಿಸರ್ಗದ ಮಡಿಲಲ್ಲಿರುವ ಈ ಜಮೀನಿನಲ್ಲಿ ಎಲ್ಲವೂ ಸಾವಯವ. ಮಾವಿನ ತೋಟವಿದೆ, ವಿವಿಧ ಜಾತಿಯ ಹಣ್ಣುಗಳ ಗಿಡವಿದೆ, ಔಷಧೀಯ ಸಸ್ಯಗಳು, ಗಿಡಮೂಲಿಕೆ ಹಾಗೂ ತರಹೇವಾರಿ ಹೂಗಳ ಸಸ್ಯಗಳು ಇಲ್ಲಿವೆ. ಗುಡ್ಡದಿಂದ ಹರಿದು ಬರುವ ನೀರನ್ನು ಇಂಗಿಸುವ ನಿಟ್ಟಿನಲ್ಲಿ ಹಿರೇಮಠ ಅವರು ನಿಸರ್ಗ ದೇವಿಯ ಕೊರಳಿಗೊಂದು ಹಾರ ಹಾಕಲು ಇಚ್ಛಿಸಿದರು. ಅದರ ಫಲವೇ ಕೆರೆಯ ಹಾರ.

ಗುಡ್ಡದ ಮೇಲೆ ನಿಸರ್ಗ ದೇವಿಯಂತೆ ಒಂದು ಆಲದ ಮರ ಸ್ಥಾಪಿಸಲು ಸಿದ್ಧತೆ ನಡೆದಿದೆ. ಕೆರೆಯ ಎರಡೂ ಬದಿಯಲ್ಲಿ ಪುಟ್ಟ ಕೊಳಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ಕಲ್ಲಿನ ಚಿಪ್ಪಿಂಗ್ ಮಾಡಲಾಗಿದೆ. ಅಲ್ಲಿಂದ ಒಂದು ಹಂತ ಕೆಳಗೆ ಮತ್ತೆರಡು ಕೆರೆಗಳನ್ನು ನಿರ್ಮಿಸಲಾಗಿದೆ. ಅದರ ಕೆಳಗೆ ಮತ್ತೊಂದು, ಅದರ ಕೆಳಗೆ ಸ್ವಲ್ಪ ದೊಡ್ಡದಾದ ಮತ್ತೊಂದು ಕೆರೆ ನಿರ್ಮಿಸಲಾಗಿದೆ. ಅಂತಿಮವಾಗಿ ಎಲ್ಲಕ್ಕಿಂತಲೂ ಕೆಳಗೆ ದೊಡ್ಡ ಕೆರೆಯನ್ನು ನಿರ್ಮಿಸಲಾಗಿದೆ.

ಹೂಳು ತಡೆಯುವಲ್ಲಿ ಈ ವೈಜ್ಞಾನಿಕ ಕ್ರಮ ಕುರಿತು ಹೇಳಿದ ಅವರು, ‘ಗುಡ್ಡದಿಂದ ಹರಿದು ಬರುವ ನೀರು ಮೊದಲ ಹಂತದಲ್ಲಿ ಎರಡು ಕೆರೆಗಳಲ್ಲಿ ಸಂಗ್ರಹವಾಗಲಿದೆ. ಅಲ್ಲಿಂದ ಕೆಳಹಂತದ ಕೆರೆಗೆ ನೇರವಾಗಿ ಹರಿಯುವುದರ ಬದಲು, ಅರ್ಧ ವೃತ್ತಾಕಾರದಲ್ಲಿ ಹರಿದು ಬರುತ್ತದೆ. ಈ ಹಾದಿಯಲ್ಲಿ ಕಲ್ಲುಗಳು ಇರುತ್ತವೆ. ಅವುಗಳನ್ನು ಹಾದು ನಂತರದ ಹಂತಕ್ಕೆ ಹೋಗುವಾಗಲೇ ಒಂದಷ್ಟು ಕಲ್ಲು, ಮಣ್ಣು ಅಲ್ಲೇ ಉಳಿಯುತ್ತದೆ. ನಂತರದ ಎರಡು ಕೆರೆಗಳಿಂದ ಹೊರ ಹೋಗುವ ನೀರೂ ಇದೇ ಮಾದರಿಯಲ್ಲಿ ಕಲ್ಲು, ಮರಳಿನ ಹಾದಿಯಲ್ಲೇ ಸಾಗಿ ತುಸು ದೊಡ್ಡ ಕೊಳ ಸೇರುತ್ತದೆ’ ಎಂದು ವಿವರಿಸಿದರು.

‘ಕೆರೆಯಿಂದ ಕೆರೆಗೆ ನೀರು ಸರಾಗವಾಗಿ ಹಾಗೂ ನೇರವಾಗಿ ಹರಿದರೆ, ಅದರೊಂದಿಗೆ ಕಲ್ಲು, ಮಣ್ಣು ಎಲ್ಲವೂ ಹೋಗುವುದು ಸಾಮಾನ್ಯ. ಆದರೆ ಅದೇ ನೀರನ್ನು ಅರ್ಧ ವೃತ್ತಾಕಾರದಲ್ಲಿ ಹರಿಯಬಿಟ್ಟಾಗ, ಘನವಸ್ತು ಕೆಳಗೆ ಕೂತು, ನೀರು ಮಾತ್ರ ಮುಂದಿನ ಹಂತಕ್ಕೆ ಹೋಗುತ್ತದೆ. ಹೀಗೆ ಒಂದೆರಡು ಹಂತ ದಾಟಿ ಕೊನೆಗೆ ದೊಡ್ಡ ಕೆರೆಗೆ ಸೇರುವಾಗ ನೀರು ಶುದ್ಧವಾಗಿರಲಿದೆ. ಇದರಿಂದ ಕೆರೆಗೆ ಹೂಳು ತುಂಬುವುದನ್ನು ತಡೆಗಟ್ಟಬಹುದು. ಇಷ್ಟು ಮಾತ್ರವಲ್ಲ, ಏಳು ಪುಟ್ಟ ಕೊಳಗಳ ಮೂಲಕ ಹಂತ ಹಂತವಾಗಿ ನೀರನ್ನು ಭೂಮಿಯಲ್ಲಿ ಇಂಗಿಸಬಹುದು. ಇದರಿಂದ ಅಂತರ್ಜಲ ವೃದ್ಧಿ ಯಾಗಲಿದೆ. ಭೂಮಿಯ ತೇವಾಂಶ ಹೆಚ್ಚಾಗಿ ಮಳೆ ಬರಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ’ ಎಂದೆನ್ನುತ್ತಾರೆ ಹಿರೇಮಠ.

‘ನಮಗೆ ಗೊತ್ತಿದ್ದಂತೆ ಎರಡು ದಶಕಗಳ ಹಿಂದೆ ಧಾರವಾಡದಲ್ಲಿ ವಾರ್ಷಿಕ 1,200ಮಿ.ಮೀ. ರಿಂದ 1,700ಮಿ.ಮೀ. ಮಳೆಯಾಗುತ್ತಿತ್ತು. ಕಳೆದ 10 ವರ್ಷಗಳಲ್ಲಿ ಇದು 400ರಿಂದ 700ಮಿ.ಮೀ. ಮಳೆಗೆ ಕುಸಿದಿದೆ. ಇನ್ನೂ ಹತ್ತು ವರ್ಷಗಳಲ್ಲಿ 100ಮಿ.ಮೀ. ಕುಸಿದರೂ ಆಶ್ಚರ್ಯವಿಲ್ಲ. ಇಂಥ ಸಂದರ್ಭದಲ್ಲಿ ಹೀಗೆ ನೀರು ಇಂಗಿಸದಿದ್ದರೆ, ಜನ ಹಾಗೂ ಜಾನುವಾರು ನೀರಿಲ್ಲದೆ ಸಾಯ ಬೇಕಾಗುತ್ತದೆ’ ಎಂಬ ಅವರ ಮಾತು ಆತಂಕ ಮೂಡಿಸುವಂತಿತ್ತು.

ಒಂದು ಎಕರೆ ಜಮೀನಿನಲ್ಲಿ ಒಂದು ಕೋಟಿ ಲೀಟರ್ ನೀರು ಇಂಗಿಸಬಹುದು. ಹಾಗೆಯೇ ನಗರ ಪ್ರದೇಶದಲ್ಲಿ ಒಂದು ಗುಂಟೆ ಜಾಗದಲ್ಲಿರುವ ಮನೆಯ ಆವರಣದಲ್ಲಿ ಕೇವಲ ₹500 ಖರ್ಚು ಮಾಡಿ 1ಲಕ್ಷ ಲೀಟರ್ ನೀರು ಇಂಗಿಸಬಹುದು. ಹಾಗೆಯೇ ಇಲ್ಲಿ ಮಾಡುತ್ತಿರುವ ಈ ಪ್ರಯೋಗದಿಂದ ಮೂರು ಕೋಟಿ ಲೀಟರ್ ಇಂಗಿಸುವ ಗುರಿ ಹೊಂದಲಾಗಿದೆ ಎನ್ನುವುದು ಅವರ ಲೆಕ್ಕಾಚಾರ.

ಬಹಳಷ್ಟು ಜನರಿಗೆ ನಮಗೆ ಲಭ್ಯವಿರುವ ಗಿಡಗಳಿಂದ ನಮ್ಮ ದೇಹದ ಮೇಲಾಗುವ ಗುಣಾತ್ಮಕ ಅಂಶಗಳ ಕುರಿತು ತಿಳಿದಿಲ್ಲ. ಕೆರೆಯ ಪ್ರಾತ್ಯಕ್ಷಿಕೆ ಮೂಲಕ ಅದನ್ನು ತಿಳಿಸುವ ಕೆಲಸವೂ ಆಗಬೇಕಿದೆ. ಉದಾಹರಣೆಗೆ ಮದರಂಗಿ ಎಲೆ ರಕ್ತದಲ್ಲಿನ ಕೊಬ್ಬಿನಂಶವನ್ನು ಕರಗಿಸುತ್ತದೆ. ಹೀಗಾಗಿ ಕೆರೆಯ ಸುತ್ತ ನೆಡುವ ಇಂಥ ಗಿಡಗಳನ್ನು ವಾರಕ್ಕೊಮ್ಮೆ ಟ್ರಿಮ್‌ ಮಾಡುವಾಗ ಕತ್ತರಿಸಿದ್ದನ್ನು ಇಲ್ಲಿಗೆ ಬರುವ ಜನರಿಗೆ ನೀಡಲಾಗುವುದು.ಇಂಥ ಹಲವು ಗಿಡಮೂಲಿಕೆಗಳ ಉಪಯೋಗವನ್ನು ತಿಳಿಸುವ ಪ್ರಯತ್ನವೂ ಇಲ್ಲಿ ನಡೆದಿದೆ.

ಇಷ್ಟು ಮಾತ್ರವಲ್ಲ; ಕೆರೆ ಕಟ್ಟುವುದು, ಕೊಳವೆ ಬಾವಿ ಮರುಪೂರಣ ಮಾಡುವುದು, ತೋಟಗಾರಿಕೆ, ಕೃಷಿ ಇತ್ಯಾದಿಗಳ ಕುರಿತು ಪ್ರಾತ್ಯಕ್ಷಿಕೆಗಳು ಇಲ್ಲಿವೆ. ಯುವಕರು ಇಂಥವುಗಳ ಲಾಭ ಪಡೆದು ಸ್ವಂತ ಉದ್ಯೋಗ ನಡೆಸಬಹುದು. ಕೆರೆ ಕಟ್ಟುವುದೇ ಒಂದು ದೊಡ್ಡ ಉದ್ಯೋಗವಾಗಲಿದೆ. ಹೀಗಾಗಿ ಇಲ್ಲಿ ಕೆರೆಯ ಮಹತ್ವ ಸಾರುವುದರ ಜತೆಗೆ ಸಾರ್ವಜನಿಕರಿಗೆ ಸ್ವಯಂ ಉದ್ಯೋಗಕ್ಕೆ ಒಂದಷ್ಟು ಮಾರ್ಗೋಪಾಯಗಳನ್ನು ಕೊಡಬೇಕೆನ್ನುವುದು ನಮ್ಮ ಉದ್ದೇಶ ಎಂದೆನ್ನುತ್ತಾರೆ ಹಿರೇಮಠ.

ಶುದ್ಧ ಆಮ್ಲಜನಕ ಸಿಗದೆ ದೇಶದಲ್ಲಿ 28 ಲಕ್ಷ ಜನ ಮೃತಪಟ್ಟಿದ್ದಾರೆ. 65ಲಕ್ಷ ಜನ ಶುದ್ಧ ಕುಡಿಯುವ ನೀರು ಸಿಗದೆ ಮೃತಪಟ್ಟಿದ್ದಾರೆ ಎಂದು ಅಧಿಕೃತ ದಾಖಲೆಗಳೇ ಹೇಳುತ್ತವೆ. ಇವೆಲ್ಲವೂ ಸರಿ ಇರಬೇಕಾದರೆ ಅಂತರ್ಜಲ ಮಟ್ಟ ಹೆಚ್ಚಬೇಕು. ಅರಣ್ಯ ಇಲಾಖೆ ಪ್ರತಿ ವರ್ಷ ಮರ ನೆಟ್ಟಿದ್ದೇವೆ ಎಂದು ಹೇಳುತ್ತಿದೆ. ಹೀಗಾದರೆ ನಾವೆಲ್ಲರೂ ಭೂಮಿ ಮೇಲೆ ಜಾಗವಿಲ್ಲದೆ ಟೊಂಗೆಗಳ ಮೇಲೆ ಕೂರಬೇಕಾಗಿತ್ತು. ಆದರೆ ಹಾಗಾಗಿಲ್ಲ. ಈಗಲೂ ಎಚ್ಚೆತ್ತುಕೊಂಡಲ್ಲಿ ನಮ್ಮ ಆಯುಷ್ಯ 50 ವರ್ಷ ಹೆಚ್ಚಾಗಲಿದೆ. ಅರಣ್ಯ ಹೆಚ್ಚಿಸದಿದ್ದಲ್ಲಿ, ಆಸ್ಪತ್ರೆಗಳ ಸಂಖ್ಯೆಗಳನ್ನು ಹೆಚ್ಚಿಸಬೇಕಾದೀತು ಎಂದು ಹೇಳುವಾಗಿ ಹಿರೇಮಠ ಅವರ ಮೊಗದಲ್ಲಿ ಆತಂಕದ ಛಾಯೆ ಇತ್ತು.

ಹೀಗಿದ್ದರೂ ಶೀಘ್ರದಲ್ಲಿ ನಿಸರ್ಗದೇವಿಗೆ ಜಲರಾಶಿ ತುಂಬಿದ ಏಳು ಅಪರೂಪದ ಕೆರೆಗಳ ಹಾರವನ್ನು ಹಾಕುತ್ತಿದ್ದೇನೆ ಎಂಬ ಸಾರ್ಥಕತೆ ಅವರಲ್ಲಿತ್ತು.

ಪ್ರವಾಸೋದ್ಯಮ ತಾಣ ಇಲ್ಲಿನ ಏಳು ಕೆರೆಗಳ ನಿರ್ಮಾಣಕ್ಕೆ ₹1 ಲಕ್ಷ ಸಾಕಿತ್ತು. ಆದರೆ ಇಕೊವಿಲೇಜ್ ಅನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಿರುವುದರಿಂದ ಇದು ಆಕರ್ಷಣೀಯವಾಗಿಯೂ ಇರಬೇಕು, ಜತೆಗೆ ಪ್ರಾಯೋಗಿಕವಾಗಿಯೂ ಉಪಯುಕ್ತವಾಗಿರ ಬೇಕು ಎಂಬ ಉದ್ದೇಶದಿಂದ ಕೆರೆಯನ್ನು ಸುಂದರ ಗೊಳಿಸಲಾಗುತ್ತಿದೆ. ಏಳೂ ಕೆರೆಯ ಸುತ್ತಲೂ ಔಷಧೀಯ ಹಾಗೂ ಗಿಡಮೂಲಿಕೆ ಸಸ್ಯಗಳನ್ನೇ ಉದ್ಯಾನಗಳನ್ನಾಗಿ ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT