ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣ: ಪಿಎಸ್‌ಐ ಸೇರಿ 6 ಜನರ ಬಂಧನ

Last Updated 3 ಜೂನ್ 2018, 19:48 IST
ಅಕ್ಷರ ಗಾತ್ರ

ಉಡುಪಿ: ಪೆರ್ಡೂರಿನ ಶೀನಬೆಟ್ಟುವಿನಲ್ಲಿ ಈಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಹಿರಿಯಡ್ಕ ‌ಠಾಣೆಯ ಪಿಎಸ್‌ಐ ಡಿ.ಎನ್‌.ಕುಮಾರ್ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.

ಹಿರಿಯಡ್ಕ ಠಾಣೆಯ ಮುಖ್ಯ ಆರಕ್ಷಕ ಮೋಹನ್‌ ಕೊತ್ವಾಲ್‌, ಜೀಪು ಚಾಲಕ ಗೋಪಾಲ್ ಹಾಗೂ ಆರೋಪಿಗಳಾದ ಚೇತನ್‌, ಶೈಲೇಶ್‌ ಶೆಟ್ಟಿ, ಗಣೇಶ ನಾಯ್ಕ ಎಂಬುರನ್ನು ಬಂಧಿಸಲಾಗಿದೆ.‌

ಪ್ರಕರಣದ ವಿವರ:
ಮೇ 29ರಂದು ಮಂಗಳೂರಿನ ಜೋಕಟ್ಟೆ ನಿವಾಸಿ ಹುಸೈನಬ್ಬ ಇಬ್ಬರು ಪರಿಚಿತರೊಂದಿಗೆ ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ತುಂಬಿಕೊಂಡು ಪೆರ್ಡೂರಿನಿಂದ ಶೀನಬೆಟ್ಟು ಮಾರ್ಗವಾಗಿ ಬರುತ್ತಿದ್ದರು. ಈ ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತ ಸುರೇಶ್‌ ಹಾಗೂ ಇತರ ಆರೋಪಿಗಳು ಹಿರಿಯಡ್ಕ ಠಾಣೆಯ ಪೊಲೀಸರ ಸಮಕ್ಷಮದಲ್ಲಿ ವಾಹನವನ್ನು ತಡೆದಿದ್ದರು.

ವಾಹನದಲ್ಲಿದ್ದ ಇಬ್ಬರು ಪರಾರಿಯಾದರೆ, ಹುಸೈನಬ್ಬ ಮಾತ್ರ ಸಿಕ್ಕಿಬಿದಿದ್ದರು. ಈ ಸಂದರ್ಭ ಆರೋಪಿಗಳು ಪೊಲೀಸರು ಎದುರೇ ಹುಸೈನಬ್ಬ ಅವರ ಮೇಲೆ ಹಲ್ಲೆ ನಡೆಸಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಜಖಂಗೊಳಿಸಿದ್ದರು. ಬಳಿಕ ಪೊಲೀಸರು ಹುಸೈನಬ್ಬ ಅವರನ್ನು ಠಾಣೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದರು.

ನಂತರ ಪೊಲೀಸರು ಆರೋಪಿಗಳ ಸಹಾಯದಿಂದ ಶವವನ್ನು 1 ಕಿ.ಮೀ ದೂರದಲ್ಲಿ ಇಟ್ಟುಬಂದು ಹುಸೈನಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಎಲ್ಲ ಅಂಶಗಳನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಈ ಪ್ರಕಣದಲ್ಲಿ ಜೂನ್‌ 1ರಂದು ಬಳ್ಳಾರಿಯಲ್ಲಿ ಪ್ರಮುಖ ಆರೋಪಿಗಳಾದ ಬಜರಂಗದಳದ ಕಾರ್ಯಕರ್ತ ಸುರೇಶ್‌ ಮೆಂಡನ್‌ ಹಾಗೂ ಪ್ರಸಾದ್ ಕೊಂಡಾಡಿ ಎಂಬುವರನ್ನು ಬಂಧಿಸಲಾಗಿತ್ತು. ಜೂನ್‌ 2 ರಂದು ಉಮೇಶ್‌ ಶೆಟ್ಟಿ, ರತನ್‌ ಎಂಬುವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರ ಕೈವಾಡ ಇರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಪಿಎಸ್‌ಐ ಡಿ.ಎನ್‌.ಕುಮಾರ್, ಸಿಬ್ಬಂದಿ ಗೋಪಾಲ್‌, ಮೋಹನ್‌ ಕೊತ್ವಾಲ್‌ ಅವರನ್ನೂ ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT