ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಹತ್ಯೆ: ವಿಜಯಪುರದಲ್ಲಿ ಶೋಧ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮನೋಹರ್ ದುಂಡಪ್ಪ ಯಡವೆ ಅಲಿಯಾಸ್ ಮನೋಜ್‌ನನ್ನು (29) ವಿಚಾರಣೆಗಾಗಿ ವಶಕ್ಕೆ ಪಡೆದ ಬೆನ್ನಲೇ ಎಸ್‌ಐಟಿ ಅಧಿಕಾರಿಗಳು, ವಿಜಯಪುರದಲ್ಲಿರುವ ಆತನ ಮನೆಯಲ್ಲಿ ಶೋಧ ನಡೆಸಿದ್ದಾರೆ.

ಸಾಹಿತಿ ಕೆ.ಎಸ್. ಭಗವಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಮನೋಹರ್‌ನನ್ನು ಮೇ 31ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು, ಗೌರಿ ಹತ್ಯೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದರು. ಅದರ ಮರುದಿನವೇ ವಿಜಯಪುರಕ್ಕೆ ಹೋಗಿದ್ದ ಎಸ್‌ಐಟಿಯ ಎಂಟು ಅಧಿಕಾರಿಗಳು, ಮನೆಯಲ್ಲಿ ಶೋಧ ನಡೆಸಿ ಅಕ್ಕ–ಪಕ್ಕದ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

‘‍ವಿಜಯಪುರ ಜಿಲ್ಲೆಯ ತಿಕೋಟಾ ಹೋಬಳಿಯ ರತ್ನಾಪುರ ಗ್ರಾಮದ ಮನೋಹರ್, ಬಿ.ಕಾಂ ಅರ್ಧಕ್ಕೆ ಬಿಟ್ಟಿದ್ದ. ಊರಿನಲ್ಲಿ ಆತನ ಹೆಸರಿಗೆ 22 ಎಕರೆ ಜಮೀನಿದೆ. ಕೃಷಿಯ ಜತೆಗೆ ಆತ, ಹಳೇ ಕಾರು ಮಾರಾಟಗಾರನಾಗಿದ್ದ. ಕೆಲ ವರ್ಷಗಳ ಹಿಂದೆ ಊರು ತೊರೆದು, ವಿಜಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ತಿಂಗಳಿಗೊಮ್ಮೆ ಊರಿಗೆ ಹೋಗಿ ಬರುತ್ತಿದ್ದ. ಬಾಡಿಗೆ ಮನೆಯಲ್ಲಿ ಕೆಲ ಪುಸ್ತಕಗಳು ಸಿಕ್ಕಿವೆ. ಅವುಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

‘ರತ್ನಾಪುರದ ತೋಟದಲ್ಲಿರುವ ಆರೋಪಿಯ ಮನೆಯಲ್ಲೂ ಶೋಧ ನಡೆಸಿದ್ದೆವು. ಅಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ. ಆರೋಪಿಯ ಸಹೋದರರು ಹಾಗೂ ಗ್ರಾಮದ ಕೆಲ ವ್ಯಕ್ತಿಗಳಿಂದ ಮಾಹಿತಿಯನ್ನಷ್ಟೇ ಪಡೆದುಕೊಂಡಿದ್ದೇವೆ’ ಎಂದಿವೆ.

ಮತದಾನ ದಿನದಂದು ಊರಿಗೆ ಬಂದಿದ್ದ;  ‘ಮೇ 12ರಂದು ನಡೆದ ವಿಧಾನಸಭಾ ಚುನಾವಣೆ ದಿನದಂದು ಮತದಾನ ಮಾಡಲೆಂದು ಮನೋಹರ್, ಊರಿಗೆ ಬಂದಿದ್ದ. ಕೆಲಸವಿರುವುದಾಗಿ ಹೇಳಿ ಊರಿಂದ ವಾಪಸ್‌ ಹೋಗಿದ್ದ. ಅಂದಿನಿಂದ ಆತ ಎಲ್ಲಿದ್ದಾನೆ ಎಂಬುದು ತಿಳಿಯಲೇ ಇಲ್ಲ. ಈಗ ಎಸ್‌ಐಟಿ ಅಧಿಕಾರಿಗಳು, ಆತನನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಮಾಧ್ಯಮಗಳಿಂದ ಗೊತ್ತಾಗಿದೆ’ ಎಂದು ಸಹೋದರ ಬೂಟಾಳಸಿದ್ದ ಹೇಳಿದರು.

ಎಸ್‌ಐಟಿ ಅಧಿಕಾರಿಗಳು ತಮ್ಮ ಮನೆಗೆ ಬಂದಿದ್ದ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಎಂಟು ಗಂಟೆಗಳವರೆಗೆ ಅಧಿಕಾರಿಗಳು ಶೋಧ ನಡೆಸಿದ್ದರು. ಆರಂಭದಲ್ಲಿ ಅವರು ಯಾರು ಎಂಬುದು ತಿಳಿಯಲಿಲ್ಲ. ವಾಪಸ್‌ ಹೋಗುವಾಗಲೇ ಎಸ್‌ಐಟಿಯವರು ಎಂಬುದು ಗೊತ್ತಾಯಿತು. ಸಹೋದರ ಎಲ್ಲಿದ್ದಾನೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ’ ಎಂದರು.

‘ಎಸ್‌ಐಟಿ ಅಧಿಕಾರಿಗಳು, ಅಂಚೆ ಮೂಲಕ ಕೆಲ ಪತ್ರಗಳನ್ನು ಮನೆಗೆ ಕಳುಹಿಸಿದ್ದಾರೆ. ಅದರಲ್ಲೆಲ್ಲ ಅಮೋಲ್ ಕಾಳೆ ಅಂತಾ ಹೆಸರಿದೆ. ನಮ್ಮ ತಾಯಿಯ ಹೆಸರನ್ನು ಅಮೋಲ್‌ನ ತಾಯಿ ಎಂದು ನಮೂದಿಸಲಾಗಿದೆ. ಎಲ್ಲಿಯೂ ಮನೋಹರ್ ಹೆಸರಿಲ್ಲ. ಆ ಬಗ್ಗೆ ಕೇಳಬೇಕೆಂದರೆ, ಎಸ್‌ಐಟಿ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ’ ಎಂದರು.

ತಂಗಿಗೆ ಶಸ್ತ್ರಚಿಕಿತ್ಸೆ; ಆರೋಪಿ ಹೇಳಿಕೆ
ಎಸ್‌ಐಟಿ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ಮನೋಹರ್, ‘ನನ್ನ ತಂಗಿಯು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು. ಆ ಬಗ್ಗೆ ವಿಚಾರಿಸಲೆಂದು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಬಂದಾಗಲೇ ಪೊಲೀಸರು ನನ್ನನ್ನು ಬಂಧಿಸಿದ್ದಾರೆ’ ಎಂದಿದ್ದ.

‘ಎಸ್ಐಟಿಯವರು ಏನೇನೋ ಪ್ರಶ್ನೆ ಕೇಳುತ್ತಿದ್ದಾರೆ. ನನ್ನ ಸಂಬಂಧಿಕರು ಹಾಗೂ ವಕೀಲರ ಭೇಟಿಗೆ ಅವಕಾಶ ನೀಡುತ್ತಿಲ್ಲ. ಮುಂದಿನ 15 ದಿನಗಳೊಳಗೆ ತಂಗಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಶಸ್ತ್ರಚಿಕಿತ್ಸೆ ಆಗದಿದ್ದರೆ ಆಕೆಯ ಜೀವಕ್ಕೆ ಕುತ್ತು ಬರಲಿದ್ದು, ನನಗೆ ಭಯ ಶುರುವಾಗಿದೆ’ ಎಂದಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT