ಸಮ್ಮಿಶ್ರ ಸರ್ಕಾರದ್ದು ತುಘಲಕ್‌ ದರ್ಬಾರ್‌ : ಯಡಿಯೂರಪ್ಪ ಟೀಕೆ

7

ಸಮ್ಮಿಶ್ರ ಸರ್ಕಾರದ್ದು ತುಘಲಕ್‌ ದರ್ಬಾರ್‌ : ಯಡಿಯೂರಪ್ಪ ಟೀಕೆ

Published:
Updated:
ಸಮ್ಮಿಶ್ರ ಸರ್ಕಾರದ್ದು ತುಘಲಕ್‌ ದರ್ಬಾರ್‌ : ಯಡಿಯೂರಪ್ಪ ಟೀಕೆ

ಚಿತ್ರದುರ್ಗ: ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಬದಲಿಗೆ ತುಘಲಕ್‌ ದರ್ಬಾರ್‌ ನಡೆಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಭಾನುವಾರ ಮತಯಾಚಿಸಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಡವಳಿಕೆ, ಆಡಳಿತದ ವೈಖರಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಈ ಅಪ್ಪ–ಮಕ್ಕಳ ಬಗ್ಗೆ ರಾಜ್ಯದ ಜನರಿಗಿಂತ ನನಗೆ ಹೆಚ್ಚು ಗೊತ್ತು’ ಎಂದರು.

‘ಸಮ್ಮಿಶ್ರ ಸರ್ಕಾರ ಗೊಂದಲದ ಗೂಡಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಂತ್ರಿಮಂಡಲ ರಚನೆಯಾದ ಬಳಿಕ ಇದು ತಾರಕಕ್ಕೆ ಏರುವ ಸಾಧ್ಯತೆ ಇದೆ. ಎಲ್ಲವನ್ನೂ ಶಾಂತಚಿತ್ತವಾಗಿ ಗಮನಿಸುತ್ತಿದ್ದೇವೆ. ಎರಡೂ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿಯಿಂದ ರಾಜ್ಯದ ಅಭಿವೃದ್ಧಿಗೆ ಬಲವಾದ ಪೆಟ್ಟು ಬೀಳುವುದು ನಿಶ್ಚಿತ’ ಎಂದು ಅಭಿಪ್ರಾಯಪಟ್ಟರು.

‘2 ವರ್ಷ ರಾಜ್ಯದಲ್ಲಿ ಪ್ರವಾಸ ಮಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆ. 135 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸುತ್ತದೆ ಎಂಬ ನಿರೀಕ್ಷೆ ಇತ್ತು. 24 ಕ್ಷೇತ್ರಗಳಲ್ಲಿ 500ರಿಂದ 2000 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೈವೇಚ್ಛೆಗಿಂತ ಮತದಾರರ ತೀರ್ಪಿಗೆ ತಲೆಬಾಗಬೇಕು. ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಲು ಯಾವುದೇ ಅಳುಕಿಲ್ಲ’ ಎಂದರು.

‘ಜಿಡಿಪಿ ದರ ಶೇ 7.7ಕ್ಕೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಪರಿಕಲ್ಪನೆಗೆ ಇದು ಕೈಗನ್ನಡಿ. ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಬೊಬ್ಬೆಯಿಟ್ಟವರಿಗೆ ಇದು ಉತ್ತರ’ ಎಂದು ಹೇಳಿದರು.

*

ಜಿಡಿಪಿ ದರ ಶೇ 7.7ಕ್ಕೆ ಏರಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಪರಿಕಲ್ಪನೆಗೆ ಇದು ಕೈಗನ್ನಡಿ. ಆರ್ಥಿಕ ಪರಿಸ್ಥಿತಿ ಹಾಳಾಗಿದೆ ಎಂದು ಬೊಬ್ಬೆಯಿಟ್ಟವರಿಗೆ ಉತ್ತರ ಸಿಕ್ಕಿದೆ

– ಬಿ.ಎಸ್‌.ಯಡಿಯೂರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry