ಪ್ರಾಥಮಿಕ–ಪ್ರೌಢ, ಉನ್ನತ ಶಿಕ್ಷಣಕ್ಕೆ ಒಬ್ಬರೇ ಸಚಿವರು

7
ಬಸವರಾಜ ಹೊರಟ್ಟಿ ಸುಳಿವು

ಪ್ರಾಥಮಿಕ–ಪ್ರೌಢ, ಉನ್ನತ ಶಿಕ್ಷಣಕ್ಕೆ ಒಬ್ಬರೇ ಸಚಿವರು

Published:
Updated:
ಪ್ರಾಥಮಿಕ–ಪ್ರೌಢ, ಉನ್ನತ ಶಿಕ್ಷಣಕ್ಕೆ ಒಬ್ಬರೇ ಸಚಿವರು

ಕಲಬುರ್ಗಿ/ಯಾದಗಿರಿ: ‘ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಒಬ್ಬರನ್ನೇ ಶಿಕ್ಷಣ ಸಚಿವರನ್ನಾಗಿಸುವ ಉದ್ದೇಶವಿದೆ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಒಬ್ಬರೇ ಶಿಕ್ಷಣ ಸಚಿವರು ಇಡೀ ಶಿಕ್ಷಣ ವ್ಯವಸ್ಥೆಯನ್ನು ನಿಭಾಯಿಸುವರು’ ಎಂದು ಜೆಡಿಎಸ್‌ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

‘ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಶಿಕ್ಷಣ ಸಚಿವನಾಗುವ ಅವಕಾಶ ದೊರೆತರೆ ಶಿಕ್ಷಕರ ನೇಮಕಾತಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸೌಲಭ್ಯ ಕಲ್ಪಿಸಲು ವಿಶೇಷ ಒತ್ತು ನೀಡುತ್ತೇನೆ. ಸಚಿವ ಸ್ಥಾನ ಸಿಗದಿದ್ದರೂ ನನಗೇನೂ ಬೇಸರವಿಲ್ಲ. ಪಕ್ಷದ ಮುಖಂಡರ ಸಲಹೆಯಂತೆ ಸರ್ಕಾರದ ಉತ್ತಮ ಕಾರ್ಯನಿರ್ವಹಣೆಗೆ ಶ್ರಮಿಸುತ್ತೇನೆ’ ಎಂದು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

12 ಸಾವಿರ ಶಿಕ್ಷಕರ ನೇಮಕ ಶೀಘ್ರ: ‘ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಸಶಕ್ತಗೊಳಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶೀಘ್ರದಲ್ಲಿಯೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಿದ್ದಾರೆ’ ಎಂದು ಬಸವರಾಜ ಹೊರಟ್ಟಿ ಯಾದಗಿರಿಯಲ್ಲಿ ತಿಳಿಸಿದರು.

‘ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಬಲಿಷ್ಠಗೊಳಿಸುವ ಕುರಿತು ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದೇನೆ. ಅವರೂ ಒಪ್ಪಿದ್ದಾರೆ. ಸಚಿವ ಸಂಪುಟ ರಚನೆಗೊಂಡ ನಂತರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದರು.

‘ಹಿಂದಿನ ಕಾಂಗ್ರೆಸ್‌ ಸರ್ಕಾರ 371 (ಜೆ) ಸಂಪುಟ ಉಪ ಸಮಿತಿಗೆ ಸ್ಥಳೀಯರಲ್ಲದ ಎಚ್.ಕೆ.ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅವರಿಗೆ ಸ್ಥಳೀಯ ಸಮಸ್ಯೆಗಳ ಅರಿವು ಇರಲಿಲ್ಲ. ಹಾಗಾಗಿ, ಅಭಿವೃದ್ಧಿಗೆ ಒತ್ತು ನೀಡಿಲ್ಲ. ಹೈದರಾಬಾದ್‌ ಕರ್ನಾಟಕ ಭಾಗದ ಸಚಿವರನ್ನು ಈ ಸಂಪುಟ ಉಪ ಸಮಿತಿಯ ಅಧ್ಯಕ್ಷರನ್ನಾಗಿಸುವಂತೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ’ ಎಂದು ತಿಳಿಸಿದರು.

*

ವಿಧಾನ ಪರಿಷತ್‌ಗೆ ಏಳು ಬಾರಿ ಆಯ್ಕೆ ಮಾಡಿ ಶಿಕ್ಷಕರು ನನಗೆ ಎಲ್ಲವನ್ನೂ ದಯಪಾಲಿಸಿದ್ದಾರೆ. ಶಿಕ್ಷಕರ ನೋವು–ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.

- ಬಸವರಾಜ ಹೊರಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry