ರಾಜ್ಯದಲ್ಲಿನ ಮೀಸಲು ಕ್ಷೇತ್ರ ಮತ್ತು ದಲಿತ ರಾಜಕಾರಣ

7

ರಾಜ್ಯದಲ್ಲಿನ ಮೀಸಲು ಕ್ಷೇತ್ರ ಮತ್ತು ದಲಿತ ರಾಜಕಾರಣ

Published:
Updated:
ರಾಜ್ಯದಲ್ಲಿನ ಮೀಸಲು ಕ್ಷೇತ್ರ ಮತ್ತು ದಲಿತ ರಾಜಕಾರಣ

ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ನಿಧಾನವಾಗಿ ತಣ್ಣಗಾಗುತ್ತಿದೆ. ನೀರು ತಿಳಿಯಾದರೆ ಆಳದ ಸಂಗತಿಗಳನ್ನು ಹುಡುಕಬಹುದು. ರಾಜ್ಯದಲ್ಲಿರುವ 36 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳ ಚುನಾವಣೆ ಫಲಿತಾಂಶಗಳಿಗೆ ತನ್ನದೇ ಆದ ಮಹತ್ವವಿದೆ. ದಲಿತ ಮುಖ್ಯಮಂತ್ರಿಯ ಸಾಧ್ಯತೆಯೂ ಸೇರಿದಂತೆ, ದಲಿತ ಒಳಪಂಗಡಗಳ ನಡುವಿನ ಮೀಸಲಾತಿಯ ವರ್ಗೀಕರಣ, ಸ್ಪೃಶ್ಯ ದಲಿತರು– ಅಸ್ಪೃಶ್ಯ ದಲಿತರ ನಡುವಿನ ಮೇಲಾಟ, ಕೇಂದ್ರ ಸಚಿವರೊಬ್ಬರ ಸಂವಿಧಾನ ಬದಲಿಸುವ ಮಾತು, ಜೆಡಿಎಸ್–ಬಿಎಸ್‌ಪಿ ನಡುವಿನ ಮೈತ್ರಿ, ಎಲ್ಲ ಇಲಾಖೆಗಳ ಬಜೆಟ್‌ನಲ್ಲಿ ವಿಶೇಷ ಘಟಕ ಯೋಜನೆಯಲ್ಲಿ ದಲಿತರಿಗೆಂದು ತೆಗೆದಿಟ್ಟ ಹಣದಲ್ಲಿ ಶೇ 90 ರಷ್ಟು ಬಳಕೆಯ ಸರ್ಕಾರದ ಸಾಧನೆ. ಜಿಗ್ನೇಶ್ ಮೇವಾನಿ ಮತ್ತಿತರರು ರಾಜ್ಯದಲ್ಲಿ ಸುತ್ತಾಡಿ ಎತ್ತಿದ ಸಂವಿಧಾನದ ರಕ್ಷಣೆಯ ಪ್ರಶ್ನೆಗಳು– ಈ ಎಲ್ಲ ವಿಷಯಗಳನ್ನು ಚರ್ಚಿಸುತ್ತಲೇ ನಡೆದ ಚುನಾವಣೆಯ ಫಲಿತಾಂಶದ ಆಂತರ್ಯದಲ್ಲಿ ಇರುವುದೇನು ಎಂದು ಪರಿಶೀಲಿಸೋಣ.

36 ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 13, ಬಿಜೆಪಿಗೆ 16, ಜೆಡಿಎಸ್‌ಗೆ 7 ಸ್ಥಾನ ಸಿಕ್ಕಿದೆ. 2013ರ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್ 18 ರಿಂದ 13ಕ್ಕೆ ಕುಸಿದರೆ, ಬಿಜೆಪಿ 8 ರಿಂದ 16ಕ್ಕೆ ಏರಿದೆ. ಜೆಡಿಎಸ್‌ 10 ರಿಂದ 7ಕ್ಕೆ ಇಳಿದಿದೆ. ಫಲಿತಾಂಶವನ್ನು ಒಳಹೊಕ್ಕು ನೋಡಿದರೆ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಳೆದಿಕೊಂಡಿದ್ದು 18ರಲ್ಲಿ ಹನ್ನೊಂದನ್ನು. ಆದರೆ ಹೊಸದಾಗಿ 6ರಲ್ಲಿ ಗೆದ್ದಿದ್ದರಿಂದ ಕಾಂಗ್ರೆಸ್‌ನ ಸ್ಥಾನ 13ಕ್ಕೆ ನಿಂತಿತು.‌

ದಲಿತರಲ್ಲಿ ಅಸ್ಪೃಶ್ಯತೆ ಎದುರಿಸುತ್ತಿರುವ ಹೊಲೆಯ, ಮಾದಿಗ ಸಮುದಾಯಗಳು ಒಂದೆಡೆಯಾದರೆ, ಲಂಬಾಣಿ, ಬೋವಿ ಸಮುದಾಯಗಳನ್ನು ಸ್ಪೃಶ್ಯ ದಲಿತರೆಂದು ಗುರುತಿಸಲಾಗುತ್ತದೆ. ಬಿಜೆಪಿ ಸ್ಪೃಶ್ಯ ದಲಿತರನ್ನು ಪೋಷಿಸುತ್ತದೆ ಎಂಬ ಆರೋಪವಿದೆ. ಈ ಸಲದ ಫಲಿತಾಂಶದಲ್ಲಿ ಸತ್ಯದ ಹೊಸ ಮಗ್ಗುಲುಗಳನ್ನು ಕಾಣಬಹುದು. ಈ ಸಲ ಕಾಂಗ್ರೆಸ್ ಹೊಸದಾಗಿ ಗೆದ್ದ 6ರಲ್ಲಿ ಮೂವರು ಬೋವಿ, ಒಬ್ಬರು ಲಂಬಾಣಿ ಸಮುದಾಯದವರು ಇದ್ದಾರೆ.

ಕಳೆದ ಸಲ 8 ಸ್ಥಾನ ಹೊಂದಿದ್ದ ಬಿಜೆಪಿ, ಕೆಜಿಎಫ್‌ನಲ್ಲಿ ಸೋತರೂ ಹೊಸದಾಗಿ 9 ಸ್ಥಾನ ಗೆದ್ದು 16ಕ್ಕೆ ಏರಿತು. ಬಿಜೆಪಿ ಹೊಸದಾಗಿ ಗೆದ್ದ 9ರಲ್ಲಿ ತಲಾ ಮೂವರಂತೆ ಹೊಲೆಯರು, ಮಾದಿಗರು ಗೆದ್ದಿದ್ದಾರೆ. 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕೇವಲ ಒಬ್ಬ ಸ್ಪೃಶ್ಯ ದಲಿತ ಶಾಸಕರಿದ್ದರು. 10 ವರ್ಷಗಳ ತರುವಾಯ ಕಾಂಗ್ರೆಸ್‌ನಲ್ಲಿ 13ರಲ್ಲಿ 6 ಸ್ಪೃಶ್ಯ ದಲಿತ ಶಾಸಕರಿದ್ದಾರೆ. ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯ ದಲಿತರಿಗೆ ಮಣೆ ಹಾಕುವ ಪರಿಪಾಠ ಕಾಂಗ್ರೆಸ್‌ನಲ್ಲೂ ಧಾರಾಳವಾಗಿರುವುದನ್ನು ಗಮನಿಸಬಹುದು.

ಈ ಸಲದ ಕಾಂಗ್ರೆಸ್‌ನ ಟಿಕೇಟ್ ಹಂಚಿಕೆಯಲ್ಲಿ ಬಲ ಸಮುದಾದಯ ದಲಿತರಿಗೆ 17 ಸ್ಥಾನ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಗೆದ್ದದ್ದು 6 ಅಭ್ಯರ್ಥಿಗಳು. ಎಡ ಪಂಗಡದ ದಲಿತರೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ 10 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿತು. ಐವರು ಗೆದ್ದರು. ಒಳ ಮೀಸಲಾತಿ ಚಳವಳಿಗೆ ಕಾಂಗ್ರೆಸ್ ತೋರಿರುವ ನಿರ್ಲಕ್ಷ್ಯ ಮಾದಿಗರು ಬಿಜೆಪಿ ಜೊತೆ ಹೋಗಿರುವುದನ್ನು ಫಲಿತಾಂಶ ಸ್ಪಷ್ಟಪಡಿಸುತ್ತದೆ.

ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಕಾಂಗ್ರೆಸ್ ತೋರಿದ ವಿಶೇಷ ಕಾಳಜಿಯೂ ಮಾದಿಗ  ಸಮುದಾಯವನ್ನು ಪ್ರಭಾವಿಸಿದೆ. ಕೇವಲ ಮೂರು ತಿಂಗಳೊಳಗೆ ನ್ಯಾ. ನಾಗಮೋಹನದಾಸ ಸಮಿತಿಯ ರಚನೆಯಾಗಿ ವರದಿಯ ತಯಾರಿ, ಸರ್ಕಾರಕ್ಕೆ ಸಲ್ಲಿಕೆ, ಪರಿಶೀಲನೆ, ಅಂಗೀಕಾರ, ಕೇಂದ್ರಕ್ಕೆ ಶಿಫಾಸರು ಎಲ್ಲವೂ ಮುಗಿದು ಹೋಗಿತ್ತು. ಆದರೆ ದಲಿತ ಪಂಗಡಗಳೊಳಗೆ ಮೀಸಲಾತಿಯ ವರ್ಗೀಕರಣವನ್ನು ಶಿಫಾರಸು ಮಾಡಿದ್ದ ನ್ಯಾ. ಸದಾಶಿವ ಆಯೋಗದ ವರದಿಯ ಬಗ್ಗೆ ಕಾಂಗ್ರೆಸ್ ಸರಕಾರ 5 ವರ್ಷ ಏನೂ ಮಾಡಲಿಲ್ಲ. ನಿರಂತರ ಹೋರಾಟ, ಚಳವಳಿ, ಪಾದಯಾತ್ರೆ ಮಾಡಿದ ಮಾದಿಗ ಸಮುದಾಯದವರಿಗೆ ಕಾಂಗ್ರೆಸ್ ನಿರಾಶೆ ಮಾಡಿತ್ತು. ‘ಉಳ್ಳವರಷ್ಟೆ ಶಿವಾಲಯವ ಮಾಡುವವರು’ ಎಂಬುದು ಸಾಬೀತಾಗಿತ್ತು. ಮಲ್ಲಿಕಾರ್ಜುನ ಖರ್ಗೆ, ಶ್ರೀನಿವಾಸಪ್ರಸಾದ್, ಪರಮೇಶ್ವರ ಅವರಂತಹ ಪ್ರಮುಖ ದಲಿತ ನಾಯಕರೇ ಮೀಸಲಾತಿಯ ವರ್ಗೀಕರಣವನ್ನು ಒಪ್ಪುತ್ತಿಲ್ಲ ಎನ್ನುವ ಮಾತಿದೆ. ಒಬಿಸಿ  ಮೀಸಲಾತಿಯಲ್ಲಿ ವರ್ಗೀಕರಣ ಇದೆಯಲ್ಲವೇ? ದಶಕಗಳಿಂದ ಯಾವ ಗೊಂದಲವೂ ಇಲ್ಲದೆ ನೆಡದು ಬಂದಿದೆಯಲ್ಲವೆ? ಹಾಗಿದ್ದ ಮೇಲೆ ಪರಿಶಿಷ್ಟ ಜಾತಿಗಳ ನಡುವೆ ವರ್ಗೀಕರಣ ಇದ್ದರೆ ತಪ್ಪೇನು?

ಮಾದಿಗರು ದೊಡ್ಡಸಂಖ್ಯೆಯಲ್ಲಿ ಇದ್ದಾರೆಂದು ಗುರುತಿಸಲಾದ ರಾಯಚೂರು ಜಿಲ್ಲೆಯ ಲಿಂಗಸ್ಗೂರು ಮೀಸಲು ಕ್ಷೇತ್ರದಲ್ಲಿ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಬೋವಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದ್ದು ಒಳ ಮೀಸಲಾತಿ ಹೋರಾಟಗಾರ‌ರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕೊನೆಗೆ ಚಳವಳಿಗಾರರು ₹ 3 ಲಕ್ಷ ಚಂದಾ ಎತ್ತಿ ಭೀಮವ್ವ ಎರಡೋಣ ಎಂಬ ದೇವದಾಸಿ ಹೆಣ್ಣು ಮಗಳಿಂದ ಭಿ ಪಾರಂ ಕೊಡಿಸಿ ಮಾದಿಗ ಸಮುದಾಯದಿಂದ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ಬೋವಿ ಸಮುದಾಯದ ಇಳಕಲ್ ಮೂಲದ ಗ್ರಾನೈಟ್ ದೊರೆಗಳು ತಮ್ಮ ಹಣಬಲದಿಂದ ಮಾದಿಗ ಸಮುದಾಯಕ್ಕೆ ಸಿಗಬಹುದಾದ ಮೀಸಲು ಕ್ಷೇತ್ರಗಳನ್ನು ಆವರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಮಾದಿಗ ಸಮುದಾಯ ವ್ಯಾಪಕವಾಗಿರುವುದು ಉತ್ತರ ಕರ್ನಾಟಕದಲ್ಲಿ. ಈಗಾಗಲೇ ಲಿಂಗಾಯಿತರು ಹಾಗೂ ವಾಲ್ಮೀಕಿ ಸಮುದಾಯದ ಮೇಲೆ ಹಿಡಿತ ಸಾಧಿಸಿರುವ ಬಿಜೆಪಿಗೆ ಮಾದಿಗ ಸಮುದಾಯದ ಸೇರ್ಪಡೆ ಒಳ್ಳೆಯ ‘ಗೆಲ್ಲುವ ಸೂತ್ರ’ ವೆನಿಸಿದೆ.

ಇಷ್ಟೆಲ್ಲ ಚಳವಳಿಯ ನಂತರವೂ ವಿಧಾನಸಭೆಯಲ್ಲಿ ಮಾದಿಗ ಸಮುದಾಯದ ಪ್ರಾತಿನಿಧ್ಯ ಮೇಲೇರುತ್ತಿಲ್ಲ. 2008ರಲ್ಲಿ ಹಾಗೂ 2013ರಲ್ಲಿ 7 ಶಾಸಕರು ಇದ್ದದ್ದು ಈ ಸಲ 6ಕ್ಕೆ (ಕಾಂಗ್ರೆಸ್ 1, ಬಿಜೆಪಿ 5) ಇಳಿದಿದೆ.  ಜನಸಂಖ್ಯೆಯ ಪ್ರಮಾಣದಲ್ಲಿ ಮಾದಿಗ ಸಮುದಾಯದ ಅರ್ಧದಷ್ಟೂ ಇಲ್ಲದ ಬೋವಿ, ಲಂಬಾಣಿ ಶಾಸಕರ ಸಂಖ್ಯೆ 2008ರಲ್ಲಿ 16, 2013ರಲ್ಲಿ 15 ಇದ್ದದ್ದು ಈಗ 14ಕ್ಕೆ ನಿಂತಿದೆ. ದಲಿತ ಬಲ ಸಮುದಾಯದ ಶಾಸಕರ ಸಂಖ್ಯೆ 2008ರಲ್ಲಿ 10, 2013ರಲ್ಲಿ 12 ಇದ್ದದ್ದು ಈ ಸಲ 16ಕ್ಕೆ ಏರಿದೆ. ತನ್ನ ‍ಪ್ರಣಾಳಿಕೆಯಲ್ಲಿ ನ್ಯಾ. ಸದಾಶಿವ ಆಯೋಗದ ವರದಿಗೆ ಬೆಂಬಲ ಸೂಚಿಸಿರುವ ಜೆಡಿಎಸ್ ಅಧಿಕಾರಕ್ಕೆ ಬಂದಿರುವುದು ಮಾದಿಗ ಸಮುದಾಯದಲ್ಲಿ ಮತ್ತೆ ಆಶಾಭಾವನೆ ಮುನ್ನಲೆಗೆ ಬಂದಿದೆ.

ಜೆಡಿಎಸ್ ಜೊತೆಗಿನ ಬಿಎಸ್‌ಪಿ ಮೈತ್ರಿ ಆ ಪಕ್ಷಕ್ಕೆ ವಿಧಾನಸಭೆ ಪ್ರವೇಶಿಸುವಂತೆ ಮಾಡಿದೆ. ಆದರೆ  ಸ್ಪರ್ಧಿಸಿದ ಉಳಿದ 17 ಅಭ್ಯರ್ಥಿಗಳಿಗೆ ಜೆಡಿಎಸ್‌ನ ಸಾಥ್ ಸಾಕಾದಂತೆ ಕಾಣಿಸುವುದಿಲ್ಲ. ಬಿಎಸ್‌ಪಿಯ ಭದ್ರಕೋಟೆಯಂತಿದ್ದ ಆನೇಕಲ್, ಬೀದರ ಕ್ಷೇತ್ರಗಳಲ್ಲಿ 3 ಸಾವಿರದಷ್ಟು ಮತ ಗಳಿಸಿರುವುದು ನಿರಾಸೆ ತಂದಿದೆ.

2013ರಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ನಂತರ ಕಾಂಗ್ರೆಸ್ ಸೇರಿದ ಕೊತ್ತೂರು ಮಂಜುನಾಥ್ ಈ ಸಲ ಸ್ಪರ್ಧಿಸಲಾಗಲಿಲ್ಲ. ಅವರ ಪರಿಶಿಷ್ಟ ಜಾತಿಯ ನಕಲಿ ಪ್ರಮಾಣ ಪತ್ರ ಹೈಕೋರ್ಟ್‌ನಲ್ಲಿ ಸಾಬೀತಾಗಿದ್ದರಿಂದ ನಾಮಪತ್ರ ತಿರಸ್ಕೃತವಾಯಿತು. ಪರಿಶಿಷ್ಟ ಜಾತಿಗೆ ಸೇರದವರೊಬ್ಬರು ನಕಲಿ ಜಾತಿ ಪ್ರಮಾಣ ಪತ್ರದಿಂದ ಮೀಸಲು ಕ್ಷೇತ್ರದ ಶಾಸಕರಾಗಿ ಅಧಿಕಾರ ಅನುಭವಿಸಿದ್ದು ಸಂವಿಧಾನಕ್ಕೆ ಬಗೆದ ದ್ರೋಹ. ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್‌ಗಳಲ್ಲಿ ಇಂತಹ ನೂರಾರು ‘ಸಂವಿಧಾನ ದ್ರೋಹಿ’ಗಳಿದ್ದಾರೆ. ನ್ಯಾಯಾಲಯದ ಕೈಗೆ ಸಿಗದೆ ಪಾರಾಗುತ್ತಿದ್ದಾರೆ.

ಅನ್ಯ ಸಮಾಜಗಳಿಗೆ ಹೋಲಿಸಿದರೆ ದಲಿತರಲ್ಲಿ ರಾಜಕಾರಣಿಗಳು ಹೆಚ್ಚು. ಡಾ. ಬಾಬಾ ಸಾಹೇಬ ಅಂಬೇಡ್ಕರ್‌ರವರು ರಾಜಕೀಯ ಅಧಿಕಾರದಿಂದಲೇ ಪರಿವರ್ತನೆ ಸಾಧ್ಯ ಎಂದು ಹೇಳಿದ್ದರ ಪರಿಣಾಮವೂ ಇರಬಹುದು. ಜಿಲ್ಲಾಪಂಚಾಯತ್ ಸದಸ್ಯರು, ಕಾರ್ಪೋರೇಟರುಗಳು ಮುಂದಿನ ಹೆಜ್ಜೆ ಇಡಲು ಜಾಗವೇ ಇಲ್ಲದಂತಹ ಸ್ಥಿತಿ. ಎಲ್ಲರಿಗೂ ಇರುವ 36 ಮೀಸಲು ಕ್ಷೇತ್ರಗಳಲ್ಲೇ ಜಾಗ ಸಿಗಬೇಕು. ಮೀಸಲು ಪ್ರಮಾಣ ಶೇ 15 ರಷ್ಟಿದ್ದರೆ ದಲಿತರ ಜನಸಂಖ್ಯೆ ಪ್ರಮಾಣ ಶೇ 18 ದಾಟಿದೆ. ರಾಜಕೀಯ ಪಕ್ಷಗಳು ಕೆಲವು ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತರಿಗೆ ಅವಕಾಶ ಒದಗಿಸಬೇಕಾದ ಕಾಲ ಬಂದಿದೆ. ಬಿಜೆಪಿಯ ಗೂಳಿಹಟ್ಟಿ ಶೇಖರ್ ಹೊಸ ಮಾರ್ಗದಿಂದ ಗೆದ್ದು ಬಂದಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಾರಾಯಣಸ್ವಾಮಿ 36 ಸಾವಿರ ಮತಗಳಿಸಿ ತೀವ್ರ ಪೈಪೋಟಿ ನೀಡಿದ್ದಾರೆ.

ದಲಿತರಿಗೆ ಮೀಸಲಾತಿ ಇದೆ ನಿಜ, ಆದರೆ ನಿರ್ಲಕ್ಷಿಸುವ ಜಾಯಮಾನ ಹೋಗಿದೆಯೇ? ಖರ್ಗೆ, ಪರಮೇಶ್ವರ, ಮುನಿಯಪ್ಪನವರಿಗೇ ಸಮಾಧಾನಕರ ಉತ್ತರ ಸಿಕ್ಕಹಾಗೆ ಕಾಣುತ್ತಿಲ್ಲ. ಇನ್ನು ದಲಿತ ಮಹಿಳೆಗೆ ಸಿಗುವುದು ಯಾವಾಗ?

**

ದಲಿತ ಮುಖ್ಯಮಂತ್ರಿ ಪ್ರಸ್ತಾವಕ್ಕೆ ನ್ಯಾಯ ಒದಗಿಸಬಹುದಿತ್ತು...

2013 ರಿಂದಲೇ ಇರುವ ದಲಿತ ಮುಖ್ಯಮಂತ್ರಿಯ ಚರ್ಚೆಗೆ ಇದೀಗ ಜಿ. ಪರಮೇಶ್ವರ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಆಗುವುದರೊಂದಿಗೆ ಸ್ವಲ್ಪ ಸಮಾಧಾನಕ್ಕೆ ಕಾರಣವಾಗಿದೆ. ಹಾಗೆಯೇ ಬಿಜೆಪಿಯ ದಲಿತ ನಾಯಕ ಗೋವಿಂದ ಕಾರಜೋಳ ವಿರೋಧ ಪಕ್ಷದ ಉಪನಾಯಕರಾಗಿರುವುದು ಹೊಸ ಬೆಳವಣಿಗೆ.

ಮತದಾನ ಹಾಗೂ ಮತ ಎಣಿಕೆಯ ನಡುವಿನ 2 ದಿನದ ಬಿಡುವಿನಲ್ಲಿ ಸಿದ್ಧರಾಮಯ್ಯ ದಲಿತ ಮುಖ್ಯಮಂತ್ರಿಯ ಆಯ್ಕೆಗೆ ಹೈಕಮಾಂಡ್ ಒಲವು ತೋರಿದರೆ ತಮ್ಮದೇನೂ ಅಭ್ಯಂತರ ಇಲ್ಲವೆಂದು ಹೇಳಿದರು. ಆದರೆ ಫಲಿತಾಂಶ ಹೊರಬರುತ್ತಿದ್ದಂತೆಯೇ ‘ಅತಂತ್ರ’ದ ವಾಸನೆ ಹಿಡಿದು ದೇವೇಗೌಡರತ್ತ ನಡೆದ ಕಾಂಗ್ರೆಸ್‌ನ ಹೈಕಮಾಂಡ್‌ನ ನಿಯೋಜಿತ ತಂಡ ದಲಿತ ಮುಖ್ಯಮಂತ್ರಿಯ ಸಾಧ್ಯತೆಯನ್ನು ಪ್ರಸ್ತಾಪಿಸುವ ಗೋಜಿಗೂ ಹೋಗಲಿಲ್ಲ. ದೇವೇಗೌಡರು ನೀವೇ ಮುಖ್ಯಮಂತ್ರಿ ಪದವಿಯನ್ನು ಇಟ್ಟುಕೊಳ್ಳಿ ಎಂದು ಹೇಳಿದಾಗಲಾದರೂ ಕಾಂಗ್ರೆಸ್‌ನ ಹಿರಿಯರು ದಲಿತ ಮುಖ್ಯಮಂತ್ರಿ ಪ್ರಸ್ತಾಪಕ್ಕೆ ನ್ಯಾಯ ಒದಗಿಸಬಹುದಿತ್ತು.

**

ಚರ್ಚೆಗೆ ಒಳಗಾಗದ ದಲಿತ ಮಹಿಳೆಯರ ಪ್ರಾತಿನಿಧ್ಯ

ಮೀಸಲು ಕ್ಷೇತ್ರಗಳಲ್ಲಿ ದಲಿತ ಮಹಿಳೆಯರ ಪ್ರಾತಿನಿಧ್ಯ ಗಂಭೀರ ಚರ್ಚೆಗೂ ಒಳಗಾಗದ ವಿಷಯ. ರಾಜಕೀಯ ಪಕ್ಷಗಳು ದಲಿತ ಮಹಿಳೆಯರನ್ನು ಸ್ಪರ್ಧೆಗೆ ಪರಿಶೀಲಿಸುವ ಸ್ಥಿತಿಯೂ ಇಲ್ಲದಿರುವುದು ಕಠೋರ ವಾಸ್ತವ. ಕಳೆದ ಸಲ ಶಿವಮೊಗ್ಗ ಗ್ರಾಮಾಂತರದಿಂದ ಶಾರದಾ ಪೂರ್ಯಾನಾಯ್ಕ ಹಾಗೂ ಕೆ.ಜಿ.ಎಫ್.ನಿಂದ ವೈ. ರಾಮಕ್ಕ ಗೆದ್ದಿದ್ದರೆ, ಈ ಸಲ ಗೆದ್ದಿರುವುದು ರೂಪಾ ಶಶಿಧರ ಮಾತ್ರ. ಕಳೆದ ಸಲ ಶಿರಹಟ್ಟಿಯಿಂದ ಬಿಎಸ್‌ಆರ್‌ನಿಂದ ಸ್ಪರ್ಧಿಸಿ ಜಯಶ್ರೀ 26 ಸಾವಿರ ಮತ ಗಳಿಸಿ 3ನೇ ಸ್ಥಾನದಲ್ಲಿದ್ದರು. ಈ ಸಲ ಅವರನ್ನು ಯಾವ ಪಕ್ಷವೂ ಪರಿಗಣಿಸಲೇ ಇಲ್ಲ. ಕಳೆದ ಸಲ ಪುಲಕೇಶಿನಗರದಲ್ಲಿ ಎಸ್‌ಡಿಪಿಐನಿಂದ ಸ್ಪರ್ಧಿಸಿ 3ನೇ ಸ್ಥಾನ ಗಳಿಸಿದ್ದ ಹೇಮಲತಾರವರಿಗೆ ಈ ಮಧ್ಯೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸಲು ‘ಅನರ್ಹ’ರಾದರು! ಕಾಂಗ್ರೆಸ್‌ನ ಹಿರಿಯ ನಾಯಕಿ ಮೋಟಮ್ಮ ಮೂಡಿಗೆರೆಯಲ್ಲಿ, ಬಿಜೆಪಿಯ ಸುಶೀಲಾ ದೇವರಾಜ್ ಪುಲಿಕೇಶಿನಗರದಲ್ಲಿ, ಎಸ್. ಅಶ್ವಿನಿ ಕೆಜಿಎಫ್‌ನಲ್ಲಿ ಈ ಸಲ ಸ್ಪರ್ಧಿಸಿ ಹೋರಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪಂಚಾಯತ್‌ನ ಅಧ್ಯಕ್ಷೆಯಾಗಿದ್ದ ಸುಡುಗಾಡು ಸಿದ್ಧ ಸಮುದಾಯದ ಎಂಜಿನಿಯರಿಂಗ್ ಪದವೀಧರೆ ಚೈತ್ರಶ್ರೀಗೆ ಬಿಜೆಪಿ ಅವಕಾಶ ನಿರಾಕರಿಸಿತು.

(ಲೇಖಕ: ಸಾಮಾಜಿಕ ಕಾರ್ಯಕರ್ತ)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry