ಮತ್ತೊಂದು ಜಯದತ್ತ ಭಾರತ ಫುಟ್‌ಬಾಲ್‌ ತಂಡದ ಚಿತ್ತ

7
ಫುಟ್‌ಬಾಲ್‌: ಇಂದು ಕೀನ್ಯಾ ವಿರುದ್ಧ ಪಂದ್ಯ

ಮತ್ತೊಂದು ಜಯದತ್ತ ಭಾರತ ಫುಟ್‌ಬಾಲ್‌ ತಂಡದ ಚಿತ್ತ

Published:
Updated:
ಮತ್ತೊಂದು ಜಯದತ್ತ ಭಾರತ ಫುಟ್‌ಬಾಲ್‌ ತಂಡದ ಚಿತ್ತ

ಮುಂಬೈ: ಚೀನಾ ತೈಪೆ ಎದುರಿನ ಮೊದಲ ಪಂದ್ಯದಲ್ಲಿ ಗೆದ್ದು ಬೀಗುತ್ತಿರುವ ಭಾರತ ಫುಟ್‌ಬಾಲ್‌ ತಂಡದವರು ಈಗ ಮತ್ತೊಂದು ಜಯದತ್ತ ಚಿತ್ತ ನೆಟ್ಟಿದ್ದಾರೆ.

ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಸೋಮವಾರ ನಡೆಯುವ ಹೋರಾಟದಲ್ಲಿ ಆತಿಥೇಯ ಭಾರತ ತಂಡ ಕೀನ್ಯಾ ವಿರುದ್ಧ ಸೆಣಸಲಿದೆ.  ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ ಪಾಲಿಗೆ ಇದು 100ನೇ ಅಂತರರಾಷ್ಟ್ರೀಯ ಪಂದ್ಯ. ಹಿಂದಿನ ಹಣಾಹಣಿ ಯಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದ ಅವರು ಮತ್ತೊಮ್ಮೆ ಕಾಲ್ಚಳಕ ತೋರಿ ‘ಶತಕ’ದ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ.

ವಿಶ್ವ ಕ್ರಮಾಂಕಪಟ್ಟಿಯಲ್ಲಿ 97ನೇ ಸ್ಥಾನದಲ್ಲಿರುವ ಭಾರತ, ಆಟದ ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದೆ. ಉದಾಂತ್‌ ಸಿಂಗ್‌, ಅನಿರುದ್ಧ್‌ ಥಾಪಾ ಮತ್ತು ಪ್ರಣಯ್‌ ಹಲ್ದಾರ್‌ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇವರು ತೈಪೆ ಎದುರು ತಲಾ ಒಂದು ಗೋಲು ದಾಖಲಿಸಿದ್ದರು.

ರಕ್ಷಣಾ ವಿಭಾಗದ ಆಟಗಾರರಾದ ಪ್ರೀತಮ್‌ ಕೋಟಾಲ್‌, ಅನಾಸ್‌ ಎಡತೋಡಿಕಾ, ಸಲಾಮ್‌ ರಂಜನ್‌ ಸಿಂಗ್‌, ಸಂದೇಶ್‌ ಜಿಂಗಾನ್‌ ಮತ್ತು ನಾರಾಯಣ ದಾಸ್‌ ಅವರು ಕೀನ್ಯಾ ತಂಡದ ಮುಂಚೂಣಿ ವಿಭಾಗದ ಆಟಗಾರರನ್ನು ನಿಯಂತ್ರಿಸಲು ಸೂಕ್ತ ಯೋಜನೆ ಹೆಣೆದು ಕಣಕ್ಕಿಳಿಯಲಿದ್ದಾರೆ.

ಜೆಜೆ ಲಾಲ್‌ಪೆಕ್ಲುವಾ, ಬಲವಂತ್‌ ಸಿಂಗ್‌ ಮತ್ತು ಅಲೆನ್‌ ಡಿಯೋರಿ ಅವರೂ ಮಿಂಚಿನ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಡಲು ಕಾಯುತ್ತಿದ್ದಾರೆ.

ಕೀನ್ಯಾ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಈ ತಂಡ ಆತಿಥೇಯರಿಗೆ ಆಘಾತ ನೀಡುವ ವಿಶ್ವಾಸದಲ್ಲಿದೆ.

ಪಂದ್ಯದ ಆರಂಭ: ರಾತ್ರಿ 8

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry