ಫ್ಲಿಪ್‌ಕಾರ್ಟ್‌ ಜಾಲತಾಣಕ್ಕೆ ₹1.5 ಕೋಟಿ ವಂಚನೆ

7
ವಸ್ತುಗಳ ಪೊಟ್ಟಣದಲ್ಲಿ ಕಲ್ಲು– ಮಣ್ಣು ಇಟ್ಟು ದೋಖಾ

ಫ್ಲಿಪ್‌ಕಾರ್ಟ್‌ ಜಾಲತಾಣಕ್ಕೆ ₹1.5 ಕೋಟಿ ವಂಚನೆ

Published:
Updated:
ಫ್ಲಿಪ್‌ಕಾರ್ಟ್‌ ಜಾಲತಾಣಕ್ಕೆ ₹1.5 ಕೋಟಿ ವಂಚನೆ

ಬೆಂಗಳೂರು: ದೇಶದ ಅತಿದೊಡ್ಡ ಇ– ಕಾಮರ್ಸ್‌ ಸಂಸ್ಥೆಯಾದ ಫ್ಲಿಪ್‌ಕಾರ್ಟ್‌ಗೆ ರಾಜ್ಯದಲ್ಲಿ ₹1.5 ಕೋಟಿಯಷ್ಟು ವಂಚನೆ ಆಗಿದೆ.

‘ಫ್ಲಿಪ್‌ಕಾರ್ಟ್‌ ಡಾಟ್ ಕಾಮ್’ ಜಾಲತಾಣದಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಿದ್ದ ಕೆಲ ಗ್ರಾಹಕರು, ಅವುಗಳ ಪೊಟ್ಟಣದಲ್ಲಿ ಕಲ್ಲು– ಮಣ್ಣು ಇರುವುದಾಗಿ ವಾದಿಸಿ ಸಂಸ್ಥೆಯನ್ನು ವಂಚಿಸಿದ್ದಾರೆ. ಈ ಸಂಬಂಧ ಜಾಲತಾಣದ ಪ್ರತಿನಿಧಿಯು ನಗರದ ಸೈಬರ್‌ ಕ್ರೈಂ ಠಾಣೆಗೆ ಜೂನ್‌ 2ರಂದು ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ವಂಚಕರು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

‘ಒಂದು ವರ್ಷದಿಂದ ಆರೋಪಿಗಳು, ಫ್ಲಿಪ್‌ಕಾರ್ಟ್‌ಗೆ ವಂಚನೆ ಮಾಡುತ್ತಿದ್ದಾರೆ. ಆ ಬಗ್ಗೆ ಅನುಮಾನಗೊಂಡಿದ್ದ ಸಂಸ್ಥೆಯ ಪ್ರತಿನಿಧಿ, ಆರೋಪಿಗಳ ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕಿ ದೂರು ಕೊಟ್ಟಿದ್ದಾರೆ’ ಎಂದು ಸೈಬರ್‌ ಕ್ರೈಂ ಠಾಣೆಯ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ವಂಚನೆ ಹೇಗೆ?: ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿರುತ್ತಿದ್ದ ಅಪರಿಚಿತರ ದಾಖಲೆಗಳನ್ನು ಮುದ್ರಿಸಿಕೊಳ್ಳುತ್ತಿದ್ದ ಆರೋಪಿಗಳು, ಅವುಗಳನ್ನು ಬಳಸಿಕೊಂಡು  ಬ್ಯಾಂಕೊಂದರಲ್ಲಿ ಉಳಿತಾಯ ಖಾತೆ ತೆರೆದಿದ್ದಾರೆ. ಅದೇ ದಾಖಲೆಗಳನ್ನು ಮೊಬೈಲ್ ಸೇವಾ ಕಂಪನಿಗಳಿಗೆ ಕೊಟ್ಟು ಸಿಮ್‌ ಕಾರ್ಡ್‌ ಸಹ ಖರೀದಿಸಿದ್ದಾರೆ. ಅವೆರಡನ್ನೂ ವಂಚನೆಗೆ ಬಳಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಜಾಲತಾಣಕ್ಕೆ ಭೇಟಿ ನೀಡುತ್ತಿದ್ದ ಆರೋಪಿಗಳು, ಕ್ಯಾಮೆರಾ, ಮೊಬೈಲ್, ಗಡಿಯಾರ ಸೇರಿದಂತೆ ಹಲವು ದುಬಾರಿ ಬೆಲೆಯ ವಸ್ತುಗಳನ್ನು ಬುಕ್ ಮಾಡುತ್ತಿದ್ದರು. ತಮ್ಮ ಉಳಿತಾಯ ಖಾತೆಯಿಂದ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕವೇ ಅದಕ್ಕೆ ಹಣ ಪಾವತಿಸುತ್ತಿದ್ದರು. ಅದೇ ವೇಳೆ, ಬಸ್ ನಿಲ್ದಾಣ ಹಾಗೂ ರಸ್ತೆಗಳ ವಿಳಾಸವನ್ನಷ್ಟೇ ನೀಡುತ್ತಿದ್ದರು. ಮನೆಯ ಗುರುತು ನೀಡುತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ವಸ್ತುಗಳನ್ನು ತಲುಪಿಸಲು ಹೋಗುತ್ತಿದ್ದ ಕೋರಿಯರ್ ಹುಡುಗ, ಆರೋಪಿಗಳ ಮೊಬೈಲ್‌ಗೆ ಕರೆ ಮಾಡುತ್ತಿದ್ದ. ಆತನಿರುವ ಸ್ಥಳಕ್ಕೆ ಹೋಗುತ್ತಿದ್ದ ಆರೋಪಿಗಳು, ವಸ್ತುಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ಹೇಳಿದರು. ಮರುದಿನವೇ ಫ್ಲಿಪ್‌ಕಾರ್ಟ್‌ನ ಸಹಾಯವಾಣಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ‘ನೀವು ಕಳುಹಿಸಿದ್ದ ವಸ್ತುವಿನ ಪೊಟ್ಟಣದಲ್ಲಿ ಕಲ್ಲುಗಳಿವೆ. ಇದರಿಂದ ನನಗೆ ವಂಚನೆಯಾಗಿದ್ದು, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಬೆದರಿಸುತ್ತಿದ್ದರು. ತಾವೇ ಪೊಟ್ಟಣಗಳಲ್ಲಿದ್ದ ವಸ್ತುಗಳನ್ನು ತೆಗೆದು, ಅದರಲ್ಲಿ ಕಲ್ಲು– ಮಣ್ಣು ಇಡುತ್ತಿದ್ದರು. ನಂತರ, ಆ ಪೊಟ್ಟಣದ ಫೋಟೊ ಕ್ಲಿಕ್ಕಿಸಿ ಸಂಸ್ಥೆಯ ಇ–ಮೇಲ್‌ ವಿಳಾಸಕ್ಕೆ ಕಳುಹಿಸುತ್ತಿದ್ದರು.

ಆರೋಪಿಗಳ ಮಾಹಿತಿ ನಿಜವೆಂದು ತಿಳಿಯುತ್ತಿದ್ದ ಸಂಸ್ಥೆಯ ಸಿಬ್ಬಂದಿ, ವಿಚಾರಣೆ ಸಹ ನಡೆಸುತ್ತಿರಲಿಲ್ಲ. ಆರೋಪಿಗಳು ನೀಡುತ್ತಿದ್ದ ಬ್ಯಾಂಕ್‌ ಖಾತೆಗೆ ತ್ವರಿತವಾಗಿಯೇ ಹಣ ವಾಪಸ್‌ ಜಮೆ ಮಾಡುತ್ತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಒಂದು ವರ್ಷದಿಂದ 200ಕ್ಕೂ ಹೆಚ್ಚು ವಸ್ತುಗಳನ್ನು ಖರೀದಿ ಮಾಡಿ ವಂಚಿಸಿದ್ದಾರೆ. ಇದು ಹಲವು ಗ್ರಾಹಕರು ಸೇರಿ ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಪೊಲೀಸರು ವಿವರಿಸಿದರು.

ಬ್ಯಾಂಕ್‌ ಖಾತೆಗಳಿಂದ ಅನುಮಾನ:

ವಸ್ತುಗಳನ್ನು ಖರೀದಿಸಲು ಆರೋಪಿಗಳು ನೀಡುತ್ತಿದ್ದ ಬ್ಯಾಂಕ್‌ ಖಾತೆಗಳು ಒಂದೇ ಆಗಿರುತ್ತಿದ್ದವು. ಪ್ರತಿ ಬಾರಿಯೂ ಅಂಥ ಖಾತೆಯಿಂದಲೇ ವಹಿವಾಟು ಆಗುತ್ತಿತ್ತು. ಜತೆಗೆ, ಅದೇ ಖಾತೆಗೆ ವಾಪಸ್‌ ಹಣ ಜಮೆ ಸಹ ಮಾಡಿಸಿಕೊಳ್ಳುತ್ತಿದ್ದರು. ಅಂಥ ಕೆಲ ಖಾತೆಗಳನ್ನು ಫ್ಲಿಪ್‌ಕಾರ್ಟ್‌ ಸಿಬ್ಬಂದಿ ಪಟ್ಟಿ ಮಾಡಿದಾಗಲೇ ವಂಚನೆ ಬಗ್ಗೆ ಅನುಮಾನ ಬಂದಿದೆ ಎಂದು ಪೊಲೀಸರು ಹೇಳಿದರು.

‘ಖಾತೆ ಇದ್ದ ಬ್ಯಾಂಕ್‌ ಅಧಿಕಾರಿಗಳನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಜತೆಗೆ, ಆರೋಪಿಗಳು ಬಳಸಿದ್ದ ಸಿಮ್‌ ಕಾರ್ಡ್‌ ಸಹ ನಕಲಿ ಎಂಬುದು ಗೊತ್ತಾಗಿತ್ತು. ಹೀಗಾಗಿ, ಫ್ಲಿಪ್‌ಕಾರ್ಟ್‌ ಪ್ರತಿನಿಧಿಯು ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಹೇಳಿದರು.

ಅಮೆಜಾನ್ ಸಂಸ್ಥೆಗೆ ವಂಚಿಸಿದ್ದ ಮಹಿಳೆ

ಆನ್‌ಲೈನ್‌ ಶಾಪಿಂಗ್‌ ಜಾಲತಾಣವಾದ ಅಮೆಜಾನ್‌ನಲ್ಲಿ ₹69.91 ಲಕ್ಷ ಮೌಲ್ಯದ ವಸ್ತುಗಳನ್ನು ಖರೀದಿಸಿ ವಂಚಿಸಿದ್ದ ಆರೋಪದಡಿ ಪಶ್ಚಿಮ ಬಂಗಾಳದ ಎಂಜಿನಿಯರಿಂಗ್ ಪದವೀಧರೆ ದೀಪನ್ವಿತಾ ಘೋಷ್ (32) ಎಂಬುವರನ್ನು 2017ರ ಮೇನಲ್ಲಿ ಹೆಣ್ಣೂರು ಪೊಲೀಸರು  ಬಂಧಿಸಿದ್ದರು.

ಜಾಲತಾಣಗಳಲ್ಲಿ ವಸ್ತುಗಳನ್ನ ಖರೀದಿಸುತ್ತಿದ್ದ ಆರೋಪಿ, ಅವುಗಳನ್ನೇ ಹೋಲುವ ನಕಲಿ ವಸ್ತುಗಳನ್ನು ಪೊಟ್ಟಣದಲ್ಲಿಟ್ಟು ಸಂಸ್ಥೆಗೆ ವಾಪಸ್‌ ಕೊಡುತ್ತಿದ್ದಳು. ಅದನ್ನು ನೋಡಿ ಸಂಸ್ಥೆಯವರು ವಾಪಸ್‌ ಹಣ ಪಾವತಿ ಮಾಡುತ್ತಿದ್ದರು. ಆರೋಪಿ, ಅಸಲಿ ವಸ್ತುಗಳನ್ನು ಬೇರೊಂದು ಜಾಲತಾಣದ ಮೂಲಕ ಮಾರಾಟ ಮಾಡುತ್ತಿದ್ದರು. ಅದು ಗೊತ್ತಾಗುತ್ತಿದ್ದಂತೆ ಅಮೆಜಾನ್ ಪ್ರತಿನಿಧಿ ಡಿ.ಟಿ.ನಾಯರ್‌ ಠಾಣೆಗೆ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry