ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಥಿರತೆಯತ್ತ ಮುಖಮಾಡಿದ ಪೇಟೆ

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಷೇರುಪೇಟೆಗಳು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅಸ್ಥಿರತೆ ಪ್ರದರ್ಶಿಸುತ್ತಿವೆ. ಇದರ ಜೊತೆಗೆ ಕಚ್ಚಾ ತೈಲ ಬೆಲೆ, ಅಮೆರಿಕದ ಡಾಲರ್ ಬೆಲೆ ಏರಿಕೆಯು ನಮ್ಮ ಪೇಟೆಗಳ ಮೇಲೆ ನೇರ ಪ್ರಭಾವ ಬೀರುತ್ತಿವೆ.

ಅಲ್ಲದೆ ಆಂತರಿಕವಾಗಿ ಬ್ಯಾಂಕಿಂಗ್ ವಲಯದ ಕಂಪನಿಗಳು ಪ್ರದರ್ಶಿಸಿದ ಕಳಪೆ ಫಲಿತಾಂಶಗಳು, ಐಸಿಐಸಿಐ ಬ್ಯಾಂಕ್ ಮುಖ್ಯಸ್ಥರ ಗೊಂದಲ, ವೇದಾಂತ ಕಂಪನಿಯ ತಮಿಳುನಾಡು ಘಟಕದಲ್ಲಿನ ಘಟನೆಗಳು, ಕುಸಿಯುತ್ತಿರುವ ಫಾರ್ಮಾ ವಲಯದ ಕಂಪನಿಗಳು, ಮಧ್ಯಮ ವಲಯದ ಕಂಪೆನಿಗಳಲ್ಲಿ ತಲೆದೂರುತ್ತಿರುವ ಆಡಿಟರ್ ಸಂಬಂಧಿತ ಬೆಳವಣಿಗೆಗಳು ಭಾರತೀಯ ಪೇಟೆಗಳನ್ನು ಸಹ ಹೆಚ್ಚು ಅಸ್ಥಿರತೆಯತ್ತ ತಳ್ಳಿವೆ.

ಮನ್ ಪಸಂದ್ ಬೆವರೇಜಸ್ ಕಂಪನಿ ಮೂರು ವರ್ಷಗಳ ಹಿಂದೆ ಪ್ರತಿ ಷೇರಿಗೆ ₹320 ರಂತೆ ಆರಂಭಿಕ ಷೇರು ವಿತರಿಸಿದ್ದು ಈ ವಾರಾಂತ್ಯದಲ್ಲಿ ₹202 ರ ಸಮೀಪ ಕೊನೆಗೊಂಡಿದೆ. ಇದರ ಹಿಂದೆ ಕಂಪನಿಯ ಆಡಿಟರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಒಂದೇ ತಿಂಗಳಲ್ಲಿ ₹458 ರ ಸಮೀಪದಿಂದ ₹200 ರವರೆಗೂ ಕುಸಿದಿರುವುದು ಪೇಟೆಯ ಆಘಾತಕಾರಿ ಗುಣ ಬಿಂಬಿಸುತ್ತದೆ. ಅದೇ ರೀತಿ ಅಟ್ಲಾಂಟ ಕಂಪನಿ ಷೇರು ಸಹ ಒಂದು ತಿಂಗಳಲ್ಲಿ ₹79 ರ ಸಮೀಪದಿಂದ ₹43 ರವರೆಗೂ ಕುಸಿದಿದೆ.

ರೇಟಿಂಗ್ ಕಂಪನಿಗಳ ನಿಯಂತ್ರಕರ ಹೊಸ ನಿಯಮಗಳು ಮತ್ತು ಸುಧಾರಣೆಗಳು ಆ ವಲಯದ ಕಂಪನಿಗಳು ಗುರುವಾರ ಹೆಚ್ಚಿನ ಕುಸಿತಕ್ಕೊಳಗಾದವು. ಕ್ರಿಸಿಲ್  ಷೇರಿನ ಬೆಲೆ ₹200 ಕ್ಕೂ ಹೆಚ್ಚಿನ ಇಳಿಕೆ ಕಂಡು ₹1,717 ರೂಪಾಯಿಗಳಲ್ಲಿ ಕೊನೆಗೊಂಡಿತು.

ಇಕ್ರಾ ಕಂಪನಿ ಷೇರಿನ ಬೆಲೆ  ₹110 ರಷ್ಟು  ಭಾರಿ ಕುಸಿತ ಕಂಡಿತು.ಕೇರ್ ರೇಟಿಂಗ್ಸ್ ಷೇರಿನ ಬೆಲೆ ಮಾತ್ರ ತಾನು ಪ್ರಕಟಿಸಿರುವ ಪ್ರತಿ ಷೇರಿಗೆ ₹37 ರ ಲಾಭಾಂಶದ ಕಾರಣ ಹೆಚ್ಚು ಕುಸಿತಕಾಣಲಿಲ್ಲ. ಗುರುವಾರ ಸಂವೇದಿ ಸೂಚ್ಯಂಕ 416 ಅಂಶಗಳ ಏರಿಕೆ ಕಾಣಲು ಮುಖ್ಯ ಕಾರಣ ಅದಾನಿ ಪೋರ್ಟ್ಸ್, ಎಚ್‌ಡಿಎಫ್‌ಸಿ, ಹಿಂದುಸ್ಥಾನ್ ಯುನಿಲಿವರ್, ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾದಂತಹ ಪ್ರಮುಖ ಕಂಪನಿಗಳು ಕಂಡ ದಿಢೀರ್ ಏರಿಕೆಯಾಗಿದೆ.

ಶುಕ್ರವಾರ ಬಜಾಜ್ ಆಟೋ ಸುಮಾರು ₹140 ರಷ್ಟು,  ಮಾರುತಿ ಸುಜುಕಿ ಷೇರಿನ ಬೆಲೆ ₹257 ರಷ್ಟು ಏರಿಕೆ ಕಂಡವು. ಆದರೆ ಇತರೆ ಅಗ್ರಮಾನ್ಯ ಕಂಪನಿಗಳಾದ ಟಿಸಿಎಸ್‌, ಇನ್ಫೊಸಿಸ್‌, ಟಾಟಾ ಸ್ಟೀಲ್‌, ಎಚ್‌ಡಿಎಫ್‌ಸಿ ಬ್ಯಾಂಕ್, ಹಿಂದುಸ್ಥಾನ್ ಲಿವರ್, ಇಂಡಸ್ ಇಂಡ್ ಬ್ಯಾಂಕ್,  ಒಎನ್‌ಜಿಸಿ,  ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಗಳು ಇಳಿಕೆ ಕಂಡಿದ್ದರಿಂದ ಸಂವೇದಿ ಸೂಚ್ಯಂಕದಲ್ಲಿ ಮಾತ್ರ ಅದು ಬಿಂಬಿತವಾಗಲಿಲ್ಲ. ಅಂದರೆ ಗುರುವಾರವು ಮೂಲಾಧಾರತ ಪೇಟೆಯ ಚುಕ್ತಾ ಚಕ್ರದ ಕೊನೆದಿನವಾದ್ದರಿಂದ ಶೂನ್ಯ ಮಾರಾಟಗಾರರ ಚಟುವಟಿಕೆಯಿಂದ ಅನೇಕ ಷೇರುಗಳು ಗಗನಕ್ಕೆ ಚಿಮ್ಮಿದ್ದು, ಶುಕ್ರವಾರ  ಹೊಸ ಚುಕ್ತಾಚಕ್ರದಲ್ಲಿ ಹೆಚ್ಚಿನವು ದಿಶೆ ಬದಲಿಸಿವೆ.

ಷೇರುಪೇಟೆಯಲ್ಲಿ ಏರಿಳಿತದ ಸುನಾಮಿಯು ಬುಧವಾರ  1;2 ರ ಅನುಪಾತದ ಬೋನಸ್, ಮುಖಬೆಲೆ ಸೀಳಿಕೆಗಳಿಗೆ ವಿಶೇಷ ಸಾಮಾನ್ಯ ಸಭೆಯನ್ನು  ಜೂನ್ 14 ರಂದು ಕರೆದಿರುವ  ಅವಂತಿ ಫೀಡ್ಸ್ , ಉತ್ತಮ ಫಲಿತಾಂಶ ಪ್ರಕಟಿಸಿದ ದಿಲೀಪ್ ಬಿಲ್ಡ್ ಕಾನ್ ಭಾರಿ ಏರಿಳಿತದೊಂದಿಗೆ ಕುಸಿತಕ್ಕೊಳಗಾದವು.  ಅವಂತಿ ಫೀಡ್ಸ್ ಷೇರು ಒಂದು ತಿಂಗಳಲ್ಲಿ ₹2500 ರ ಸಮೀಪದಿಂದ ₹1,546 ರ ಸಮೀಪಕ್ಕೆ ಕುಸಿದು ನಂತರ ಪುಟಿದೆದ್ದು ₹1,627 ರಲ್ಲಿ ಕೊನೆಗೊಂಡಿತು. ₹1,543 ರಲ್ಲಿ ವಾರಾಂತ್ಯ ಕಂಡಿತು .

ದಿಲೀಪ್ ಬಿಲ್ಡ್ ಕಾನ್ ಷೇರಿನ ಬೆಲೆ ಬುಧವಾರ ₹10000 ದ ಸಮೀಪವಿದ್ದು ₹901 ರ ವರೆಗೂ ಕುಸಿದು ನಂತರ ₹917 ರ ಸಮೀಪ ಕೊನೆಗೊಂಡಿತು.  ಆದರೆ ಗುರುವಾರ ₹762 ರವರೆಗೂ ಕುಸಿದು ₹834 ರಲ್ಲಿ ಕೊನೆಗೊಂಡಿತು.  ₹853 ರಲ್ಲಿ ವಾರಾಂತ್ಯ ಕಂಡಿತು. ಗುರುವಾರ  ದಿನದ ಆರಂಭದಲ್ಲಿ ಬಾಂಬೆ ಡೈಯಿಂಗ್ ಷೇರಿನ ಬೆಲೆ ₹271 ರಲ್ಲಿದ್ದು  ದಿನದ ಕೊನೆಯ ಅರ್ಧ ಘಂಟೆಯಲ್ಲಿ ₹225 ರವರೆಗೂ ಜಾರಿ ₹241 ರಲ್ಲಿ ಕೊನೆಗೊಂಡಿತು.

ಮಧ್ಯಮಶ್ರೇಣಿ ಸೂಚ್ಯಂಕವು ಜನವರಿ ತಿಂಗಳಲ್ಲಿ ಸರ್ವಕಾಲೀನ ಗರಿಷ್ಠಕ್ಕೆ ಏರಿಕೆ ಕಂಡಿದ್ದು ಐದು ತಿಂಗಳಲ್ಲಿ ಸುಮಾರು 2,400 ಅಂಶಗಳಷ್ಟು ಇಳಿಕೆ ಕಂಡಿದೆ.

ಕಳೆದ ಜೂನ್ 2017 ರ ಕನಿಷ್ಠ ಮಟ್ಟಕ್ಕೆ ಕೇವಲ 1400 ಅಂಶಗಳಷ್ಟು ಅಂತರದಲ್ಲಿದೆ. ಕೆಳಮಧ್ಯಮ ಶ್ರೇಣಿ ಸೂಚ್ಯಂಕವು ಸಹ ಇದೆ ರೀತಿಯ ಪರಿಸ್ಥಿತಿ ಇದೆ.

ಈ ಅನಿಶ್ಚಿತ ಸಂದರ್ಭದಲ್ಲಿ ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತದಿಂದ ಆಕರ್ಷಕ ಡಿಸ್ಕೌಂಟ್‌ನಲ್ಲಿ ದೊರೆಯುತ್ತಿರುವುದಲ್ಲದೆ ಅನೇಕ ಕಂಪನಿಗಳು ಆಕರ್ಷಕ ಲಾಭಾಂಶ ವಿತರಿಸುತ್ತಿರುವುದನ್ನು ಸಹ ಪರಿಗಣಿಸಿ ಹೂಡಿಕೆ ನಿರ್ಧರಿಸಿ.

ಲಾಭಾಂಶ: ₹5 ರ ಮುಖಬೆಲೆ ಷೇರು ಗಳು: ಅಪೋಲೋ ಹಾಸ್ಪಿಟಲ್; ₹5,  ಡೆಕ್ಕನ್ ಸಿಮೆಂಟ್; ₹3, ಜೆ ಕುಮಾರ್ ಇನ್ಫ್ರಾ; ₹2,  ಟೊರೆಂಟ್ ಫಾರ್ಮಾ; ₹5, ಪ್ರಿಸಿಷನ್ ವೈರ್; ₹2.50.

₹2 ಮುಖಬೆಲೆ ಷೇರುಗಳು; ಪಿರಾಮಲ್ ಎಂಟರ್ ಪ್ರೈಸಸ್ ; ₹25,  ಗಾಡ್ ಫ್ರೆ ಫಿಲಿಪ್ಸ್; ₹8,  ಅಲ್ಕೆಮ್ ಲ್ಯಾಬ್; ₹7,   ಎಚ್‌ಎಸ್‌ಐಎಲ್; ₹4, ಬಿಎಚ್ಇಎಲ್‌; ₹1.02,  ಬ್ಯಾಂಕೋ ಪ್ರಾಡಕ್ಟ್ಸ್; ₹5.80, ಕ್ಯಾಪಿಲಿನ್ ಪಾಯಿಂಟ್; ₹2, ಸಿಯಾರಾಮ್ ಸಿಲ್ಕ್; ₹2, ಮುಂಜಾಲ್ ಆಟೋ; ₹1.20  ಇಪ್ಕಾ ಲ್ಯಾಬ್ ₹1,  ಇಂಡೋಕೋ ರೆಮೆಡಿಸ್; ₹,

ಕೇವಲ ಲಾಭಾಂಶ ಪ್ರಕಟಿಸಿವೆ ಎಂಬುದಕ್ಕೆ ಮಾರುಹೋಗುವುದಕ್ಕಿಂತ ಲಾಭಾಂಶದ ಗಾತ್ರ ಅರಿತು ನಿರ್ಧರಿಸುವುದು ಇಂದಿನ ಅಗತ್ಯ.

(9886313380, ಸಂಜೆ 4.30 ರನಂತರ)

**

ಈ ವಾರ ಷೇರುಪೇಟೆ ವಹಿವಾಟಿನ ಮೇಲೆ ದೇಶಿ ಮತ್ತು ಜಾಗತಿಕ ವಿದ್ಯಮಾನಗಳು ಪ್ರಭಾವ ಬೀರಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸೋಮವಾರ ಮತ್ತು ಮಂಗಳವಾರ ಬಡ್ಡಿದರ ಪರಾಮರ್ಶೆ ನಡೆಸಲಿದೆ. ಹಣದುಬ್ಬರ ಏರುಮುಖವಾಗಿರುವುದರಿಂದ ಈ ಬಾರಿ ಬಡ್ಡಿದರದಲ್ಲಿ ಏರಿಕೆಯಾಗುವ ನಿರೀಕ್ಷೆ ಮಾಡಲಾಗಿದೆ.

ಹಣದುಬ್ಬರ ಏರಿಕೆಯಾಗುವ ಆತಂಕದಿಂದ ಆರ್‌ಬಿಐ 2017ರ ಆಗಸ್ಟ್‌ನಿಂದ ಬಡ್ಡಿದರ
ಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಬಂದಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ವ್ಯತ್ಯಯದಂತಹ ಅಂಶಗಳೂ ಷೇರುಪೇಟೆಯ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಯುರೋಪ್‌ ಒಕ್ಕೂಟ, ಕೆನಡಾ ಮತ್ತು ಮೆಕ್ಸಿಕೋದಿಂದ ಆಮದಾಗುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದು ಷೇರುಪೇಟೆಗಳಲ್ಲಿ ವಿದೇಶಿ ಹೂಡಿಕೆ ಚಟುವಟಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT