ಕಸ ಸಮಸ್ಯೆ ಮರುಕಳಿಸುವ ಸೂಚನೆ

7
ನಗರದ ಮಾರುಕಟ್ಟೆ, ಪ್ರಮುಖ ರಸ್ತೆ ಪಕ್ಕ ಹೆಚ್ಚುತ್ತಿರುವ ತ್ಯಾಜ್ಯ ರಾಶಿ

ಕಸ ಸಮಸ್ಯೆ ಮರುಕಳಿಸುವ ಸೂಚನೆ

Published:
Updated:
ಕಸ ಸಮಸ್ಯೆ ಮರುಕಳಿಸುವ ಸೂಚನೆ

ಬೆಂಗಳೂರು: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಮತ್ತೆ ಮರುಕಳಿಸುವ ಸಾಧ್ಯತೆ ದಟ್ಟವಾಗಿದೆ.

ನಗರದ ಸಿಟಿ ರೈಲು ನಿಲ್ದಾಣ, ಐಜೂರು ವೃತ್ತ, ಕೆ.ಆರ್‌. ಮಾರುಕಟ್ಟೆ, ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶದಲ್ಲಿ ಹಸಿ ತರಕಾರಿ ತ್ಯಾಜ್ಯ ರಾಶಿಬಿದ್ದಿದೆ. ಕಲಾಸಿಪಾಳ್ಯ ಮಾರುಕಟ್ಟೆಯ ಪ್ರವೇಶದ್ವಾರದಲ್ಲಿಯೇ ರಸ್ತೆ ಸಂಪೂರ್ಣ ಗುಂಡಿ ಬಿದ್ದಿದ್ದು ವಾಹನಗಳು ಕೆಸರಿಗಿಳಿದೇ ಮುಂದುವರಿಯಬೇಕಿದೆ. ಕಸ ಸಂಗ್ರಹ ಮತ್ತು ವಿಲೇವಾರಿ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎಂದು ಈ ಪ್ರದೇಶದ ಜನರು ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರಣವೇನು?

‌ನಗರದಲ್ಲಿ ಸುಮಾರು 10 ದಿನಗಳಿಂದ ಹಂತಹಂತವಾಗಿ ಬಿಬಿಎಂಪಿಯ ಪೌರಕಾರ್ಮಿಕರು ನಡೆಸುತ್ತಿರುವ ಮುಷ್ಕರ ಕೆಲವು ವಾರ್ಡ್‌ಗಳಲ್ಲಿ ನಿತ್ಯದ ಸ್ವಚ್ಛತೆ ನಿರ್ವಹಣೆಗೆ ಸಮಸ್ಯೆ ಆಗಿದೆ. ಸುಮಾರು 20,000 ಜನ ಪೌರ ಕಾರ್ಮಿಕರು ಬಿಬಿಎಂಪಿಯಲ್ಲಿ ಇದ್ದಾರೆ. 15,500 ಕಾರ್ಮಿಕರಿಗೆ ಸಂಬಳ ಕೊಡುವುದಾಗಿ ಬಿಬಿಎಂಪಿ ಹೇಳಿದೆ. ಉಳಿದವರ ಬಗ್ಗೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನಿಸಿ ವೇತನ ಕೊಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ. ಆದರೆ, ಚರ್ಚೆ ಇನ್ನೂ ನಿರ್ಣಾಯಕ ಹಂತಕ್ಕೆ ಬಂದಿಲ್ಲ ಎಂದು ಪೌರಕಾರ್ಮಿಕರ ಸಂಘದ ಪ್ರತಿನಿಧಿಗಳು ಹೇಳಿದ್ದಾರೆ.

‘ಇದು ಪೌರ ಕಾರ್ಮಿಕರ ಸಮಸ್ಯೆ ಮಾತ್ರವಲ್ಲ. ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುತ್ತಿರುವ ಆಟೋ ಟಿಪ್ಪರ್‌ ಚಾಲಕರು, ಲೋಡರ್‌ಗಳು, ಸಹಾಯಕರು ಇವರೆಲ್ಲರೂ ವೇತನ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಹೀಗಾಗಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಪರಿಹಾರ ಮಾರ್ಗ ಕಂಡುಕೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಹಾನಗರಪಾಲಿಕೆ ಮತ್ತು ನಗರಸಭೆ ಪೌರ ಕಾರ್ಮಿಕ ಸಂಘದ ಮುಖಂಡರು ಹೇಳಿದರು.

‘ಕೆಲಕಾಲ ನಾವು ವಾಹನಗಳಿಗೆ ಡೀಸೆಲ್‌ ಹಾಕಲೂ ಪರದಾಡಿದ್ದೆವು. ಆರ್ಥಿಕ ಸಮಸ್ಯೆಯಿಂದ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿತ್ತು. ಒಂದೆರಡು ದಿನಗಳಲ್ಲಿ ಸರಿಹೋಗುವ ನಿರೀಕ್ಷೆ ಇದೆ. ವಿಶೇಷವಾಗಿ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರಿಗಳೂ ಜವಾಬ್ದಾರಿಯಿಂದ ವರ್ತಿಸಬೇಕಿದೆ. ತ್ಯಾಜ್ಯವನ್ನು ತಮ್ಮ ಅಂಗಡಿ ಮುಂಭಾಗದಲ್ಲಿ, ಎಲ್ಲೆಂದರಲ್ಲಿ ಹಾಕುವುದು ಸಲ್ಲದು. ಒಂದೇ ಕಡೆ ಹಾಕಿದರೆ ನಮಗೂ ಲೋಡ್‌ ಮಾಡಿಕೊಂಡು ಹೋಗುವುದು ಸುಲಭ’ ಎಂದರು ಕಸ ಸಾಗಾಟದ ವಾಹನ ಚಾಲಕ ವೆಂಕಟೇಶ್‌.

ಈ ಬಗ್ಗೆ ಪ್ರತಿಕ್ರಿಯೆಗೆ ಮೇಯರ್‌ ಸಂಪತ್‌ರಾಜ್‌ ಅವರು ಕರೆ ಸ್ವೀಕರಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry