ಹಳ್ಳಿಗೆ ಹೋದರು–ಮಾವು ಕಿತ್ತರು–ಸವಿದರು..

7
ಮಾವು ಅಭಿವೃದ್ಧಿ ಮಂಡಳಿಯಿಂದ ಆಯೋಜನೆ

ಹಳ್ಳಿಗೆ ಹೋದರು–ಮಾವು ಕಿತ್ತರು–ಸವಿದರು..

Published:
Updated:
ಹಳ್ಳಿಗೆ ಹೋದರು–ಮಾವು ಕಿತ್ತರು–ಸವಿದರು..

ಬೆಂಗಳೂರು: ನೂರು ಎಕರೆ ಮಾವಿನ ತೋಟ, ಸುತ್ತಲೂ ಹಸಿರಾದ ವಾತಾವರಣ, ಪ್ರಖರ ಬಿಸಿಲು, ಎಲ್ಲೆಲ್ಲೂ ಕಾಣುವ ಮಾವಿನ ಗಿಡಗಳು, ರುಚಿಕರವಾದ ಹಣ್ಣುಗಳನ್ನು ಮರದಿಂದಲೇ ಕಿತ್ತು ತಿನ್ನುವ ಅನುಭವ...!

ಇದು ಮಾವು ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ‘ಮ್ಯಾಂಗೊ ಪಿಕ್ಕಿಂಗ್ ಟೂರ್‌’ ನಲ್ಲಿ ಕಂಡುಬಂದ ದೃಶ್ಯಗಳು. ನಗರದ ಜನರಿಗೆ ಮಾವಿನ ಹಣ್ಣುಗಳನ್ನು ಮರದಲ್ಲಿಯೇ ಕಿತ್ತು ತಿನ್ನುವ ವಿನೂತನ ಅನುಭವ ಸಿಗಲಿ ಎಂಬ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜಿಸಲಾಗಿತ್ತು.

ಬೆಳಿಗ್ಗೆ ಸೂರ್ಯನ ಕಿರಣಗಳು ಪ್ರಖರವಾಗುವ ಮೊದಲೇ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ 50ಕ್ಕೂ ಹೆಚ್ಚು ಮಂದಿ ಬೆಂಗಳೂರಿನಿಂದ ಗೌರಿಬಿದನೂರಿನ ಕಡೆ ಪ್ರಯಾಣ ಮಾಡಿದರು. ಅಲ್ಲಿಂದ 20ಕಿ.ಮೀ ದೂರದಲ್ಲಿರುವ ಸಣ್ಣ ಹಳ್ಳಿ ಆನೋಡಿಯಲ್ಲಿ ಕೆ.ಜನಾರ್ದನ ನಾಯ್ಡು ಅವರು ಮಕ್ಕಳಂತೆ ಸಾಕಿ ಬೆಳೆಸಿರುವ ಗಿಡಗಳು ಸ್ವಾಗತಿಸಿದವು.

ತೋಟದ ಮನೆಯ ಸುತ್ತಲೂ ನೂರಾರು ಗಿಡಗಳು ಇವೆ. ಅಲ್ಲಿಂದ ಹತ್ತು ಹೆಜ್ಜೆ ಮುಂದೆ ನಡೆದರೆ ತೋಟ ಸಿಗುತ್ತದೆ. ವಯಸ್ಸಾದವರು, ಮಕ್ಕಳೂ ಸೇರಿದಂತೆ ಎಲ್ಲರೂ ಉತ್ಸಾಹದಿಂದ ತೋಟದ ಒಳಕ್ಕೆ ನಡೆದರು. ತೋಟಗಾರಿಕಾ ತಜ್ಞ ಎಸ್‌.ವಿ ಹಿತ್ತಲಮನಿ ಅವರು ಎಲ್ಲರಿಗೂ ತೋಟದ ಪರಿಚಯ ಮಾಡಿಸಿದರು. ಅಲ್ಫಾನ್ಸೊ (ಬಾದಾಮಿ) ಹಣ್ಣುಗಳ ಪರಿಮಳ ಎಲ್ಲರನ್ನೂ ಆಕರ್ಷಿಸಿತು. ಗಿಡದಲ್ಲೇ ಮಾಗಿದ್ದ ಒಂದೊಂದೇ ಹಣ್ಣುಗಳನ್ನು ಕಿತ್ತುಕೊಂಡ ಅವರು, ಇದು ಯಾವ ಜಾತಿ ಹಣ್ಣು, ಇದರ ರುಚಿ ಹೇಗೆ, ಯಾವ ಹಂತದಲ್ಲಿ ಕೊಯಿಲು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎನ್ನುವ ಹತ್ತಾರು ಮಾಹಿತಿಗಳನ್ನು ಹೇಳುತ್ತಾ ಕೈಯಲ್ಲಿದ್ದ ಚಾಕುವಿನಿಂದ ಹಣ್ಣಗಳನ್ನು ಕತ್ತರಿಸಿ ಎಲ್ಲರಿಗೂ ರುಚಿ ತೋರಿಸುತ್ತಾ ಮುಂದೆ ಸಾಗುತ್ತಿದ್ದರು.

ಅವರ ಹಿಂದೆ ಬಾಲಂಗೋಚಿಯಂತೆ ಹೋಗುತ್ತಿದ್ದ ಮಕ್ಕಳ ದಂಡು ಆಗಾಗ ಅವರನ್ನು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಿತ್ತು. ಅಲ್ಲಿದ್ದ ಅಧಿಕಾರಿಗಳು ಮಾವಿನ ಹಣ್ಣುಗಳಿಗೆ ಬೆಲೆ ಸಿಗದೆ ರೈತರು ಪಡುವ ಸಂಕಷ್ಟಗಳ ಬಗ್ಗೆಯೂ ಮಾಹಿತಿ ನೀಡಿದರು.

ಮಾಗಿದ್ದ ಹಣ್ಣುಗಳನ್ನು ಆಯ್ದುಕೊಂಡು ಚೀಲ ತುಂಬಿಸಿಕೊಳ್ಳುತ್ತಿದ್ದ ಮಹಿಳೆಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇಷ್ಟು ದೂರ ಬಂದು 20 ಕೆ.ಜಿ ಹಣ್ಣಾದರೂ ಕೊಂಡು ಹೋಗಬೇಕು ಅನ್ನೋದು ಅವರ ನಡುವಿನ ಪ್ರಮುಖ ಚರ್ಚೆ ಆಗಿತ್ತು.

*

‘ಮಕ್ಕಳಿಗಿಂತ ಹೆಚ್ಚಾಗಿ ಗಿಡಗಳನ್ನು ಸಾಕಿದ್ದೇನೆ’

‘ನಮ್ಮ ಸ್ವಂತ ಊರು ಆಂಧ್ರಪ್ರದೇಶ. ಇಲ್ಲಿಗೆ ಬಂದು 40 ವರ್ಷ ಆಗಿದೆ. ಮೊದಲಿಗೆ ಒಂದು ಎಕರೆ ಭೂಮಿ ಕೊಂಡುಕೊಂಡೆ. ಆನಂತರ ಒಂದೊಂದೇ ಎಕರೆ ಹೆಚ್ಚಾಗುತ್ತಾ ಹೋಯಿತು. ಈಗ ನೂರು ಎಕರೆಗೆ ಬಂದು ನಿಂತಿದೆ. ನಾನು ಆರಂಭದಲ್ಲಿಯೇ ಗಿಡಗಳಿಂದ ಫಲ ಬಯಸಲಿಲ್ಲ. ಅವುಗಳನ್ನು ಮಕ್ಕಳಂತೆ ಸಾಕಿದೆ. ಈಗ ನಾವು ಸ್ವಲ್ಪ ವೃತ್ತಿಪರತೆ ಕಂಡುಕೊಂಡಿದ್ದೇವೆ. ನನಗೆ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ಎಲ್ಲರೂ ವಿದ್ಯಾವಂತರು. ಆದರೂ ಕೃಷಿಗೆ ಬೆಂಬಲವಾಗಿ ನಿಂತಿದ್ದಾರೆ. ಇದರಿಂದಾಗಿಯೇ ಇಷ್ಟು ದೊಡ್ಡ ತೋಟವನ್ನು ಬೆಳೆಸಲು ಸಾಧ್ಯವಾಗಿದೆ. ತೋಟಕ್ಕೆ ನನ್ನ ಪತ್ನಿ ಹೆಸರಿನಲ್ಲಿ ‘ರಾಜೇಶ್ವರಿ ಫಾರ್ಮ್‌’ ಎಂದು ಇಟ್ಟಿದ್ದೇನೆ’ ಎಂದು ಕೆ. ಜನಾರ್ದನ ನಾಯ್ಡು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry