ಕದನವಿರಾಮ ಒಪ್ಪಿಗೆ ಬೆನ್ನಿಗೇ ಪಾಕ್‌ ದಾಳಿ

7
ಕಾಶ್ಮೀರ ಗಡಿಯಲ್ಲಿ ದಾಳಿ

ಕದನವಿರಾಮ ಒಪ್ಪಿಗೆ ಬೆನ್ನಿಗೇ ಪಾಕ್‌ ದಾಳಿ

Published:
Updated:
ಕದನವಿರಾಮ ಒಪ್ಪಿಗೆ ಬೆನ್ನಿಗೇ ಪಾಕ್‌ ದಾಳಿ

ಜಮ್ಮು: ಪಾಕಿಸ್ತಾನದ ಯೋಧರು ನಡೆಸಿದ ಗುಂಡು ಮತ್ತು ಫಿರಂಗಿ ದಾಳಿಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ವಾರದ ಹಿಂದಷ್ಟೇ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರ ಸಭೆ ನಡೆದು 2003ರ ಕದನ ವಿರಾಮ ಒಪ್ಪಂದವನ್ನು ಜಾರಿಗೆ ತರಲು ಒಪ್ಪಿಗೆ ನೀಡಲಾಗಿತ್ತು.

ಅಂತರರಾಷ್ಟ್ರೀಯ ಗಡಿಯ ಪ್ರಗ್ವಾಲ್‌ ಪ್ರದೇಶ ಮತ್ತು ಹತ್ತಿರದ ಕಂಚಕ್‌ ಹಾಗೂ ಖೋರ್‌ ವಲಯಗಳಲ್ಲಿ ಪಾಕಿಸ್ತಾನವು ಭಾರಿ ಗುಂಡಿನ ದಾಳಿ ನಡೆಸಿದೆ. ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಮಹಿಳೆ ಸೇರಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಈ ಪ್ರದೇಶದ ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳತ್ತ ಧಾವಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಎಸ್‌.ಎನ್‌. ಯಾದವ್‌ (48) ಮತ್ತು ಕಾನ್‌ಸ್ಟೆಬಲ್‌ ವಿ.ಕೆ. ಪಾಂಡೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮೃತಪಟ್ಟರು ಎಂದು ಬಿಎಸ್‌ಎಫ್‌ ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಮೇ 29ರಂದು ಮಾತುಕತೆ ನಡೆದಿತ್ತು. ಪಾಕಿಸ್ತಾನದ ಡಿಜಿಎಂಒ ಕಚೇರಿಯೇ ಮಾತುಕತೆ ನಡೆಸುವಂತೆ ಕೋರಿತ್ತು.  ಚರ್ಚೆಯ ಬಳಿಕ ಎರಡೂ ಸೇನೆಗಳು ಹೇಳಿಕೆ ಬಿಡುಗೆ ಮಾಡಿ 15 ವರ್ಷ ಹಳೆಯ ಒಪ್ಪಂದಕ್ಕೆ ಬದ್ಧ ಎಂದು ಘೋಷಿಸಿದ್ದವು.

ಜಮ್ಮು, ಕಠುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿನ ಗಡಿಯಲ್ಲಿ ಕಳೆದ ತಿಂಗಳು ಪಾಕಿಸ್ತಾನದಿಂದ ಭಾರಿ ಗುಂಡಿನ ದಾಳಿ ನಡೆದಿತ್ತು. ಈ ಜಿಲ್ಲೆಗಳ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಹೋಗಿದ್ದರು.

‘ತಿರುಗೇಟು ನೀಡಲು ಅವಕಾಶವಿದೆ’

ಗಡಿಯಾಚೆಗಿನಿಂದ ಪಾಕಿಸ್ತಾನದ ಗುಂಡಿನ ದಾಳಿ ಮುಂದುವರಿದರೆ ರಮ್ಜಾನ್‌ ತಿಂಗಳಲ್ಲಿ ಕದನವಿರಾಮ ಘೋಷಿಸಿರುವುದನ್ನು ಹಿಂದಕ್ಕೆ ಪಡೆಯಬೇಕಾದೀತು ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹಂಸರಾಜ್‌ ಅಹಿರ್‌ ಹೇಳಿದ್ದಾರೆ.

ಪಾಕಿಸ್ತಾನವು ಅಪ್ರಚೋದಿತವಾಗಿ ದಾಳಿ ನಡೆಸಿದರೆ ಅದಕ್ಕೆ ತಿರುಗೇಟು ನೀಡುವ ಅವಕಾಶ ಒಪ್ಪಂದದಲ್ಲಿಯೇ ಇದೆ. ಮೊದಲು ದಾಳಿ ನಡೆಸುವುದಿಲ್ಲ ಎಂಬ ಭಾರತದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಹಿರ್‌ ಸ್ಪಷ್ಟಪಡಿಸಿದ್ದಾರೆ.

**

ಪಾಕಿಸ್ತಾನ ಹೇಳುವುದೊಂದು, ಮಾಡುವುದೊಂದು ಎಂಬುದನ್ನು ಈ ಕದನವಿರಾಮ ಉಲ್ಲಂಘನೆ ಮತ್ತೊಮ್ಮೆ ಸಾಬೀತು ಮಾಡಿದೆ

  -ರಾಮ್‌ ಅವತಾರ್‌, ಬಿಎಸ್‌ಎಫ್‌ ಮಹಾ ನಿರೀಕ್ಷಕ, ಜಮ್ಮು ಗಡಿ ಪ್ರದೇಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry