ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವ್‌ಭಾಜಿ ಖ್ಯಾತಿಯ ಶೆಟ್ಟಿ ಸ್ನ್ಯಾಕ್ಸ್‌

ನಮ್ಮೂರ ಆಹಾರ
Last Updated 29 ಸೆಪ್ಟೆಂಬರ್ 2018, 10:46 IST
ಅಕ್ಷರ ಗಾತ್ರ

ಬೆಳಗಾವಿ: ಬಹುಭಾಷೆ ಹಾಗೂ ಬಹುಸಂಸ್ಕೃತಿಯ ನಾಡಾಗಿರುವ ಬೆಳಗಾವಿಯಲ್ಲಿ ಆಹಾರ ಪದ್ಧತಿಯಲ್ಲೂ ಸಾಕಷ್ಟು ವೈವಿಧ್ಯತೆ ಇದೆ. ಸ್ಥಳೀಯ ಆಹಾರ ಶೈಲಿಯ ಜೊತೆಗೆ ಮಹಾರಾಷ್ಟ್ರ ಶೈಲಿಯ ತಿಂಡಿ– ತಿನಿಸುಗಳು ಇಲ್ಲಿ ಲಭ್ಯ ಇವೆ. ಪಾವ್‌ಭಾಜಿ, ಮಸಾಲ ಪಾವ್‌, ವಡಾಪಾವ್‌, ದಾಬೇಲಿ, ಶೇವ್‌ ಪುರಿ, ಪಾನಿ ಪುರಿ ಸೇರಿದಂತೆ ಹಲವು ತಿಂಗಳು ಇಲ್ಲಿಯೂ ಜನಪ್ರಿಯವಾಗಿವೆ.

ನಗರದ ಬೋಗಾರ್‌ವೇಸ್‌ ಬಳಿಯಿರುವ ಶ್ರೀ ಶೆಟ್ಟಿ ಸ್ನ್ಯಾಕ್ಸ್‌ ಪಾವ್‌ಭಾಜಿಗಾಗಿ ತುಂಬಾ ಜನಪ್ರಿಯವಾಗಿದೆ. ಸಂಜೆ ವೇಳೆ ಸಾಕಷ್ಟು ಜನರು ಇಲ್ಲಿ ಬಂದು, ಪಾವ್‌ಭಾಜಿಯನ್ನು ಸವಿಯುತ್ತಾರೆ. 33 ವರ್ಷಗಳಿಂದ ಇದೇ ಸ್ಥಳದಲ್ಲಿ ತಿಂಡಿಪೋತರಿಗೆ ಪಾವ್‌ಭಾಜಿ ರುಚಿಯನ್ನು ಶೆಟ್ಟಿ ಸಹೋದರರು ಉಣಬಡಿಸುತ್ತಿದ್ದಾರೆ. ಹೋಟೆಲ್‌ ಆರಂಭವಾದಾಗ ಇದ್ದಂತಹ ರುಚಿಯನ್ನೇ ಇವತ್ತಿಗೂ ಕಾಪಾಡಿಕೊಂಡು ಬಂದಿರುವುದು ಹೋಟೆಲ್‌ನ ಹೆಗ್ಗಳಿಕೆ.

ಪಾವ್‌ಭಾಜಿ ನಂಟು;

ಉತ್ತರ ಕನ್ನಡದ ಕುಂದಾಪುರದವರಾದ ಭುಜಂಗ ಶೆಟ್ಟಿ 1980ರ ದಶಕದಲ್ಲಿ ಬೆಳಗಾವಿಯಲ್ಲಿ ವಾಸವಾಗಿದ್ದರು. ಪಕ್ಕದ ಮುಂಬೈ ಹಾಗೂ ಪುಣೆಗೆ ವ್ಯಾಪಾರಕ್ಕೆಂದು ಹೋದಾಗ ಪಾವ್‌ಭಾಜಿ ರುಚಿ ನೋಡಿದ್ದರು. ಇಂತಹದೊಂದು ತಿಂಡಿಯನ್ನು ಬೆಳಗಾವಿಯಲ್ಲೇಕೆ ಆರಂಭಿಸಬಾರದು ಎಂದು ಯೋಚಿಸಿದರು.

1985ರಲ್ಲಿ ನಗರದ ಬೋಗಾರ್‌ವೇಸ್‌ ಬಳಿ ಚಿಕ್ಕದಾಗಿ ಹೋಟೆಲ್‌ ಶೆಟ್ಟಿ ಸ್ನ್ಯಾಕ್ಸ್‌ ಆರಂಭಿಸಿದರು. ಪಾವ್‌ಭಾಜಿ ತಯಾರಿಸಲು ಮುಂಬೈ ಹಾಗೂ ಉತ್ತರ ಪ್ರದೇಶದವರನ್ನು ಕರೆತಂದರು. ದಿನಬೆಳಗಾಗುವುದರೊಳಗೆ ಹೋಟೆಲ್‌ ಪ್ರಸಿದ್ಧವಾಯಿತು. ಮಕ್ಕಳು, ಯುವಕರು, ವೃದ್ಧರು ಎನ್ನದೇ ಎಲ್ಲರೂ ಪಾವ್‌ಭಾಜಿ ಸವಿದರು.

ವಿಶೇಷತೆ:

‘ಪಾವ್‌ಭಾಜಿಯ ಮುಖ್ಯ ಆಕರ್ಷಣೆಯಂದರೆ ಅದರ ಭಾಜಿ. ಈ ಭಾಜಿಯನ್ನು ನಾವೇ ತಯಾರಿಸುತ್ತೇವೆ. ಬ್ಯಾಡಗಿ ಮೆಣಸಿನಕಾಯಿ ಹಾಗೂ ಇತರ ಮಸಾಲ ಪದಾರ್ಥಗಳನ್ನು ಬಳಸಿಕೊಂಡು ಮನೆಯಲ್ಲಿಯೇ ತಯಾರಿಸುತ್ತೇವೆ. ಹೋಟೆಲ್‌ ಆರಂಭವಾದಾಗ ಇದ್ದಂತಹ ರುಚಿಯನ್ನೇ ಇವತ್ತಿಗೂ ಕಾಪಾಡಿಕೊಂಡು ಬಂದಿದ್ದೇವೆ. ಇದೇ ನಮ್ಮ ವ್ಯಾಪಾರದ ರಹಸ್ಯ’ ಎಂದು ಹೋಟೆಲ್‌ ಮಾಲೀಕರಾದ ನಾಗರಾಜ ಶೆಟ್ಟಿ ಹೇಳಿದರು. ಇವರು ಭುಜಂಗ ಶೆಟ್ಟಿಯವರ ಸಹೋದರರಾಗಿದ್ದಾರೆ.

‘ಪಾವ್‌ ಹಾಗೂ ಭಾಜಿಯನ್ನು ಅಮುಲ್‌ ಬೆಣ್ಣೆಯಲ್ಲಿ ಪ್ರೈ ಮಾಡಿಕೊಡುತ್ತೇವೆ. ಇದರಿಂದಾಗಿ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ 1,000ದಿಂದ 2,000 ವರೆಗೆ ಜನರು ಭೇಟಿ ನೀಡುತ್ತಾರೆ. ಪಾವ್‌ಭಾಜಿಯ ಜೊತೆ ಇತರ ಕೆಲವು ಸ್ನ್ಯಾಕ್ಸ್‌ಗಳನ್ನು ಕೂಡ ನೀಡುತ್ತೇವೆ. ಮಸಾಲ ಪಾವ್‌, ಶೇವಪುರಿ, ಪಾನಿ ಪುರಿ, ಭೇಲ್‌ ಪುರಿ, ದಾಬೇಲಿ, ದಾವಣಗೆರೆ ಬೆಣ್ಣೆದೋಸೆ ಹಾಗೂ ಟೀ– ಕಾಫಿ ನೀಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT