ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖರತೆ ಹೆಚ್ಚಿಸಿಕೊಂಡ ಅಗ್ನಿ–5 ಕ್ಷಿಪಣಿ

ಗುರುತ್ವ ಸೆಳೆತ ಖಂಡಾಂತರ ಕ್ಷಿಪಣಿಯ ಆರನೇ ಪರೀಕ್ಷೆಯೂ ಯಶಸ್ವಿ
Last Updated 3 ಜೂನ್ 2018, 20:13 IST
ಅಕ್ಷರ ಗಾತ್ರ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಗ್ನಿ–5 ಕ್ಷಿಪಣಿಯ ಆರನೇ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ. ಕ್ಷಿಪಣಿಯಲ್ಲಿ ಬಳಸಲಾಗಿರುವ ಪಥದರ್ಶಕ ವ್ಯವಸ್ಥೆ ಮತ್ತು ಗುರಿಯ ನಿಖರತೆಯನ್ನು ಪರೀಕ್ಷೆಗೆ ಒಳಪಡಿಸುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿತ್ತು. ಈ ಪರೀಕ್ಷೆಯಲ್ಲಿ ಕ್ಷಿಪಣಿಯು ಅತ್ಯಂತ ನಿಖರವಾಗಿ ಗುರಿಯ ಮೇಲೆ ದಾಳಿ ನಡೆಸಿತು ಎಂದು ಡಿಆರ್‌ಡಿಒ ಮೂಲಗಳು ಹೇಳಿವೆ. ಒಡಿಶಾದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ಉಡಾಯಿಸಲಾಗಿತ್ತು

ಪ್ರಚಂಡ ಕವಚ
ಗುರುತ್ವ ಸೆಳೆತ (ಬ್ಯಾಲೆಸ್ಟಿಕ್) ಕ್ಷಿಪಣಿಗಳು ಅವುಗಳಲ್ಲಿರುವ ಎಂಜಿನ್‌ಗಳ ನೆರವಿನಿಂದ ಭೂಮಿಯ ವಾತಾವರಣವನ್ನು ಬಿಟ್ಟು ತೀರಾ ಮೇಲಕ್ಕೆ ಹೋಗುತ್ತವೆ. ಅಲ್ಲಿಂದ ಭೂಮಿಯತ್ತ ವಾಪಸ್ ಆಗುತ್ತವೆ. ಈ ಹಂತದಲ್ಲಿ ಗುರುತ್ವಾಕರ್ಷಣೆಯ ಬಲದಿಂದಲೇ ಅವು ಭಾರಿ ವೇಗದಲ್ಲಿ ಗುರಿಯತ್ತ ಮುನ್ನುಗ್ಗುತ್ತವೆ. ಹೀಗಾಗಿಯೇ ಅವನ್ನು ಗುರುತ್ವ ಸೆಳೆತ ಕ್ಷಿಪಣಿಗಳು ಎಂದು ಕರೆಯಲಾಗುತ್ತದೆ. ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಭಾರಿ ಘರ್ಷಣೆ ಉಂಟಾಗಿ, ಸುಮಾರು 4,000 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಬಿಡುಗಡೆಯಾಗುತ್ತದೆ. ಅಷ್ಟು ಉಷ್ಣಾಂಶವನ್ನು ತಡೆದುಕೊಳ್ಳುವ ಸಲುವಾಗಿ ಕಾರ್ಬನ್–ಕಾರ್ಬನ್ ಸಂಯೋಜನೆಯ ವಿಶಿಷ್ಟ ಕವಚವನ್ನು ರೂಪಿಸಲಾಗಿದೆ. ಅದು ಅಷ್ಟು ಬಿಸಿಗೆ ಕರಗುತ್ತಿದ್ದರೂ, ಕ್ಷಿಪಣಿಯ ಒಳಭಾಗದ ಉಷ್ಣಾಂಶವನ್ನು 50 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಇರಿಸಿರುತ್ತದೆ. ಈ ಕವಚವನ್ನೂ ಭಾನುವಾರದ ಉಡಾವಣೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ

**
ಅಂಕಿ–ಅಂಶ

5,000 ಕೆ.ಜಿ. ಕ್ಷಿಪಣಿಯ ತೂಕ
17.5 ಮೀಟರ್ ಎತ್ತರ
2 ಮೀಟರ್ ಅಗಲ  
1,500 ಕೆ.ಜಿ. ತೂಕದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ
5,000 ಕಿ.ಮೀ. ಕ್ಷಿಪಣಿಯ ದಾಳಿ ವ್ಯಾಪ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT