‘ಬರಹಗಾರರಿಗೆ ಅಂಧಾಭಿಮಾನ ಬೇಡ’

7
ಅಗಸನಕಟ್ಟೆ ಸ್ಮರಣಾರ್ಥ ರಾಜ್ಯಮಟ್ಟದ ವಿದ್ಯಾರ್ಥಿ ಕಥಾ ಸ್ಪರ್ಧೆ ಬಹುಮಾನ ವಿತರಣೆ

‘ಬರಹಗಾರರಿಗೆ ಅಂಧಾಭಿಮಾನ ಬೇಡ’

Published:
Updated:

‌‌ಹುಬ್ಬಳ್ಳಿ: ‘ಯುವ ಬರಹಗಾರರು ತತ್ವ–ಅಸ್ಮಿತೆಗಳ ಬಗ್ಗೆ ಅಂಧಾಭಿಮಾನ ಬೆಳೆಸಿಕೊಳ್ಳಬಾರದು. ಬರವಣಿಗೆಯಲ್ಲಿ ತಟಸ್ಥತೆ ಮೈಗೂಡಿಸಿಕೊಳ್ಳಬೇಕು’ ಎಂದು ಕಥೆಗಾರ ಡಾ. ರಾಘವೇಂದ್ರ ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ರಾಜ್ಯಮಟ್ಟದ ವಿದ್ಯಾರ್ಥಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ವಸ್ತುನಿಷ್ಠವಾಗಿರಬೇಕು. ಬರಹಗಾರರು ಒಂದೇ ವಿಷಯಕ್ಕೆ ಸೀಮಿತರಾಗದೇ ಎಲ್ಲ ವಿಷಯ ಓದಬೇಕು ಎಂದ ಅವರು, ಪ್ರಹ್ಲಾದ ಅಗಸನಕಟ್ಟೆ ಅವರಿಗೆ ಯುವ ಬರಹಗಾರರ ಮೇಲೆ ಅತೀವ ವಿಶ್ವಾಸವಿತ್ತು. ಈ ನಿಟ್ಟಿನಲ್ಲಿ ಯುವ ಸಾಹಿತಿಗಳಿಗೆ ಸ್ಪರ್ಧೆ ಏರ್ಪಡಿಸಿದ್ದು ಒಳ್ಳೆಯದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಮಹಾಂತಪ್ಪ ನಂದೂರ ಮಾತನಾಡಿ, ‘ಹುಬ್ಬಳ್ಳಿ ವಾಣಿಜ್ಯ ನಗರಿಯಾದರೆ, ಧಾರವಾಡ ಸರಸ್ವತಿ ನಗರಿ, ವಿದ್ಯಾನಗರಿ ಎಂದು ಹೆಸರಾಗಿದೆ. 12ನೇ ಶತಮಾನದಲ್ಲಿ ಬೇರೆ, ಬೇರೆ ವೃತ್ತಿಯಲ್ಲಿ ತೊಡಗಿದ್ದ ವಚನಕಾರರು ಒಂದೆಡೆ ಸೇರಿ ವಚನ ಕ್ರಾಂತಿ ಮಾಡಿದರು. ಹುಬ್ಬಳ್ಳಿಯಲ್ಲೂ ಅಂತಹ ಒಂದು ತಂಡ ಕಟ್ಟಲು ಅಗಸನಕಟ್ಟೆ ಕಾರಣಕರ್ತರಾಗಿದ್ದರು. ಯುವ ಬರಹಗಾರರನ್ನು ಸದಾ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದರು’ ಎಂದು ಸ್ಮರಿಸಿಕೊಂಡರು.

ಸಾಹಿತಿ ಸುನಂದಾ ಕಡಮೆ ಮಾತನಾಡಿ, ‘ಹೊಸ ಕಥೆಗಾರರು ಬೆಳೆದಷ್ಟು ಸಾಹಿತ್ಯದಲ್ಲಿ ಹೊಸ ಫಸಲು ಬೆಳೆಯುತ್ತದೆ. ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಸಾಹಿತ್ಯದ ಪಾತ್ರ ಮುಖ್ಯವಾಗಿದೆ. ಸಾಹಿತ್ಯದ ಬೆಳವಣಿಗೆ ರಿಲೇ ಇದ್ದಂತೆ. ಇದನ್ನು ಒಬ್ಬರಿಂದ ಒಬ್ಬರಿಗೆ ಮುಂದುವರಿಸುತ್ತಲೇ ಇರಬೇಕು’ ಎಂದರು.

‘ಕಳೆದುಕೊಂಡವರು’ ಕಥೆಗೆ ಪ್ರಶಸ್ತಿ ಸ್ವೀಕರಿಸಿದ ರಟ್ಟಿಹಳ್ಳಿ ರಾಘವಾಂಕುರ ಮಾತನಾಡಿ, ‘ಕಥಾವಸ್ತು ಬಹುತೇಕ ನನ್ನ ಬಾಲ್ಯ, ಗ್ರಾಮ, ಪ್ರಾದೇಶಿಕತೆಯ ಸುತ್ತಲೇ ಇದೆ. ಪತ್ರಿಕೆಗಳು ಇಂತಿಷ್ಟೇ ಪದಗಳು ಎಂಬ ಅಂಗಿಯನ್ನು ನೀಡಿ, ಅದಕ್ಕೆ ಹೊಂದಿಕೊಳ್ಳುವಂತೆ ಬರಹವನ್ನು ಸೀಮಿತಗೊಳಿಸಿವೆ. ಆದರೆ, ಈ ಕಥಾಸ್ಪರ್ಧೆಯಲ್ಲಿ ಮಿತಿ ಇರಲಿಲ್ಲವಾದ್ದರಿಂದ ಅಂತರಾಳದಲ್ಲಿನ ಎಲ್ಲವನ್ನೂ ಬರೆಯಲು ಸಾಧ್ಯವಾಯಿತು’ ಎಂದರು.

ಪ್ರೊಬಸ್ ಕ್ಲಬ್, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಕ್ಷರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಹ್ಲಾದ ಅಗಸನಕಟ್ಟೆ ಅವರ ಪತ್ನಿ ವಿಜಯಾ ಅಗಸನಕಟ್ಟೆ, ಪ್ರೊಬಸ್ ಕ್ಲಬ್‌ ಅಧ್ಯಕ್ಷ ಎಸ್.ಎನ್.ಮುಷಣ್ಣನವರ, ಅಕ್ಷರ ಸಾಹಿತ್ಯ ವೇದಿಕೆಯ ವಿರೂಪಾಕ್ಷ ಕಟ್ಟಿಮನಿ, ಚಿದಾನಂದ ಕಮ್ಮಾರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎ ದೊಡಮನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry