ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಷನಲ್‌ ಕಾಲೇಜಿಗೆ ಬರುವುದಕ್ಕೆ ನನಗೆ ರೋಮಾಂಚಕ: ಎಚ್‌.ಡಿ.ಕುಮಾರಸ್ವಾಮಿ

Last Updated 4 ಜೂನ್ 2018, 7:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಈ ಕಾಲೇಜಿನಲ್ಲಿ ಓದುವಾಗ ಅತ್ಯಂತ ದಡ್ಡ ವಿದ್ಯಾರ್ಥಿ ಆಗಿದ್ದೆ. ನಟ ರಾಜಕುಮಾರ್ ಅವರ ಸಿನಿಮಾಗಳನ್ನು ನೋಡುತ್ತ ಸಿನಿಮಾ ಕ್ಷೇತ್ರಕ್ಕೆ ಹೋಗಿದ್ದೆ. ಅವತ್ತು ನಾನು ಓದುತ್ತಿರಲಿಲ್ಲ, ಅಂದು ಇಷ್ಟು ಓದಿದ್ದರೆ ನಾನು ಸರ್ಕಾರಿ ನೌಕರಿ ಪಡೆಯುತ್ತಿದ್ದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಜಯನಗರದ ನ್ಯಾಷನಲ್ ಕಾಲೇಜಿಗೆ ಸೋಮವಾರ ಅವರು ಭೇಟಿ ನೀಡಿದರು.

ಇದೇ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದ ಎಚ್‌ಡಿಕೆ, ತಮ್ಮ ವಿದ್ಯಾಭ್ಯಾಸದ ದಿನಗಳನ್ನು ಮೆಲುಕು ಹಾಕಿದರು. 20 –20 ಸರ್ಕಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಈ ಕಾಲೇಜಿಗೆ ಭೇಟಿ ನೀಡಿದ್ದರು.

ಇದೀಗ ಎರಡನೇ ಬಾರಿ ಕಾಲೇಜಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ತಮಗೆ ಪಾಠ ಮಾಡಿದ ಹಿರಿಯ ಪ್ರಾಧ್ಯಾಪಕರೊಂದಿಗೆ ಅತ್ಮೀಯವಾಗಿ ಮಾತನಾಡಿದರು.

1979-80ನೇ ಸಾಲಿನಲ್ಲಿ ನಾನು ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ ದೊಡ್ಡ ಮಟ್ಟ ಸಾಧನೆ ಮಾಡಿದ ನರಸಿಂಹಯ್ಯ ಅವರ ಅನೇಕರಿಗೆ ದಾರಿದೀಪವಾಗಿದ್ದಾರೆ. ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ಅವರ ಶ್ರಮ ಶ್ಲಾಘನೀಯ ಎಂದು ಸ್ಮರಿಸಿದರು.

ಹುಡುಗಾಟಿಕೆ ಮಾಡಿಕೊಂಡೇ ಹೋದರೆ ವಿದ್ಯಾರ್ಥಿಗಳು ಸಾಧನೆ ಮಾಡಲು ಆಗುವುದಿಲ್ಲ. ನಾನು ಹಿಂದಿನ ಲಾಸ್ಟ್ ಬೆಂಚಿನಲ್ಲಿ ಕೂರುತ್ತಿದ್ದೆ. ಎಲ್ಲಿ ನಗೆ ಪ್ರಾಧ್ಯಾಪಕರು ಪ್ರಶ್ನೆ ಕೇಳುತ್ತಾರೋ ಎಂಬ ಭಯ ಇರುತಿತ್ತು. ನ್ಯಾಷನಲ್ ಕಾಲೇಜಿಗೆ ಬರುವುದಕ್ಕೆ ನನಗೆ ರೋಮಾಂಚಕ ಎನ್ನಿಸುತ್ತದೆ ಎಂದು ನಹೇಳಿದರು.

ನನ್ನ ತಂದೆ–ತಾಯಿ ದೇವರ ಶ್ಲೋಕ, ಸ್ತ್ರೋತ್ರ ಹೇಳಿ ದಿನ ಆರಂಭ ಮಾಡುತ್ತಾರೆ. ಅವರ ಪೂಜಾ ಫಲ ನನ್ನನ್ನು ಸಿಎಂ ಹಂತಕ್ಕೆ ತಂದಿದೆ ಎಂದರು.

ನಾನು ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗಿದ್ದೇನೆ. ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿ ಸರ್ಕಾರ ಇದೆ.  ಮತ್ತೆ ಮತ್ತೆ ಅದನ್ನೇ ಹೇಳುತ್ತೇನೆ. ರಾಜಕೀಯದಲ್ಲಿ ನಾನು ಸಾಂದರ್ಭಿಕ ಶಿಶು ಅಂತ ಹೇಳಿದ್ದೇನೆ. 

ಸಾಲಮನ್ನಾ ಹಾಗೂ ಇನ್ನಿತರ ವಿಷಯಗಳಲ್ಲಿ ನನ್ನ ಮೇಲೆ ಒತ್ತಡ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ನನ್ನ ಮೇಲೆ ಯಾವುದೇ ಒತ್ತಡವಿಲ್ಲ.  ನಾನು ಸಮಾಧಾನದಿಂದ ಕೆಲಸ ಮಾಡುತ್ತಿದ್ದೇನೆ. ಆರ್ಥಿಕ ಹೊರೆ ಆಗದಂತೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದರು.

ಹಿಂದಿನ ಮುಖ್ಯಮಂತ್ರಿಯವರ ಹೆಲಿಕಾಪ್ಟರ್ ಬಿಲ್ ₹13 ಲಕ್ಷ ಆಗಿತ್ತು. ಅದರ ಖರ್ಚು ಕೇವಲ ₹5 ಲಕ್ಷ ಮಾತ್ರ. ಹೀಗಾಗಿ ನಾನು ಅದನ್ನು ತಿರಸ್ಕರಿಸಿದ್ದೇನೆ. ವಿಶೇಷ ವಿಮಾನದಲ್ಲಿ ಪ್ರಯಾಣಿಸಿದರೆ ₹40 ಲಕ್ಷ ಖರ್ಚು ಆಗುತ್ತದೆ.  ಮಾಮೂಲಿ ವಿಮಾನದಲ್ಲಿ ದೆಹಲಿಗೆ ಹೋದರೆ ಕೇವಲ ₹75 ಸಾವಿರ ಆಗುತ್ತದೆ. ನಾನು ತುರ್ತು ಸಂದರ್ಭ ಬಿಟ್ಟು ವಿಶೇಷ ವಿಮಾನ ಬಳಸುವುದಿಲ್ಲ ಎಂದು ಮಾಹಿತಿ ನೀಡಿದರು.

20 ಹೊಸ ಕಾರು ಖರೀದಿ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿದೆ, ಆದರೆ ಅದು ನನ್ನ ಅವಧಿಯಲ್ಲಿ ಖರೀದಿ ಆಗಿಲ್ಲ. ಬಿಡಿಎ ವತಿಯಿಂದ 20 ಕಾರು ಖರೀದಿ ಆಗಿದ್ದನ್ನು ರದ್ದು ಮಾಡಿದ್ದೇನೆ. ನಾನು ಸರ್ಕಾರಿ ಕಾರು ಬಳಸುತ್ತಿಲ್ಲ. ನನ್ನ ಕಾರಿಗೆ ಸ್ವಂತ ಹಣದಿಂದ ಡೀಸೆಲ್ ಹಾಕಿಸುತ್ತೇನೆ. ಇಂತಹ ಅನೇಕ ಬದಲಾವಣೆ ತರುತ್ತಿದ್ದೇನೆ ಎಂದು ಹೇಳಿದರು.

ಭದ್ರತೆ ದೃಷ್ಟಿಯಿಂದ ಗುರುತಿನ ಪತ್ರ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT