ಕೋಟೆಗೆ ‘ಮುತ್ತಿಗೆ’ ಹಾಕಿದ ಎಮ್ಮೆಗಳ ಸೈನ್ಯ!

7

ಕೋಟೆಗೆ ‘ಮುತ್ತಿಗೆ’ ಹಾಕಿದ ಎಮ್ಮೆಗಳ ಸೈನ್ಯ!

Published:
Updated:
ಕೋಟೆಗೆ ‘ಮುತ್ತಿಗೆ’ ಹಾಕಿದ ಎಮ್ಮೆಗಳ ಸೈನ್ಯ!

ಕಲಬುರ್ಗಿ: ಶತ್ರುಗಳಿಂದ ರಕ್ಷಿಸಿಕೊಳ್ಳಲು ಕಟ್ಟಿದ ಇಲ್ಲಿನ ಬಹಮನಿ ಕೋಟೆಗೆ ಎಮ್ಮೆಗಳ ಕಾಟ ಶುರುವಾಗಿದೆ. ದಿನ ಬೆಳಗಾದರೆ ಸಾವಿರಾರು ‘ಎಮ್ಮೆಗಳ ಸೈನ್ಯ’ ಕೋಟೆಯನ್ನು ಸುತ್ತುವರಿಯುತ್ತದೆ. ಕೋಟೆಗೆ ರಕ್ಷಣೆ ನೀಡಬೇಕಿದ್ದ ಪುರಾತತ್ವ ಇಲಾಖೆ ಅಧಿಕಾರಿಗಳು ದಾರಿ ಕಾಣದಂತಾಗಿದ್ದಾರೆ.

ನಗರದ ಪ್ರಮುಖ ಆಕರ್ಷಣೆಗಳಲ್ಲಿ ಬಹಮನಿ ಕೋಟೆ ಪ್ರಮುಖವಾದುದು. ಶ್ರೀಮಂತ ಇತಿಹಾಸ ಹೊಂದಿರುವ ಈ ಊರಿಗೆ ಸುಲ್ತಾನರು ನೀಡಿದ ಅಮೂಲ್ಯ, ಅದ್ಭುತ ಕೊಡುಗೆ ಇದು. ಶಿಸ್ತಿನಿಂದ ಕೂಡಿದ ಮಾದರಿ, ಕಟ್ಟುಮಸ್ತಾದ ನಿರ್ಮಾಣ ಶೈಲಿ, ಎಂಥ ಶತ್ರುವಿಗೂ ನೀರಿಳಿಸಬಲ್ಲ ಛಾತಿ ಹೊಂದಿದೆ ಈ ದೈತ್ಯ ಕಟ್ಟಡ. ಆದರೆ, ಸ್ಥಳೀಯ ನಿವಾಸಿಗಳ ಕಾಟವನ್ನೇ ಸಹಿಸಿಕೊಳ್ಳಲಾಗದೆ ಬಿಕ್ಕಳಿಸುತ್ತಿದೆ.

ನಮ್ಮೂರ ಕೋಟೆಯ ಬಗ್ಗೆ: ಕಲಬುರ್ಗಿ ಕೋಟೆಯನ್ನು 1347ರಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪದ ಗಟ್ಟಿತನಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಮೊದಲು ರಾಜಾ ಗುಲ್ಚಂದ್ ಈ ಕೋಟೆ ಕಟ್ಟಲು ಆರಂಭಿಸಿದರು. ಕೋಟೆ ಗೋಡೆ ಹಾಗೂ ಸುತ್ತಲೂ ಆಳವಾದ ಕಂದಕ ನಿರ್ಮಿಸುವ ಮೂಲಕ ಅಲ್ಲಾವುದ್ದೀನ್ ಬಹಮನಿ ಇದನ್ನು ಕಟ್ಟುಮಸ್ತಾಗಿಸಿದರು.

ಸುಮಾರು 15 ಗೋಪುರಗಳು ಮತ್ತು 26 ಬಂದೂಕುಗಳ ಇಲ್ಲಿದ್ದವು. ಅವುಗಳಲ್ಲಿ ಕೆಲವು ಮಾತ್ರ ಸದ್ಯ ನೋಡಲು ಸಿಗುತ್ತವೆ. ಐದು ಬೃಹತ್‌ ಗುಮ್ಮಟಗಳ ಅವಶೇಷಗಳು ಈಗಲೂ ಇವೆ. ಕೋಟೆ 38 ಸಾವಿರ ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿದೆ. 75 ಸಣ್ಣ ಗುಮ್ಮಟಗಳು ಮತ್ತು 250 ಕಮಾನುಗಳು ಇದರ ಗಟ್ಟಿತನಕ್ಕೆ ಸಾಕ್ಷಿ.

ಕೋಟೆಯ ಒಳಗೆ ಪೂರ್ಣಪ್ರಮಾಣದಲ್ಲಿ ಸುಸಜ್ಜಿತವಾಗಿರುವುದು ಜಾಮಿಯಾ ಮಸೀದಿ ಮಾತ್ರ. ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ 1367 ಇದನ್ನು ನಿರ್ಮಿಸಲಾಯಿತು. ದಕ್ಷಿಣ ಭಾರತದಲ್ಲಿ ಮೊದಲ ಮಸೀದಿ ಎಂಬ ಹೆಗ್ಗಳಿಕೆಗೂ ಇದಕ್ಕಿದೆ.

ಎಮ್ಮೆಗಳಿಗೆ ಜಾಗ ಮಾಡಿ ಕೊಡಿ: ಕೋಟೆಯೊಳಗೆ ಶತ್ರುಗಳು ನುಸುಳದಂತೆ ಸುತ್ತಲೂ ಕಾಲುವೆ ನಿರ್ಮಿಸಿದ್ದು ಅವನ ದೂರದೃಷ್ಟಿಗೆ ಕೈಗನ್ನಡಿ. ಆದರೆ, ಈಗ ಅದೇ ಕಾಲುವೆಯಲ್ಲಿ ಎಮ್ಮೆಗಳು ಬಿದ್ದು ಹೊರಳಾಡುತ್ತವೆ. ನಗರದ ಎಲ್ಲೆಡೆಯಿಂದಲೂ ಗೌಳಿಗರು ಎಮ್ಮೆಗಳನ್ನು ಇಲ್ಲಿಗೇ ಕರೆತಂದು ಬಿಡುತ್ತಾರೆ. ದಿನವಿಡೀ ಕೆಸರಿನಲ್ಲೇ ಬಿದ್ದುಕೊಳ್ಳುವ ಎಮ್ಮೆಗಳಿಂದಾಗಿ ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸಂಚಾರ ಕಿರಿಕಿಯಂತೂ ತಪ್ಪಿದ್ದಲ್ಲ.

ಪಕ್ಕದಲ್ಲೇ ಇರುವ ಅಪ್ಪನ ಕೆರೆಗೆ ನೂರಾರು ಜನ ವಾಯುವಿಹಾರಕ್ಕೆ, ಮಕ್ಕಳು ಆಟಕ್ಕೆ ಬರುತ್ತಾರೆ. ಆದರೆ, ಕೆರೆ ಪಕ್ಕದ ರಸ್ತೆಯಲ್ಲೇ ಇಂಥ ದಯನೀಯ ಸ್ಥಿತಿ ಕಂಡು ಮಮ್ಮಲ ಮರಗುವಂತಾಗಿದೆ ಎನ್ನುತ್ತಾರೆ ಬಾಲಕೃಷ್ಣ– ಜ್ಯೋತಿ ದಂಪತಿ.

ದಶಕದ ಹಿಂದೆ ಗೌಳಿಗರು ಅಪ್ಪನ ಕೆರೆಯಲ್ಲೇ ಎಮ್ಮೆಗಳ ಮೈ ತೊಳೆಯುತ್ತಿದ್ದರು. ಮಹಾನಗರ ಪಾಲಿಕೆ ಅದನ್ನು ಅಭಿವೃದ್ಧಿಪಡಿಸಿದ ಮೇಲೆ ಅಲ್ಲಿ ನಿಷೇಧ ಹೇರಲಾಯಿತು. ಅನಿವಾರ್ಯವಾಗಿ ಎಮ್ಮೆಗಳನ್ನು ಕೋಟೆ ಗೋಡೆ ಸುತ್ತ ಇರುವ ಕಾಲುವೆಗೆ ಬಿಡಲಾರಂಭಿಸಿದರು.

ಈಗ ನಗರದ ನಾಲ್ಕೂ ದಿಕ್ಕಿನಿಂದ ಚರಂಡಿ ನೀರು ಕಾಲುವೆಗೆ ಹರಿದು ಬರುತ್ತಿದೆ. ಎಡಭಾಗದ ಕಾಲುವೆ ತ್ಯಾಜ್ಯ ವಿಲೇವಾರಿಗೆ ಬಳಕೆಯಾಗುತ್ತಿದೆ. ಎಡಭಾಗದ ಕಂದಕ ಕೊಚ್ಚೆ ನೀರಿನ ಸಂಗ್ರಹ ತಾಣವಾಗಿದೆ. ಇದರಿಂದಾಗಿ ಕೋಟೆ ಸಮೀಪದ ಬೀದಿ ಬದಿ ವ್ಯಾಪಾರಿಗಳು, ದಾರಿ ಹೋಕರು ತೊಂದರೆ ಅನುಭವಿಸುವಂತಾಗಿದೆ.

ಗಮನ ಹರಿಸದ ಎಎಸ್‌ಐ

‘ಬಹಮನಿ ಕೋಟೆಯನ್ನು ಭಾರತೀಯ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕ ಎಂದು ಗುರುತಿಸಿದೆ. ಹೀಗಾಗಿ, ಇದರ ಪೂರ್ಣ ಜವಾಬ್ದಾರಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್‌ಐ) ಇಲಾಖೆ ವಹಿಸಿಕೊಂಡಿದೆ. 2016ರಲ್ಲಿ ಇಲಾಖೆಯು ₹1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. ಅದನ್ನು ಬಿಟ್ಟರೆ ಮತ್ತೆ ಇತ್ತ ತಿರುಗಿಯೂ ನೋಡಿಲ್ಲ’ ಎಂದು ಪರಿಸರ ಪ್ರೇಮಿಗಳು ಆರೋಪಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry