ಉನ್ನತ ಶಿಕ್ಷಣ ಪ್ರವೇಶ ಹೆಚ್ಚಳ ಅಗತ್ಯ

7
ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಉದ್ಘಾಟನೆ; ಜಯಚಂದ್ರ ಅಭಿಪ್ರಾಯ

ಉನ್ನತ ಶಿಕ್ಷಣ ಪ್ರವೇಶ ಹೆಚ್ಚಳ ಅಗತ್ಯ

Published:
Updated:

ಕಲಬುರ್ಗಿ: ‘ರಾಜ್ಯದಲ್ಲಿ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳಿದ್ದರೂ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ. ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ’ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟರು.

ಕಮಲಾಪುರ ತಾಲ್ಲೂಕು ನವನಿಹಾಳ ಗ್ರಾಮದಲ್ಲಿ ಭಾನುವಾರ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಉನ್ನತ ಶಿಕ್ಷಣದ ನಿವ್ವಳ ದಾಖಲಾತಿ ಅನುಪಾತ (ಜಿಇಆರ್) ಶೇ 26.5ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ 30ರಷ್ಟಿದೆ. ತಮಿಳುನಾಡಿನಲ್ಲಿ ನಿವ್ವಳ ದಾಖಲಾತಿ ಅನುಪಾತ ಶೇ 46.9ರಷ್ಟಿದೆ. ತಮಿಳುನಾಡು ರಾಜ್ಯದಲ್ಲಿ ಗ್ರಾಮೀಣ ಪ್ರದೇಶದತ್ತ ಹೆಚ್ಚು ಗಮನ ಹರಿಸಿದ್ದರಿಂದ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ. ನಮ್ಮ ರಾಜ್ಯದಲ್ಲೂ ಈ ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಸತ್ಯ ಸಾಯಿ ಶಿಕ್ಷಣ ಸಂಸ್ಥೆಯು ರಾಜ್ಯದ 14 ಜಿಲ್ಲೆಗಳಲ್ಲಿ 19 ಶಿಕ್ಷಣ ಸಂಸ್ಥೆ, 30 ಶಾಲಾ–ಕಾಲೇಜುಗಳನ್ನು ಹೊಂದಿದೆ. ಪ್ರತಿ ವರ್ಷ ಸುಮಾರು 5ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮಹತ್ತರ ಗುರಿ ಹೊಂದಿದೆ. ಇದರಿಂದ ರಾಜ್ಯದ ಬಡ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಶಾಸಕ ಬಸವರಾಜ ಹೊರಟ್ಟಿ ಮಾತನಾಡಿ, ‘ಮಾನವೀಯ ಮೌಲ್ಯಗಳು ನಶಿಸುತ್ತಿರುವ ಸಂದರ್ಭದಲ್ಲಿ ನೈತಿಕ ಶಿಕ್ಷಣ ನೀಡಲು ವಿಶ್ವವಿದ್ಯಾಲಯ ಸ್ಥಾಪಿಸಿರುವುದು ಶ್ಲಾಘನೀಯ. ಪೋಷಕರು ಮಕ್ಕಳನ್ನು ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳಿಗೆ ಕಳುಹಿಸುವ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಅಧ್ಯಾತ್ಮ ಮತ್ತು ನೈತಿಕ ಶಿಕ್ಷಣದ ಬಗ್ಗೆ

ಯಾರೂ ಯೋಚಿಸುತ್ತಿಲ್ಲ. ಈ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ವಿಶ್ವವಿದ್ಯಾಲಯದ ಮುಖ್ಯ ಮಾರ್ಗದರ್ಶಕ ಹಾಗೂ ಕುಲಾಧಿಪತಿ ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, ‘ಸತ್ಯ ಸಾಯಿ ಸಂಸ್ಥೆ ವತಿಯಿಂದ ತೆಲಂಗಾಣ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪುಟ್ಟಪರ್ತಿ, ಬೆಂಗಳೂರು, ಛತ್ತೀಸ್‌ಗಡ್, ದೆಹಲಿಯಲ್ಲಿ ಹೃದ್ರೋಗ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ. ಮುಂಬಯಿ, ಕೋಲ್ಕತ್ತಾ, ಗುಜರಾತ್ ಮತ್ತು ಓಡಿಶಾ ರಾಜ್ಯಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಜಗತ್ತಿನ 11 ದೇಶಗಳಲ್ಲಿ ಸಾಯಿ ಬಾಬಾ ಆಶ್ರಮಗಳಿದ್ದು, ಇನ್ನೂ 18 ದೇಶಗಳಲ್ಲಿ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಟ್ರಸ್ಟಿ ಮಧುಸೂದನ್ ನಾಯ್ಡು, ಟ್ರಸ್ಟಿ ಸಂಜೀವ ಶೆಟ್ಟಿ, ಬಿಂದುಲಾಲ್ ಶಹಾ, ವೈದ್ಯಕೀಯ ಕ್ಷೇತ್ರದ ಮುಖ್ಯಸ್ಥ ಸಿ.ಶ್ರೀನಿವಾಸ್, ಮಹಿಳಾ ಶಿಕ್ಷಣದ ಮುಖ್ಯಸ್ಥೆ ಸಾಯಿಲೀಲಾ, ಐಜನ್, ಸಮ ಕುಲಾಧಿಪತಿ ಡಾ. ಎ.ಆರ್.ಮಂಜುನಾಥ, ಕುಲಪತಿ ಪ್ರೊ.ಪಿ.ಡಿ.ಎನ್.ಶ್ರೀನಿವಾಸ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಇದ್ದರು.

ಸಂಪೂರ್ಣ ಉಚಿತ ಶಿಕ್ಷಣ

ಸತ್ಯ ಸಾಯಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 6ನೇ ತರಗತಿಗೆ 60 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಇದರಲ್ಲಿ 30 ಮಕ್ಕಳು ಕನ್ನಡ ಮಾಧ್ಯಮ, 30 ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಬಹುದು. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿ ಓದಿರುವ ಬಡ ಮಕ್ಕಳಿಗೆ ಈ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತದೆ. ಶಿಕ್ಷಣ, ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ.

**

ವಿಜ್ಞಾನ ಮತ್ತು ತಂತ್ರಜ್ಞಾನದ ಬೆಸುಗೆಯೊಂದಿಗೆ ಅಧ್ಯಾತ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಉಚಿತ ಸೀಟು, ಊಟ, ವಸತಿ ಕೊಡುತ್ತಿರುವ ಮೊದಲ ವಿಶ್ವವಿದ್ಯಾಲಯ ಇದಾಗಿದೆ

ಬಿ.ಎನ್.ನರಸಿಂಹಮೂರ್ತಿ, ಕುಲಾಧಿಪತಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry