ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹೆಬ್ಬಾಳ: ಮದ್ಯದ ಅಂಗಡಿ ತೆರೆದರೆ ಹುಷಾರ್!

ಅಂಗಡಿ ಪರವಾನಗಿ ರದ್ದುಪಡಿಸಲು ಸ್ಥಳೀಯರ ಒತ್ತಾಯ
Last Updated 4 ಜೂನ್ 2018, 8:34 IST
ಅಕ್ಷರ ಗಾತ್ರ

ಕಾಳಗಿ: ‘ನಮ್ಮ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ಆರಂಭಿಸುವಂತಿಲ್ಲ. ತಲೆ ಎತ್ತಿರುವ ಅಕ್ರಮ ಸಾರಾಯಿ ಮಳಿಗೆಗಳನ್ನು ಈ ಕೂಡಲೇ ಮುಚ್ಚಿಸಬೇಕು’ ಎಂದು ಹೊಸ ಹೆಬ್ಬಾಳ ಗ್ರಾಮದ ಮಹಿಳೆಯರು ಶನಿವಾರ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ, ಸರ್ಕಾರದ ಲಾಭಕ್ಕಾಗಿ ಮದ್ಯ‌ದ ಅಂಗಡಿಗಳನ್ನು ತೆರೆದು ಸಂಸಾರಗಳನ್ನು ಬೀದಿಗೆ ಬೀಳಿಸುತ್ತಿದ್ದಾರೆ. ಮದ್ಯದಂಗಡಿಗಳನ್ನು ಶೀಘ್ರವೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ಸರ್ಕಾರೇ ಜವಾಬ್ದಾರಿ’ ಎಂದರು.

ಆರು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆಗೆ ಪತ್ರದ ಮೂಲಕ ಎಚ್ಚರಿಸಿದ್ದರೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಅಂಗಡಿ ಆರಂಭಿಸಲು ಮದ್ಯ ಹೊತ್ತು ಬಂದ ವಾಹನಕ್ಕೆ ಬೆನ್ನು ಹತ್ತಿ ಕಲ್ಲು ಎಸೆದಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.

‘ಹೊಸ ಹೆಬ್ಬಾಳ ಗ್ರಾಮದಲ್ಲಿ ಎಮ್‌ಎಸ್‌ಐಎಲ್ ಮದ್ಯದ ಅಂಗಡಿ ಪ್ರಾರಂಭಿಸಲು ಪರವಾನಿಗೆ ಸಿಕ್ಕಿರುವುದರಿಂದ ಮದ್ಯ ಇಳಿಸಲು ತಡರಾತ್ರಿ ಗ್ರಾಮಕ್ಕೆ ಬಂದ ವಾಹನ ಅರ್ಧ ಸರಕು ಇಳಿಸಿದೆ. ಸುದ್ದಿ ತಿಳಿದ ಮಹಿಳೆಯರು ಗುಂಪಾಗಿ ಅಂಗಡಿಗೆ ನುಗ್ಗಿ ಸರಕು ಇಳಿಸದಂತೆ ಅಲ್ಲಿದ್ದವರ ಜತೆಗೆ ವಾಗ್ವಾದ ನಡೆಸಿದರು.

ಮದ್ಯ ಇಳಿಸುವುದನ್ನು ನಿಲ್ಲಿಸದಿದ್ದಾಗ ಕಲ್ಲು ಹೊಡೆದು ವಾಹನ ಮತ್ತು ಮದ್ಯ ಇಳಿಸಲು ಬಂದವರನ್ನು ಓಡಿಸಿದ್ದಾರೆ’ ಎಂದು ಪ್ರತ್ಯಕ್ಷದರ್ಶಿ ಮೌನೇಶ ಪಂಚಾಳ, ಗುಂಡಪ್ಪ ಮುತ್ತಿನ ‘ಪ್ರಜಾವಾಣಿ’ಗೆ ತಿಳಿಸಿದರು.

ಇದರ ಸಮೀಪದಲ್ಲೆ ಸರ್ಕಾರಿ ಶಾಲೆ– ಕಾಲೇಜುಗಳಿವೆ. ಈ ಭಾಗದ ರಸ್ತೆಯಿಂದಲೇ ದಿನನಿತ್ಯ ನೂರಾರು ವಿದ್ಯಾರ್ಥಿಗಳು ಓಡಾಡುತ್ತಾರೆ. ಈಗಾಗಲೇ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಳಿಗೆಗಳು ಹೆಚ್ಚಾಗಿ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಮದ್ಯದ ಅಂಗಡಿ ಪ್ರಾರಂಭಗೊಂಡರೆ ಊರಿನ ವಾತಾವರಣ ಹಾಳಾಗುತ್ತದೆ ಎಂದು ಸ್ಥಳೀಯ ನಿವಾಸಿ ಪಾರ್ವತಿ ಬೇನೂರ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಶಾಂತಾಬಾಯಿ ಶಿವಗೋಳ, ಹಾಶಮ್ಮ ಮಡಿವಾಳ, ಜಗದೇವಿ ತಮ್ಮಾಣಿ ಮೊದಲಾದ ಮಹಿಳೆಯರು ಭಾನುವಾರ ಮದ್ಯದ ಅಂಗಡಿ ತೆರೆಯದಂತೆ ಬೀಗ ಜಡಿದು ಪ್ರತಿಭಟಿಸಿದರು.

‘ಈ ಕೂಡಲೇ ಮದ್ಯದ ಅಂಗಡಿ ಪರವಾನಿಗೆ ರದ್ದುಪಡಿಸಬೇಕು. ಹೆಚ್ಚಿರುವ ಅಕ್ರಮ ಸಾರಾಯಿ ಮಳಿಗೆಗಳನ್ನು ಬಂದ್ ಮಾಡಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಲಾಗುವುದು ಎಂದರು.

ಶ್ರೀದೇವಿ ರಾಜಾಪುರ, ಸುಹಾಸಿನಿ ಕಲಶೆಟ್ಟಿ, ಬಸಮ್ಮ ಮೆಂಚಾ, ಕವಿತಾ ಹೊಸಳ್ಳಿ ಗ್ರಾಮಸ್ಥರು ಇದ್ದರು.

**
ದ್ರ ಗುಂಡಗುರ್ತಿಯಲ್ಲಿ ಮದ್ಯ ನಿಷೇಧಿಸಲಾಗಿದೆ. ದಂಡೋತಿ, ದಿಗ್ಗಾಂವ, ರಾವೂರ ಮುಂತಾದ ಗ್ರಾಮಗಳಲ್ಲಿ ಮದ್ಯದ ಅಂಗಡಿ ಇಲ್ಲ. ಇಲ್ಲಯೂ ತೆರೆಯಲು ಅವಕಾಶನೀಡಬಾರದು
ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT